ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, June 13, 2018

Mahabharata Tatparya Nirnaya Kannada 8.13-8.15


   ಇತ್ಯುಕ್ತವನ್ತಮಮುಮಾಶ್ವನುಗೃಹ್ಯ ಬಾಣಂ ತಸ್ಮೈ ಧೃತಂ ದಿತಿಸುತಾತ್ಮಸು ಚಾನ್ತ್ಯಜೇಷು ।
    ಶಾರ್ವಾದ್ ವರಾದ್ ವಿಗತಮೃತ್ಯುಷು ದುರ್ಜ್ಜಯೇಷು ನಿಃಸಙ್ಖ್ಯಕೇಷ್ವಮುಚದಾಶು ದದಾಹ ಸರ್ವಾನ್ ॥೮.೧೩॥

ಈ ರೀತಿಯಾಗಿ ಹೇಳುತ್ತಿರುವ ವರುಣನನ್ನು ಶೀಘ್ರದಲ್ಲಿ ಅನುಗ್ರಹಿಸಿ, ಅವನಿಗಾಗಿ ಹಿಡಿದ ಬಾಣವನ್ನು ಆ ಸಮುದ್ರದ ಪಕ್ಕದಲ್ಲೇ ಇದ್ದ,  ರುದ್ರನ ವರದಿಂದ ಮರಣವನ್ನು ಕಳೆದುಕೊಂಡ, ಜಯಿಸಲು ಅಸಾಧ್ಯವಾಗಿರುವ, ಅಸಂಖ್ಯರಾದ  ದೈತ್ಯ ರೂಪಿ ಚಂಡಾಲರ ಮೇಲೆ ಬಿಟ್ಟು, ಅವರೆಲ್ಲರನ್ನು  ಸುಟ್ಟುಬಿಟ್ಟನು.

      ಕೃತ್ವೇರಿಣಂ ತದಥ ಮೂಲಫಲಾನಿ ಚಾತ್ರ ಸಮ್ಯಗ್ ವಿಧಾಯ ಭವಶತ್ರುರಮೋಘಚೇಷ್ಟಃ ।
      ಬದ್ಧುಂ ದಿದೇಶ ಸುರವರ್ದ್ಧಕಿನೋsವತಾರಂ ತಜ್ಜಂ ನಳಂ ಹರಿವರಾನಪರಾಂಶ್ಚ ಸೇತುಮ್ ॥೮.೧೪॥

ಆ ರಾಕ್ಷಸರು ಇದ್ದ ಜಾಗ ಮರುಭೂಮಿಯಾಗಿತ್ತು. ಅಂತಹ ಮರುಭೂಮಿಯನ್ನು ಶ್ರೀರಾಮ ಉತ್ತಮ  ತೋಟ ಪ್ರದೇಶವಾಗಿ  ಮಾರ್ಪಡಿಸಿದನು. ತದನಂತರ, ಭಕ್ತರ ಸಂಸಾರ ನಾಶಮಾಡಬಲ್ಲ, ಎಂದೂ ವ್ಯರ್ಥವಾದ   ಕ್ರಿಯೆಯನ್ನು ಮಾಡದ ಶ್ರೀರಾಮಚಂದ್ರನು, ದೇವತೆಗಳ ಬಡಗಿಯಾದ ವಿಶ್ವಕರ್ಮನ ಅವತಾರರೂಪದಲ್ಲಿ ವಾನರಿಯೊಬ್ಬಳಲ್ಲಿ ಹುಟ್ಟಿರುವ ನಳನಿಗೆ  ಮತ್ತು ಇತರ ಕಪಿಶ್ರೇಷ್ಠರಿಗೆ ಲಂಕೆಗೆ ಸೇತುವೆ ಮಾಡಲು ಆಜ್ಞಾಪಿಸಿದನು.

‘ಬಧ್ವೋದಧೌ ರಘುಪತಿರ್ವಿವಿಧಾದ್ರಿಕೂಟೈಃ ಸೇತುಂ ಕಪೀನ್ದ್ರಕರಕಮ್ಪಿತಭೂರುಹಾಙ್ಗೈಃ ।
ಸುಗ್ರೀವನೀಲಹನುಮತ್ ಪ್ರಮುಖೈರನೀಕೈರ್ಲ್ಲಙ್ಕಾಂ ವಿಭೀಷಣದೃಶಾsವಿಶದಾಶು ದಗ್ಧಾಮ್’ ॥೮.೧೫॥

ರಾಮಚಂದ್ರನು ಕಪಿಗಳ ಕೈಯಿಂದ ಅಲ್ಲಾಡಿಸಲ್ಪಟ್ಟ ಮರಗಳನ್ನು ಒಳಗೊಂಡ ತರತರನಾದ ಪರ್ವತಗಳ ಸಮೂಹದಿಂದ ಸಮುದ್ರದಲ್ಲಿ ಸೇತುವೆಯನ್ನು ಕಟ್ಟಿ, ಸುಗ್ರೀವ, ನೀಲ, ಹನುಮಂತ, ಇವರನ್ನೇ ಪ್ರಮುಖರನ್ನಾಗಿ ಹೊಂದಿರುವ ಕಪಿ ಸಮೂಹಗಳಿಂದ ಕೂಡಿಕೊಂಡು, ವಿಭೀಷಣನ ಮಾರ್ಗದರ್ಶನದೊಂದಿಗೆ ಈಗಾಗಲೇ ಹನುಮಂತನಿಂದ ಸುಡಲ್ಪಟ್ಟ ಲಂಕೆಯನ್ನು ಪ್ರವೇಶಿಸಿದನು.

No comments:

Post a Comment