ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, July 11, 2018

Mahabharata Tatparya Nirnaya Kannada 8.147-8.151


ಪುನಶ್ಚ ಹುತ್ವಾ ಸ ಹುತಾಶಮೇವ ರಥಂ ಸಮಾರು̐ಹ್ಯ ಯಯಾವದರ್ಶನಮ್ ।
ವವರ್ಷ ಚಾಸ್ತ್ರಾಣಿ ಮಹಾನ್ತ್ಯಜಸ್ರಂ ವರಾದುಮೇಶಸ್ಯ ತಥಾsಬ್ಜಜಸ್ಯ                     ॥೮.೧೪೭॥

ಇಂದ್ರಜಿತುವು ಮತ್ತೆ ಆಭಿಚಾರಿಕ ಅಗ್ನಿಯನ್ನು ಹೋಮಿಸಿ, ರಥವನ್ನು ಏರಿ, ಸದಾಶಿವ ಹಾಗು ಬ್ರಹ್ಮನ ವರಬಲದಿಂದ ಯಾರಿಗೂ ಕಾಣಿಸದೇ ಯುದ್ಧ ಮಾಡುತ್ತಾ, ಮಹಾಸ್ತ್ರಗಳನ್ನು ನಿರಂತರವಾಗಿ ಪ್ರಯೋಗಿಸಿದನು.

ಪುನಶ್ಚ ತಸ್ಯಾಸ್ತ್ರನಿಪೀಡಿತಾಸ್ತೇ ನಿಪೇತುರುರ್ವ್ಯಾಂ ಕಪಯಃ ಸಲಕ್ಷ್ಮಣಾಃ ।
ಸ್ಪೃಶನ್ತಿ ನಾಸ್ತ್ರಾಣಿ ದುರನ್ತಶಕ್ತಿಂ ತನುಂ ಸಮೀರಸ್ಯ ಹಿ ಕಾನಿಚಿತ್ ಕ್ವಚಿತ್                 ॥೮.೧೪೮॥

ಪುನಃ ಇಂದ್ರಜಿತುವಿನ ಅಸ್ತ್ರಗಳಿಂದ ಪೀಡಿತರಾದ ಲಕ್ಷ್ಮಣನಿಂದ ಕೂಡಿದ ಕಪಿಗಳು ನೆಲದ ಮೇಲೆ ಬಿದ್ದರು. ಆದರೆ ಹನುಮಂತನಿಗೆ ಮಾತ್ರ ಏನೂ ಆಗಲಿಲ್ಲ. ಏಕೆಂದರೆ ಅವನನ್ನು  ಅಸ್ತ್ರಗಳು ಮುಟ್ಟುವುದಿಲ್ಲವಷ್ಟೇ.

ವಿಜ್ಞಾತುಕಾಮಃ ಪುರಿ ಸಮ್ಪ್ರವೃತ್ತಿಂ ವಿಭೀಷಣಃ ಪೂರ್ವಗತಸ್ತದಾssಗಾತ್ 
ದದರ್ಶ ಸರ್ವಾನ್ ಪತಿತಾನ್ ಸ ವಾನರಾನ್ ಮರುತ್ಸುತಂ ತ್ವೇಕಮನಾಕುಲಂ ಚ           ॥೮.೧೪೯॥

ಇಂದ್ರಜಿತ್ ಅಸ್ತ್ರವನ್ನು ಪ್ರಯೋಗಿಸುವ ಸಮಯದಲ್ಲಿ ಯುದ್ಧಭೂಮಿಯಲ್ಲಿ ವಿಭೀಷಣ ಇರಲಿಲ್ಲ. ಆತ ಲಂಕಾಪಟ್ಟಣದ ಒಳಗಡೆಯ ಪ್ರವೃತ್ತಿಯನ್ನು ತಿಳಿಯ ಬಯಸಿ, ಇಂದ್ರಜಿತು ಯುದ್ಧಕ್ಕೆ ಬರುವ  ಮುನ್ನವೇ ಪಟ್ಟಣದತ್ತ  ತೆರಳಿದ್ದ. ಆ ಕಾರಣದಿಂದ ಅವನು ಅಸ್ತ್ರ ಬಂಧನಕ್ಕೆ ಒಳಪಡಲಿಲ್ಲ.  ಹಿಂತಿರುಗಿ ಬಂದ ವಿಭೀಷಣನು ನೆಲದ ಮೇಲೆ ಬಿದ್ದ ಎಲ್ಲರನ್ನೂ ನೋಡಿದ. ಅದೇ ರೀತಿ ಯಾವುದೇ ತೊಂದರೆ  ಇಲ್ಲದೇ ಇರುವ ಹನುಮಂತನನ್ನೂ ಕೂಡಾ ಆತ ಕಂಡ.

