ಪದಾ ಪಿಪೇಷ ಕಾಲಿಙ್ಗಂ ಮುಷ್ಟಿನೈವ
ಜಘಾನ ಹ ।
ಮುಷ್ಟಿನಾ
ತ್ವದ್ವಧಾಯಾಹಂ ಸಮರ್ತ್ಥ ಇತಿ ಕಿಂ ವದೇ ॥೨೬.೨೨೦ ॥
ತಸ್ಮಾನ್ಮಯಾ
ರಕ್ಷಿತಸ್ತ್ವಮಿತಿ ಜ್ಞಾಪಯಿತುಂ ಪ್ರಭುಃ ।
ಸಾಶ್ವಸೂತಧ್ವಜರಥಃ
ಕಾಲಿಙ್ಗೋ ಮುಷ್ಟಿಚೂರ್ಣ್ಣಿತಃ ॥೨೬.೨೨೧ ॥
ಕಾಲಿಂಗನನ್ನು ಭೀಮಸೇನ ಮುಷ್ಟಿಯಿಂದ
ಗುದ್ದಿ ಸಾಯಿಸಿದ ಮತ್ತು ಅದೇ ಮುಷ್ಟಿಯನ್ನು ಕರ್ಣನಿಗೆ ತೋರಿಸಿದ. ‘ನನ್ನಿಂದ ರಕ್ಷಣೆಗೊಳಗಾದವನು
ನೀನು’ ಎಂದು ಕರ್ಣನಿಗೆ ತಿಳಿಸಲು, ಕುದುರೆ, ಸಾರಥಿ, ಧ್ವಜ, ರಥ ಇವುಗಳಿಂದ ಒಡಗೂಡಿದ ಕಾಲಿಂಗನನ್ನು ಭೀಮ ಮುಷ್ಟಿಯಿಂದಲೇ ಪುಡಿಗಟ್ಟಿದ.
ಕೇತುಮಾಂಶ್ಚ ಪಿತಾ
ತಸ್ಯ ಶಕ್ರದೇವಃ ಶ್ರುತಾಯುಧಃ ।
ಅಕ್ಷೋಹಿಣ್ಯಾ
ಸೇನಯಾ ಚ ಸಹ ಭೀಮೇನ ಪಾತಿತಾಃ ॥೨೬.೨೨೨ ॥
ಖಡ್-ಗಯುದ್ಧೇ ಪುರಾ
ಭೀಷ್ಮೇ ಸೇನಾಪತ್ಯಂ ಪ್ರಕುರ್ವತಿ ।
ಕರ್ಣ್ಣಾನುಜಾನ್ ದ್ಧ್ರುವಾದ್ಯಾಂಶ್ಚ
ಬಹೂನ್ ಜಘ್ನೇ ಸ ವೈ ನಿಶಿ ॥೨೬.೨೨೩ ॥
ಹಿಂದೆ ಭೀಷ್ಮಾಚಾರ್ಯರು
ಸೇನಾಧಿಪತಿಯಾಗಿದ್ದಾಗ ಭೀಮಸೇನನಿಂದ ಕಾಲಿಂಗನ ತಂದೆಯಾಗಿರುವ ಕೇತುಮಾನ್ ಎಂಬುವವನು ಶ್ರುತಾಯುಧ, ಶಕ್ರದೇವ ಇವರಿಬ್ಬರ ಜೊತೆಗೆ ಒಂದು ಅಕ್ಷೋಹಿಣಿ ಸೇನೆಯೊಂದಿಗೆ
ಖಡ್ಗಯುದ್ಧದಲ್ಲಿ ಸಂಹರಿಸಲ್ಪಟ್ಟಿದ್ದನು. (ಈ ಕಾರಣಕ್ಕಾಗಿಯೇ ಕಾಲಿಂಗ ಭೀಮಸೇನನೊಂದಿಗೆ ಯುದ್ಧಮಾಡಿದ, ಸತ್ತ ಕೂಡಾ.)
ಕಾಲಿಂಗನನ್ನು ಕೊಂದ ನಂತರ
ಭೀಮಸೇನ ಆ ರಾತ್ರಿ ಕರ್ಣನ ತಮ್ಮಂದಿರರಾಗಿರುವ(ಅಧಿರಥನ ಮಕ್ಕಳು) ಧ್ರುವ ಮೊದಲಾದ ಬಹಳ ಜನರನ್ನು
ಸಂಹರಿಸಿದನು.
