ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, July 19, 2018

Mahabharata Tatparya Nirnaya Kannada 8.191-8.196


ಅಥೋ ಮಹಾಪಾರ್ಶ್ವ ಉಪಾಜಗಾಮ ಪ್ರವರ್ಷಮಾಣೋsಸ್ಯ ಶರಾಮ್ಬುಧಾರಾಃ ।
ಪ್ರಸ̐ಹ್ಯ   ಚಾsಚ್ಛಿದ್ಯ ಧನುಃ ಕರಸ್ಥಂ ಸಮಾದದೇ ಖಡ್ಗಮಮುಷ್ಯ ಸೋsಙ್ಗದಃ    ॥೮.೧೯೧॥

ಮಹೋದರನು ಸತ್ತ ನಂತರ ಮಹಾಪಾರ್ಶ್ವನು ಬಾಣಗಳನ್ನು ಬಿಡುತ್ತಾ ಮುಂದೆ ಬಂದನು. ಆಗ ಅಂಗದನು ಅವನನ್ನು ಹಿಡಿದು, ಅವನ ಕೈಯಲ್ಲಿರುವ ಬಿಲ್ಲನ್ನು ಕಿತ್ತುಕೊಂಡು, ಅವನ ಖಡ್ಗವನ್ನೂ ಎಳೆದುಕೊಂಡನು.

ನಿಗೃಹ್ಯ  ಕೇಶೇಷು ನಿಪಾತ್ಯ ಭೂತಳೇ ಚಕರ್ತ್ತ ವಾಮಾಂಸತ ಓದರಂ ಪರಮ್ ।
ಯಥೋಪವೀತಂ ಸ ತಥಾ ದ್ವಿಧಾಕೃತೋ ಮಮಾರ ಮನ್ತ್ರೀ ರಜನೀಚರೇಶಿತುಃ        ॥೮.೧೯೨ ॥

ಮಹಾಪಾರ್ಶ್ವನ ಕೂದಲನ್ನು ಹಿಡಿದ ಅಂಗದನು ಅವನನ್ನು ಭೂತಳದಲ್ಲಿ ಬೀಳಿಸಿ, ಎಡಭುಜದಿಂದ ಹೊಟ್ಟೆಯ ಬಲಭಾಗದ ತನಕ ಯಜ್ಞೋಪವೀತದ ಹಾಗೆ ಅವನ ಶರೀರವನ್ನು ಸೀಳಿದನು. ಈ ರೀತಿ ಎರಡು ಭಾಗವಾಗಿ ತುಂಡರಿಸಲ್ಪಟ್ಟ ಮಹಾಪಾರ್ಶ್ವ ಕೊನೆಯುಸಿರೆಳೆದನು.

ಅಥೈನಮಾಜಗ್ಮತುರುದ್ಯತಾಯುಧೌ ವಿರೂಪನೇತ್ರೋsಪ್ಯಥ ಯೂಪನೇತ್ರಃ ।
ಯಥೈವ ಮೇಘೌ ದಿವಿ ತಿಗ್ಮರಶ್ಮಿಂ ತಥಾ ಸಮಾಚ್ಛಾದಯತಾಂ ಶರೌಘೈಃ             ॥೮.೧೯೩ ॥

ತದನಂತರ,  ಆಯುಧಗಳನ್ನು ಹಿಡಿದ ವಿರೂಪನೇತ್ರ ಮತ್ತು ಯೂಪನೇತ್ರರು ಎರಡು ಮೋಡಗಳು ಸೂರ್ಯನನ್ನು ಮುಚ್ಚುವಂತೆ  ಬಾಣಗಳ ಸಮೂಹದಿಂದ ಅಂಗದನನ್ನು  ಆಚ್ಛಾದಿಸಿದರು.

ತಾಭ್ಯಾಂ ಸ ಬದ್ಧಃ ಶರಪಞ್ಜರೇಣ ವಿಚೇಷ್ಟಿತುಂ ನಾಶಕದತ್ರ ವೀರಃ ।
ಹರೀಶ್ವರಃ ಶೈಲಮತಿಪ್ರಮಾಣಮುತ್ಪಾಟ್ಯ ಚಿಕ್ಷೇಪ ತಯೋಃ ಶರೀರೇ                    ॥೮.೧೯೪॥

ಅವರಿಬ್ಬರ ಶರಪಂಜರದಿಂದ ಬಂಧಿಸಲ್ಪಟ್ಟ ಅಂಗದನು ಅಲುಗಾಡಲೂ  ಶಕ್ತನಾಗಲಿಲ್ಲಾ. ಆಗ ವೀರನಾದ ಸುಗ್ರೀವನು ಬಹಳ ದೊಡ್ಡದಾದ ಬೆಟ್ಟವನ್ನು ಕಿತ್ತು ತಂದು,  ಅವರಿಬ್ಬರ ಶರೀರದ ಮೇಲೆ ಎಸೆದನು.  

ಉಭೌ ಚ ತೌ ತೇನ ವಿಚೂ ರ್ಣ್ಣಿತೌ ರಣೇ ರವೇಃ ಸುತಸ್ಯೋರುಬಲೇರಿತೇನ ।
ನಿಶಾಚರೇಶೋsಥ ಶರೇಣ ಸೂರ್ಯ್ಯಜಂ ಬಿಭೇದ ವಕ್ಷಸ್ಯಪಿ ಸೋsಪತದ್ ಭುವಿ      ॥೮.೧೯೫॥

ಸುಗ್ರೀವನ ಉತ್ಕೃಷ್ಟವಾದ ಬಲದಿಂದ ಎಸೆಯಲ್ಪಟ್ಟ ಬೆಟ್ಟದಿಂದ  ವಿರೂಪನೇತ್ರ ಮತ್ತು ಯೂಪನೇತ್ರರು ಸತ್ತು ಹೋದರು. ಇದನ್ನು ನೋಡುತ್ತಿದ್ದ ರಾವಣನು ತಕ್ಷಣ ಬಾಣದಿಂದ ಸುಗ್ರೀವನನ್ನು ಹೊಡೆದನು. ಆ ಹೊಡೆತದಿಂದ ಸುಗ್ರೀವನು ಭೂಮಿಯಲ್ಲಿ ಬಿದ್ದನು.

ತತಃ ಸ ಸರ್ವಾಂಶ್ಚ ಹರಿಪ್ರವೀರಾನ್ ವಿಧೂಯ ಬಾಣೈರ್ಬಲವಾನ್ ದಶಾನನಃ ।
ಜಗಾಮ ರಾಮಾಭಿಮುಖಸ್ತದೈನಂ ರುರೋಧ ರಾಮಾವರಜಃ ಶರೌಘೈಃ                 ॥೮.೧೯೬॥

ತದನಂತರ, ಬಲಿಷ್ಟನಾದ ರಾವಣನು ಎಲ್ಲಾ ಶ್ರೇಷ್ಠ ಕಪಿಗಳನ್ನು ಬಾಣಗಳಿಂದ ಹೊಡೆದು, ರಾಮನನ್ನು ಕುರಿತು ತೆರಳಿದನು. ಹೀಗೆ ತೆರಳುತ್ತಿರುವ  ಅವನನ್ನು  ಲಕ್ಷ್ಮಣ ಬಾಣಗಳಿಂದ ತಡೆದನು. 

ಕನ್ನಡ ಪದ್ಯರೂಪ: https://go-kula.blogspot.com/2018/07/8-191-196.html

No comments:

Post a Comment