ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 31, 2018

Mahabharata Tatparya Nirnaya Kannada 9.01-9.05


೯. ಶ್ರೀರಾಮಚರಿತೇ ರಾಮಸ್ವಧಾಮಪ್ರವೇಶಃ


ಓಂ
ಅಥಾsಪ್ತರಾಜ್ಯೋ ಭಗವಾನ್ ಸ ಲಕ್ಷ್ಮಣಂ ಜಗಾದ ರಾಜಾ ತರುಣೋ ಭವಾsಶು
ಇತೀರಿತಸ್ತ್ವಾಹ ಸ ಲಕ್ಷ್ಮಣೋ ಗುರುಂ ಭವತ್ಪದಾಬ್ಜಾನ್ನ ಪರಂ ವೃಣೋಮ್ಯಹಮ್ ೯.೦೧

ರಾಜ್ಯಪ್ರಾಪ್ತಿಯಾದ ಮೇಲೆ, ಅಭಿಷಿಕ್ತರಾದ  ರಾಮಚಂದ್ರ ದೇವರು ಲಕ್ಷ್ಮಣನನ್ನು ‘ಕೂಡಲೇ ಯುವರಾಜನಾಗು’* ಎಂದು ಹೇಳುತ್ತಾರೆ. ಹೀಗೆ ಶ್ರೀರಾಮನಿಂದ  ಹೇಳಲ್ಪಟ್ಟ ಲಕ್ಷ್ಮಣನು, ತನ್ನ ಗುರು ರಾಮಚಂದ್ರನನ್ನು ಕುರಿತು :
‘ನಿನ್ನ ಪಾದ ಕಮಲದ ಸೇವೆಗಿಂತ ಇತರ ಯಾವುದನ್ನೂ  ನಾನು ಬಯಸುವುದಿಲ್ಲ’ ಎಂದು  ಹೇಳುತ್ತಾನೆ.
[*ಲಕ್ಷ್ಮಣ ಭರತನಿಗಿಂತ ಹಿರಿಯವನಾದ್ದರಿಂದ ಶ್ರೀರಾಮ ಲಕ್ಷ್ಮಣನಲ್ಲಿ ಯುವರಾಜನಾಗು ಎಂದು  ಹೇಳಲು ಸಾಧ್ಯ ಎನ್ನುವುದನ್ನು ಓದುಗರು ಗಮನಿಸಬೇಕು. ಕೆಲವರು ಭರತ ಲಕ್ಷ್ಮಣನಿಗಿಂತ ಹಿರಿಯ ಎಂದು ತಪ್ಪಾಗಿ ತಿಳಿಯುತ್ತಾರೆ. ಆದರೆ ಲಕ್ಷ್ಮಣ ಭರತನಿಗಿಂತ ಹಿರಿಯ ಎನ್ನುವುದು ಇಲ್ಲಿ ತಿಳಿಯುತ್ತದೆ ]

ನ ಮಾಂ ಭವತ್ಪಾದನಿಷೇವಣೈಕಸ್ಪೃಹಂ ತದನ್ಯತ್ರ ನಿಯೋಕ್ತುಮರ್ಹತಿ
ನಹೀದೃಶಃ ಕಶ್ಚಿದನುಗ್ರಹಃ ಕ್ವಚಿತ್ ತದೇವ ಮೇ ದೇಹಿ ತತಃ ಸದೈವ ೯.೦೨

ನಿನ್ನ ಪಾದವನ್ನು ಚಿಂತನೆ ಮಾಡುವುದೊಂದನ್ನು ಬಿಟ್ಟು,  ನಿನ್ನ ಪಾದ ಸೇವೆಯೊಂದನ್ನು ಬಿಟ್ಟು, ಬೇರೆಯದರಲ್ಲಿ ಆಸಕ್ತನಲ್ಲದ ನನ್ನನ್ನು ಬೇರೆಡೆಗೆ ತೊಡಗಿಸಬೇಡ.  ನಿನ್ನ ಪಾದಸೇವೆಯಲ್ಲಿ ತೊಡಗುವುದರಲ್ಲಿನ ಅನುಗ್ರಹಕ್ಕಿಂತ ಅತಿರಿಕ್ತವಾದುದು ಬೇರೊಂದಿಲ್ಲ.  ಆ ಕಾರಣದಿಂದ ಅದನ್ನೇ ಯಾವಾಗಲೂ ನೀಡು.

