ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 16, 2023

Mahabharata Tatparya Nirnaya Kannada 26-247-258

 

ತದೈವ ಪಾರ್ತ್ಥಂ ಪ್ರತಿ ಯೋದ್ಧುಮಾಗತಂ ವೈಕರ್ತ್ತನಂ ವೀಕ್ಷ್ಯ ಜಗತ್ಪತಿರ್ಹರಿಃ ।

ಘಟೋತ್ಕಚಂ ಪ್ರಾಹಿಣೋಚ್ಛಕ್ತಿಮುಗ್ರಾಂ ತಸ್ಮಿನ್ ಮೋಕ್ತುಂ ಪಾರ್ತ್ಥರಕ್ಷಾರ್ತ್ಥಮೇವ ॥೨೬.೨೪೭ ॥

 

ಆಗಲೇ ಅರ್ಜುನನನ್ನು ಕುರಿತು ಯುದ್ಧಮಾಡಲು ಬಂದಿರುವ ಕರ್ಣನನ್ನು ಕಂಡು, ಜಗದೊಡೆಯನಾದ ಶ್ರೀಕೃಷ್ಣನು, ಉಗ್ರವಾಗಿರುವ, ಇಂದ್ರ ಕೊಟ್ಟ ಶಕ್ತ್ಯಾಯುಧದಿಂದ ಅರ್ಜುನನನ್ನು ರಕ್ಷಿಸಿ, ಆ ಶಕ್ತ್ಯಾಯುಧವನ್ನು   ಘಟೋತ್ಕಚನಲ್ಲಿ ಬಿಡುವಂತೆ ಮಾಡಲು, ಘಟೋತ್ಕಚನನ್ನು ಯುದ್ಧಕ್ಕೆಂದು ಕಳುಹಿಸಿದನು.  

 

ಸ ಕರ್ಣ್ಣಮಾಹೂಯ ಯುಯೋಧ ತೇನ ತಸ್ಯಾನು ದುರ್ಯ್ಯೋಧನಪೂರ್ವಕಾಶ್ಚ ಯೇ ।

ದ್ರೋಣೇನ ಚೈತಾನ್ ಸಮರೇ ಸ ಏಕೋ ನಿವಾರಯಾಮಾಸ ಮಮರ್ದ್ದ ಚಾಧಿಕಮ್ ॥೨೬.೨೪೮ ॥

 

ಘಟೋತ್ಕಚನು ಕರ್ಣನನ್ನು ಕರೆದು ಅವನೊಂದಿಗೆ ಯುದ್ಧ ಮಾಡಿದನು. ಕರ್ಣನ ಬೆಂಗಾವಲು ಪಡೆಯಲ್ಲಿ ದ್ರೋಣಾಚಾರ್ಯರಿಂದ ಕೂಡಿರುವ ದುರ್ಯೋಧನ ಮೊದಲಾದವರೆಲ್ಲರನ್ನೂ ಯುದ್ಧದಲ್ಲಿ ಘಟೋತ್ಕಚ ಒಬ್ಬನೇ ತಡೆದನು ಮತ್ತು ಬಹಳ ಪೀಡಿಸಿದನು ಕೂಡಾ.

 

ತೇ ಬಾದ್ಧ್ಯಮಾನಾ ಬಹುಶೋ ಬಲೀಯಸಾ ಕರ್ಣ್ಣಂ ಪುರೋಧಾಯ ತಮಭ್ಯಯೋಧಯನ್ ।

ನ ವಿವ್ಯಥೇ ತತ್ರ ರಣೇ ಸ ಕರ್ಣ್ಣಃ ಸ್ವವೀರ್ಯ್ಯಮಾಸ್ಥಾಯ ಮಹಾಸ್ತ್ರವೇತ್ತಾ ॥೨೬.೨೪೯ ॥

 

ಅವರೆಲ್ಲರೂ(ದ್ರೋಣ, ದುರ್ಯೋಧನ, ಮೊದಲಾದವರು) ಬಲಿಷ್ಠನಾಗಿರುವ  ಘಟೋತ್ಕಚನಿಂದ ಪೀಡೆಗೊಳಗಾಗಿ,  ಕರ್ಣನನ್ನು ಮುಂದೆ ಇಟ್ಟುಕೊಂಡು ಘಟೋತ್ಕಚನನ್ನು ಕುರಿತು ಯುದ್ಧಮಾಡಿದರು. ಆ ಯುದ್ಧದಲ್ಲಿ ಕರ್ಣನು ತನ್ನ ವೀರ್ಯವನ್ನು ಆಶ್ರಯಿಸಿ, ಮಹಾಸ್ತ್ರವನ್ನು ಬಲ್ಲವನಾಗಿ, ಕಂಗೆಡಲಿಲ್ಲ.

