ಇತೀರಿತೇ ತ್ವಬ್ಜಭವೇನ ಶೂಲೀ
ಸಮಾಹ್ವಯದ್ ರಾಘವಮಾಹವಾಯ ।
ವರಂ ಮದೀಯಂ ತ್ವಗಣಯ್ಯ ರಕ್ಷೋ ಹತಂ
ತ್ವಯಾ ತೇನ ರಣಾಯ ಮೇಹಿ ॥೮.೨೧೮ ॥
ಈ ರೀತಿಯಾಗಿ ಬ್ರಹ್ಮನಿಂದ ಹೇಳಲ್ಪಡುತ್ತಿರಲು, ಸದಾಶಿವನು ರಾಮಚಂದ್ರನನ್ನು ಯುದ್ಧಕ್ಕೆ ಕರೆಯುತ್ತಾನೆ.
“ನನ್ನ ವರವನ್ನು ಲೆಕ್ಕಿಸದೇ ನೀನು ರಾವಣನನ್ನು
ಕೊಂದೆ. ಅದರಿಂದ ಯುದ್ಧಕ್ಕಾಗಿ ಆಹ್ವಾನಿಸುತ್ತಿದ್ದೇನೆ. ನಾವಿಬ್ಬರು ಯುದ್ಧ ಮಾಡೋಣ” ಎನ್ನುತ್ತಾನೆ
ಶಿವ!
ಇತೀರಿತೇsಸ್ತ್ವಿತ್ಯಭಿಧಾಯ ರಾಘವೋ ಧನುಃ ಪ್ರಗೃಹ್ಯಾsಶು ಶರಂ ಚ ಸನ್ದಧೇ ।
ವಿಕೃಷ್ಯಮಾಣೇ ಚಲಿತಾ ವಸುನ್ಧರಾ
ಪಪಾತ ರುದ್ರೋsಪಿ ಧರಾಪ್ರಕಮ್ಪತಃ
॥೮.೨೧೯॥
ಈರೀತಿಯಾಗಿ ರುದ್ರನು ಹೇಳುತ್ತಿರಲು, ‘ಹಾಗೇ ಆಗಲಿ’ ಎಂದು ಹೇಳಿದ
ಶ್ರೀರಾಮಚಂದ್ರನು, ಬಿಲ್ಲನ್ನು ಹಿಡಿದು ಬಾಣವನ್ನು ಹೂಡಿದನು. ಶ್ರೀರಾಮನು ತನ್ನ ಬಿಲ್ಲಿನ
ನೇಣನ್ನು ಎಳೆಯುತ್ತಿರಲು ಭೂಮಿಯೇ ಕಂಪಿಸಿತು. ಆ ಭೂಕಂಪನದಿಂದ
ರುದ್ರನೂ ಕೂಡಾ ಕೆಳಗೆ ಬಿದ್ದನು.
ಅಥೋತ್ಥಿತಶ್ಚಾsಸುರಭಾವವರ್ಜ್ಜಿತಃ ಕ್ಷಮಸ್ವ ದೇವೇತಿ ನನಾಮ
ಪಾದಯೋಃ ।
ಉವಾಚ ಚ ತ್ವದ್ವಶಗೋsಸ್ಮಿ ಸರ್ವದಾ ಪ್ರಸೀದ ಮೇ ತ್ವದ್ವಿಷಯಂ ಮನಃ
ಕುರು ॥೮.೨೨೦ ॥
ಬಿದ್ದ ರುದ್ರನು ಮೇಲೆದ್ದು, ತನ್ನ ಅಸುರ ಭಾವವನ್ನು
ಕಳೆದುಕೊಂಡು, ‘ದೇವಾ, ನನ್ನನ್ನು
ರಕ್ಷಿಸು’ ಎಂದು ಶ್ರೀರಾಮನ ಪಾದಗಳಿಗೆರಗಿ ಹೀಗೆ
ಹೇಳಿದನು: “ನಾನು ಸದಾ ನಿನ್ನ ವಶದಲ್ಲಿದ್ದೇನೆ. ನನಗೆ ಪ್ರಸನ್ನನಾಗು. ನನ್ನ ಮನಸ್ಸನ್ನು
ನಿನ್ನಲ್ಲೇ ನೆಡುವಂತೆ ಮಾಡು” ಎಂದು.
