ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, June 15, 2018

Mahabharata Tatparya Nirnaya Kannada 8.19-8.24


ವಿಜ್ಞಾಯ ತತ್ ಸ ಭಗವಾನ್ ಹನುಮನ್ತಮೇವ ದೇವೇನ್ದ್ರಶತ್ರುವಿಜಯಾಯ ದಿದೇಶ ಚಾsಶು ।
ನೀಲಂ ಪ್ರಹಸ್ತನಿಧನಾಯ ಚ ವಜ್ರದಂಷ್ಟ್ರಂ  ಹನ್ತುಂ ಸುರೇನ್ದ್ರಸುತಸೂನುಮಥಾsದಿದೇಶ ॥೮.೧೯॥

ಶ್ರೀರಾಮಚಂದ್ರನು ರಾವಣನ ಯುದ್ಧ ಸಿದ್ದತೆಯನ್ನು ತಿಳಿದು, ಇಂದ್ರಜಿತುವನ್ನು ಗೆಲ್ಲಲು ಹನುಮಂತನನ್ನು ಕಳುಹಿಸಿ, ಪ್ರಹಸ್ತ ಹಾಗು ವಜ್ರದಂಷ್ಟ್ರರನ್ನು  ಕೊಲ್ಲಲು ಕ್ರಮವಾಗಿ ನೀಲ ಹಾಗು  ಅಂಗದನನ್ನು ಕಳುಹಿಸುತ್ತಾನೆ.

ಮಧ್ಯೇ ಹರೀಶ್ವರಮಧಿಜ್ಯದನುರ್ನ್ನಿಯುಜ್ಯ ಯಸ್ಯಾಂ ಸ ರಾಕ್ಷಸಪತಿರ್ದ್ದಿಶಮೇವ ತಾಂ ಹಿ ।
ಉದ್ದಿಶ್ಯ ಸಂಸ್ಥಿತ ಉಪಾತ್ತಶರಃ ಸಖಡ್ಗೋ ದೇದೀಪ್ಯಮಾನವಪುರುತ್ತಮಪೂರುಷೋsಸೌ ॥೮.೨೦॥

ಸೇನೆಯ ಮಧ್ಯದಲ್ಲಿ ಸುಗ್ರೀವನನ್ನು ಇರಿಸಿ, ಯಾವ ದಿಕ್ಕಿನಿಂದ ರಾವಣ ಬರುತ್ತಿದ್ದಾನೋ ಆ ದಿಕ್ಕಿನಲ್ಲಿ ಬಿಲ್ಲು- ಬಾಣಗಳನ್ನು ಹಿಡಿದು, ಕತ್ತಿಯನ್ನು ಹಿಡಿದು, ಅತ್ಯಂತ ಮಿಂಚುತ್ತಿರುವ ಶರೀರ ಉಳ್ಳವನಾದ, ಉತ್ತಮಪೂರುಷನಾದ ಶ್ರೀರಾಮಚಂದ್ರ ನಿಲ್ಲುತ್ತಾನೆ . 

  ವಿದ್ರಾವಿತೋ ಹನಮತೇನ್ದ್ರಜಿದಾಶು ಹಸ್ತಂ ತಸ್ಯ ಪ್ರಪನ್ನ ಇವ ವೀರ್ಯ್ಯಮಮುಷ್ಯ ಜಾನನ್ ।
  ನೀಲೋ ವಿಭೀಷಣ ಉಭೌ ಶಿಲಯಾ ಚ ಶಕ್ತ್ಯಾ ಸಞ್ಚಕ್ರತುರ್ಯ್ಯಮವಶಂ ಗಮಿತಂ ಪ್ರಹಸ್ತಮ್ ॥೮.೨೧॥

ಹನುಮಂತನನ್ನು ಎದುರಿಸಲು ಇನ್ದ್ರಜಿತುವು ಅಶಕ್ಯನಾಗಿ, ಇನ್ನೇನು ಹನುಮಂತನ ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ಹನುಮಂತನ ಪರಾಕ್ರಮವನ್ನು ತಿಳಿದ ಆತ, ತಪ್ಪಿಸಿಕೊಂಡು ಓಡಿಹೋಗುತ್ತಾನೆ. ನೀಲ ಮತ್ತು ವಿಭೀಷಣ ಇವರಿಬ್ಬರು ಶಿಲೆಯಿಂದಲೂ ಮತ್ತು ಶಕ್ತ್ಯಾಯುಧದಿಂದಲೂ ಪ್ರಹಸ್ತನನ್ನು ಕೊಲ್ಲುತ್ತಾರೆ. 

