ಕರ್ಣ್ಣೋSಥ ಶಲ್ಯನಿಯತೇನ ರಥೇನ ಪಾರ್ತ್ಥಸೇನಾಮವಾಪ್ಯ
ವಿದುಧಾವ ಶರೈಃ ಸಮನ್ತಾತ್ ।
ಸಂರಕ್ಷಿತೋ ಯುಧಿ
ಸುಯೋಧನಗೌತಮಾದ್ಯೈರಾಚಾರ್ಯ್ಯಜೇನ ಚ ಮಹಾಸ್ತ್ರವಿದಾಂ ವರೇಣ॥೨೭.೩೩॥
ತದನಂತರ ಶಲ್ಯನಿಂದ ನಿಯಂತ್ರಿಸಲ್ಪಟ್ಟ ರಥದಲ್ಲಿ ಕುಳಿತ ಕರ್ಣನು, ದುರ್ಯೋಧನ, ಕೃಪಾಚಾರ್ಯರೇ ಮೊದಲಾದವರಿಂದಲೂ, ಅಸ್ತ್ರವನ್ನು ಬಲ್ಲ
ಅಶ್ವತ್ಥಾಮನಿಂದಲೂ ರಕ್ಷಿತನಾಗಿ, ಪಾಂಡವರ ಸೇನೆಯನ್ನು ಹೊಂದಿ, ಬಾಣಗಳಿಂದ ಎಲ್ಲರನ್ನೂ ನಡುಗಿಸಿದನು.
ತಂ
ಭೀಮಪಾರ್ಷತಶಿನಿಪ್ರವರಾಭಿಗುಪ್ತಾ ಸಾ ಪಾಣ್ಡವೇಯಪೃತನಾSಭಿವವರ್ಷ ಬಾಣೈಃ ।
ತಾಂ ಸೂರ್ಯ್ಯಸೂನುರಥ
ಬಾಣವರೈರ್ವಿಧಾರ್ಯ್ಯ ಸಮ್ಪ್ರಾರ್ದ್ದಯಚ್ಛಿತಶರೈರಪಿ ಧರ್ಮ್ಮಸೂನುಮ್ ॥೨೭.೩೪॥
ಭೀಮಸೇನ, ಧೃಷ್ಟದ್ಯುಮ್ನ, ಸಾತ್ಯಕಿ,
ಇವರಿಂದ ರಕ್ಷಿಸಲ್ಪಟ್ಟ ಆ ಪಾಂಡವ ಸೇನೆಯು ಬಾಣಗಳಿಂದ ಕರ್ಣನನ್ನು ವರ್ಷಿಸಿತು. ಆ ಸೇನೆಯನ್ನು
ಕರ್ಣನು ಬಾಣಗಳಿಂದ ಸೀಳಿ, ಧರ್ಮರಾಜನನ್ನು ಚೂಪಾದ ಬಾಣಗಳಿಂದ ಪೀಡಿಸಿದನು.
ಕೃತ್ವಾ ತಮಾಶು ವಿರಥಂ
ಧನುರಸ್ಯ ಕಣ್ಠೇ ಸಜ್ಯಂ ನಿಧಾಯ ಪರುಷಾ ಗಿರ ಆಹ ಚೋಚ್ಚೈಃ ।
ದೃಷ್ಟ್ವೈವ
ಮಾರುತಿರಮುಂ ಭೃಶಮಾತುತೋದ ದುರ್ಯ್ಯೋಧನಂ ವಿರಥಕಾರ್ಮ್ಮುಕಮತ್ರ ಕೃತ್ವಾ ॥೨೭.೩೫॥
ಕರ್ಣನು ಧರ್ಮರಾಜನನ್ನು
ಕೂಡಲೇ ರಥಹೀನನನ್ನಾಗಿ ಮಾಡಿ, ಅವನ
ಕೊರಳಿನಲ್ಲಿ ಬಿಲ್ಲನ್ನು ನೇತುಹಾಕಿ, ಎಲ್ಲರೂ ಕೇಳುವಂತೆ, ಗಟ್ಟಿಯಾಗಿ ಕಠಿಣವಾದ ಮಾತುಗಳನ್ನಾಡಿದನು.
