ತ್ರಿಂಶತ್ ಸಹಸ್ರಾಣಿ ಮಹೌಘಕಾನಾಮಕ್ಷೋಹಿಣೀನಾಂ ಸಹ ಷಟ್ಸಹಸ್ರಮ್ ।
ಶ್ರಮೇಣ ಸಂಯೋಜಯತಾsಶು ರಾಮಂ ಸಜ್ಜೋ ಭವಾಮೀತಿ ದಿದೇಶ
ರಾವಣಃ ॥೮.೧೭೯॥
ರಾವಣನ ವಿಶೇಷ ಪಡೆಯ ವಿವರ ಈ ಶ್ಲೋಕದಲ್ಲಿದೆ. ಮೂವತ್ತುಸಾವಿರ ಮಹೌಘಗಳು, ಮೂವತ್ತಾರು ಸಾವಿರ ಅಕ್ಷೋಹಿಣಿಗಳನ್ನೊಳಗೊಂಡ ಸೈನ್ಯವನ್ನು
ಯುದ್ಧಭೂಮಿಗೆ ಕಳುಹಿಸುತ್ತಾ, “ಬೇಗನೆ ತೆರಳಿ ರಾಮನಿಗೆ ಶ್ರಮವಾಗುವಂತೆ ಮಾಡಿ. ನಾನು ಸನ್ನದ್ಧನಾಗುತ್ತೇನೆ” ಎಂದು ಆಜ್ಞೆಮಾಡುತ್ತಾನೆ ರಾವಣ.
[ಇಲ್ಲಿ ಹೇಳಿದ ‘ಮಹೌಘ’ ಎನ್ನುವ ಸಂಖ್ಯೆಯ ಕುರಿತಾದ ವಿವರ ವಾಲ್ಮೀಕಿ ರಾಮಾಯಣದಲ್ಲೇ (ಯುದ್ಧಕಾಂಡ ೩೮.೩೩-೩೬) ಕಾಣಸಿಗುತ್ತದೆ. ಅಲ್ಲಿ ಈ
ರೀತಿಯ ವಿವರಣೆ ಇದೆ:
‘ಶತಂ ಶತಸಹಸ್ರಾಣಾಂ ಕೋಟಿ ಮಾಹುರ್ಮನೀಶಿಣಃ । ಶತಂ
ಕೋಟಿಸಹಸ್ರಾಣಾಂ ಶಞ್ಖ ಇತ್ಯಭಿಧೀಯತೇ ।
ಶತಂ ಶಞ್ಖ ಸಹಸ್ರಾಣಾಂ ಮಹಾ ಶಞ್ಖ ಇತಿ ಸ್ಮೃತಮ್ । ಮಹಾಶಞ್ಖಸಹಸ್ರಾಣಾಂ ಶತಂ ವೃಂದಮಿತಿ ಸ್ಮೃತಮ್ ।
ಶತಂ ವೃಂದ ಸಹಸ್ರಾಣಾಂ ಮಹಾವೃಂದಮಿತಿ ಸ್ಮೃತಮ್। ಮಹಾವೃಂದ
ಸಹಸ್ರಾಣಾಂ ಶತಂ ಪದ್ಮಮಿತಿ ಸ್ಮೃತಮ್।
ಶತಂ ಪದ್ಮಸಹಸ್ರಾಣಾಂ ಮಹಾಪದ್ಮಮಿತಿ ಸ್ಮೃತಮ್ । ಮಹಾಪದ್ಮ
ಸಹಸ್ರಾಣಾಂ ಶತಂ ಖರ್ವಮಿಹೋಚ್ಯತೇ ।ಶತಂ ಖರ್ವ ಸಹಸ್ರಾಣಾಂ
ಮಹಾಖರ್ವಮಿತಿ ಸ್ಮೃತಮ್ ।
ಮಹಾಖರ್ವಸಹಸ್ರಾಣಾಂ ಸಮುದ್ರಮಭಿಧೀಯತೇ ।
ಶತಂ ಸಮುದ್ರಸಾಹಸ್ರಮೋಘ ಇತ್ಯಭಿಧೀಯತೇ । ಶತಮೋಘಸಹಸ್ರಾಣಾಂ
ಮಹೌಘ ಇತಿ ವಿಶ್ರುತಃ’
ವಾಲ್ಮೀಕಿ ರಾಮಾಯಣದಲ್ಲಿನ ಈ ಶ್ಲೋಕ ಗುಹ್ಯ ಭಾಷೆಯಲ್ಲಿದ್ದಂತೆ
ಕಾಣುತ್ತದೆ. ಈ ಸಂಖ್ಯೆಯ ಗಣಿತ ಪುರಾಣಾದಿಗಳಲ್ಲಿ ಬೇರೆಬೇರೆ ರೀತಿಯಾಗಿರುವುದು ಕಾಣಸಿಗುತ್ತದೆ[1]. ‘ಶತಸಹಸ್ರಾಣಾಂ ಲಕ್ಷಾಣಾಂ
ಶತಮ್ [೧.೦೦೦೦೦೦೦] ಎಂದು ಒಂದು ಕೋಟಿಯ
ವಿವರಣೆ ನೀಡಿದ ವಾಲ್ಮೀಕಿ, ಮುಂದೆ ಗುಹ್ಯ ಭಾಷೆಯನ್ನು ಬಳಸಿದಂತಿದೆ. ‘ಕೋಟಿಸಹಸ್ರಾಣಾಂ ಶತತಮೋ ಭಾಗಃ’. ಅಂದರೆ ದಶಕೋಟಿಯನ್ನು[೧೦,೦೦,೦೦,೦೦೦] ಶಞ್ಖ ಎಂದು ಕರೆಯುತ್ತಾರೆ. ‘ಶಞ್ಖಸಹಸ್ರಾಣಾಂ ಶತತಮೋ ಭಾಗಃ’. ಅಂದರೆ ದಶಶಞ್ಖ ಅಥವಾ ನೂರು ಕೋಟಿಯನ್ನು [೧೦೦,೦೦,೦೦,೦೦೦] ಮಹಾಶಞ್ಖ ಎಂದು ಕರೆಯುತ್ತಾರೆ.