 

ನಿವಾರಯಾಮಾಸ  ಗುರೋಃ ಸುತಂ ತದಾ ಭೀಮಸ್ತ್ರಿಗರ್ತ್ತಾಞ್ಛತಮನ್ಯುನನ್ದನಃ ।

ಅಲಮ್ಬಲೋ ನಾಮ ತದೈವ ರಾಕ್ಷಸಃ  ಸಮಾಗಮದ್ ಭೀಮಸುತಂ ನಿಹನ್ತುಮ್ ॥೨೬.೨೫೦ ॥

 

ಆಗ ಭೀಮಸೇನನು ಅಶ್ವತ್ಥಾಮನನ್ನು ತಡೆದರೆ, ಅರ್ಜುನನು ತ್ರಿಗರ್ತದವರನ್ನು ತಡೆದ. ಆಗಲೇ ಅಲಮ್ಬಲ ಎನ್ನುವ ರಾಕ್ಷಸನು ಘಟೋತ್ಕಚನನ್ನು ಕೊಲ್ಲಲೆಂದು ಬಂದನು. 

 

ಯುಧ್ವಾ ಪ್ರಗೃಹ್ಯೈನಮಥೋ ನಿಪಾತ್ಯ ಘಟೋತ್ಕಚೋ ಭೂಮಿತಳೇSಸಿನಾSಸ್ಯ ।

ಉತ್ಕೃತ್ಯ ಶೀರ್ಷಂ ತು  ಸುಯೋಧನೇSಕ್ಷಿಪದ್ ವಿಷೇದುರತ್ರಾಖಿಲಭೂಮಿಪಾಲಾಃ ॥೨೬.೨೫೧ ॥

 

ಹೀಗೆ ಬಂದ ಅಲಮ್ಬಲನೊಂದಿಗೆ ಕಾದಿದ ಘಟೋತ್ಕಚನು, ಅವನನ್ನು ಭೂಮಿಯಲ್ಲಿ ಬೀಳಿಸಿ, ಕತ್ತಿಯಿಂದ ಅವನ ಕತ್ತನ್ನು ಕತ್ತರಿಸಿ, ಆ ರುಂಡವನ್ನು ದುರ್ಯೋಧನನ ಮೇಲೆ ಎಸೆದನು. ಈ ಯುದ್ಧದಲ್ಲಿ ಎಲ್ಲಾ ಕ್ಷತ್ರಿಯರೂ ಕೂಡಾ ಸಂಕಟಗೊಂಡರು.

 

ಅಲಾಯುಧೋSಥಾSಗಮದುಗ್ರವೀರ್ಯ್ಯೋ ನರಾಶನಸ್ತಂ ಸ ಘಟೋತ್ಕಚೋSಭ್ಯಯಾತ್ ।

ಯುಧ್ವಾ ಮೂಹೂರ್ತಂ ಸ ತು ತೇನ ಭೂಮೌ ನಿಪಾತ್ಯ ತಂ ಯಜ್ಞಪಶುಂ ಚಕಾರ ॥೨೬.೨೫೨ ॥

 

ತದನಂತರ ಉಗ್ರವೀರ್ಯನಾದ, ನರಭಕ್ಷಣೆ ಮಾಡುವ ಅಲಾಯುಧನು ಯುದ್ಧಕ್ಕೆಂದು ಬಂದನು. ಅವನನ್ನು  ಎದುರುಗೊಂಡ ಘಟೋತ್ಕಚ, ಒಂದು ಮೂಹೂರ್ತಕಾಲ ಯುದ್ಧಮಾಡಿ, ಅವನನ್ನು ಭೂಮಿಯಲ್ಲಿ ಬೀಳಿಸಿ, ಅವನನ್ನು ಯಜ್ಞಪಶುವಿನಂತೆ ಕೊಂದು ಹಾಕಿದನು.