ಈರೀತಿಯಾಗಿರುವ ಧರ್ಮರಾಜನನ್ನು ಕಂಡ ಭೀಮಸೇನನು, ದುರ್ಯೋಧನನನ್ನು
ರಥ ಹಾಗೂ ಬಿಲ್ಲುಗಳಿಂದ ಹೀನನನ್ನಾಗಿ ಮಾಡಿ, ಚೆನ್ನಾಗಿ ಪೀಡಿಸಿದನು. (ದುರ್ಯೋಧನನನ್ನು
ಪೀಡಿಸುವುದರಿಂದ ಕರ್ಣ ಧರ್ಮರಾಜನನ್ನು ಬಿಡುತ್ತಾನೆ. ಇದೊಂದು ರೀತಿಯ ಯುದ್ಧತಂತ್ರ)
[ಕರ್ಣ
ಧರ್ಮರಾಜನಿಗಾಡಿದ ಕಠಿಣವಾದ ಮಾತುಗಳನ್ನು ಮಹಾಭಾರತದಲ್ಲಿ ಹೀಗೆ ವರ್ಣಿಸಿದ್ದಾರೆ- ‘ನ ಭವಾನ್ ಕ್ಷತ್ರಧರ್ಮೇಷು ಕುಶಲೋSಸೀತಿ
ಮೇ ಮತಿಃ । ಬ್ರಾಹ್ಮೇ ಬಲೇ ಭವಾನ್ ಯುಕ್ತಃ ಸ್ವಾಧ್ಯಾಯೇ ಯಜ್ಞಕರ್ಮಣಿ । ಮಾ ಸ್ಮ ಯುಧ್ಯಸ್ವ
ಕೌಂತೇಯ ಮಾ ಸ್ಮ ವೀರಾನ್ ಸಮಾಸದಃ’ (ಕರ್ಣಪರ್ವ ೪೪.೭೪-೭೫) - ನೀನು ಕ್ಷತ್ರಿಯ ಎಂದು
ಯಾರು ಹೇಳುತ್ತಾರೆ? ನೀನು ಬ್ರಾಹ್ಮಣನಂತೆ ಸ್ವಾಧ್ಯಾಯ ಮತ್ತು ಯಜ್ಞಕರ್ಮಯುಕ್ತವಾದ ಕರ್ಮ
ಮಾಡಿಕೊಂಡು ಇರಬೇಕು. ಒಂದೋ ಯುದ್ಧ ಮಾಡಬೇಡ. ಇನ್ನೂ ಯುದ್ಧ ಮಾಡಲೇಬೇಕು ಎಂತಿದ್ದರೆ
ದೊಡ್ಡ-ದೊಡ್ಡ ವೀರರೊಂದಿಗೆ ಯುದ್ಧಮಾಡಬೇಡ. ಇತ್ಯಾದಿಯಾಗಿ ಕರ್ಣ ಯುಧಿಷ್ಠಿರನನ್ನು ಚುಚ್ಚಿ
ಮಾತನಾಡಿದ.]
