ವವರ್ಷತುಸ್ತಾವತಿಮಾತ್ರವೀರ್ಯ್ಯೌ
ಶರಾನ್ ಸುರೇಶಾಶನಿತುಲ್ಯವೇಗಾನ್ ।
ತಮೋಮಯಂ ಚಕ್ರತುರನ್ತರಿಕ್ಷಂ
ಸ್ವಶಿಕ್ಷಯಾ ಕ್ಷಿಪ್ರತಮಾಸ್ತಬಾಣೈಃ ॥೮.೫೮॥
ಬಹಳ ಪರಾಕ್ರಮವುಳ್ಳ ಅವರಿಬ್ಬರೂ ಕೂಡಾ, ವಜ್ರಾಯುಧಕ್ಕೆ ಸಮನಾದ
ವೇಗವುಳ್ಳ ಬಾಣಗಳನ್ನು ಪರಸ್ಪರ ಹೊಡೆದುಕೊಂಡರು. ಆ ಬಾಣಗಳ ಮಳೆಯಿಂದ ಎಲ್ಲವೂ ಕತ್ತಲಾಗಿ ಕಂಡಿತು. ತಮ್ಮ ಅಭ್ಯಾಸ ಬಲದಿಂದ
ವೇಗವಾಗಿ ಬಾಣಗಳನ್ನೆಸೆದು ಅವರಿಬ್ಬರು ಯುದ್ಧಮಾಡಿದರು.
ಶರೈಃ ಶರಾನಸ್ಯ ನಿವಾರ್ಯ್ಯ ವೀರಃ
ಸೌಮಿತ್ರಿರಸ್ತ್ರಾಣಿ ಮಹಾಸ್ತ್ರಜಾಲೈಃ ।
ಚಿಚ್ಛೇದ ಬಾಹೂ ಶಿರಸಾ ಸಹೈವ
ಚತುರ್ಭುಜೋsಭೂತ್ ಸ ಪುನದ್ದ್ವಿಷೀರ್ಷಃ
॥೮.೫೯॥
ಅತಿಕಾಯನ ಬಾಣಗಳನ್ನು ತನ್ನ ಬಾಣಗಳಿಂದ ತಡೆದ ವೀರನಾಗಿರುವ
ಲಕ್ಷ್ಮಣನು, ಅವನು ಬಿಟ್ಟ ಅಸ್ತ್ರಗಳನ್ನು ಮಹಾಸ್ತ್ರಗಳಿಂದ ಕತ್ತರಿಸಿದನು. ತದನಂತರ, ಅವನ ಎರಡು
ತೋಳುಗಳನ್ನು ಮತ್ತು ಕತ್ತನ್ನು ಒಟ್ಟಿಗೆ ಕತ್ತರಿಸಿದನು. ಆದರೆ ತಕ್ಷಣ ಅತಿಕಾಯನು ಎರಡು ತಲೆ
ನಾಲ್ಕು ಬುಜವುಳ್ಳವನಾದನು!
ಛಿನ್ನೇಷು ತೇಷು ದ್ವಿಗುಣಾಸ್ಯಬಾಹುಃ
ಪುನಃ ಪುನಃ ಸೋsಥ ಬಭೂವ ವೀರಃ ।
ಉವಾಚ ಸೌಮಿತ್ರಿಮಥಾನ್ತರಾತ್ಮಾ
ಸಮಸ್ತಲೋಕಸ್ಯ ಮರುದ್ ವಿಷಣ್ಣಮ್ ॥೮.೬೦॥
ಆ ನಾಲ್ಕು ಭುಜಗಳನ್ನೂ ಮತ್ತು ಎರಡು ತಲೆಗಳನ್ನು ಲಕ್ಷ್ಮಣ
ಕತ್ತರಿಸಿದಾಗ, ಅತಿಕಾಯ ನಾಲ್ಕು ತಲೆ ಎಂಟು ಕೈಗಳುಳ್ಳವನಾದನು. ಈ ರೀತಿ ಪ್ರತಿಬಾರಿ ಆ
ವೀರನಾಗಿರುವ ಅತಿಕಾಯನು ದ್ವಿಗುಣ ತಲೆ ಕೈಗಳುಳ್ಳವನಾಗಿ ಬೆಳೆಯುತ್ತಿದ್ದನು. ಇದರಿಂದ
ದುಃಖಿತಾನಾಗುತ್ತಿರುವ ಲಕ್ಷ್ಮಣನನ್ನು ಕಂಡ ಎಲ್ಲರ ಅಂತರ್ಯಾಮಿಯಾದ ಮುಖ್ಯಪ್ರಾಣನು ಅವನಲ್ಲಿ ಈ
ರೀತಿ ಹೇಳಿದನು:
ಬ್ರಹ್ಮಾಸ್ತ್ರತೋsನ್ಯೇನ ನ ವಧ್ಯ ಏಷ ವರಾದ್ ವಿಧಾತುಃ
ಸುಮುಖೇತ್ಯದೃಶ್ಯಃ ।
ರಕ್ಷಃಸುತಸ್ಯಾಶ್ರವಣೀಯಮಿತ್ಥಮುಕ್ತ್ವಾ
ಸಮೀರೋsರುಹದನ್ತರಿಕ್ಷಮ್
॥೮.೬೧॥
“ಎಲೈ ಸುಮುಖನೇ, ಬ್ರಹ್ಮಾಸ್ತ್ರಕ್ಕಿಂತ ವಿಲಕ್ಷಣವಾದ ಅಸ್ತ್ರದಿಂದ
ಇವನನ್ನು ಕೊಲ್ಲಲಾಗುವುದಿಲ್ಲ. ಏಕೆಂದರೆ: ಈತನಿಗೆ ಬ್ರಹ್ಮದೇವರ ವರವಿದೆ” ಎಂದು. ಈ ರೀತಿ
ಅತಿಕಾಯನಿಗೆ ತಿಳಿಯದಂತೆ ಲಕ್ಷ್ಮಣನಿಗೆ ಹೇಳಿದ ಹನುಮಂತನು ಅಂತರಿಕ್ಷಕ್ಕೆ ನೆಗೆದನು.
