ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, July 18, 2018

Mahabharata Tatparya Nirnaya Kannada 8.183-8.190


ಪ್ರಗೃಹ್ಯ ರಾಮೋsಥ ಧನುಃ ಶರಾಂಶ್ಚ ಸಮನ್ತತಸ್ತಾನವಧೀಚ್ಛರೌಘೈಃ ।
ಸ ಏವ ಸರ್ವತ್ರ ಚ ದೃಶ್ಯಮಾನೋ ವಿದಿಕ್ಷು ದಿಕ್ಷು ಪ್ರಜಹಾರ ಸರ್ವಶಃ                     ॥೮.೧೮೩॥

ರಾಮನು ಧನುಸ್ಸನ್ನು ಹಿಡಿದು,  ಅನೇಕ ಬಾಣಗಳಿಂದ ರಾಕ್ಷಸ ಸಮೂಹವನ್ನು ಕೊಂದನು. ಅವನೇ ದಿಕ್ಕು-ವಿದಿಕ್ಕುಗಳಲ್ಲಿ ವ್ಯಾಪಿಸಿ,  ರಾಕ್ಷಸ ಸೈನ್ಯವನ್ನು ನಿಯಂತ್ರಣ ಮಾಡಿದನು.

[ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ(೯೩.೨೭) ಹೇಳುವಂತೆ: ತೇ ತು ರಾಮಸಹಸ್ರಾಣಿ ರಣೇ ಪಶ್ಯಂತಿ ರಾಕ್ಷಸಾಃ । ಪುನಃ  ಪಶ್ಯಂತಿ ಕಾಕುತ್ಸ್ಥಮೇಕಮೇವ ಮಹಾಹವೇ ॥ ರಾಕ್ಷಸರು ಕೆಲವೊಮ್ಮೆ ಸಾವಿರಾರು ರಾಮರು ನಿಂತು ಯುದ್ಧ ಮಾಡುವುದನ್ನು ನೋಡಿದರೆ, ಇನ್ನು ಕೆಲವೊಮ್ಮೆ ಒಬ್ಬನೇ ರಾಮನಿರುವುದನ್ನು ಕಾಣುತ್ತಿದ್ದರು].

ಕ್ಷಣೇನ ಸರ್ವಾಂಶ್ಚ ನಿಹತ್ಯ ರಾಘವಃ ಪ್ಲವಙ್ಗಮಾನಾಮೃಷಭೈಃ ಸಪೂಜಿತಃ ।
ಅಭೀಷ್ಟುತಃ ಸರ್ವಸುರೋತ್ತಮೈರ್ಮ್ಮುದಾ ಭೃಶಂ ಪ್ರಸೂನೋತ್ಕರವರ್ಷಿಭಿಃ ಪ್ರಭುಃ  ॥೮.೧೮೪॥

ಕ್ಷಣದಲ್ಲಿ ಆ ಎಲ್ಲಾ ರಾಕ್ಷಸರನ್ನು  ಕೊಂದು, ಶ್ರೇಷ್ಠ ಕಪಿಗಳಿಂದ ಪೂಜಿಸಲ್ಪಟ್ಟ ಶ್ರೀರಾಮನ ಮೇಲೆ  ದೇವತೆಗಳೆಲ್ಲರೂ ಹೂವಿನ ಮಳೆಗರೆದು ಸ್ತೋತ್ರಮಾಡಿದರು.

ಅಥಾsಯಯೌ ಸರ್ವನಿಶಾಚರೇಶ್ವರೋ ಹತಾವಶಿಷ್ಟೇನ ಬಲೇನ ಸಂವೃತಃ ।
ವಿಮಾನಮಾರುಹ್ಯ ಚ ಪುಷ್ಪಕಂ ತ್ವರನ್ ಶರೀರನಾಶಾಯ ಮಹಾಯುಧೋದ್ಧತಃ       ॥೮.೧೮೫॥

ತದನಂತರ  ಸಮಸ್ತ ರಾಕ್ಷಸರಿಗೆ ಒಡೆಯನಾಗಿರುವ ರಾವಣನು  ಅಳಿದುಳಿದ ತನ್ನ ಸೈನ್ಯದಿಂದ ಕೂಡಿಕೊಂಡು, ಮಹತ್ತಾದ ಆಯುಧದಿಂದ ಕೂಡಿಕೊಂಡು, ತನ್ನ ಶರೀರ ನಾಶದ (ತಾನು ಸಾಯಬೇಕು ಎನ್ನುವ) ಬಯಕೆಯಿಂದ, ಪುಷ್ಪಕ ವಿಮಾನವನ್ನು ಏರಿ ಬಂದನು.

ವಿರೂಪನೇತ್ರೋsಥ ಚ ಯೂಪನೇತ್ರಸ್ತಥಾ ಮಹಾಪಾರ್ಶವಮಹೋದರೌ ಚ ।
ಯಯುಸ್ತಮಾವೃತ್ಯ ಸಹೈವ ಮನ್ತ್ರಿಣೋ ಮೃತಿಂ ಪುರೋಧಾಯ ರಣಾಯ ಯಾನ್ತಮ್ ॥೮.೧೮೬॥

ವಿರೂಪನೇತ್ರ, ಯೂಪನೇತ್ರ, ಮಹಾಪಾರ್ಶ, ಮಹೋದರ ಎನ್ನುವ ರಾವಣನಮಂತ್ರಿಗಳು, ಸಾಯಬೇಕು ಎಂದು ಯುದ್ಧಭೂಮಿಯತ್ತ ತೆರಳುತ್ತಿರುವ  ಆ ದಶಮುಖನನ್ನು ಅನುಸರಿಸಿ (ಸುತ್ತುವರಿದು) ಬಂದರು.

