ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 1, 2018

Mahabharata Tatparya Nirnaya Kannada 8.105-8.110


ಪ್ರಾಕಾರಮಾಲಙ್ಘ್ಯ   ಪಞ್ಚಯೋಜನಂ ಯದಾ ಯಯೌ ಶೂಲವರಾಯುಧೋ ರಣಮ್ ।
ಕಪಿಪ್ರವೀರಾ ಅಖಿಲಾಃ ಪ್ರದುದ್ರುವುರ್ಭಯಾದತೀತ್ಯೈವ ಚ ಸೇತುಮಾಶು ॥೮.೧೦೫॥

ಶೂಲವನ್ನೇ ಆಯುಧವಾಗಿ ಹೊಂದಿರುವ ಆ ಕುಂಭಕರ್ಣನು, ಐದು ಯೋಜನ ಎತ್ತರವಿರುವ ತಡೆಗೋಡೆಯನ್ನು(ವಿಸ್ತಾರವಾದ ತ್ರಿಕೂಟಪರ್ವತವನ್ನು)  ನಿರಾಯಾಸವಾಗಿ ದಾಟಿ, ಯುದ್ಧಭೂಮಿಗೆ ಬಂದಾಗ,  ಎಲ್ಲಾ ಕಪಿಗಳೂ ಕೂಡಾ, ಭಯದಿಂದ ಸೇತುವನ್ನೂ ದಾಟಿ ಓಡಿಹೋದರು!

   ಶತವಲಿಪನಸಾಖ್ಯೌ ತತ್ರ ವಸ್ವಂಶಭೂತೌ ಪವನಗಣವರಾಂಶೌ ಶ್ವೇತಸಮ್ಪಾತಿನೌ ಚ ।
    ನಿರ್ಋತಿತನುಮಥೋಗ್ರಂ ದುರ್ಮ್ಮುಖಂ ಕೇಸರೀತಿ ಪ್ರವರಮಥ ಮರುತ್ಸು ಪ್ರಾಸ್ಯದೇತಾನ್ ಮುಖೇ ಸಃ ॥೮.೧೦೬॥

ಕುಂಭಕರ್ಣನು, ವಸುವಿನ ಅಂಶಭೂತರಾದ ಶತವಲಿ-ಪನಸ ಎನ್ನುವವರನ್ನೂ, ಪವನ ಗಣದವರಾಗಿರುವ ಶ್ವೇತ-ಸಮ್ಪಾತಿಗಳನ್ನೂ , ನಿರ್ಋತಿ ಎನ್ನುವ ದೇವತೆಯ ಅವತಾರವಾದ ದುರ್ಮುಖನನ್ನೂ, ಮರುತ್ತುಗಳಲ್ಲಿ ಶ್ರೇಷ್ಠನಾಗಿರುವ ಕೇಸರೀ ಎಂಬ ಹೆಸರಿನ ಕಪಿಯನ್ನೂ  ತನ್ನ ಮುಖಕ್ಕೆ(ಬಾಯಿಯೊಳಗೆ) ಎಸೆದುಕೊಂಡು ಮುನ್ನುಗ್ಗಿದನು.

  ರಜನಿಚರವರೋsಸೌ ಕುಮ್ಭಕರ್ಣ್ಣಃ ಪ್ರತಾಪೀ ಕುಮುದಮಪಿ ಜಯನ್ತಂ ಪಾಣಿನಾ ಸಮ್ಪಿಪೇಷ ।
  ನಳಮಥ ಚ ಗಜಾದೀನ್ ಪಞ್ಚ ನೀಲಂ ಸತಾರಂ ಗಿರಿವರತರುಹಸ್ತಾನ್ ಮುಷ್ಟಿನಾsಪಾತಯಚ್ಛ ॥೮.೧೦೭॥