ತಂ ಪ್ರಾಣಸಂಶಯಗತಂ
ನೃಪತಿಂ ನಿರೀಕ್ಷ್ಯ ಕರ್ಣ್ಣಂ ಜಗಾದ ಯುಧಿ ಮದ್ರಪತಿಃ ಪ್ರದರ್ಶ್ಯ ।
ಯಸ್ಯಾರ್ತ್ಥ ಏವ
ಸಮರಸ್ತ್ವಮಿಯಂ ಚ ಸೇನಾ ತಂ ತ್ವಂ ಯಮಸ್ಯ ಸದನಂ ಪ್ರಯಿಯಾಸುಮದ್ಯ ॥೨೭.೩೬॥
ಭೀಮೇನ ಪೀಡಿತಮಮುಂ
ಪರಿಪಾಹಿ ಶೀಘ್ರಂ ಕಿಂ ತೇ ಯುಧಿಷ್ಠಿರಮಿಮಂ ಹಿ ಮುಧಾSಭಿಪೀಡ್ಯ।
ಶ್ರುತ್ವಾSಸ್ಯ ವಾಕ್ಯಮತಿಹಾಯ ಯುಧಿಷ್ಠಿರಂ ತಂ ಕರ್ಣ್ಣೋ ಯಯೌ
ನೃಪತಿರಕ್ಷಣತತ್ಪರೋSಲಮ್ ॥೨೭.೩೭॥
ಭೀಮನಿಂದ ಪೀಡೆಗೊಳಪಟ್ಟು,
ಬದುಕುತ್ತಾನೋ ಇಲ್ಲವೋ ಎಂಬ ಸಂಶಯದಿಂದ ದುರ್ಯೋಧನನನ್ನು ದೂರದಲ್ಲಿರುವ ಶಲ್ಯನು ನೋಡಿ, ಕರ್ಣನಿಗೆ ದುರ್ಯೋಧನನನ್ನು ತೋರಿಸಿ
- ಯಾರಿಗಾಗಿ ಈ ಯುದ್ಧ ನಡೆಯುತ್ತಿದೆಯೋ, ನೀನು ಯಾರಿಗಾಗಿ ಯುದ್ಧ ಮಾಡುತ್ತಿರುವೆಯೋ, ಈ ಸೇನೆ
ಯಾರಿಗಾಗಿ ಯುದ್ಧ ಮಾಡುತ್ತಿದೆಯೋ, ಅಂತಹ ದುರ್ಯೋಧನನು ಯಮನ ಮನೆಗೆ ಹೋಗಲು ಕ್ಷಣಗಣನೆ
ಮಾಡುತ್ತಿದ್ದಾನೆ. ಭೀಮನಿಂದ ಪೀಡಿತಾನಾಗಿರುವ ಅಂತಹ ದುರ್ಯೋಧನನನ್ನು ಮೊದಲು ರಕ್ಷಿಸು. ಈ
ಯುಧಿಷ್ಠಿರನನ್ನು ವ್ಯರ್ಥವಾಗಿ ಪೀಡಿಸಿ ಏನು ಪ್ರಯೋಜನ ಎಂದು ಕೇಳಿದನು. ಶಲ್ಯನ ವಾಕ್ಯವನ್ನು
ಕೇಳಿ ಕರ್ಣನು ಯುಧಿಷ್ಠಿರನನ್ನು ಬಿಟ್ಟು, ದುರ್ಯೋಧನನನ್ನು ರಕ್ಷಿಸುವ ಬಯಕೆಯಿಂದ ಅಲ್ಲಿಗೆ ತೆರಳಿದನು.
ದೃಷ್ಟ್ವೈವ ತಂ
ಪವನಸೂನುರಭಿ ತ್ವಿಯಾಯ ಕ್ರೋಧಾದ್ ದಿಧಕ್ಷುರಿವ ಕರ್ಣ್ಣಮಮೇಯಧಾಮಾ ।
ರಾಜಾವನಾಯ
ಶಿನಿಪುಙ್ಗವಪಾರ್ಷತೌ ಚ ಸನ್ದಿಶ್ಯ ಕರ್ಣ್ಣಮಭಿಗಚ್ಛತ ಆಸ ರೂಪಮ್ ॥೨೭.೩೮॥
