ಅಥೋ ಗಿರೇರಾನಯನಾತ್ ಪರಸ್ತಾದ್ ಯೇ
ವಾನರಾ ರಾವಣಬಾಣಪೀಡಿತಾಃ ।
ತಾರಾಪಿತಾ ತಾನ್ ನಿರುಜಶ್ಚಕಾರ
ಸುಷೇಣನಾಮಾ ಭಿಷಜಾಂ ವರಿಷ್ಠಃ ॥೮.೨೨೪॥
ಈ ಹಿಂದೆ, ಹನುಮಂತನು
ಗಂಧಮಾದನ ಪರ್ವತವನ್ನು ತಂದು, ಅದನ್ನು ಹಿಂದಕ್ಕೆ ಯಥಾಸ್ಥಾನದಲ್ಲಿಟ್ಟ ಮೇಲೆ ನಡೆದ ಯುದ್ಧದಲ್ಲಿ,
ರಾವಣನ ಬಾಣದಿಂದ ಪೀಡಿಸಲ್ಪಟ್ಟ(ಬಾಣದ
ಪೆಟ್ಟಿನಿಂದ ಅಸ್ವಸ್ಥರಾಗಿದ್ದ) ಕಪಿಗಳನ್ನು, ವಾಲಿಯ ಹೆಂಡತಿ ತಾರಾಳ ತಂದೆಯಾದ, ವೈದ್ಯರಲ್ಲೇ ಅಗ್ರಗಣ್ಯನಾದ, ಸುಷೇಣ ಎನ್ನುವ ವೈದ್ಯನು,
ರಾಮಚಂದ್ರನ ಆಜ್ಞೆಯಂತೆ ಆರೋಗ್ಯವಂತರನ್ನಾಗಿ ಮಾಡಿದನು.
ತದಾ ಮೃತಾನ್ ರಾಘವ ಆನಿನಾಯ
ಯಮಕ್ಷಯಾದ್ ದೇವಗಣಾಂಶ್ಚ ಸರ್ವಶಃ ।
ಸಮನ್ವಜಾನಾತ್ ಪಿತರಂ ಚ ತತ್ರ
ಸಮಾಗತಂ ಗನ್ತುಮಿಯೇಷ ಚಾಥ ॥೮.೨೨೫॥
ಗಾಯಗೊಂಡಿದ್ದ ಕಪಿಗಳಲ್ಲದೇ, ರಾವಣನ ಬಾಣದಿಂದ ಸತ್ತಿದ್ದ ಎಲ್ಲಾ ಕಪಿಗಳನ್ನು ರಾಮಚಂದ್ರನು
ಯಮನ ಮನೆಯಿಂದ ಬದುಕಿಸಿ ತಂದ. ತದನಂತರ, ಬಂದಿದ್ದ
ಸಮಸ್ತ ಬ್ರಹ್ಮಾದಿದೇವತೆಗಳನ್ನೂ,
ದೇವತೆಗಳೊಂದಿಗೆ ಕೂಡಿಕೊಂಡು ಮೃತರಾದ ಜೀವರೊಂದಿಗೆ ಬಂದಿದ್ದ ದಶರಥರಾಜನನ್ನೂ, ಅವರವರ
ಸ್ಥಾನಕ್ಕೆ ತೆರಳಲು ಹೇಳಿ, ತಾನೂ ಕೂಡಾ ಅಯೋಧ್ಯಾ ಪಟ್ಟಣಕ್ಕೆ ಹಿಂತಿರುಗಲು ರಾಮಚಂದ್ರ ಬಯಸಿದ
[ದೇವತೆಗಳೊಂದಿಗೆ ಬಂದಿದ್ದ ದಶರಥ ಎಲ್ಲವನ್ನೂ ನೋಡಿ ಸಂತಸಗೊಂಡಿರುವ
ವಿವರ ವಾಲ್ಮೀಕಿ ರಾಮಾಯಣದಲ್ಲಿ (ಯುದ್ಧಕಾಂಡ-೧೧೯) ವಿವರಿಸಿರುವುದನ್ನು ಕಾಣಬಹುದು]
ವಿಭೀಷಣೇನಾರ್ಪ್ಪಿತಮಾರುರೋಹ ಸ
ಪುಷ್ಪಕಂ ತತ್ಸಹಿತಃ ಸವಾನರಃ ।
ಪುರೀಂ ಜಗಾಮಾsಶು ನಿಜಾಮಯೋಧ್ಯಾಂ ಪುರೋ ಹನೂಮನ್ತಮಥ ನ್ನ್ಯಯೋಜಯತ್
॥೮.೨೨೬॥
ರಾಮಚಂದ್ರನು ವಿಭೀಷಣನಿಂದ ಸಮರ್ಪಿಸಲ್ಪಟ್ಟ ಪುಷ್ಪಕವನ್ನು ಏರಿ, ವಿಭೀಷಣ ಮತ್ತು ಕಪಿಗಳೊಂದಿಗೆ ಸಹಿತನಾಗಿ, ಅಯೋಧ್ಯಾ ಪಟ್ಟಣವನ್ನು ಕುರಿತು ತೆರಳಿದನು. ತನ್ನ ಆಗಮನವನ್ನು
ಮುಂಚಿತವಾಗಿ ತಿಳಿಸಲು ಹನುಮಂತನನ್ನು ಮೊದಲೇ ಅಯೋಧ್ಯಾ ಪಟ್ಟಣಕ್ಕೆ ಶ್ರೀರಾಮ ಕಳುಹಿಸಿಕೊಟ್ಟನು.
