ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, June 27, 2018

Mahabharata Tatparya Nirnaya Kannada 8.83-8.88


ತತೋ ಯಯೌ ರಾಘವಮೇವ ರಾವಣೋ ನಿವಾರಯಾಮಾಸ ತಮಾಶು ಲಕ್ಷ್ಮಣಃ ।
ತತಕ್ಷತುಸ್ತಾವಧಿಕೌ ಧನುರ್ಭೃತಾಂ ಶರೈಃ ಶರೀರಾವರಣಾವದಾರಣೈಃ                  ॥೮.೮೩॥

ತದನಂತರ ರಾವಣನು ರಾಮಚಂದ್ರನತ್ತ  ಯುದ್ಧಕ್ಕೆಂದು ಹೊರಟನು. ಹೀಗೆ ಹೊರಟ ರಾವಣನನ್ನು ಶೀಘ್ರವಾಗಿ  ಲಕ್ಷ್ಮಣ ತಡೆದನು. ಧನುರ್ಧಾರಿಗಳಲ್ಲಿಯೇ ಶ್ರೇಷ್ಠರಾಗಿರುವ ಅವರಿಬ್ಬರು, ಶರೀರದ ಕವಚ ಭೇದಿಸತಕ್ಕ ಬಾಣಗಳಿಂದ ಪರಸ್ಪರ ಯುದ್ಧ ಮಾಡಿದರು.

ನಿವಾರಿತಸ್ತೇನ ಸ ರಾವಣೋ ಭೃಶಂ ರುಷಾsನ್ವಿತೋ ಬಾಣಮಮೋಘಮುಗ್ರಮ್ ।
ಸ್ವಯಂಭುದತ್ತಂ ಪ್ರವಿಕೃಷ್ಯ ಚಾsಶು ಲಲಾಟಮಧ್ಯೇ ಪ್ರಮುಮೋಚ ತಸ್ಯ          ॥೮.೮೪॥

ಲಕ್ಷ್ಮಣನಿಂದ ತಡೆಯಲ್ಪಟ್ಟ ರಾವಣನು, ಸಿಟ್ಟಿನಿಂದ ಕೂಡಿ, ಬ್ರಹ್ಮದೇವರು ಕೊಟ್ಟ, ಎಂದೂ ವ್ಯರ್ಥವಾಗದ, ಭಯಂಕರವಾದ ಬಾಣವನ್ನು ಸೆಳೆದು ಅದನ್ನು ಲಕ್ಷ್ಮಣನ ಹಣೆಯ ಮಧ್ಯದಲ್ಲಿ ಬಿಟ್ಟನು. 

ಭೃಶಾಹತಸ್ತೇನ ಮುಮೋಹ ಲಕ್ಷ್ಮಣೋ ರಥಾದವಪ್ಲುತ್ಯ ದಶಾನನೋsಪಿ ।
ಕ್ಷಣಾದಭಿದ್ರುತ್ಯ ಬಲಾತ್ ಪ್ರಗೃಹ್ಯ ಸ್ವಭಾಹುಭಿರ್ನ್ನೆತುಮಿಮಂ ಸಮೈಚ್ಛತ್       ॥೮.೮೫॥

ಆ ಬಾಣದಿಂದ ಗಟ್ಟಿಯಾಗಿ ಹೊಡೆಯಲ್ಪಟ್ಟ ಲಕ್ಷ್ಮಣನು ಮೂರ್ಛಿತನಾದನು. ತಕ್ಷಣ ರಾವಣನು ತನ್ನ ರಥದಿಂದ ಕೆಳಗೆ ಹಾರಿ, ಲಕ್ಷ್ಮಣನಿದ್ದಲ್ಲಿಗೆ ಓಡಿಬಂದು, ತನ್ನ ಇಪ್ಪತ್ತು ಬಾಹುಗಳಿಂದ ಬಲವಾಗಿ ಲಕ್ಷ್ಮಣನನ್ನು ಹಿಡಿದುಕೊಂಡು, ಆತನನ್ನು ಲಂಕೆಗೆ ಕೊಂಡೊಯ್ಯಲು ಬಯಸಿದನು.