ಅಥಾನುಜೋ ದೇವತಮಸ್ಯ ಸೋsಸ್ತ್ರಂ ಬ್ರಾಹ್ಮಂ ತನೂಜೇ ದಶಕನ್ಧರಸ್ಯ ।
ಮುಮೋಚ ದಗ್ಧಃ
ಸರಥಾಶ್ವಸೂತಸ್ತೇನಾತಿಕಾಯಃ ಪ್ರವರೋsಸ್ತ್ರವಿತ್ಸು ॥೮.೬೨॥
ತದನಂತರ ದೇವತೆಗಳಿಂದ ಸ್ತುತಿಸಲ್ಪಡುವ ಶ್ರೀರಾಮಚಂದ್ರನ ತಮ್ಮನಾಗಿರುವ ಲಕ್ಷ್ಮಣನು, ರಾವಣನ ಮಗನಾದ ಅತಿಕಾಯನಲ್ಲಿ
ಬ್ರಹ್ಮಾಸ್ತ್ರವನ್ನು ಬಿಟ್ಟನು. ಅದರಿಂದಾಗಿ ರಥ-ಅಸ್ತ್ರಗಳಿಂದ ಕೂಡಿಕೊಂಡು, ಅಸ್ತ್ರವಿತ್ಸುಗಳಲ್ಲಿ
ಶ್ರೇಷ್ಠನಾದ ಅತಿಕಾಯನು ಸುಟ್ಟುಹೋದನು.
[ಕುಂಭಕರ್ಣೋsಕರೋದ್ ಯುದ್ಧಂ ನವಮ್ಯಾದಿಚತುರ್ದಿನೈಃ । ರಾಮೇಣ ನಿಹತೋ ಯುದ್ಧೇಬಹುವಾನರಭಕ್ಷಕಃ’ ಎಂದು ಬ್ರಹ್ಮಾಂಡ ಪುರಾಣದಲ್ಲಿದೆ.[ಬ್ರಹ್ಮಖಂಡ
ಧರ್ಮರಣ್ಯಮಹಾತ್ಮ್ಯೇ-೩೦-೬೩]. ಹೀಗೆ ಕುಂಭಕರ್ಣನನ್ನು ರಾಮ ಕೊಂದಿರುವುದು ಎಂದು ವಾಲ್ಮೀಕಿ
ರಾಮಾಯಣದಲ್ಲಿ, ಪುರಾಣದಲ್ಲಿ ಎಲ್ಲಾ ಕಡೆ ಹೇಳಿದ್ದಾರೆ. ಆದರೆ ಮಹಾಭಾರತದ ವನಪರ್ವದಲ್ಲಿ ಒಂದು ಕಡೆ ಕುಂಭಕರ್ಣನನ್ನು ಲಕ್ಷ್ಮಣ ಕೊಂದ ಎಂದು
ಹೇಳಿದ್ದಾರೆ. ಆ ವಿರೋಧವನ್ನು ಆಚಾರ್ಯರು ಇಲ್ಲಿ ಪರಿಹಾರ ಮಾಡಿದ್ದಾರೆ. ಲಕ್ಷ್ಮಣ ಕೊಂದಿರುವುದು
ರಾವಣನ ಮಗನಾದ ಅತಿಕಾಯನನ್ನೇ ಹೊರತು ರಾವಣನ ತಮ್ಮ ಕುಂಭಕರ್ಣನನ್ನಲ್ಲ. ಕುಂಭದಂತೆ ಕಿವಿ ಉಳ್ಳ
ಅತಿಕಾಯನನ್ನೂ ಕೂಡಾ ಕುಂಭಕರ್ಣ ಎಂದು ಕರೆಯುತ್ತಿದ್ದರು
ಎನ್ನುವ ಸ್ಪಷ್ಟತೆ ಇಲ್ಲಿ ನಮಗೆ ತಿಳಿಯುತ್ತದೆ.]
ಕನ್ನಡ ಪದ್ಯರೂಪ: https://go-kula.blogspot.com/2018/06/8-58-62.html
ಕನ್ನಡ ಪದ್ಯರೂಪ: https://go-kula.blogspot.com/2018/06/8-58-62.html
No comments:
Post a Comment