ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, July 13, 2018

Mahabharata Tatparya Nirnaya Kannada 8.159-8.166


ಸ ದೇವಗನ್ಧರ್ವಮಹರ್ಷಿಸತ್ತಮೈರಭಿಷ್ಟುತೋ ರಾಮಕರೋಪಗೂಹಿತಃ ।
 ಪುನರ್ಗ್ಗಿರಿಂ ತಂ ಶತಯೋಜನೋಚ್ಛ್ರಿತಂ ನ್ಯಪಾತಯತ್ ಸಂಸ್ಥಿತ ಏವ ತತ್ರ ಚ ॥೮.೧೫೯॥

ದೇವತೆಗಳು, ಗಂಧರ್ವರು, ಮಹರ್ಷಿಗಳು, ಮೊದಲಾದವರಿಂದ ಕೊಂಡಾಡಲ್ಪಟ್ಟು, ಶ್ರೀರಾಮನ ಆಲಿಂಗನವನ್ನು ಹೊಂದಿದ ಹನುಮಂತನು,  ನೂರು ಯೋಜನ ವಿಸ್ತೃತವಾಗಿರುವ ಆ ಬೆಟ್ಟವನ್ನು ಅಲ್ಲೇ ನಿಂತು ಹಿಂದಕ್ಕೆ ಎಸೆದನು.(ಲಂಕೆಯಲ್ಲೇ ನಿಂತು,  ಎಲ್ಲಿಂದ ಆ ಪರ್ವತವನ್ನು  ತಂದಿದ್ದನೋ, ಅಲ್ಲಿಗೇ ಎಸೆದನು)

ಸ ಪೂರ್ವವನ್ಮಾರುತಿವೇಗಚೋದಿತೋ ನಿರನ್ತರಂ ಶ್ಲಿಷ್ಟತರೋsತ್ರ ಚಾಭವತ್ ।
ಪುನಶ್ಚ ಸರ್ವೇ ತರುಶೈಲಹಸ್ತಾ ರಣಾಯ ಚೋತ್ತಸ್ಥುರಲಂ ನದನ್ತಃ      ॥೮.೧೬೦॥

ಪುನಶ್ಚ ತಾನ್ ಪ್ರೇಕ್ಷ್ಯ ಸಮುತ್ಥಿತಾನ್ ಕಪೀನ್ ಭಯಂ ಮಹಚ್ಛಕ್ರಜಿತಂ ವಿವೇಶ ।
ಸ ಪೂರ್ವವದ್ಧವ್ಯವಹೇ ಸಮರ್ಚ್ಚ್ಯ ಶಿವಂ ತಥಾsದರ್ಶನಮೇವ ಜಗ್ಮಿವಾನ್ ॥೮.೧೬೧॥

ಆ ಬೆಟ್ಟವು  ಮಾರುತಿಯ ಉಗ್ರವೇಗದಿಂದ ಎಸೆಯಲ್ಪಟ್ಟದ್ದಾಗಿ, ಹಿಂದಿನಂತೆಯೇ ಯಥಾವತ್ತಾಗಿ ಸ್ಥಿತವಾಯಿತು.  (ಮೊದಲಿದ್ದ ಸ್ಥಾನದಲ್ಲಿ, ಮೊದಲಿನಂತೆಯೇ ಸ್ಥಿತವಾಯಿತು)
ಮತ್ತೆ ಮೇಲೆದ್ದ ಆ ಕಪಿಗಳನ್ನು ಕಂಡ ಇಂದ್ರಜಿತುವಿಗೆ ಮಹಾಭಯವುಂಟಾಯಿತು.  ಅವನಾದರೋ, ಹಿಂದಿನಂತೆಯೇ ಅಗ್ನಿಯಲ್ಲಿ ಶಿವನನ್ನು ಪೂಜಿಸಿ, ಯಾರಿಗೂ ಕಾಣದಂತಾಗಿ ಯುದ್ಧಕ್ಕೆಂದು ತೆರಳಿದ.

ವರಾಶ್ರಯೇಣಾಜಗಿರೀಶಯೋಸ್ತಥಾ ಪುನರ್ಮ್ಮಹಾಸ್ತ್ರೈಃ ಸ ಬಬನ್ಧ ತಾನ್ ಕಪೀನ್ ।
ಅಥಾsಹ ರಾಮಸ್ಯ ಮನೋsನುಸಾರತಃ ಪುರಾsಸ್ತ್ರಮೇವಾನುಸರನ್ ಸ ಲಕ್ಷ್ಮಣಃ ॥೮.೧೬೨॥

ಪಿತಾಮಹಾಸ್ತ್ರೇಣ ನಿಹನ್ಮಿ ದುರ್ಮ್ಮತಿಂ ತವಾsಜ್ಞಯಾ ಶಕ್ರಜಿತಂ ಸಬಾನ್ಧವಮ್ ।
ಇತೀರಿತೇ ತೇನ ಸ ಚಾsಹ ರಾಘವೋ ಭಯಾದದೃಶ್ಯೇ ನ ವಿಮೋಕ್ತುಮರ್ಹಸಿ ॥೮.೧೬೩॥