ಸ ತಂ ಸಮಾದಾಯ ಯಯೌ ವಿಧಾತೃಜಂ ವಿಮೂರ್ಚ್ಛಿತಂ ಚೋದಕಸೇಕತಸ್ತಮ್ ।
ಆಶ್ವಾಸ್ಯ ಕಿಂ ಜೀವಸಿ ಹೀತ್ಯುವಾಚ ತಥೇತಿ ಸ ಪ್ರಾಹ ಚ ಮನ್ದವಾಕ್ಯಃ                      ॥೮.೧೫೦॥

ವಿಭೀಷಣನು ಹನುಮಂತನೊಂದಿಗೆ ಜಾಂಬವಂತ ಇದ್ದಲ್ಲಿಗೆ ಬಂದು, ಮೂರ್ಛೆಹೊಂದಿದ್ದ ಆತನನ್ನು ಜಲಪ್ರೋಕ್ಷಣೆಯಿಂದ ಎಚ್ಚರಿಸಿ, ಬದುಕಿದ್ದೀಯಾ? ಎಂದು ಕೇಳಿದನು. ಅದಕ್ಕೆ ಜಾಂಬವಂತ ಕ್ಷೀಣ ದ್ವನಿಯಲ್ಲಿ ಹೌದೆಂದು ಉತ್ತರಿಸಿದನು.

ಊಚೇ ಪುನರ್ಜ್ಜೀವತಿ ಕಿಂ ಹನೂಮಾನ್ ಜೀವಾಃ ಸ್ಮ ಸರ್ವೇsಪಿ ಹಿ ಜೀವಮಾನೇ ।
ತಸ್ಮಿನ್ ಹತೇ ನಿಹತಾಶ್ಚೈವ  ಸರ್ವ ಇತೀರಿತೇsಸ್ಮೀತ್ಯವದತ್ ಸ ಮಾರುತಿಃ               ॥೮.೧೫೧॥

ಮೂರ್ಛೆಯಿಂದ ಏಳುತ್ತಿರುವ ಜಾಂಬವಂತ “ಹನುಮಂತ ಜೀವಿಸಿದ್ದಾನೆಯೇ” ಎಂದು ವಿಭೀಷಣನಲ್ಲಿ ಕೇಳಿದನು. “ಅವನು ಬದುಕಿದ್ದರೆ  ನಾವೆಲ್ಲಾ ಬದುಕುತ್ತೇವೆ, ಅವನು ಸತ್ತರೆ ನಾವೆಲ್ಲರೂ ಸಾಯುತ್ತೇವೆ” ಎಂದು ಜಾಂಬವಂತ ಹೇಳುತ್ತಿರಲು, “ನಾನಿದ್ದೇನೆ” ಎಂದು ಹೇಳಿದ ಹನುಮಂತ ಆತನಲ್ಲಿ  ಭರವಸೆಯನ್ನು ತುಂಬಿದನು.
[ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ(೭೪.೨೨) ಈ ಪ್ರಸಂಗದ ವಿವರವನ್ನು ಕಾಣಬಹುದು. ತಸ್ಮಿನ್ ಜೀವತಿ ವೀರೇ ತು ಹತಮಪ್ಯಹತಂ ಬಲಮ್ । ಹನುಮತ್ಯುಜ್ಝಿತ ಪ್ರಾಣೇ ಜೀವನ್ತೋsಪಿ ವಯಂಹತಾಃ ॥   “ಹನುಮಂತ ಬದುಕಿದ್ದರೆ ಸತ್ತಿರುವ ಸೈನ್ಯವು ಜೀವಿತವಾಗಿದೆ ಎಂದು ತಿಳಿ. ಒಂದು ವೇಳೆ ಅವನು ಇಲ್ಲದಿದ್ದರೆ ನಾವು ಬದುಕಿದ್ದರೂ ಸತ್ತಂತೆಯೇ” ಎಂದು ಜಾಂಬವಂತ ವಿಭೀಷಣನಲ್ಲಿ ಹೇಳುತ್ತಾನೆ]

ಕನ್ನಡ ಪದ್ಯರೂಪ: https://go-kula.blogspot.com/2018/07/8-147-151.html

No comments:

Post a Comment