ದದರ್ಶ ಚಾಸೌ ಭರತಂ ಹುತಾಶನಂ
ಪ್ರವೇಷ್ಟು ಕಾಮಂ ಜಗದೀಶ್ವರಸ್ಯ ।
ಅದರ್ಶನಾತ್ ತಂ ವಿನಿವಾರ್ಯ್ಯ ರಾಮಂ
ಸಮಾಗತಂ ಚಾಸ್ಯ ಶಶಂಸ ಮಾರುತಿಃ ॥೮.೨೨೭॥
ಇತ್ತ ಅಯೋಧ್ಯಯಲ್ಲಿ ಶ್ರೀರಾಮಚಂದ್ರ ಕಾಣದಿರುವುದರಿಂದ(ಹಿಂತಿರುಗದೇ
ಇದ್ದುದರಿಂದ) ಬೆಂಕಿಯನ್ನು ಪ್ರವೇಶಿಸಲು ಬಯಸುತ್ತಿರುವ ಭರತನನ್ನು ಕಂಡ ಹನುಮಂತ, ಅವನನ್ನು ತಡೆದು,
ಶ್ರೀರಾಮನ ಆಗಮನದ ವಾರ್ತೆಯನ್ನು ತಿಳಿಸಿದನು.
ಶ್ರುತ್ವಾ ಪ್ರಮೋದೋರುಭರಃ ಸ ತೇನ
ಸಹೈವ ಪೌರೈಃ ಸಹಿತಃ ಸಮಾತೃಕಃ ।
ಶತ್ರುಘ್ನಯುಕ್ತೋsಭಿಸಮೇತ್ಯ ರಾಘವಂ ನನಾಮ
ಬಾಷ್ಪಾಕುಲಲೋಚನಾನನಃ ॥೮.೨೨೮ ॥
ಭರತನು ರಾಮಚಂದ್ರನ ಆಗಮನದ ವಿಷಯವನ್ನು ಹನುಮಂತನಿಂದ ಕೇಳಿ, ಉತ್ಕೃಷ್ಟ
ಆನಂದವುಳ್ಳವನಾಗಿ, ಪ್ರಜೆಗಳಿಂದ, ತಾಯಿಯನ್ದಿರಿಂದ, ಶತ್ರುಘ್ನ ಮೊದಲಾದವರೊಂದಿಗೆ ಕೂಡಿಕೊಂಡು,
ಶ್ರೀರಾಮನನ್ನು ಎದುರುಗೊಂಡು, ಆನಂದಬಾಷ್ಪಾದೊಂದಿಗೆ ನಮಸ್ಕರಿಸಿದನು.
ಉತ್ಥಾಪ್ಯ ತಂ ರಘುಪತಿಃ ಸಸ್ವಜೇ
ಪ್ರಣಯಾನ್ವಿತಃ ।
ಶತ್ರುಘ್ನಂ ಚ ತದನ್ಯೇಷು ಪ್ರತಿಪೇದೇ
ಯಥಾವಯಃ ॥೮.೨೨೯॥
ರಾಮಚಂದ್ರನು
ಕಾಲಿಗೆ ಬಿದ್ದ ಭರತನನ್ನು ಎತ್ತಿ, ಪ್ರೀತಿಯಿಂದ ಆಲಂಗಿಸಿದನು..
ಶತ್ರುಘ್ನನನ್ನೂ ಕೂಡಾ ಮೇಲೆತ್ತಿ ಆಲಂಗಿಸಿದನು. ಉಳಿದವರನ್ನೂ ಕೂಡಾ ಅವರ ವಯಸ್ಸಿಗನುಗುಣವಾಗಿ ರಾಮಚಂದ್ರ
ಎದುರುಗೊಂಡನು( ಅಂದರೆ: ದೊಡ್ಡವರಿಗೆ ನಮಸ್ಕರಿಸಿದನು, ಚಿಕ್ಕವರಿಗೆ ಆಶೀರ್ವದಿಸಿದನು ಮತ್ತು ಸಮಾನರನ್ನು
ಆಲಂಗಿಸಿದನು)
ಕನ್ನಡ ಪದ್ಯರೂಪ: https://go-kula.blogspot.com/2018/07/8-224-229.html
ಕನ್ನಡ ಪದ್ಯರೂಪ: https://go-kula.blogspot.com/2018/07/8-224-229.html
No comments:
Post a Comment