ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 24, 2018

Mahabharata Tatparya Nirnaya Kannada 8.212-8.217


ಅಥೈನಮಸ್ತೌತ್ ಪಿತರಂ ಕೃತಾಞ್ಜಲಿರ್ಗ್ಗುಣಾಭಿರಾಮಂ ಜಗತಃ ಪಿತಾಮಹಃ ।
ಜಿತಞ್ಜಿತಂ ತೇsಜಿತ ಲೋಕಭಾವನ ಪ್ರಪನ್ನಪಾಲಾಯ ನತಾಃ ಸ್ಮ ತೇ ವಯಮ್ ॥೮.೨೧೨॥

ತದನಂತರ ಜಗತ್ತಿನ ಮೂಲ ಸೆಲೆಯಾದ ಬ್ರಹ್ಮನು ತನ್ನ ತಂದೆಯಾದ, ಜ್ಞಾನಾನಂದ ಗುಣಪೂರ್ಣನಾದ ರಾಮಚಂದ್ರನನ್ನು ಕೈಮುಗಿದು ಸ್ತೋತ್ರ ಮಾಡುತ್ತಾನೆ.  'ನೀನು ಉತ್ಕೃಷ್ಟನಾಗಿದ್ದೀಯ. ಎಂದೂ ಸೋಲದವನು ನೀನು.  ಲೋಕದ ಅಸ್ತಿತ್ವಕ್ಕೆ ಕಾರಣನಾಗಿರುವ, ಶರಣಾಗತರನ್ನು ಪಾಲನೆ ಮಾಡುವ ನಿನಗೆ ನಾವೆಲ್ಲರೂ  ನಮಸ್ಕರಿಸಿದ್ದೇವೆ.

ತ್ವಮೇಕ ಈಶೋsಸ್ಯ ನಚಾsದಿರನ್ತಸ್ತವೇಡ್ಯ ಕಾಲೇನ ತಥೈವ ದೇಶತಃ ।
ಗುಣಾ ಹ್ಯಗಣ್ಯಾಸ್ತವ ತೇsಪ್ಯನನ್ತಾಃ ಪ್ರತ್ಯೇಕಶಶ್ಚಾsದಿವಿನಾಶವರ್ಜ್ಜಿತಾಃ ॥೮.೨೧೩॥

ನೀನೊಬ್ಬನೇ  ಈ ಜಗತ್ತಿನ ಒಡೆಯ. ನಿನಗೆ ಕಾಲದಿಂದಾಗಲಿ, ದೇಶದಿಂದಾಗಲಿ, ಉತ್ಪತ್ತಿ-ನಾಶವಿಲ್ಲ.  ನಿನ್ನ ಗುಣಗಳು ಎಣಿಸಲು ಅಸಾಧ್ಯವಾದವುಗಳು. ಆ ಒಂದೊಂದು ಗುಣಗಳೂ ಕೂಡಾ ಅನಂತವಾಗಿವೆ ಮತ್ತು  ಕೊನೆಮೊದಲಿಲ್ಲದವುಗಳಾಗಿವೆ.

ನಚೋದ್ಭವೋ ನೈವ ತಿರಸ್ಕೃತಿಸ್ತೇ ಕ್ವಚಿದ್ ಗುಣಾನಾಂ ಪರತಃ ಸ್ವತೋ ವಾ ।
ತ್ವಮೇಕ ಆದ್ಯಃ ಪರಮಃ ಸ್ವತನ್ತ್ರೋ ಭೃತ್ಯಾಸ್ತವಾಹಂ ಶಿವಪೂರ್ವಕಾಶ್ಚ ಯೇ ॥೮.೨೧೪॥

ಯಾವ ಕಾಲದಲ್ಲಿಯೂ ಕೂಡಾ ನಿನ್ನ ಯಾವ ಗುಣಗಳಿಗೆ ಹುಟ್ಟಾಗಲೀ ತಿರಸ್ಕಾರವಾಗಲೀ ಇಲ್ಲ.  ಅದು ಎಂದೂ ಕೂಡಾ  ತಾನಾಗಿ ತಾನೇ ಮುಚ್ಚಿ ಹೋಗುವುದಿಲ್ಲ.  ಆ ಗುಣಗಳನ್ನು ಬೇರೊಬ್ಬರು ಅಭಿವ್ಯಕ್ತವಾಗದಂತೆ ಮಾಡಲು ಸಾಧ್ಯವಿಲ್ಲ.  ಸ್ವತಂತ್ರನಾಗಿರುವ, ಉತ್ಕೃಷ್ಟನಾಗಿರುವ ನಿನ್ನ ಸೇವಕ ನಾನು. ಶಿವನೇ ಮೊದಲಾಗಿರುವ ಇತರ ದೇವತೆಗಳೂ ಕೂಡಾ ನಿನ್ನ ಅಧೀನರು.