ಅಥಾಸ್ಯ ಸೈನ್ಯಾನಿ ನಿಜಘ್ನುರೋಜಸಾ ಸಮನ್ತತಃ ಶೈಲಶಿಲಾಭಿವೃಷ್ಟಿಭಿಃ ।
ಪ್ಲಙ್ಗಮಾಸ್ತಾನಭಿವೀಕ್ಷ್ಯ ವೀರ್ಯ್ಯವಾನ್ ಸಸಾರ ವೇಗೇನ ಮಹೋದರೋ ರುಷಾ       ॥೮.೧೮೭॥

ತದನಂತರ ಅಳಿದುಳಿದ ರಾವಣನ ಸೈನ್ಯವನ್ನು ಕಪಿಗಳು ಕಲ್ಲು, ಬೆಟ್ಟ, ಮೊದಲಾದುವುದರ ಮಳೆಗರೆಯುತ್ತಾ ಕೊಲ್ಲಲಾರಂಭಿಸಿದರು. ಆಗ ರಾವಣನ ಮಂತ್ರಿಯಾದ  ಮಹೋದರನು ಕೋಪದಿಂದ ಮುನ್ನುಗ್ಗಿ ಬಂದನು.

ವೀಕ್ಷ್ಯಾತಿಕಾಯಂ ತಮಭಿದ್ರವನ್ತಂ ಸ ಕುಮ್ಭಕ ರ್ಣ್ಣೋsಯಮಿತಿ ಬ್ರುವನ್ತಃ ।
ಪ್ರದುದ್ರುವುರ್ವಾನರವೀರಸಙ್ಘಾಸ್ತಮಾಸಸಾದಾsಶು ಸುತೋsಥ ವಾಲಿನಃ                ॥೮.೧೮೮॥

ದೊಡ್ಡ ದೇಹವುಳ್ಳ ಮಹೋದರನು ಬರುತ್ತಿರುವುದನ್ನು ನೋಡಿ, ಕುಂಭಕರ್ಣನೇ ಮತ್ತೆ ಎದ್ದು ಬಂದಿದ್ದಾನೆ ಎಂದು ಹೇಳುತ್ತಾ, ವಾನರರೆಲ್ಲರೂ ಓಡಲಾರಂಭಿಸಿದರು.. ಆಗ ವಾಲಿಯ ಮಗನಾದ ಅಂಗದನು  ಅವನನ್ನು ಎದುರುಗೊಂಡನು.

ವದನ್ ಸ ತಿಷ್ಠಧ್ವಮಿತಿ ಸ್ಮ ವೀರೋ ವಿಭೀಷಿಕಾಮಾತ್ರಮಿದಂ ನ ಯಾತ ।
ಇತೀರಯನ್ನಗ್ರತ ಏಷ ಪುಪ್ಲುವೇ  ಮಹೋದರಸ್ಯೇನ್ದ್ರಸುತಾತ್ಮಜೋ ಬಲೀ              ॥೮.೧೮೯॥

“ಇದು ಕೇವಲ ಬಿದಿರಿನ ಗೊಂಬೆ ಅಷ್ಟೇ, ಇದಕ್ಕೆ ಶಕ್ತಿ ಇಲ್ಲಾ, ನಿಲ್ಲಿರಿ, ಓಡಬೇಡಿ” ಎಂದು ಕಪಿಗಳಿಗೆ ಧೈರ್ಯ ತುಂಬಿದ ಅಂಗದನು , ಮಹೋದರನ ಎದುರು ಜಿಗಿದು ನಿಂತನು.

ಅಥೋ ಶರಾನಾಶು ವಿಮುಞ್ಚಮಾನಂ ಶಿರಃ ಪರಾಮೃಶ್ಯ ನಿಪಾತ್ಯ ಭೂತಳೇ ।
ಮಮರ್ದ್ದ ಪದ್ಭ್ಯಾಮಭವದ್ ಗತಾಸುರ್ಮ್ಮಹೋದರೋ ವಾಲಿಸುತೇನ ಚೂರ್ಣ್ಣಿತಃ    ॥೮.೧೯೦॥

ಬಾಣಗಳನ್ನು ಬಿಡತಕ್ಕ ಆ ಮಹೋದರನ ತಲೆಯನ್ನು  ಹಿಡಿದ ಅಂಗದನು, ಆತನನ್ನು  ಭೂಮಿಯಲ್ಲಿ ಬೀಳಿಸಿ, ಕಾಲಿನಿಂದ ಚನ್ನಾಗಿ ತುಳಿದನು. ಹೀಗೆ ವಾಲಿಸುತನಿಂದ ಪುಡಿಪುಡಿ ಮಾಡಲ್ಪಟ್ಟವನಾದ ಮಹೋದರನು ಪ್ರಾಣ ಕಳೆದುಕೊಂಡನು.

ಕನ್ನಡ ಪದ್ಯರೂಪ: https://go-kula.blogspot.com/2018/07/8-183-190.html

No comments:

Post a Comment