ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, July 16, 2018

Mahabharata Tatparya Nirnaya Kannada 8.174-8.178


ಉಭೌ ಚ ತಾವಸ್ತ್ರವಿದಾಂ ವರಿಷ್ಠೌ ಶರೈಃ ಶರೀರಾನ್ತಕರೈಸ್ತತಕ್ಷತುಃ ।
ದಿಶಶ್ಚ  ಸರ್ವಾಃ ಪ್ರದಿಶಃ ಶರೋತ್ತಮೈರ್ವಿಧಾಯ ಶಿಕ್ಷಾಸ್ತ್ರಬಲೈರ್ನ್ನಿರನ್ತರಾಃ     ॥೮.೧೭೪ ॥

ಲಕ್ಷ್ಮಣ ಮತ್ತು ಇಂದ್ರಜಿತ್ ಇಬ್ಬರೂ ಕೂಡಾ ಶ್ರೇಷ್ಠ ಬಿಲ್ಲ್ಗಾರರು ಮತ್ತು ಅಸ್ತ್ರ ಬಲ್ಲವರು. ನಿರಂತರವಾದ ಅಭ್ಯಾಸ ಮತ್ತು ಅಸ್ತ್ರಬಲ ಹೊಂದಿದ ಅವರು, ಶರೀರವನ್ನು ನಾಶ ಮಾಡಬಲ್ಲ ಭಯಂಕರ ಬಾಣಗಳಿಂದ ಪರಸ್ಪರ ಯುದ್ಧ ಮಾಡಿದರು. ಇದರಿಂದಾಗಿ ದಿಕ್ಕು-ದಿಕ್ಕುಗಳಲ್ಲಿ ಬಾಣಗಳೇ ತುಂಬಿದವು.

ಅಸ್ತ್ರಾಣಿ ತಸ್ಯಾಸ್ತ್ರವರೈಃ ಸ ಲಕ್ಷ್ಮಣೋ ನಿವಾರ್ಯ್ಯ ಶತ್ರೋಶ್ಚಲಕುಣ್ಡಲೋಜ್ಜ್ವಲಮ್ ।
ಶಿರಃ ಶರೇಣಾsಶು ಸಮುನ್ಮಮಾಥ ಸುರೈಃ ಪ್ರಸೂನೈರಥ ಚಾಭಿವೃಷ್ಟಃ           ॥೮.೧೭೫॥

ಲಕ್ಷ್ಮಣನು  ಶ್ರೇಷ್ಠವಾದ ಅಸ್ತ್ರಗಳಿಂದ ಇಂದ್ರಜಿತುವಿನ ಅಸ್ತ್ರಗಳನ್ನು ತಡೆದು, ಒಂದು ಬಾಣದಿಂದ  ಕುಂಡಲದಿಂದ ಕೂಡಿರುವ ಇಂದ್ರಜಿತುವಿನ  ತಲೆಯನ್ನು ಕತ್ತರಿಸಿದನು. ಈ ರೀತಿ ಇಂದ್ರಜಿತುವನ್ನು ಸಂಹಾರ ಮಾಡಿದ ಲಕ್ಷ್ಮಣನು  ದೇವತೆಗಳ ಪುಷ್ಪವೃಷ್ಟಿಯಿಂದ ಅಭಿಷಿಕ್ತನಾದನು.

ನಿಪಾತಿತೇsಸ್ಮಿನ್ ನಿತರಾಂ ನಿಶಾಚರಾನ್ ಪ್ಲವಙ್ಗಮಾ ಜಘ್ನುರನೇಕಕೋಟಿಶಃ ।
ಹತಾವಶಿಷ್ಟಾಸ್ತು ದಶಾನನಾಯ ಶಶಂಸುರತ್ಯಾಪ್ತಸುತಪ್ರಣಾಶಮ್               ॥೮.೧೭೬॥

ಇಂದ್ರಜಿತ್ ಸಾಯುತ್ತಿದ್ದಂತೆ, ಕಪಿಗಳು ಅನೇಕ ಕೋಟಿ ಸಂಖ್ಯೆಯಲ್ಲಿರುವ ದೈತ್ಯರನ್ನು ಕೊಂದರು. ಅಳಿದುಳಿದ ದೈತ್ಯರು ಓಡಿಹೋಗಿ ರಾವಣನಿಗೆ ಆತನ ಅತ್ಯಂತ ಪ್ರೀತಿಪಾತ್ರನಾದ ಮಗನ ಸಾವಿನ ಸಮಾಚಾರವನ್ನು  ಹೇಳಿದರು.

ಸ ತನ್ನಿಶಮ್ಯಾಪ್ರಿಯಮುಗ್ರರೂಪಂ ಭೃಷಂ ವಿನಿಶ್ವಸ್ಯ ವಿಲಪ್ಯ ದುಃಖಾತ್ ।
ಸಂಸ್ಥಾಪಯಾಮಾಸ ಮತಿಂ ಪುನಶ್ಚ ಮರಿಷ್ಯ ಇತ್ಯೇವ ವಿನಿಶ್ಚಿತಾರ್ತ್ಥಃ          ॥೮.೧೭೭॥

ರಾವಣನು ಅತ್ಯಂತ ಅಪ್ರೀಯವಾದ, ಅತ್ಯಂತ ವೇದನೆಯನ್ನು ಕೊಡುವ ಈ ಸಂಗತಿಯನ್ನು ಕೇಳಿ, ಜೋರಾಗಿ ನಿಟ್ಟುಸಿರಿಟ್ಟು, ದುಃಖದಿಂದ ಅತ್ತು, ‘ನಾನು ಸಾಯುವುದು ನಿಶ್ಚಯ’ ಎಂದು ತಿಳಿದು ತನ್ನ ಬುದ್ಧಿಯನ್ನು ಗಟ್ಟಿಮಾಡಿಕೊಂಡನು.

ಮರಣಾಭಿಮುಖಃ ಶೀಘ್ರಂ ರಾವಣೋ ರಣಕರ್ಮ್ಮಣೇ ।
ಸಜ್ಜೀಭವನ್ನನ್ತರೈವ ದಿದೇಶ ಬಲಮೂರ್ಜ್ಜಿತಮ್                      ॥೮.೧೭೮॥

ಸಾವಿಗೆ ಅಭಿಮುಖವಾಗಿ ರಾವಣನು ಯುದ್ಧಕ್ಕಾಗಿ  ಸಜ್ಜುಗೊಂಡು, ಒಳಗಡೆಯೇ ಇದ್ದ ವಿಶೇಷ ಸೈನ್ಯಕ್ಕೆ(special force) ಹೊರಡಲು ಆದೇಶಿಸಿದನು.

ಕನ್ನಡ ಪದ್ಯರೂಪ: https://go-kula.blogspot.com/2018/07/8-174-178.html

No comments:

Post a Comment