ಇತೀರಿತಸ್ತಸ್ಯ ತದೇವ ದತ್ತ್ವಾ ದೃಢಂ ಸಮಾಶ್ಲಿಷ್ಯ ಚ ರಾಘವಃ ಪ್ರಭುಃ
ಸ ಯೌವರಾಜ್ಯಂ ಭರತೇ ನಿಧಾಯ ಜುಗೋಪ ಲೋಕಾನಖಿಲಾನ್ ಸಧರ್ಮ್ಮಕಾನ್   ೯.೦೩

ಈ ರೀತಿಯಾಗಿ ಲಕ್ಷ್ಮಣ ಪ್ರಾರ್ಥಿಸಿದಾಗ  ಸರ್ವಸಮರ್ಥನಾದ ಶ್ರೀರಾಮಚಂದ್ರನು ಲಕ್ಷ್ಮಣನನ್ನು  ಗಟ್ಟಿಯಾಗಿ ತಬ್ಬಿ, ಅವನಿಗೆ ಆ ಸೇವೆಯನ್ನೇ ನೀಡಿ, ಭರತನನ್ನು ಯುವರಾಜನನ್ನಾಗಿ ಮಾಡಿ, ಎಲ್ಲಾ ಲೋಕಗಳನ್ನು ಧರ್ಮದಿಂದ ರಕ್ಷಿಸಿದನು. (ಧರ್ಮಪೂರ್ವಕವಾಗಿ ರಾಜ್ಯವನ್ನಾಳಿದನು)

ಪ್ರಶಾಸತೀಶೇ ಪೃಥಿವೀ ಬಭೂವ ವಿರಿಞ್ಚಲೋಕಸ್ಯ ಸಮಾ ಗುಣೋನ್ನತೌ
ಜನೋsಖಿಲೋ ವಿಷ್ಣುಪರೋ ಬಭೂವ ನ ಧರ್ಮ್ಮಹಾನಿಶ್ಚ ಬಭೂವ ಕಸ್ಯಚಿತ್    ೯.೦೪

ಶ್ರೀರಾಮಚಂದ್ರನ ಆಳ್ವಿಕೆಯಲ್ಲಿ ಪೃಥ್ವಿಯು ಗುಣದ ಉನ್ನತಿಯಲ್ಲಿ  ಸತ್ಯಲೋಕಕ್ಕೆ ಸದೃಶವಾಯಿತು. ಎಲ್ಲಾ ಜನರೂ ಕೂಡಾ ವಿಷ್ಣು ಭಕ್ತರೇ ಆಗಿದ್ದರು. ಯಾರಿಗೂ ಕೂಡಾ ಧರ್ಮ ಹಾನಿಯಾಗಲಿಲ್ಲಾ.

ಗುಣೈಶ್ಚ ಸರ್ವೈರುದಿತಾಶ್ಚ ಸರ್ವೇ ಯಥಾಯಥಾ ಯೋಗ್ಯತಯೋಚ್ಛನೀಚಾಃ
ಸಮಸ್ತರೋಗಾದಿಭಿರುಜ್ಝಿತಾಶ್ಚ ಸರ್ವೇ ಸಹಸ್ರಾಯುಷ ಊರ್ಜ್ಜಿತಾ ಧನೈಃ ೯.೦೫

ಎಲ್ಲರೂ ಯೋಗ್ಯತೆಗನುಗುಣವಾದ  ಗುಣಗಳಿಂದ ಕೂಡಿದ್ದರು. ಎಲ್ಲಾ ರೋಗಗಳನ್ನು ಕಳಚಿಕೊಂಡಿದ್ದರು. ಎಲ್ಲರೂ ಕೂಡಾ ಪೂರ್ಣವಾದ ಆಯುಷ್ಯವನ್ನು ಹೊಂದಿದವರಾಗಿದ್ದರು. (ತ್ರೇತಾಯುಗದ  ಕಾಲದಲ್ಲಿ ಮಾನವರ ಆಯುಸ್ಸು ಎಷ್ಟಿತ್ತೋ, ಎಲ್ಲರೂ  ಅಷ್ಟು ಆಯುಸ್ಸನ್ನು  ಹೊಂದಿದವರಾಗಿದ್ದರು).  ಯಾರೂ ದರಿದ್ರರು ಎಂದಿರಲಿಲ್ಲ. ಎಲ್ಲರಲ್ಲೂ ಅವಶ್ಯಕವಾದ  ಧನವಿತ್ತು.

ಕನ್ನಡ ಪದ್ಯರೂಪ: https://go-kula.blogspot.com/2018/08/9-01-05.html

No comments:

Post a Comment