ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, June 6, 2018

Mahabharata Tatparya Nirnaya Kannada 7.48-7.50


ವಿಲಙ್ಘ್ಯ ಚಾರ್ಣ್ಣವಂ ಪುನಃ ಸ್ವಜಾತಿಭಿಃ ಪ್ರಪೂಜಿತಃ ।
ಪ್ರಭಕ್ಷ್ಯ ವಾನರೇಶಿತುರ್ಮ್ಮಧು ಪ್ರಭುಂ ಸಮೇಯಿವಾನ್ ॥೭.೪೮॥

ಪುನಃ ಸಮುದ್ರವನ್ನು ದಾಟಿ, ತನ್ನೊಂದಿಗಿದ್ದ ಕಪಿಗಳಿಂದ ಪೂಜಿಸಲ್ಪಟ್ಟು, ಸುಗ್ರೀವನಿಗೆಂದೇ ಮೀಸಲಾದ ಮದುವನದಿಂದ ಜೇನನ್ನು ತಿಂದು, ರಾಮನ ಬಳಿ ತೆರಳುತ್ತಾನೆ ಹನುಮಂತ.
[ಸುಗ್ರೀವನಿಗೇ ಮೀಸಲಾದ ಮದುವನದಲ್ಲಿನ  ಜೇನನ್ನು  ಬೇರೆಯವರು ಉಪಯೋಗಿಸುವಂತಿರಲಿಲ್ಲ.  ಆದರೆ ಸೀತೆಯನ್ನು ಕಂಡು ಹಿಂತಿರುಗಿದ ಹನುಮಂತನೊಂದಿಗೆ ಸಂಭ್ರಮಾಚರಣೆ  ಮಾಡಿದ ಅಂಗದ ಮೊದಲಾದ ಕಪಿಗಳು, ಸುಗ್ರೀವನಿಗೆಂದೇ ಮೀಸಲಾಗಿರುವ  ವನದಲ್ಲಿ ಜೇನನ್ನು ತಿನ್ನುತ್ತಾರೆ. ಅವರು ಆ  ವನವನ್ನು ಕಾಯುತ್ತಿದ್ದ ದಧಿಮುಖ ಎನ್ನುವ  ವನಪಾಲಕನನ್ನು (ಪ್ರಮುಖ) ಅಲ್ಲಿಂದ ಹೊಡೆದು ಓಡಿಸುತ್ತಾರೆ. ದಧಿಮುಖ ಸುಗ್ರೀವನ ಬಳಿ ಬಂದು ನಡೆದ ವಿಷಯವನ್ನು  ತಿಳಿಸುತ್ತಾನೆ. ಆಗ ರಾಮನ ಬಳಿಯೇ ಇದ್ದ ಸುಗ್ರೀವ ‘ಖಂಡಿತ ಸೀತಾನ್ವೇಷಣೆಯ ಯಶಸ್ಸು ಅವರದ್ದಾಗಿದೆ. ಇಲ್ಲದೇ ಹೋಗಿದ್ದರೆ ಈ ರೀತಿ ಮಾಡಲು ಸಾಧ್ಯವಿಲ್ಲ’ ಎಂದು ತಿಳಿದು, ಅವರೆಲ್ಲರನ್ನು ಶ್ರಿರಾಮನಿದ್ದಲ್ಲಿಗೆ ಬರಹೇಳಿ ಕಳುಹಿಸುತ್ತಾನೆ]

ರಾಮಂ ಸುರೇಶ್ವರಮಗಣ್ಯಗುಣಾಭಿರಾಮಂ ಸಮ್ಪ್ರಾಪ್ಯ ಸರ್ವಕಪಿವೀರವರೈಃ ಸಮೇತಃ ।
ಚೂಳಾಮಣಿಂ ಪವನಜಃ ಪದಯೋರ್ನ್ನಿಧಾಯಸರ್ವಾಙ್ಗಕೈಃ ಪ್ರಣತಿಮಸ್ಯ ಚಕಾರ ಭಕ್ತ್ಯಾ ॥೭.೪೯॥

ಎಣೆಯಿರದ ಗುಣಗಳನ್ನು ಹೊಂದಿರುವ, ದೇವತೆಗಳ ಒಡೆಯನಾದ ರಾಮಚಂದ್ರನನ್ನು, ಅಂಗದ ಮೊದಲಾದ ಕಪಿ ಶ್ರೇಷ್ಠರಿಂದ ಕೂಡಿಕೊಂಡು ಹೊಂದಿದ  ಹನುಮಂತನು, ಸೀತೆ ಕೊಟ್ಟ ಚೂಡಾಮಣಿಯನ್ನು ರಾಮಚಂದ್ರನ ಪಾದದ ಬಳಿ ಇಟ್ಟು, ಸರ್ವಾಂಗಗಳಿಂದ ಭಕ್ತಿಯಿಂದ ನಮಸ್ಕಾರ ಮಾಡಿದನು.  


ರಾಮೋsಪಿ ನಾನ್ಯದನುದಾತುಮಮುಷ್ಯ ಯೋಗ್ಯಮತ್ಯನ್ತಭಕ್ತಿಪರಮಸ್ಯ ವಿಲಕ್ಷ್ಯ ಕಿಞ್ಚಿತ್ ।
ಸ್ವಾತ್ಮಪ್ರದಾನಮಧಿಕಂ ಪವನಾತ್ಮಜಸ್ಯ ಕುರ್ವನ್ ಸಮಾಶ್ಲಿಷದಮುಂ ಪರಮಾಭಿತುಷ್ಟಃ ॥೭.೫೦॥

ಎಲ್ಲರಿಗೂ ಮಿಗಿಲಾದ ಹನುಮಂತನ ಭಕ್ತಿಯಿಂದ ಅತ್ಯಂತ ಸಂತುಷ್ಟನಾದ ಶ್ರೀರಾಮಚಂದ್ರ, ಬೇರೆ ಏನನ್ನೂ ಕೊಡಲು  ಕಾಣದೇ, ತನ್ನನ್ನೇ ತಾನು ಕೊಡುತ್ತಾ, ಅವನನ್ನು ಅತ್ಯಂತ ಆನಂದವುಳ್ಳವನಾಗಿ ಆಲಂಗಿಸಿದನು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ                  
ಶ್ರೀರಾಮಚರಿತೆ ಹನೂಮತ್ ಪ್ರತಿಯಾನಮ್ ನಾಮ ಸಪ್ತಮೋsಧ್ಯಾಯಃ ॥

No comments:

Post a Comment