ಸಙ್ಜ್ಞಾಂ ಭೀಮಕೃತಾಂ
ಜ್ಞಾತ್ವಾ ಶಕ್ತಿಂ ಚಿಕ್ಷೇಪ ಚಾಪರಾಮ್ ।
ಕರ್ಣ್ಣಃ ಶಕ್ತಿರ್ಮ್ಮಯಾ
ದಿವ್ಯಾ ನ ಮುಕ್ತಾ ತೇನ ಜೀವಸಿ ॥ ॥೨೬.೨೨೪ ॥
ಇತಿ ಜ್ಞಾಪಯಿತುಂ ತಾಂ
ತು ಜ್ಞಾತ್ವಾ ಭೀಮಃ ಕ್ಷಣಾತ್ ತದಾ ।
ಖಮುತ್ಪತ್ಯ ಗೃಹೀತ್ವಾ ಚ
ಕರ್ಣ್ಣೇ ಚಿಕ್ಷೇಪ ಸತ್ವರಃ ॥೨೬.೨೨೫ ॥
ಭೀಮ ತನ್ನ ಕ್ರಿಯೆಯಿಂದ
ತೋರಿದ ಸಂಜ್ಞೆಯನ್ನು ತಿಳಿದ ಕರ್ಣ, ‘ನನ್ನಿಂದ ಶಕ್ತ್ಯಾಯುಧವು ಬಿಡಲ್ಪಡಲಿಲ್ಲ, ಹಾಗಾಗಿ ನೀನಿನ್ನೂ ಬದುಕಿದ್ದೀಯ’ ಎನ್ನುವ ಸಂದೇಶವನ್ನು ಭೀಮನಿಗೆ ಕೊಡಲು, ಇಂದ್ರನಿಂದ ಕೊಡಲ್ಪಟ್ಟ ಶಕ್ತಿಗಿಂತ ಇತರವಾದ ಇನ್ನೊಂದು ಶಕ್ತಿಯನ್ನು
ಭೀಮನಮೇಲೆ ಪ್ರಯೋಗಿಸಿದ.
ಕರ್ಣನ ಆ ಸಂಜ್ಞೆಯನ್ನು
ತಿಳಿದ ಭೀಮಸೇನನು, ಕ್ಷಣದಲ್ಲಿ ಆಕಾಶಕ್ಕೆ ನೆಗೆದು, ಕರ್ಣ ಪ್ರಯೋಗಿಸಿದ ಆ ಶಕ್ತಿಯನ್ನು ಹಿಡಿದುಕೊಂಡು, ತಿರುಗಿಸಿ ಕರ್ಣನ ಮೇಲೇ ಎಸೆದ.
ಯದಿ ತ್ವಯಾ ತದಾ
ಮುಕ್ತಾ ಶಕ್ತಿಸ್ತ್ವಾಂ ಸಾ ಹನಿಷ್ಯತಿ ।
ಇತಿ ಜ್ಞಾಪಯಿತುಂ ಸಾ ಚ
ಕರ್ಣ್ಣರಕ್ಷಣಕಾಙ್ಕ್ಷಿಣಾ ॥೨೬.೨೨೬ ॥
ಮುಕ್ತಾ ದಕ್ಷಭುಜೇ ಸಾSಥ ವಿದಾರ್ಯ್ಯ ಧರಣೀಂ ತಥಾ ।
ಭಿತ್ತ್ವಾ ವಿವೇಶ ಕರ್ಣ್ಣಸ್ಯ
ದರ್ಶಯನ್ತೀ ನಿದರ್ಶನಮ್ ॥೨೬.೨೨೭ ॥
‘ಒಂದು ವೇಳೆ ನಿನ್ನಿಂದ
ಇಂದ್ರ ಕೊಟ್ಟ ಶಕ್ತ್ಯಾಯುಧವು ಬಿಡಲ್ಪಟ್ಟಿದ್ದರೆ, ಅದು ನಿನ್ನನ್ನೇ ಕೊಲ್ಲುತ್ತಿತ್ತು’ ಎಂದು
ತಿಳಿಸಲು, ಭೀಮ, ಕರ್ಣ ಪ್ರಯೋಗಿಸಿದ್ದ ಶಕ್ತಿಯನ್ನು ಅವನ ಮೇಲೇ ಎಸೆದಿದ್ದ. ‘ಕರ್ಣ ಬದುಕಬೇಕು’ ಎನ್ನುವ ಬಯಕೆಯಿರುವ ಭೀಮಸೇನನಿಂದ ಕರ್ಣನ
ಬಲತೋಳಲ್ಲಿ ಎಸೆದ ಆ ಶಕ್ತ್ಯಾಯುಧ, ಅವನ ತೋಳನ್ನು ಸೀಳಿ ಭೂಮಿಯನ್ನು ಹೊಕ್ಕಿತು. ಇದು ಕರ್ಣನಿಗೆ
(ಏನೇ ಮಾಡಿದರೂ ಭೀಮನನ್ನು ಮಣಿಸಲು ಸಾಧ್ಯವಿಲ್ಲ ಎನ್ನುವ) ಸಂದೇಶವನ್ನು ಮನವರಿಕೆ ಮಾಡಿಕೊಟ್ಟಿತು
ಕೂಡಾ.
ತತೋ ಭೀಮಃ ಪುನಃ ಸ್ವಂ
ತು ರಥಮಾಸ್ಥಾಯ ಚಾಪಭೃತ್ ।
ಕರ್ಣ್ಣಸ್ಯ ಪುರತಃ
ಶತ್ರೂನ್ ದ್ರಾವಯಾಮಾಸ ಸರ್ವತಃ ॥೨೬.೨೨೮ ॥
ತದನಂತರ ಭೀಮನು ಮತ್ತೆ
ತನ್ನ ರಥವನ್ನೇರಿ ಬಿಲ್ಲನ್ನು ಹಿಡಿದು, ಕರ್ಣನ
ಮುಂದುಗಡೆಯೇ ಎಲ್ಲಾ ಶತ್ರುಗಳನ್ನು ಓಡಿಸಿದನು.