ಅನ್ತೇ ಕೃತಾನ್ತನರಸಿಂಹತನೋರ್ಯ್ಯಥೈವ
ವಿಷ್ಣೋರ್ಹರಂ ಗ್ರಸತ ಆತ್ತಸಮಸ್ತವಿಶ್ವಮ್ ।
ತದ್ವೇಗತಃ ಪ್ರತಿಚಚಾಲ
ಧರಾ ಸಮಸ್ತಾ ವಿದ್ರಾವಿತಾ ಚ ಸಕಲಾ ಪ್ರತಿವೀರಸೇನಾ ॥೨೭.೩೯॥
ಈರೀತಿಯಾಗಿ ಓಡಿ ಬರುತ್ತಿರುವ ಕರ್ಣನನ್ನು ಕಂಡು, ಪವನಪುತ್ರ
ಭೀಮಸೇನನು ಕ್ರೋಧದಿಂದ, ಸುಟ್ಟುಬಿಡುವನೋ ಎಂಬಂತೆ, ಆ ಕರ್ಣನನ್ನು ಎದುರಾಗಿ ಹೋದನು. ಯುಧಿಷ್ಠಿರನನ್ನು ರಕ್ಷಿಸಿ’ ಎಂದು ಸಾತ್ಯಕಿ ಹಾಗೂ
ಧೃಷ್ಟದ್ಯುಮ್ನರಿಗೆ ಹೇಳಿ, ಕರ್ಣನನ್ನು ಕುರಿತು ಹೋಗುವ ಆ ಭೀಮಸೇನನ
ರೂಪವು ಮಹಾಪ್ರಳಯಕಾಲದಲ್ಲಿ ಇಡೀ ಪ್ರಪಂಚವನ್ನು ನಡುಗಿಸುವ ರುದ್ರನನ್ನು ನುಂಗುವ ಪ್ರಳಯಕಾಲದ
ನರಸಿಂಹನ ರೂಪ ಹೇಗೆ ಭಯಂಕರವಾಗಿತ್ತೋ ಆ ರೀತಿ ಇತ್ತು. ಅವನು ನಡೆಯುವ ವೇಗದಿಂದ ಸಮಸ್ತ ಭೂಮಿಯೂ
ಒಂದು ಕ್ಷಣ ಕಂಪಿಸಿತು. ಸಮಸ್ತ ಶತ್ರು ಸೇನೆಯೂ ಓಡಿಸಲ್ಪಟ್ಟಿತು.
ವೈಕರ್ತ್ತನೇನ
ಶರಸಞ್ಚಯತಾಡಿತಃ ಸ ಬಾಣಂ ಚ ವಜ್ರಸದೃಶಂ ಪ್ರಮುಮೋಚ ತಸ್ಮಿನ್ ।
ತೇನಾSಹತೋ ಮೃತಕವತ್ ಸ ಪಪಾತ ಕರ್ಣ್ಣೋ
ಭೀಮಃ ಕ್ಷುರಂ ಚ ಜಗೃಹೇSಭಿಯಯೌ ಚ ಪದ್ಭ್ಯಾಮ್ ॥೨೭.೪೦॥
ಕರ್ಣನಿಂದ ಬಾಣಗಳ ಸಮೂಹದಿಂದ ಹೊಡೆಯಲ್ಪಟ್ಟವನಾದ ಆ ಭೀಮಸೇನನು ವಜ್ರಾಯುಧಕ್ಕೆ ಸದೃಶವಾದ ಬಾಣವನ್ನು ಕರ್ಣನನ್ನು ಕುರಿತು
ಬಿಟ್ಟನು. ಅದರಿಂದ ಚೆನ್ನಾಗಿ ಹೊಡೆಯಲ್ಪಟ್ಟ ಕರ್ಣನು ಶವದಂತೆ ಬಿದ್ದನು. ಆಗ ಭೀಮಸೇನನು ಒಂದು
ಚೂರಿಯನ್ನು ಹಿಡಿದು, ರಥದಿಂದ ಕೆಳಗಿಳಿದು, ಕಾಲು ನಡೆಯಿಂದ ಕರ್ಣನ ಹತ್ತಿರ ಹೋದನು.