ಯಥಾsರ್ಚ್ಚಿಷೋsಗ್ನೇಃ ಪವನಸ್ಯ ವೇಗಾ ಮರೀಚಯೋsರ್ಕ್ಕಸ್ಯ ನದೀಷು ಚಾsಪಃ ।
ಗಚ್ಛನ್ತಿ ಚಾsಯಾನ್ತಿ ಚ ಸನ್ತತಾಸ್ತ್ವತ್ ತದ್ವನ್ಮದಾದ್ಯಾಃ ಶಿವಪೂರ್ವಕಾಶ್ಚ ಯೇ ॥೮.೨೧೫॥

ಹೇಗೆ ಬೆಂಕಿಯ ಜ್ವಾಲೆ, ಗಾಳಿಯ ವೇಗ, ಸೂರ್ಯನ ಕಿರಣಗಳು, ನದಿಯ ನೀರು ಬರುತ್ತದೆ ಮತ್ತು ಹೋಗುತ್ತದೋ ಹಾಗೇ,  ನಾನು, ಶಿವ ಮೊದಲಾದ ಅಸಂಖ್ಯರು,  ಪ್ರಳಯ ಕಾಲದಲ್ಲಿ  ಲಯವನ್ನು ಹೊಂದುತ್ತೇವೆ ಹಾಗು ಸೃಷ್ಟಿಕಾಲದಲ್ಲಿ ಹುಟ್ಟಿ ಬರುತ್ತೇವೆ. 

ಯೇಯೇ ಚ ಮುಕ್ತಾಸ್ತ್ವಥ ಯೇ ಚ ಬದ್ಧಾಃ ಸರ್ವೇ ತವೇಶೇಶ ವಶೇ ಸದೈವ ।
ವಯಂ ಸದಾ ತ್ವದ್ಗುಣಪೂಗಮುಚ್ಚೈಃ ಸರ್ವೇ ವದನ್ತೋsಪಿ ನ ಪಾರಗಾಮಿನಃ ॥೮.೨೧೬॥

ಯಾರು-ಯಾರು ಮುಕ್ತರಾಗಿದ್ದಾರೋ, ಯಾರು-ಯಾರು ಸಂಸಾರ ಬದ್ಧರಾಗಿದ್ದಾರೋ, ಅವರೆಲ್ಲರೂ ಸ್ವಾಮಿಯಾದ  ನಿನ್ನ ಅಧೀನದಲ್ಲಿದ್ದಾರೆ. ನಾವೆಲ್ಲರೂ ನಿನ್ನ ಗುಣಗಳ ಸಮೂಹವನ್ನು ಚನ್ನಾಗಿ ಹೇಳಬಲ್ಲವರಾದರೂ ಕೂಡಾ. ಅವುಗಳ ಕೊನೆಯನ್ನು ನಾವು ತಿಳಿದಿಲ್ಲ.

ಕಿಮೇಶ ಈದೃಗ್ಗುಣಕಸ್ಯ ತೇ ಪ್ರಭೋ ರಕ್ಷೋವಧೋsಶೇಷಸುರಪ್ರಪಾಲನಮ್ ।
ಅನನ್ಯಸಾದ್ಯಂ ಹಿ ತಥಾsಪಿ ತದ್ ದ್ವಯಂ ಕೃತಂ ತ್ವಯಾ ತಸ್ಯ ನಮೋನಮಸ್ತೇ ॥೮.೨೧೭॥

ಈರೀತಿಯಾದ ಗುಣಗಳನ್ನು ಹೊಂದಿರುವ, ಸರ್ವಸಮರ್ಥನಾದ ನಿನಗೆ,  ರಾಕ್ಷಸ ಸಂಹಾರ, ದೇವತೆಗಳ ಪಾಲನೆ  ಆಶ್ಚರ್ಯ ಅಲ್ಲವೇ ಅಲ್ಲ.  ಅತ್ಯಂತ ಅನಾಯಾಸವಾಗಿ ನೀನೆಲ್ಲವನ್ನೂ ಮಾಡುತ್ತೀಯ. ಆದರೆ  ನಿನ್ನನ್ನು ಬಿಟ್ಟು ಇನ್ನಾರಿಗೂ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ.  ಅಂತಹ ನಿನಗೆ ನಮೋನಮಸ್ತೇ'.

ಕನ್ನಡ ಪದ್ಯರೂಪ: https://go-kula.blogspot.com/2018/07/8-212-217.html

No comments:

Post a Comment