ತಂ ಕರ್ಣ್ಣೋ ವಾರಯಾಮಾಸ
ಶರೈಃ ಸನ್ನತಪರ್ವಭಿಃ ।
ಭೀಮಃ ಕರ್ಣ್ಣರಥಾಯೈವ
ಗದಾಂ ಚಿಕ್ಷೇಪ ವೇಗಿತಃ ॥೨೬.೨೨೯ ॥
ಭೀಮನನ್ನು ಕರ್ಣನು
ಚೂಪಾಗಿರುವ ವಕ್ರವಾದ ಅಲಗುಳ್ಳ ಬಾಣಗಳಿಂದ ತಡೆದ. ಭೀಮನು ವೇಗದಿಂದ ಕರ್ಣನ ರಥಕ್ಕಾಗಿಯೇ ಗದೆಯನ್ನು
ಎಸೆದನು.
ಸ ತದ್ಗದಾವಿಘಾತಾಯ
ಸ್ಥೂಣಾಕರ್ಣಾಸ್ತ್ರಮಾಸೃಜತ್ ।
ತೇನಾಸ್ತ್ರೇಣ
ಪ್ರತಿಹತಾ ಸಾ ಗದಾ ಭೀಮಮಾಬ್ರಜತ್ ॥೨೬.೨೩೦ ॥
ಕರ್ಣನು ಭೀಮಸೇನನ ಗದೆಯನ್ನು
ಹೊಡೆಯಲು ಸ್ಥೂಣಾಕರ್ಣಾ ಎಂಬ ಅಸ್ತ್ರವನ್ನು ಬಿಟ್ಟ. ಆ ಅಸ್ತ್ರದಿಂದ ತಡೆಯಲ್ಪಟ್ಟ ಆ ಗದೆಯು ಭೀಮಸೇನನನ್ನು
ಹೊಂದಿತು.
ಭೀಮೋ ಗದಾಂ ಸಮಾದಾಯ ಕರ್ಣ್ಣಸ್ಯ
ರಥಮಾರುಹತ್ ।
ತಯಾ ಸಞ್ಚೂರ್ಣ್ಣಯಾಮಾಸ
ಕರ್ಣ್ಣಸ್ಯ ರಥಕೂಬರಮ್ ॥೨೬.೨೩೧ ॥
ಭೀಮಸೇನನು ಗದೆಯನ್ನು
ಮತ್ತೆ ಹಿಡಿದುಕೊಂಡು ಕರ್ಣನ ರಥವನ್ನೇರಿದನು. ಆ ಗದೆಯಿಂದ ಕರ್ಣನ ರಥದ ನೊಗವನ್ನು ಪುಡಿ-ಪುಡಿ
ಮಾಡಿದನು.
ಏವಂ ತ್ವಚ್ಚೂರ್ಣ್ಣನೇ ಶಕ್ತೋ ಮತ್ಕಾಮಾತ್ ತ್ವಂ ಹಿ ಜೀವಸಿ ।
ಏವಂ ನಿದರ್ಶಯಿತ್ವೈವ
ಪುನಃ ಸ್ವಂ ರಥಮಾಬ್ರಜತ್ ॥೨೬.೨೩೨ ॥
‘ಹೀಗೆಯೇ ನಿನ್ನನ್ನು
ಪುಡಿಪುಡಿ ಮಾಡುವುದರಲ್ಲಿ ನಾನು ಶಕ್ತನಾಗಿದ್ದೇನೆ ಆದರೆ ನನ್ನ ಇಚ್ಛೆಯಿಂದಲೇ ನೀನು ಬದುಕಿದ್ದೀಯ’
ಈರೀತಿಯಾಗಿ ದೃಷ್ಟಾಂತದ ಮೂಲಕ ತೋರಿಸಿ, ಭೀಮ ಮತ್ತೆ ತನ್ನ ರಥವನ್ನೇರಿದ.
ಪುನಃ ಕರ್ಣ್ಣಪುರಃ
ಸೇನಾಂ ಜಘಾನ ಬಹುಶೋ ರಣೇ ।
ಕರ್ಣ್ಣಸ್ತು ತಂ
ಪರಿತ್ಯಜ್ಯ ಸಹದೇವಮುಪಾದ್ರವತ್ ॥೨೬.೨೩೩ ॥
ಮತ್ತೆ ಕರ್ಣನ ಎದುರೇ ಭೀಮಸೇನನು
ಬಹಳವಾಗಿ ಸೇನೆಯನ್ನು ಕೊಂದುಹಾಕಿದ. ಕರ್ಣನಾದರೋ ಅಸಹಾಯಕನಾಗಿ ಭೀಮನನ್ನು ಬಿಟ್ಟು, ಸಹದೇವನ ಬಳಿ ಬಂದ.
No comments:
Post a Comment