ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 29, 2018

Mahabharata Tatparya Nirnaya Kannada 8.239-8.243


ಅತಃ ಸ್ವಭಾವಾಜ್ಜಯಿನಾವಹಂ ಚ ವಾಯುಶ್ಚ ವಾಯುರ್ಹನುಮಾನ್ ಸ ಏಷಃ ।
ಅಮುಷ್ಯ ಹೇತೋಸ್ತು ಪುರಾ ಹಿ ವಾಯುನಾ ಶಿವೇನ್ದ್ರಪೂರ್ವಾ ಅಪಿ ಕಾಷ್ಠವತ್ ಕೃತಾಃ     ॥೮.೨೩೯॥

ಸ್ವಾಭಾವಿಕವಾದ ಶಕ್ತಿಯಿಂದ ನಾನು ಮತ್ತು ಮುಖ್ಯಪ್ರಾಣನು ರಾವಣನನ್ನು ಗೆದ್ದಿದ್ದೇವೆ.    ಹನುಮಂತನಿಗಾಗಿ ಇವನ ಅಪ್ಪನಾದ ಮುಖ್ಯಪ್ರಾಣ  ಇಂದ್ರಾದಿ ದೇವತೆಗಳನ್ನೂ ಲೆಕ್ಕಿಸದೇ  ಉಸಿರನ್ನು ನಿಲ್ಲಿಸಿ, ಅವರನ್ನು  ಕಾಷ್ಠರನ್ನಾಗಿ ಮಾಡಿದ್ದ.
[ಈ ಮೇಲಿನ ಮಾತಿನ ಹಿಂದಿನ ಕಥೆಯನ್ನು ವಾಲ್ಮೀಕಿ ರಾಮಾಯಣದಲ್ಲಿ (ಉತ್ತರಕಾಂಡ ಅ. ೩೫, ೩೬) ಕಾಣಬಹುದು.  ಹನುಮಂತ ಚಿಕ್ಕವನಾಗಿದ್ದಾಗ,  ಸೂರ್ಯನನ್ನು ಹಣ್ಣು ಎಂದು  ತಿಳಿದು, ಅದನ್ನು ತಿನ್ನುವುದಕ್ಕಾಗಿ ವೇಗದಿಂದ ಸಾಗುತ್ತಿದ್ದ. ಇದನ್ನು ಕಂಡ ರಾಹು ಇಂದ್ರನಿಗೆ ವಿಷಯ ತಿಳಿಸುತ್ತಾನೆ.  ಇಂದ್ರ ತನ್ನ ವಜ್ರದಿಂದ ಹನುಮಂತನನ್ನು ಹೊಡೆಯುತ್ತಾನೆ.  ಅದರಿಂದ ಕೋಪಗೊಂಡ ಮುಖ್ಯಪ್ರಾಣ ಸಮಸ್ತ ಪ್ರಾಣಿಗಳ ಉಸಿರಾಟವನ್ನು ನಿಲ್ಲಿಸುತ್ತಾನೆ. ಆಗ ಬ್ರಹ್ಮದೇವರು , ಹಿರಿಯವರ ಮೇಲೆ ಆಕ್ರಮಣ ಮಾಡಿರುವುದು ತಪ್ಪು ಎಂದು  ತಿಳಿಹೇಳಿ, ಇಂದ್ರನಿಗೆ ಆತನ ತಪ್ಪಿನ ಅರಿವನ್ನು ಮಾಡಿಕೊಡುತ್ತಾರೆ]

ಅತೋ ಹನೂಮಾನ್ ಪದಮೇತು ಧಾತುರ್ಮ್ಮದಾಜ್ಞಯಾ ಸೃಷ್ಟ್ಯವನಾದಿ ಕರ್ಮ್ಮ ।
ಮೋಕ್ಷಂ ಚ ಲೋಕಸ್ಯ ಸದೈವ ಕುರ್ವನ್ ಮುಕ್ತಶ್ಚ ಮುಕ್ತಾನ್ ಸುಖಯನ್ ಪ್ರವರ್ತ್ತತಾಮ್ ॥೮.೨೪೦॥

ಇಂತಹ ಈ  ಹನುಮಂತನು ನನ್ನ ಆಜ್ಞೆಯಿಂದ ಬ್ರಹ್ಮಪದವಿಯನ್ನು ಹೊಂದಲಿ. ಈ ಲೋಕಕ್ಕೆ ಸೃಷ್ಟಿ, ರಕ್ಷಣೆ ಮೊದಲಾದ ಕರ್ಮಗಳನ್ನು, ಜೀವರಿಗೆ ಮೋಕ್ಷದ ಸವಿಯನ್ನು ಯಾವಾಗಲೂ ಕೊಡುತ್ತಿರಲಿ. ಮುಕ್ತನಾಗಿ, ಮುಕ್ತರನ್ನು ಆನಂದಗೊಳಿಸುತ್ತಾ  ಮುಂದುವರಿಯಲಿ.