ಸಮ್ಪ್ರಾಪ್ಯ ಸಙ್ಜ್ಞಾಂ ಸ ಸುವಿಹ್ವಲೋsಪಿ ಸಸ್ಮಾರ ರೂಪಂ ನಿಜಮೇವ ಲಕ್ಷ್ಮಣಃ ।
ಶೇಷಂ ಹರೇರಂಶಯುತಂ ನಚಾಸ್ಯ ಸ ಚಾಲನಾಯಾಪಿ ಶಶಾಕ ರಾವಣಃ                ॥೮.೮೬॥

ಒಮ್ಮೆ ವಿಚಲಿತನಾದರೂ ಕೂಡಾ, ಸ್ವಲ್ಪಮಟ್ಟಿನ ಸ್ಮೃತಿಯನ್ನು ಪಡೆದ ಲಕ್ಷ್ಮಣನು, ಸಂಕರ್ಷಣರೂಪಿ  ಪರಮಾತ್ಮನ ಅಂಶದಿಂದ ಕೂಡಿರುವ ತನ್ನ ಮೂಲರೂಪವನ್ನು(ಶೇಷರೂಪವನ್ನು) ಸ್ಮರಣೆ ಮಾಡಿದನು. ಆಗ ರಾವಣನು  ಅವನನ್ನು ಆಲುಗಾಡಿಸಲೂ ಸಮರ್ಥನಾಗಲಿಲ್ಲಾ.

ಬಲಾತ್ ಸ್ವದೋರ್ಭಿಃ ಪ್ರತಿಗೃಹ್ಯ ಚಾಖಿಲೈರ್ಯ್ಯದಾ ಸ ವೀರಂ ಪ್ರಚಕರ್ಷ ರಾವಣಃ ।
ಚಚಾಲ ಪೃಥ್ವೀ ಸಹಮೇರುಮನ್ದರಾ ಸಸಾಗರಾ ನೈವ ಚಚಾಲ ಲಕ್ಷ್ಮಣಃ             ॥೮.೮೭॥

ಆಗ ರಾವಣನು ತನ್ನೆಲ್ಲಾ ಕೈಗಳಿಂದ ಲಕ್ಷ್ಮಣನನ್ನು ಬಲಿಷ್ಠವಾಗಿ ಹಿಡಿದು ಎಳೆಯಲು ಪ್ರಯತ್ನಿಸಿದನು. ಇದರಿಂದ ಮೇರು-ಮಂದಾರ ಪರ್ವತಗಳಿಂದ ಕೂಡಿರುವ, ಸಮುದ್ರದಿಂದ ಕೂಡಿರುವ ಭೂಮಿ ಕಂಪಿಸಿತೇ ಹೊರತು,  ಲಕ್ಷ್ಮಣನನ್ನು ಅಲುಗಾಡಿಸಲು ಅವನಿಂದ ಸಾಧ್ಯವಾಗಲಿಲ್ಲಾ.

ಸಹಸ್ರಮೂರ್ಧ್ನೋsಸ್ಯ ಬತೈಕಮೂರ್ಧ್ನಿ ಸಸಪ್ತಪಾತಾಳಗಿರೀನ್ದ್ರಸಾಗರಾ ।
ಧರಾsಖಿಲೇಯಂ ನನು ಸರ್ಷಪಾಯತಿ ಪ್ರಸಹ್ಯ ಕೋ ನಾಮ ಹರೇತ್ ತಮೇನಮ್  ॥೮.೮೮॥

ಸಾವಿರ ಹೆಡೆಗಳುಳ್ಳ  ಶೇಷನ ಒಂದು ಹೆಡೆಯಲ್ಲಿ ಏಳು ಪಾತಾಳ ಲೋಕಗಳು ಮತ್ತು  ದೊಡ್ಡ ಬೆಟ್ಟಗಳು, ಸಾಗರಗಳೂ  ಇರುವ, ಸಮಗ್ರ ಭೂಮಿಯು ಸಾಸಿವೆಯಂತೆ ನಿಂತಿರುತ್ತದೆ. ಅಂತಹ ಶೇಷನ ಅವತಾರಿಯಾದ ಲಕ್ಷ್ಮಣನನ್ನು ಬಲಾತ್ಕಾರವಾಗಿ  ಯಾರು ತಾನೇ ಎಳೆದುಕೊಂಡು ಹೋಗಲು ಸಾಧ್ಯ? 

ಕನ್ನಡ ಪದ್ಯರೂಪ: https://go-kula.blogspot.com/2018/06/8-83-88.html

No comments:

Post a Comment