ನಿನ್ದಾಂ ಹರೇಸ್ತು
ವಿದಧಾತಿ ಪರೋಕ್ಷಗೋSಪಿ
ಯಸ್ತಂ ಪ್ರಗೃಹ್ಯ ಕರವಾಣಿ ವಿಜಿಹ್ವ̐ಮೇವ ।
ಏವಂ ಹಿ ವಾಯುತನಯಸ್ಯ
ಮಹಾಪ್ರತಿಜ್ಞಾ ಛೇತ್ತುಂ ಸ ತೇನ ರವಿಜಸ್ಯ ಸಸಾರ ಜಿಹ್ವಾ̐ಮ್ ॥೨೭.೪೧॥
ಪರಮಾತ್ಮನ ನಿಂದನೆಯನ್ನು ಹಿಂದಿನಿಂದ ಯಾರು ಮಾಡುತ್ತಾನೋ, ಅವನ ನಾಲಿಗೆಯನ್ನು ಕತ್ತರಿಸುತ್ತೇನೆ
ಎಂಬುದಾಗಿ ಭೀಮಸೇನನ ಮಹಾಪ್ರತಿಜ್ಞೆಯಿದೆ. ಅದರಿಂದ ಕರ್ಣನ ನಾಲಿಗೆಯನ್ನು ಕತ್ತರಿಸಲು ಭೀಮಸೇನ ಅವನ
ಬಳಿ ನಡೆದ.
[‘ನಿನ್ದಾಂ ಹರೇಸ್ತು‘ ಎನ್ನುವ ಮಾತಿನಿಂದ ಆಚಾರ್ಯರು ಮಹಾಭಾರತದ
ಮೂಲಪಾಠದಲ್ಲಿ ಅಸ್ಪಷ್ಟವಾಗಿರುವ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಕರ್ಣ ಶ್ರೀಕೃಷ್ಣನನ್ನು ನಿಂದಿಸಿರುವುದರಿಂದ
ಭೀಮ ಅವನ ನಾಲಿಗೆಯನ್ನು ಕತ್ತರಿಸಲೆಂದು ಮುನ್ನುಗ್ಗಿ ಹೋದ.]
ಆಯಾನ್ತಮನ್ತಿಕಮಮುಂ
ಪ್ರಸಮೀಕ್ಷ್ಯ ಶಲ್ಯೋ ನೇತ್ಯಾಹ ಹೇತುಭಿರಹೋ ನ ಮೃಷಾ ಪ್ರತಿಜ್ಞಾ ।
ಕಾರ್ಯ್ಯಾ ತ್ವಯೈವ
ಪುರುಹೂತಸುತಸ್ಯ ಜಿ̐ಹ್ವಾಂ ಮಾ
ತೇನ ಪಾತಯ ಮರುತ್ಸುತ ಸೂತಸೂನೋಃ ॥೨೭.೪೨॥
ಇತ್ಯುಕ್ತ್ವಾ
ಪ್ರಮುಖಾತ್ ತಸ್ಯ ರಥೇನೈವ ತು ಮದ್ರರಾಟ್ ।
ವೈಕರ್ತ್ತನಮಪೋವಾಹ
ಸರ್ವಲೋಕಸ್ಯ ಪಶ್ಯತಃ ॥೨೭.೪೩॥
ಆಗ ಶಲ್ಯನು ಹತ್ತಿರದಲ್ಲಿ ಬರುತ್ತಿರುವ ಭೀಮಸೇನನನ್ನು ನೋಡಿ, ಅನೇಕ ಕಾರಣವನ್ನು ಕೊಟ್ಟು, ಹೀಗೆ ಮಾಡಬೇಡ ಎಂದು ಕೇಳಿಕೊಂಡ. ಎಲ್ಲಕ್ಕಿಂತ ಮಿಗಿಲಾಗಿ ನಿನ್ನಿಂದಲೇ ಅರ್ಜುನನ
ಪ್ರತಿಜ್ಞೆಯು ಮುರಿಯಲ್ಪಡಬಾರದಲ್ಲವೇ? ಓ ಭೀಮಸೇನನೇ, ಕರ್ಣನ ನಾಲಿಗೆಯನ್ನು ಬೀಳಿಸಬೇಡ- ಎಂದು
ಹೇಳಿ, ಅವನು ನೋಡುತ್ತಿರುವಾಗಲೇ, ಎಲ್ಲರೂ ನೋಡುತ್ತಿರುವಾಗಲೇ ಶಲ್ಯನು
ಕರ್ಣನನ್ನು ಯುದ್ಧಭೂಮಿಯಿಂದ ಹೊರಗೆ ಕರೆದುಕೊಂಡು ಹೋದ.