ದೈತ್ಯರಲ್ಲೇ ಅಗ್ರಗಣ್ಯನೂ, ಪ್ರತಾಪಿಯೂ ಆಗಿರುವ ಈ ಕುಂಭಕರ್ಣನು, ಯುದ್ಧಭೂಮಿಯಲ್ಲಿ ಮುನ್ನುಗ್ಗುತ್ತಾ,   ತನ್ನ ಕೈಯಿಂದ ಕುಮುದ ಮತ್ತು ಜಯಂತ ಎನ್ನುವ ಇಬ್ಬರು ಕಪಿಗಳನ್ನು ಹಿಟ್ಟಿನಂತೆ ಹಿಸುಕಿ ಹಾಕಿದನು. ಬಂಡೆ, ಮರ, ಇತ್ಯಾದಿಗಳನ್ನು ಹಿಡಿದಿರುವ, ನಳ ಹಾಗು ಗಜ ಮೊದಲಾದ ಐವರನ್ನು ತನ್ನ ಮುಷ್ಟಿಪ್ರಹಾರದಿಂದ ಕುಂಭಕರ್ಣ   ನೆಲಕ್ಕೆ ಬೀಳಿಸಿದನು.

ಅಥಾಙ್ಗದಶ್ಚ ಜಾಮ್ಬವಾನಿನಾತ್ಮಜಶ್ಚ ವಾನರೈಃ ।
ನಿಜಘ್ನಿರೇ ನಿಶಾಚರಂ ಸವೃಕ್ಷಶೈಲಸಾನುಭಿಃ ॥೮.೧೦೮॥

ಆನಂತರ, ಅಂಗದ, ಜಾಂಬವಂತ, ಸೂರ್ಯನ ಮಗನಾದ ಸುಗ್ರೀವ ಇವರೆಲ್ಲರೂ  ಇತರ ವಾನರರಿಂದ ಕೂಡಿಕೊಂಡು, ಮರ ಹಾಗು  ಬಂಡೆ ಇತ್ಯಾದಿಗಳಿಂದ ಆ ಕುಂಭಕರ್ಣನನ್ನು ಹೊಡೆದರು.

ವಿಚೂರ್ಣ್ಣಿತಾಶ್ಚ ಪರ್ವತಾಸ್ತನೌ ನಿಶಾಚರಸ್ಯತೇ ।
ಬಭೂವ ಕಾಚನ ವ್ಯಥಾ ನಚಾಸ್ಯ ಬಾಹುಷಾಳಿನಃ ॥೮.೧೦೯॥

ಕುಂಭಕರ್ಣನ ದೇಹದಲ್ಲಿ ಆ ಕಪಿಶ್ರೇಷ್ಠರು  ಎಸೆದ ಪರ್ವತಗಳು ಪುಡಿಪುಡಿಯಾದವು. ತನ್ನ ಕೈಯಿಂದಲೇ ಎಲ್ಲರನ್ನೂ ಮಣಿಸುವ ಸಾಮರ್ಥ್ಯ ಇರುವ ಅವನಿಗೆ ಅದರಿಂದ ಯಾವ ವ್ಯಥೆಯೂ ಆಗಲಿಲ್ಲಾ.

ಅಥಾಪರಂ ಮಹಾಚಲಂ ಪ್ರಗೃಹ್ಯ ಭಾಸ್ಕರಾತ್ಮಜಃ ।
ಮುಮೋಚ ರಾಕ್ಷಸೇsಥ ತಂ ಪ್ರಗೃಹ್ಯ ತಂ ಜಘಾನ ಸಃ ॥೮.೧೧೦॥

ಸೂರ್ಯಪುತ್ರನಾದ ಸುಗ್ರೀವನು ಇನ್ನೊಂದು ಬೆಟ್ಟವನ್ನು ಹಿಡಿದು, ಕುಂಭಕರ್ಣನ ಮೇಲೆ ಅದನ್ನು ಎಸೆದನು. ಆದರೆ ಕುಂಭಕರ್ಣನು ಅದೇ ಬೆಟ್ಟವನ್ನು ಹಿಡಿದು  ಹಿಂದಕ್ಕೆ ಹೊಡೆದನು.

ಕನ್ನಡ ಪದ್ಯರೂಪ : https://go-kula.blogspot.com/2018/07/8-105-110.html

No comments:

Post a Comment