ಕ್ರಮೇಣ ಇದೇ ರೀತಿ ಓಘ[೧,೦೦,೦೦,೦೦,೦೦,೦೦,೦೦,೦೦,೦೦೦] ಮತ್ತು ಮಹೌಘ [೧೦,೦೦,೦೦,೦೦,೦೦,೦೦,೦೦,೦೦,೦೦೦] ಎನ್ನುವ ಸಂಖ್ಯಯನ್ನು ನಾವು ತಿಳಿಯಬಹುದು].
ಈ ಕೆಳಗಿನ ಕೋಷ್ಟಕ ನಮಗೆ ಅಕ್ಷೋಹಿಣಿಯ ಗಾತ್ರವನ್ನು
ತಿಳಿಸುತ್ತದೆ :
ಸೇನಾ ತುಕಡಿ |
ಗಜಃ (ಆನೆ) |
ರಥಃ |
ತುರಗಃ (ಕುದುರೆ) |
ಪದಾತಯಃ(ಕಾಲಾಳು) |
ಪತ್ತಿಃ |
1 |
1 |
3 |
5 |
3 ಪತ್ತಿಃ=ಸೇನಾಮುಖಃ |
3 |
3 |
9 |
15 |
3 ಸೇನಾಮುಖಃ=ಗುಲ್ಮಃ |
9 |
9 |
27 |
45 |
3 ಗುಲ್ಮಃ = ಗಣಃ |
27 |
27 |
81 |
135 |
3 ಗಣಃ =
ವಾಹಿನಿಃ |
81 |
81 |
243 |
405 |
3 ವಾಹಿನಿಃ = ಪೃತನಾಃ |
243 |
243 |
729 |
1215 |
3 ಪೃತನಾಃ =ಚಮೂಃ |
729 |
729 |
2187 |
3645 |
3 ಚಮೂಃ =ಅನೀಕಿನಿಃ |
2187 |
2187 |
6561 |
10935 |
10 ಅನೀಕಿನಿಃ =ಅಕ್ಷೋಹಿಣಿಃ |
21870 |
21870 |
65610 |
109350 |
ತದಪ್ರದೃಷ್ಯಂ ವರತಃ ಸ್ವಯಮ್ಭುವೋ
ಯುಗಾನ್ತಕಾಲಾರ್ಣ್ಣವಘೂರ್ಣ್ಣಿತೋಪಮಮ್ ।
ಪ್ರಗೃಹ್ಯ ನಾನಾವಿಧಮಸ್ತ್ರಶಸ್ತ್ರಂ ಬಲಂ ಕಪೀಞ್ಛೀಘ್ರತಮಂ ಜಗಾಮ
॥೮.೧೮೦॥
ಅಂತಹ, ಯಾರಿಗೂ
ನಿಯಂತ್ರಿಸಲು ಸಾಧ್ಯವಾಗದ, ಸ್ವಯಂಭುವಿನ ವರ ಬಲವುಳ್ಳ ರಾವಣನ ಸೈನ್ಯ,
ಪ್ರಳಯ ಕಾಲದ ಸಮುದ್ರದಂತೆ ,
ನಾನಾ ವಿಧವಾದ ಅಸ್ತ್ರಶಸ್ತ್ರಗಳೊಂದಿಗೆ ಕಪಿಗಳನ್ನು ಕುರಿತು
ಮುಂದುವರಿದು ಬರುತ್ತಿತ್ತು.