ಅಥೇನ್ದ್ರಮುಖ್ಯಾಶ್ಚ ತಮೂಚಿರೇ
ಸುರಾಸ್ತ್ವಯಾsವಿತಾಃ ಸ್ಮೋsದ್ಯ ನಿಶಾಚರಾದ್ ವಯಮ್ ।
ತಥೈವ ಸರ್ವಾಪದ ಏವ ನಸ್ತ್ವಂ ಪ್ರಪಾಹಿ ಸರ್ವೇ ಭವದೀಯಕಾಃ ಸ್ಮ ॥೮.೨೨೧॥
ಶಿವನ ಪ್ರಾರ್ಥನೆಯ ನಂತರ ಇಂದ್ರನೇ ಪ್ರಧಾನವಾಗಿರುವ ದೇವತೆಗಳು ರಾಮನನ್ನು
ಕುರಿತು ಹೀಗೆ ಹೇಳುತ್ತಾರೆ: “ನಿನ್ನಿಂದಾಗಿ ಇಂದು ನಾವು ಹೇಗೆ ರಾವಣನ
ಹಿಂಸೆಯಿಂದ ರಕ್ಷಿಸಲ್ಪಟ್ಟಿದ್ದೇವೆಯೋ ಹಾಗೇ,
ಮುಂದೆಯೂ ಕೂಡಾ ಎಲ್ಲಾ ಆಪತ್ತಿನಿಂದ ನೀನು
ನಮ್ಮನ್ನು ರಕ್ಷಿಸು. ನಾವೆಲ್ಲರೂ ನಿನ್ನವರಾಗಿದ್ದೇವೆ (ನಿನ್ನ ಭಕ್ತರಾಗಿದ್ದೇವೆ).”
ಸೀತಾಕೃತಿಂ ತಾಮಥ ತತ್ರ ಚಾsಗತಾಂ ದಿವ್ಯಚ್ಛಲೇನ ಪ್ರಣಿಧಾಯ ಪಾವಕೇ ।
ಕೈಲಾಸತಸ್ತಾಂ ಪುನರೇವ ಚಾsಗತಾಂ ಸೀತಾಮಗೃಹ್ಣಾದ್ಧುತಭುಕ್ಸಮರ್ಪ್ಪಿತಾಮ್
॥೮.೨೨೨॥
ತದನಂತರ, ಅಲ್ಲಿ ಬಂದಿರುವ, ರಾವಣ ಅಪಹರಿಸಿ ತಂದಿದ್ದ ಸೀತಾಕೃತಿಯನ್ನು,
ಅಗ್ನಿದಿವ್ಯ ಎಂಬ ನೆಪದಿಂದ ಅಗ್ನಿಯಲ್ಲಿ ಪ್ರವೇಶ ಮಾಡಿಸಿ, ಕೈಲಾಸದಿಂದ ಅಗ್ನಿ ಕರೆತಂದಿರುವ ತಾಯಿ
ಸೀತಾದೇವಿಯನ್ನು ಶ್ರೀರಾಮ ಸ್ವೀಕರಿಸುತ್ತಾನೆ.
ಜಾನನ್ ಗಿರೀಶಾಲಯಗಾಂ ಸ ಸೀತಾಂ
ಸಮಗ್ರಹೀತ್ ಪಾವಕಸಂಪ್ರದತ್ತಾಮ್ ।
ಮುಮೋದ ಸಮ್ಪ್ರಾಪ್ಯ ಚ ತಾಂ ಸ ರಾಮಃ
ಸಾ ಚೈವ ದೇವೀ ಭಗವನ್ತಮಾಪ್ಯ ॥೮.೨೨೩॥
ಕೈಲಾಸದಲ್ಲಿದ್ದ ಸೀತೆಯನ್ನು ತಿಳಿದಿದ್ದ ಶ್ರೀರಾಮಚಂದ್ರನು,
ಅಗ್ನಿಯಿಂದ ಕೊಡಲ್ಪಟ್ಟ ಸೀತಾದೇವಿಯನ್ನು
ಸ್ವೀಕರಿಸುತ್ತಾನೆ. ಈರೀತಿ, ಸೀತೆಯನ್ನು ಲೋಕದ ದೃಷ್ಟಿಯಿಂದ ಹೊಂದಿದ ಶ್ರೀರಾಮನು ಸಂತಸಪಟ್ಟನು. ಸೀತಾದೇವಿಯೂ
ಕೂಡಾ ಭಗವಂತನನ್ನು ಹೊಂದಿ ಸಂತಸಪಟ್ಟಳು.
[ಬಾಹ್ಯವಾಗಿ ನೋಡಿದರೆ ಅದು ಅಗ್ನಿದಿವ್ಯ. ಸೀತೆಯ
ಅಗ್ನಿಪರೀಕ್ಷೆ. ಆದರೆ ಅಲ್ಲಿ ನಡೆದಿರುವುದು
ಸೀತಾಕೃತಿಯಾ ಅಗ್ನಿ ಪ್ರವೇಶ ಮತ್ತು ಅಗ್ನಿ ಕೈಲಾಸದಿಂದ ಕರೆ ತಂದಿರುವ ಮಾತೆ ಸೀತಾದೇವಿ ಶ್ರೀರಾಮನನ್ನು ಹೊಂದುವ ಲೀಲೆ. (ಲೋಕದ
ದೃಷ್ಟಿಗಾಗಿ, ಎಂದೂ ವೀಯೋಗವಿಲ್ಲದ ಜಗದ್ಮಾತಾಪಿತರ ಸಮಾಗಮದ ನಟನಾ ನಿಯಮ)]
ಕನ್ನಡ ಪದ್ಯರೂಪ: https://go-kula.blogspot.com/2018/07/8-218-223.html
ಕನ್ನಡ ಪದ್ಯರೂಪ: https://go-kula.blogspot.com/2018/07/8-218-223.html
No comments:
Post a Comment