ಬ್ರಹ್ಮ-ರುದ್ರರ ವರ ಬಲವುಳ್ಳ ಇಂದ್ರಜಿತುವು ಕಪಿಗಳನ್ನು ಮಹಾಸ್ತ್ರಗಳಿಂದ ಮತ್ತೆ ಕಟ್ಟಿಹಾಕಿದನು. ಇದನ್ನು ಕಂಡ, ಈತನಕ ರಾಮನ ಇಚ್ಛೆಗನುಗುಣವಾಗಿ ವಿಶೇಷ ಅಸ್ತ್ರಗಳನ್ನು ಬಳಸದ ಲಕ್ಷ್ಮಣ ಶ್ರೀರಾಮನನ್ನು ಕುರಿತು ಹೇಳುತ್ತಾನೆ: “ಇಂದ್ರಜಿತುವನ್ನು  ನೀನು ಅನುಮತಿ ಕೊಟ್ಟರೆ ಬ್ರಹ್ಮಾಸ್ತ್ರದಿಂದ ಕೊಲ್ಲುತ್ತೇನೆ” ಎಂದು. ಆಗ ಶ್ರೀರಾಮಚಂದ್ರ “ಭಯದಿಂದ ಕಳ್ಳನಂತೆ ಅಡಗಿಕೊಂಡು(ಅದೃಶ್ಯನಾಗಿ) ಯುದ್ಧಮಾಡುತ್ತಿರುವ ಇಂದ್ರಜಿತುವಿನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಸಲ್ಲದು “ ಎನ್ನುತ್ತಾನೆ. (ಬ್ರಹ್ಮಾಸ್ತ್ರಕ್ಕೆ ಆತ ಯೋಗ್ಯನಲ್ಲಎನ್ನುವ ಭಾವ)

ನ ಸೋಢುಮೀಶೋsಸಿ ಯದಿ ತ್ವಮೇತದಸ್ತ್ರಂ ತದಾsಹಂ ಶರಮಾತ್ರಕೇಣ ।
ಅದೃಶ್ಯಮಪ್ಯಾಶು ನಿಹನ್ಮಿ ಸನ್ತಂ ರಸಾತಳೇsಥಾಪಿ ಹಿ ಸತ್ಯಲೋಕೇ ॥೮.೧೬೪॥

“ಒಂದು ವೇಳೆ ನಿನಗೆ ಸಾಧ್ಯವಾಗದಿದ್ದರೆ, ನಾನು ಸಾಮಾನ್ಯ ಬಾಣದಿಂದ, ಅದೃಶ್ಯನಾಗಿದ್ದರೂ,   ರಸಾತಳ- ಸತ್ಯಲೋಕದಲ್ಲಿ ಅಡಗಿದ್ದರೂ, ಆತನನ್ನು ಕೊಲ್ಲಬಲ್ಲೆ” ಎನ್ನುತ್ತಾನೆ ರಾಮಚಂದ್ರ.

ಇತಿ ಸ್ಮ ವೀನ್ದ್ರಸ್ಯ ಹನೂಮತಶ್ಚ ಬಲಪ್ರಕಾಶಾಯ ಪುರಾ ಪ್ರಭುಃ ಸ್ವಯಮ್ ।
ಸಮ್ಮಾನಯಿತ್ವಾsಸ್ತ್ರಮಮುಷ್ಯ ರಾಮೋ ದುರನ್ತಶಕ್ತಿಃ ಶರಮಾದದೇsಥ ॥೮.೧೬೫॥

ಕೇವಲ ಗರುಡ ಹಾಗು ಹನುಮಂತನ ಬಲ ಪ್ರಕಾಶವಾಗಲೀ ಎಂದು, ಸಮರ್ಥನಾಗಿದ್ದರೂ ಸುಮ್ಮನಿದ್ದ, ಕೊನೆಗಾಣದ ಶಕ್ತಿಯುಳ್ಳ ಶ್ರೀರಾಮನು ಬಾಣವನ್ನು ತೆಗೆದುಕೊಂಡನು.

ಅನೇನ ದೃಷ್ಟೋsಹಮಿತಿ ಸ್ಮ ದುಷ್ಟೋ ವಿಜ್ಞಾಯ ಬಾಹ್ವೋರ್ಬಲಮಸ್ಯ ಚೋಗ್ರಮ್ ।
ವಿನಿಶ್ಚಯಂ ದೇವತಮಸ್ಯ ಪಶ್ಯನ್ ಪ್ರದುದ್ರುವೇ ಪ್ರಾಣಪರೀಪ್ಸುರಾಶು ॥೮.೧೬೬ ॥

ರಾಮಚಂದ್ರನಿಂದ ನಾನು ಕಾಣಿಸಿಕೊಳ್ಳಲ್ಪಟ್ಟೆ ಎಂದು ತಿಳಿದ, ದುಷ್ಟನಾಗಿರುವ ಇಂದ್ರಜಿತುವು,  ರಾಮಚಂದ್ರನ ಅತ್ಯಂತ ಉಗ್ರವಾದ ಬಾಹುಬಲವನ್ನು ತಿಳಿದು, ರಾಮಚಂದ್ರನ ನಿಶ್ಚಯವನ್ನು ಕಂಡು, ಪ್ರಾಣವನ್ನು ಉಳಿಸಿಕೊಳ್ಳಲು ಓಡಲಾರಂಭಿಸಿದನು.

ಕನ್ನಡ ಪದ್ಯರೂಪ:  https://go-kula.blogspot.com/2018/07/8-159-166.html

No comments:

Post a Comment