ಭೋಗಾಶ್ಚ ಯೇ ಯಾನಿ ಚ ಕರ್ಮ್ಮಜಾತಾನ್ಯನಾದ್ಯನನ್ತಾನಿ ಮಮೇಹ ಸನ್ತಿ ।
ಮದಾಜ್ಞಯಾ ತಾನ್ಯಖಿಲಾನಿ ಸನ್ತಿ ಧಾತುಃ ಪದೇ ತತ್ ಸಹಭೋಗನಾಮ ॥೮.೨೪೧॥

ಈ ಲೋಕದಲ್ಲಿ ನನಗೆ ಯಾವ ಯಾವ ಭೋಗಗಳಿವೆಯೋ, ಅನಾದಿ-ಅನಂತವಾಗಿರುವ ಕರ್ಮಗಳಿವೆಯೋ, ನನ್ನ ಆಜ್ಞೆಯಿಂದ ಆ ಎಲ್ಲಾ ಭೋಗಗಳು  ಬ್ರಹ್ಮ ಪದವಿಗಿದೆ. ಅದನ್ನೇ ಸಹಭೋಗ ಎಂದು ಕರೆಯುತ್ತಾರೆ. 

ಏತಾದೃಶಂ ಮೇ ಸಹಭೋಜನಂ ತೇ ಮಯಾ ಪ್ರದತ್ತಂ ಹನುಮನ್ ಸದೈವ ।
ಇತೀರಿತಸ್ತಂ ಹನುಮಾನ್ ಪ್ರಣಮ್ಯ ಜಗಾದ ವಾಕ್ಯಂ ಸ್ಥಿರಭಕ್ತಿನಮ್ರಃ ॥೮.೨೪೨॥

ಈರೀತಿಯಾಗಿರುವ ಸಹಭೋಗವು ನನ್ನಿಂದ ನಿನಗೆ ಕೊಡಲ್ಪಟ್ಟಿದೆ’ ಎನ್ನುತ್ತಾನೆ ಶ್ರೀರಾಮ.
ಶ್ರೀರಾಮನ ಮೆಚ್ಚುಗೆಯ ಮಾತನ್ನು ಕೇಳಿದ ಹನುಮಂತನು ಪರಮಾತ್ಮನಿಗೆ ನಮಸ್ಕರಿಸಿ, ಭಕ್ತಿಯಿಂದ ಭಾಗಿ  ಹೀಗೆ ಹೇಳುತ್ತಾನೆ:

ಕೋ ನ್ವೀಶ ತೇ ಪಾದಸರೋಜಭಾಜಾಂ ಸುದುರ್ಲ್ಲಭೋsರ್ತ್ಥೇಷು ಚತುರ್ಷ್ವಪೀಹ ।
ತಥಾsಪಿ ನಾಹಂ ಪ್ರವೃಣೋಮಿ ಭೂಮನ್ ಭವತ್ಪದಾಮ್ಭೋಜನಿಷೇವಣಾದೃತೇ ॥೮.೨೪೩॥

‘ಒಡೆಯನೇ,  ನಿನ್ನ ಪಾದ ಕಮಲವನ್ನು ಹೊಂದಿರುವವರಿಗೆ  ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ಯಾವುದು ಸಿಗುವುದಿಲ್ಲ?  ಎಲ್ಲವೂ ಸಿಗುತ್ತದೆ. ಆದರೂ, ನಾನು ನಿನ್ನ ಪಾದ ಸೇವೆಯನ್ನು ಹೊರತುಪಡಿಸಿ, ಬೇರೇನನ್ನೂ  ಬೇಡುವುದಿಲ್ಲ.

ಕನ್ನಡ ಪದ್ಯರೂಪ: https://go-kula.blogspot.com/2018/07/8-239-243.html

No comments:

Post a Comment