ಆಗಚ್ಛಮಾನಂ ತದಪಾರಮೇಯಂ ಬಲಂ ಸುಘೋರಂ ಪ್ರಳಯಾರ್ಣ್ಣವೋಪಮಮ್ ।
ಭಯಾತ್ ಸಮುದ್ವಿಗ್ನವಿಷಣ್ಣಚೇತಸಃ ಕಪಿಪ್ರವೀರಾ ನಿತರಾಂ
ಪ್ರದುದ್ರುವುಃ ॥೮.೧೮೧॥
ಬರುತ್ತಿರುವ, ಎಣಿಸಲಸಾಧ್ಯವಾದ, ಘೋರವಾಗಿರುವ, ಪ್ರಳಯ ಸಮುದ್ರಕ್ಕೆ ಸಮನಾದ
ಸೈನ್ಯವನ್ನು ನೋಡಿ, ಉದ್ವೇಗ-ದುಃಖದಿಂದ ಕಪಿಗಳೆಲ್ಲಾ ಓಡಲಾರಂಭಿಸಿದರು.
ವರೋ ಹಿ ದತ್ತೋsಸ್ಯ ಪುರಾ ಸ್ವಯಮ್ಭುವಾ ಧರಾತಳೇsಲ್ಪೇsಪಿ ನಿವಾಸಶಕ್ತಿಃ ।
ಅಜೇಯತಾ ಚೇತ್ಯತ ಏವ ಸಾರ್ಕ್ಕಜಾಃ ಪ್ಲವಙ್ಗಮಾ ದ್ರಷ್ಟುಮಪಿ ಸ್ಮ
ನಾಶಕನ್ ॥೮.೧೮೨॥
ಹಿಂದೆ ಬ್ರಹ್ಮನಿಂದ ಕಡಿಮೆ ಭೂಮಿಯಲ್ಲಿಯೂ ಕೂಡಾ ವಾಸ ಮಾಡುವ
ಶಕ್ತಿ ಈ ಬೃಹತ್ ಸೈನ್ಯಕ್ಕೆ ನೀಡಲ್ಪಟ್ಟಿತ್ತು. ಆದ್ದರಿಂದ ಅತ್ಯಂತ ಅಲ್ಪ ಜಾಗದಲ್ಲಿ ಈ ಸೈನ್ಯ
ಇರಲು ಸಾಧ್ಯವಾಗಿತ್ತು. ಆ ಎಲ್ಲರಿಗೂ ಕೂಡಾ
ಅಜೇಯತ್ವದ ವರವಿತ್ತು. ಅದರಿಂದ ಸುಗ್ರೀವನೇ ಮೊದಲಾದ
ಕಪಿಗಳಿಗೆ ಈ ಸೇನೆಯನ್ನು ಎದುರಿಸಲಾಗಲಿಲ್ಲ.
[1] ಸಂಖ್ಯೆಯ ಕುರಿತಾದ ವಿವರಣೆಯನ್ನು ವೈಜಯಂತಿ ಕೋಶದಲ್ಲಿ ಈರೀತಿ
ಕ್ರಮಬದ್ಧವಾಗಿ ಹೇಳಿರುವುದನ್ನೂ ನಾವು ಕಾಣಬಹುದು.
ಶತಂ --> 100 (ನೂರು), ಸಹಸ್ರಂ -->1000 (ಸಾವಿರ), ಅಯುತಂ-->10,000 (ಹತ್ತು ಸಾವಿರ), ನಿಯುತಂ--> 1,00,000 (ಲಕ್ಷ), ಪ್ರಯುತ --> 10,00,000 (ಹತ್ತು ಲಕ್ಷ/ಮಿಲಿಯನ್), ಅರ್ಬುದ-->1,00,00,000
(ಕೋಟಿ), ನೆರ್ಬುದ -->10,00,00,000
(ದಶ ಕೋಟಿ), ವೃಂದ-->
100,00,00,000 (ನೂರು ಕೋಟಿ), ಖರ್ವ-->
1000,00,00,000 (ಸಾವಿರ ಕೋಟಿ), ನಿಖರ್ವ-->
10000,00,00,000 (ಹತ್ತು ಸಾವಿರ ಕೋಟಿ)
ಶಂಖ --> 100000,00,00,000 (ಲಕ್ಷ ಕೋಟಿ/ಬಿಲಿಯನ್), ಪದ್ಮ --> 1000000,00,00,000 (ಕೋಟಿ ಕೋಟಿ), ಸಮುದ್ರ -->10000000,00,00,000
(ಹತ್ತುಕೋಟಿ ಕೋಟಿ), ಮಧ್ಯ
--> 100000000,00,00,000 (ನೂರುಕೋಟಿ ಕೋಟಿ), ಅಂತ -->1000000000,00,00,000 (ಸಾವಿರ ಕೋಟಿ ಕೋಟಿ), ಪರಾರ್ಧ -->
10000000000,00,00,000 (ಹತ್ತುಸಾವಿರ ಕೋಟಿ ಕೋಟಿ)
ಕನ್ನಡ ಪದ್ಯರೂಪ: https://go-kula.blogspot.com/2018/07/8-179-182.html
No comments:
Post a Comment