     ನೀಲಸ್ಯ ನೈವ  ವಶಮೇತಿ ಸ ಇತ್ಯಮೋಘಶಕ್ತ್ಯಾ ವಿಭೀಷಣ ಇಮಂ ಪ್ರಜಹಾರ ಸಾಕಮ್ ।
      ತಸ್ಮಿನ್ ಹತೇsಙ್ಗದ ಉಪೇತ್ಯ ಜಘಾನ ವಜ್ರದಂಷ್ಟ್ರಂ ನಿಪಾತ್ಯ ಭುವಿ ಶೀರ್ಷಮಮುಷ್ಯ ಮೃದ್ನನ್ ॥೮.೨೨ ॥

ಪ್ರಹಸ್ತನು ನೀಲನ ವಶ ಆಗುವುದಿಲ್ಲ ಎಂದು ತಿಳಿದ ವಿಭೀಷಣನು ತನ್ನ ಶಕ್ತ್ಯಾಯುಧದೊಂದಿಗೆ ನೀಲನೊಂದಿಗೆ ನಿಲ್ಲುತ್ತಾನೆ.  ಅವರಿಬ್ಬರು ಸೇರಿ ಪ್ರಹಸ್ತನನ್ನು ಕೊಲ್ಲುತ್ತಾರೆ. ಇನ್ನೊಂದೆಡೆ ಅಂಗದನು ವಜ್ರದಂಷ್ಟ್ರನನ್ನು ಹೊಂದಿ, ಆತನನ್ನು  ಭೂಮಿಯಲ್ಲಿ ಬೀಳಿಸಿ,  ಆತನ ತಲೆಯನ್ನು ತನ್ನ ಕಾಲಿನಿಂದ ಒರೆಸುತ್ತಾ ಕೊಂದು ಹಾಕುತ್ತಾನೆ.

ಸರ್ವೇಷು ತೇಷು ನಿಹತೇಷು ದಿದೇಶ ಧೂಮ್ರನೇತ್ರಂ ಸ ರಾಕ್ಷಸಪತಿಃ ಸ ಚ ಪಶ್ಚಿಮೇನ ।
ದ್ವಾರೇಣ ಮಾರುತಸುತಂ ಸಮುಪೇತ್ಯ ದಗ್ಧೋ ಗುಪ್ತೋsಪಿ ಶೂಲಿವಚನೇನ ದುರನ್ತಶಕ್ತಿಮ್ ॥೮.೨೩॥

ಹೀಗೆ ಅವರೆಲ್ಲರೂ ಸಾಯುತ್ತಿರಲು, ರಾವಣನು ಧೂಮ್ರನೇತ್ರನೆನ್ನುವ ರಾಕ್ಷಸನನ್ನು ಕಳುಹಿಸುತ್ತಾನೆ. ಅವನಾದರೋ , ಪಶ್ಚಿಮದಿಕ್ಕಿನಿಂದ ಹನುಮಂತನನ್ನು ಹೊಂದಿ, ಸದಾಶಿವನ ವರವನ್ನು ಪಡೆದಿದ್ದರೂ ಕೂಡಾ, ಎಣೆಯಿರದ ಶಕ್ತಿಯುಳ್ಳ ಹನುಮಂತನಿಂದ ಸುಟ್ಟು ಸಾಯಿಸಲ್ಪಡುತ್ತಾನೆ.

ಅಕಮ್ಪನೋsಪಿ ರಾಕ್ಷಸೋ ನಿಶಾಚರೇಶಚೋದಿತಃ ।
ಉಮಾಪತೇರ್ವರೋದ್ಧತಃ ಕ್ಷಣಾದ್ಧತೋ ಹನೂಮತಾ ॥೮.೨೪॥

ರಾವಣನಿಂದ ಪ್ರಚೋದಿತನಾದ, ಶಿವನ ವರದಿಂದ ಉದ್ಧತನಾಗಿದ್ದ ಅಕಮ್ಪನೆಂಬ ರಾಕ್ಷಸನೂ ಕೂಡಾ ಹನುಮಂತನಿಂದ ಕ್ಷಣದಲ್ಲಿಯೇ ಸಾಯಿಸಲ್ಪಡುತ್ತಾನೆ.

No comments:

Post a Comment