ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, July 20, 2018

Mahabharata Tatparya Nirnaya Kannada 8.197-8.201


ತದಾ ದಶಾಸ್ಯೋsನ್ತಕದಣ್ಡಕಲ್ಪಾಂ ಮಯಾಯ ದತ್ತಾಂ ಕಮಲೋದ್ಭವೇನ ।
ಮಯಾದ್ ಗೃಹೀತಾಂ ಚ ವಿವಾಹಕಾಲೇ ಪ್ರಗೃಹ್ಯ ಶಕ್ತಿಂ ವಿಸಸರ್ಜ್ಜ ಲಕ್ಷ್ಮಣೇ       ॥೮.೧೯೭॥

ಆಗ ರಾವಣನು, ಬ್ರಹ್ಮನಿಂದ ಮಯನಿಗೆ ಕೊಡಲ್ಪಟ್ಟ ಹಾಗು ತನಗೆ ಮದುವೆಯ ಸಂದರ್ಭದಲ್ಲಿ ಮಾವನಾದ ಮಯನಿಂದ ಉಡುಗೊರೆಯಾಗಿ ಬಂದಿದ್ದ ‘ಶಕ್ತಿ’ ಎನ್ನುವ ಆಯುಧವನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಿದನು.

 ತಯಾ ಸ ವೀರಃ ಸುವಿದಾರಿತೋರಾಃ ಪಪಾತ ಭೂಮೌ ಸುಭೃಶಂ ವಿಮೂರ್ಚ್ಛಿತಃ ।
ಮರುತ್ಸುತಃ ಶೈಲಮತಿಪ್ರಮಾಣಂ ಚಿಕ್ಷೇಪ ರಕ್ಷಃಪತಿವಕ್ಷಸಿ ದ್ರುತಮ್                  ॥೮.೧೯೮॥

ಆ ಶಕ್ತ್ಯಾಯುಧದಿಂದ ಹೊಡೆಸಿಕೊಂಡ ವೀರನಾದ ಲಕ್ಷ್ಮಣನು ಎದೆ ಒಡೆದುಕೊಂಡು  ಭೂಮಿಯಲ್ಲಿ ಮೂರ್ಛೆಹೊಂದಿ ಬಿದ್ದನು. ಆಗ ಹನುಮಂತನು ಒಂದು ದೊಡ್ಡ ಬಂಡೆಗಲ್ಲನ್ನು ರಾವಣನ ಮೇಲೆ ಎಸೆದನು.

ತೇನಾತಿಗಾಢಂ ವ್ಯಥಿತೋ ದಶಾನನೋ ಮುಖೈರ್ವಮನ್ ಶೋಣಿತಪೂರಮಾಶು ।
ತದನ್ತರೇಣ ಪ್ರತಿಗೃಹ್ಯ ಲಕ್ಷ್ಮಣಂ ಜಗಾಮ ಶಕ್ತ್ಯಾ ಸಹ ರಾಮಸನ್ನಿಧಿಮ್           ॥೮.೧೯೯॥

ಅದರಿಂದ ಅತ್ಯಂತ ತೀವ್ರವಾಗಿ ಗಾಯಗೊಂಡ ರಾವಣನು ತನ್ನ ಹತ್ತೂ ಮುಖಗಳಿಂದ ರಕ್ತವನ್ನು ವಾಂತಿ ಮಾಡಿಕೊಳ್ಳುತ್ತಾ ವ್ಯಥಿತನಾಗಿ ಬಿದ್ದನು.
ಆಗ ಸಿಕ್ಕ ಸಮಯಾವಕಾಶದಲ್ಲಿ ಹನುಮಂತನು ಲಕ್ಷ್ಮಣನನ್ನು ಎತ್ತಿಕೊಂಡು, ರಾಮನ ಸನ್ನಿಧಾನಕ್ಕೆ ತೆರಳಿದನು.

ಸುಮುದ್ಬಬರ್ಹಾಥ ಚ ತಾಂ ಸ ರಾಘವೋ ದಿದೇಶ ಚ ಪ್ರಾಣವರಾತ್ಮಜಂ ಪುನಃ ।
ಪ್ರಭುಃ ಸಮಾನೇತುಮಥೋ ವರೌಷಧೀಃ ಸ ಚಾsನಿನಾಯಾsಶು ಗಿರಿಂ ಪುನಸ್ತಮ್   ॥೮.೨೦೦॥

ಆಗ ರಾಮಚಂದ್ರ ದೇವರು ಲಕ್ಷ್ಮಣನ ಎದೆಯಲ್ಲಿ ನೆಟ್ಟಿದ್ದ ಶಕ್ತ್ಯಾಯುಧವನ್ನು ಕಿತ್ತು ತೆಗೆದರು. ತದನಂತರ ಹನುಮಂತನಲ್ಲಿ ಪುನಃ ಹೋಗಿ, ಸಂಜೀವಿನಿ ಪರ್ವತವನ್ನು ತರುವಂತೆ ಹೇಳಿದರು. ಆಗ ಹನುಮಂತ ಮರಳಿ ಬೆಟ್ಟವನ್ನು ಹೊತ್ತು ತಂದನು.

ತದ್ಗನ್ಧಮಾತ್ರೇಣ ಸಮುತ್ಥಿತೋsಸೌ ಸೌಮಿತ್ರಿರಾತ್ತೋರುಬಲಶ್ಚ ಪೂರ್ವವತ್ ।
ಶಶಂಸ ಚಾsಶ್ಲಿಷ್ಯ ಮರುತ್ಸುತಂ ಪ್ರಭುಃ ಸ ರಾಘವೋsಗಣ್ಯಗುಣಾರ್ಣ್ಣವಃ ಸ್ಮಯನ್     ॥೮.೨೦೧॥

ಅದರ ಪರಿಮಳವನ್ನು ಸ್ವೀಕರಿಸಿದ ತಕ್ಷಣ ಲಕ್ಷ್ಮಣನು ಹಿಂದಿನಂತೆಯೇ ಚೇತರಿಸಿಕೊಂಡು ಬಲಿಷ್ಠನಾಗಿ ಎದ್ದು ನಿಂತ. ಆಗ, ಎಣೆಯಿರದ ಗುಣಗಳಿಗೆ ಕಡಲಾದ ರಾಮಚಂದ್ರ ದೇವರು, ನಗುತ್ತಾ ಹನುಮಂತನನ್ನು ಆಲಂಗಿಸಿ ಹೊಗಳಿದರು.

ಕನ್ನಡ ಪದ್ಯರೂಪ: https://go-kula.blogspot.com/2018/07/8-197-201.html

No comments:

Post a Comment