ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 23, 2018

Mahabharata Tatparya Nirnaya Kannada 8.207-8.211


ಸಮ್ಮಾನಯನ್ ರಾಘವಮಾದಿಪೂರುಷಂ ನಿರ್ಯ್ಯಾತಯಾಮಾಸ ರಥಂ ಪುರನ್ದರಃ ।
ಸಹಾಯುಧುಂ ಮಾತಲಿಸಙ್ಗೃಹೀತಂ ಸಮಾರುರೋಹಾsಶು ಸ ಲಕ್ಷ್ಮಣಾಗ್ರಜಃ       ॥೮.೨೦೭॥

ಇಂದ್ರನು  ಆದಿಪೂರುಷನಾದ ರಾಮಚಂದ್ರನನ್ನು ಗೌರವಿಸುತ್ತಾ,  ತನ್ನ ಸಾರಥಿಯಾದ ಮಾತಲಿಯಿಂದ ನಡೆಸಲ್ಪಡುವ, ಆಯುಧಗಳಿಂದ ಕೂಡಿದ ರಥವನ್ನು ಲಂಕೆಗೆ ಕಳುಹಿಸಿದ. ಲಕ್ಷ್ಮಣನ ಅಣ್ಣನಾದ ರಾಮಚಂದ್ರನು ಆ ರಥವನ್ನು ಏರಿದ.

ಆರುಹ್ಯತಂ ರಥವರಂ ಜಗದೇಕನಾಥೋ ಲೋಕಾಭಯಾಯ ರಜನೀಚರನಾಥಮಾಶು ।
ಅಭ್ಯುದ್ಯಯೌ ದಶಶತಾಂಶುರಿವಾನ್ಧಕಾರಂ ಲೋಕಾನಶೇಷತ ಇಮಾನ್ ನಿಗಿರನ್ತಮುದ್ಯನ್   ॥೮.೨೦೮॥

ರಥವನ್ನೆರಿದ, ಜಗತ್ತಿಗೆ ಒಡೆಯನಾದ ರಾಮಚಂದ್ರನು, ಲೋಕದ ಭಯವನ್ನು ನೀಗುವುದಕ್ಕಾಗಿ, ಈ ಲೋಕವನ್ನು ಕಬಳಿಸಿ ಬಿಡುವ ಕತ್ತಲನ್ನು ಸೂರ್ಯ ಎದುರಿಸುವಂತೆ, ಸಮಸ್ತ ಲೋಕವನ್ನೆಲ್ಲಾ ನಾಶಮಾಡಲು ಯತ್ನಿಸುವ ರಾವಣನನ್ನು  ಎದುರುಗೊಂಡ.

ಆಯಾನ್ತಮೀಕ್ಷ್ಯ ರಜನೀಚರಲೋಕನಾಥಃ ಶಸ್ರ್ತಾಣ್ಯಥಾಸ್ತ್ರಸಹಿತಾನಿ  ಮುಮೋಚ ರಾಮೇ ।
ರಾಮಸ್ತು ತಾನಿ ವಿನಿಹತ್ಯ ನಿಜೈರ್ಮ್ಮಹಾಸ್ತ್ರೈಸ್ತಸ್ಯೋತ್ತಮಾಙ್ಗದಶಕಂ ಯುಗಪನ್ನ್ಯಕೃನ್ತತ್       ॥೮.೨೦೯॥

ಕತ್ತಲಿನಲ್ಲಿ ಓಡಾಡುವ ರಾಕ್ಷಸರ ಒಡೆಯನಾದ ರಾವಣನು, ತನ್ನೆದುರಿಗೆ ಬರುತ್ತಿರುವರಾಮಚಂದ್ರನನ್ನು ನೋಡಿ, ಅಸ್ತ್ರದಿಂದ ಕೂಡಿರುವ ಶಸ್ತ್ರವನ್ನು  ಅವನ ಮೇಲೆ  ಪ್ರಯೋಗಿಸಿದ. ರಾಮನಾದರೋ, ಆ ಶಸ್ತ್ರವನ್ನು  ತನ್ನ ಮಹಾಸ್ತ್ರಗಳಿಂದ ಕತ್ತರಿಸಿ, ರಾವಣನ ಹತ್ತು ತಲೆಗಳನ್ನು ಒಮ್ಮೆಲೇ ಕತ್ತರಿಸಿ ಬಿಟ್ಟ.

ಕೃತ್ತಾನಿ ತಾನಿ ಪುನರೇವ ಸಮುತ್ಥಿತಾನಿ ದೃಷ್ಟ್ವಾ ವರಾಚ್ಛತಧೃತೇರ್ಹೃದಯಂ ಬಿಭೇದ ।
ಬಾಣೇನ ವಜ್ರಸುದೃಶೇನ ಸ ಭಿನ್ನಹೃತ್ಕೋ ರಕ್ತಂ ವಮನ್ ನ್ಯಪತದಾಶು ಮಹಾವಿಮಾನಾತ್         ॥೮.೨೧೦॥

ಕತ್ತರಿಸಲ್ಪಟ್ಟ ತಲೆಗಳು,  ಶತಧೃತನ (ಬ್ರಹ್ಮನ) ವರವಿರುವುದರಿಂದ ಮತ್ತೆ ಮೊಳೆತವು.  ಆಗ ಶ್ರೀರಾಮನು ವಜ್ರಕ್ಕೆ ಸಮನಾದ ಬಾಣದಿಂದ ರಾವಣನ ಹೃದಯಕ್ಕೆ ಹೊಡೆದನು. ಈ ಹೊಡೆತದಿಂದ ರಾವಣನು ಎದೆಯೊಡೆದುಕೊಂಡು, ರಕ್ತವನ್ನು ವಾಂತಿ ಮಾಡುತ್ತಾ, ವಿಮಾನದಿಂದ ಕೆಳಗೆ ಬಿದ್ದನು.

ತಸ್ಮಿನ್ ಹತೇ ತ್ರಿಜಗತಾಂ ಪರಮಪ್ರತೀಪೇ ಬ್ರಹ್ಮಾ ಶಿವೇನ ಸಹಿತಃ ಸಹ ಲೋಕಪಾಲೈಃ ।
ಅಭ್ಯೇತ್ಯ ಪಾದಯುಗಳಂ ಜಗದೇಕಭರ್ತ್ತೂ ರಾಮಸ್ಯ ಭಕ್ತಿಭರಿತಃ ಶಿರಸಾ ನನಾಮ ॥೮.೨೧೧॥

ಮೂರು ಜಗತ್ತಿನ ಹಿಂಸಕನಾದ ಆ ರಾವಣನು  ಸಾಯುತ್ತಿರಲು, ಬ್ರಹ್ಮದೇವರು, ಶಿವ ಮತ್ತು ಇತರ ದೇವತೆಗಳಿಂದ ಕೂಡಿಕೊಂಡು, ಜಗತ್ತಿನ ಒಡೆಯನಾದ ರಾಮಚಂದ್ರನ ಪಾದಗಳನ್ನು ಹೊಂದಿ, ಭಕ್ತಿಯಿಂದ ಕೂಡಿ, ತಲೆಬಾಗಿ ನಮಸ್ಕರಿಸಿದರು.

ಕನ್ನಡ ಪದ್ಯರೂಪ:  https://go-kula.blogspot.com/2018/07/8-207-211.html

No comments:

Post a Comment