ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, July 27, 2018

Mahabharata Tatparya Nirnaya Kannada 8.230-8.234


ಪುರೀಂ ಪ್ರವಿಶ್ಯ ಮುನಿಭಿಃ  ಸಾಮ್ರಾಜ್ಯೇ ಚಾಭಿಷೇಚಿತಃ ।
ಯಥೋಚಿತಂ ಚ ಸಮ್ಮಾನ್ಯ ಸರ್ವಾನಾಹೇದಮೀಶ್ವರಃ ॥೮.೨೩೦॥

ಪಟ್ಟಣವನ್ನು ಪ್ರವೇಶಮಾಡಿ, ಅಗಸ್ತ್ಯಾದಿ ಮುನಿಗಳಿಂದ ರಾಜ್ಯಾಭಿಷೇಕ ಮಾಡಿಸಿಕೊಳ್ಳಲ್ಪಟ್ಟ ಶ್ರೀರಾಮಚಂದ್ರ, ಎಲ್ಲರನ್ನೂ ಅವರವರ  ಯೋಗ್ಯತೆಗನುಗುಣವಾಗಿ ಸನ್ಮಾನ ಮಾಡಿ, ಎಲ್ಲರನ್ನು ಕುರಿತು ಈ ರೀತಿ  ಹೇಳುತ್ತಾನೆ:

ಸರ್ವೈರ್ಭವದ್ಭಿಃ ಸುಕೃತಂ ವಿಧಾಯ ದೇಹಂ ಮನೋವಾಕ್ಸಹಿತಂ ಮದೀಯಮ್ ।
ಏತಾವದೇವಾಖಿಲಸದ್ವಿಧೇಯಂ ಯತ್ ಕಾಯವಾಕ್ಚಿತ್ತಭವಂ ಮದರ್ಚ್ಚನಮ್ ॥೮.೨೩೧॥

‘ನೀವೆಲ್ಲರೂ ನಿಮ್ಮ ಮನಸ್ಸು ಹಾಗು ಮಾತುಗಳಿಂದ ಕೂಡಿರುವ ನಿಮ್ಮ ದೇಹದಿಂದ ನನಗೆ ಸಂಬಂಧಪಟ್ಟ ಕೆಲಸವನ್ನು ಮಾಡಿ ಪುಣ್ಯವನ್ನೇ ಮಾಡಿದ್ದೀರಿ. ಇದು ಎಲ್ಲಾ ಸಜ್ಜನರೂ  ಮಾಡಬೇಕಾದ ಕಾರ್ಯ. ದೇಹ-ಮಾತು-ಮನಸ್ಸಿನಿಂದ ನಡೆಯುವ ನನ್ನ ಅರ್ಚನೆ  ಎಲ್ಲರೂ ಮಾಡಬೇಕಾದದ್ದು.

ಮುಕ್ತಿಪ್ರದಾನಾತ್ ಪ್ರತಿಕರ್ತ್ತೃತಾ ಮೇ ಸರ್ವಸ್ಯ ಚಾಥೋ ಭವತಾಂ ಭವೇತ ।
ಹನೂಮತೋ ನ ಪ್ರತಿಕರ್ತ್ತೃತಾ ಸ್ಯಾತ್ ಸ್ವಭಾವಭಕ್ತಸ್ಯ ನಿರೌಪಧಂ ಮೇ ॥೮.೨೩೨॥

ನಿಮಗೆಲ್ಲರಿಗೂ ಮುಕ್ತಿಯನ್ನು ಕೊಡುವುದರಿಂದ ನಿಮ್ಮೆಲ್ಲರ ಸೇವೆಗೆ ತಕ್ಕಫಲವನ್ನು ಕೊಟ್ಟಂತಾಗುತ್ತದೆ. ಆದರೆ ಸ್ವಾಭಾವಿಕವಾಗಿಯೇ ಭಕ್ತನಾಗಿರುವ, ಯಾವುದೇ ಫಲಾಪೇಕ್ಷೆ, ನೆಪವಿರದ ಹನುಮಂತನಿಗೆ ಏನನ್ನು ಕೊಟ್ಟರೂ ಅದು ಕಡಿಮೆಯೇ’ ಎಂದು ಹೇಳಿದ ರಾಮಚಂದ್ರ ಹನುಮಂತನ ಗುಣ ಎಂತಹದ್ದು ಎನ್ನುವುದನ್ನು ವಿವರಿಸುತ್ತಾನೆ:

ಮದ್ಭಕ್ತೌ ಜ್ಞಾನಪೂರ್ತ್ತಾವನುಪಧಿಕಬಲಪ್ರೋನ್ನತೌ ಸ್ಥೈರ್ಯ್ಯಧೈರ್ಯ್ಯ
ಸ್ವಾಭಾವ್ಯಾದಿಕ್ಯತೇಜಃ ಸುಮತಿದಮಶಮೇಷ್ವಸ್ಯ ತುಲ್ಯೋ ನ ಕಶ್ಚಿತ್ ।
ಶೇಷೋ ರುದ್ರಃ ಸುಪರ್ಣ್ಣೋsಪ್ಯುರುಗುಣಸಮಿತೌ ನೋಸಹರ್ಸ್ರಾಂಶತುಲ್ಯಾ
ಅಸ್ಯೇತ್ಯಸ್ಮಾನ್ಮದೈಶಂ ಪದಮಹಮಮುನಾ ಸಾರ್ದ್ಧಮೇವೋಪಭೋಕ್ಷ್ಯೇ ॥೮.೨೩೩॥

ನನ್ನ ಭಕ್ತಿಯಲ್ಲಿ,  ಜ್ಞಾನ ಪೂರ್ಣತೆಯಲ್ಲಿ, ಸ್ವಾಭಾವಿಕವಾದ ಬಲದ ಉತ್ಕೃಷ್ಟತೆಯಲ್ಲಿ, ಇಂದ್ರಿಯ ನಿಗ್ರಹದಲ್ಲಿ,  ಬುದ್ಧಿವಂತಿಕೆಯಲ್ಲಿ, ಸ್ವಾಭಾವಿಕವಾಗಿಯೇ ಅಧಿಕವಾಗಿರುವ ತೇಜಸ್ಸಿನಲ್ಲಿ, ಪ್ರಜ್ಞಾವಂತಿಕೆಯಲ್ಲಿ, ಇಂದ್ರಿಯನಿಗ್ರಹದಲ್ಲಿ, ನನ್ನ ಭಕ್ತಿಯಲ್ಲಿ ಇವನಿಗೆ ಸಮನಾಗಿರುವವನು ಯಾರೂ ಇಲ್ಲ. ( ಆದರೆ ‘ಕಶ್ಚಿತ್ ಸಮಃ’ ಬ್ರಹ್ಮ ಮಾತ್ರ ಇವನಿಗೆ ಸಮ). ಶೇಷ, ರುದ್ರ, ಗರುಡ ಇವರ ಗುಣಗಳು ಹನುಮಂತನ ಗುಣದ ಸಾವಿರದ ಒಂದು ಭಾಗಕ್ಕೂ ಸಮನಲ್ಲ. ಅದರಿಂದ ನನ್ನ ಈಶಪದವಿಯನ್ನು ಇವನ ಜೊತೆಗೆ ಭೋಗಿಸುತ್ತೇನೆ(ಇವನಿಗೆ ಸಾಯುಜ್ಯವನ್ನು ನೀಡುತ್ತೇವೆ).

    ಪೂರ್ವಂ ಜಿಗಾಯ ಭುವನಂ ದಶಕನ್ಧರೋsಸಾವಬ್ಜೋದ್ಭವಸ್ಯ ವರತೋ ನತು ತಂ ಕದಾಚಿತ್ ।
     ಕಶ್ಚಿಜ್ಜಿಗಾಯ ಪುರುಹೂತಸುತಃ ಕಪಿತ್ವಾದ್ ವಿಷ್ಣೋರ್ವರಾದಜಯದರ್ಜ್ಜುನ ಏವ ಚೈನಮ್ ॥೮.೨೩೪॥

ಮೊದಲು ರಾವಣನು ಬ್ರಹ್ಮವರದ ಬಲದಿಂದ ಭೂಮಿಯನ್ನು ಗೆದ್ದ. ಅವನನ್ನು ಯಾರೂ ಗೆಲ್ಲಲಿಲ್ಲ. ವಾಲಿಗೆ ಕಪಿತ್ವವಿದ್ದುದರಿಂದ ಅವನನ್ನು ಗಿದ್ದಿದ್ದ. (ರಾವಣ ಬ್ರಹ್ಮನಲ್ಲಿ ವರವನ್ನು ಬೇಡುವಾಗ ಮನುಷ್ಯ ಮತ್ತು ಕಪಿಗಳನ್ನು ಉಪೇಕ್ಷೆ ಮಾಡಿದ್ದ).  ಕಾರ್ತವೀರ್ಯಾರ್ಜುನನು ವಿಷ್ಣುವಿನ ವರಬಲದಿಂದ ರಾವಣನನ್ನು ಗೆದ್ದಿದ್ದ.

ಕನ್ನಡ ಪದ್ಯರೂಪ: https://go-kula.blogspot.com/2018/07/8-230-234.html

No comments:

Post a Comment