 

ಅಥಾಸ್ಯ ಶಿರ ಉದ್ಧೃತ್ಯ ಕ್ರೋಧಾದ್ ದುರ್ಯ್ಯೋಧನೋರಸಿ ।

ಚಿಕ್ಷೇಪ ತೇನ ಸಮ್ಭ್ರಾನ್ತಾಃ ಸರ್ವೇ ದುರ್ಯ್ಯೋಧನಾದಯಃ ॥೨೬.೨೫೩ ॥

 

ತದನಂತರ ಅಲಾಯುಧನ ತಲೆಯನ್ನು ಕತ್ತರಿಸಿದ ಘಟೋತ್ಕಚ, ಸಿಟ್ಟಿನಿಂದ ಅದನ್ನು ದುರ್ಯೋಧನನ ಎದೆಯ ಮೇಲೆ ಎಸೆದ. ಅದರಿಂದ ಎಲ್ಲಾ ದುರ್ಯೋಧನಾದಿಗಳು ಗಾಬರಿಗೊಂಡರು.

 

ಘಟೋತ್ಕಚಬಲಖ್ಯಾತ್ಯೈ ಸಮರ್ತ್ಥೇನಾಪಿ ಯೋ ರಣೇ ।

ನ ಹತೋ ಭೀಮಸೇನೇನ ಹತೇSಸ್ಮಿನ್  ಭೈಮಸೇನಿನಾ ॥೨೬.೨೫೪ ॥

 

ಸರ್ವೇ ಸಞ್ಚೋದಯಾಮಾಸುಃ ಕರ್ಣ್ಣಂ ಶಕ್ತಿವಿಮೋಕ್ಷಣೇ ।

ಅಸ್ಮಿನ್ ಹತೇ ಹತಂ ಸರ್ವಂ ಕಿಂ ನಃ ಪಾರ್ತ್ಥಃ ಕರಿಷ್ಯತಿ ॥೨೬.೨೫೫ ॥

 

ಏವಂ ಸಞ್ಚೋದ್ಯಮಾನಃ ಸ ಧಾರ್ತ್ತರಾಷ್ಟ್ರೈಃ ಪುನಃಪುನಃ ।

ಹೈಡಿಮ್ಬೇನಾರ್ದ್ದ್ಯಮಾನೈಸ್ತು ಸ್ವಯಂ ಚ ಭೃಶಪೀಡಿತಃ ।

ಆದತ್ತ ಶಕ್ತಿಂ ವಿಪುಲಾಂ ಪಾಕಶಾಸನಸಮ್ಮತಾಮ್ ॥೨೬.೨೫೬ ॥

 

ಘಟೋತ್ಕಚನ ಬಲ ಏನು ಎನ್ನುವುದನ್ನು ಜಗತ್ತಿಗೇ ತೋರಿಸಲು, ಸಮರ್ಥನಾದರೂ ಕೂಡಾ, ಭೀಮಸೇನನಿಂದ ಯಾವ ಅಲಾಯುಧನು ಕೊಲ್ಲಲ್ಪಡಲಿಲ್ಲವೋ, ಅಂತಹ ಅಲಾಯುಧನು ಘಟೋತ್ಕಚನಿಂದ ಸಂಹರಿಸಲ್ಪಡುತ್ತಿರಲು,  ದುರ್ಯೋಧನಾದಿಗಳೆಲ್ಲರೂ ಕರ್ಣನನ್ನು ಘಟೋತ್ಕಚನಲ್ಲಿ ಶಕ್ತ್ಯಾಯುಧವನ್ನು ಬಿಡಲು ಪ್ರೇರಿಸಿದರು. ‘ಈ ಘಟೋತ್ಕಚ ಸಂಹರಿಸಲ್ಪಟ್ಟರೆ ಎಲ್ಲಾ ಶತ್ರು ಸಮೂಹ ಹತವಾದಂತೆ’ ಎಂದು ಘಟೋತ್ಕಚನಿಂದ ಪೀಡಿತರಾದ ದುರ್ಯೋಧನಾದಿಗಳಿಂದ ಪ್ರಚೋದಿಸಲ್ಪಟ್ಟು, ತಾನೂ ಕೂಡಾ ಅತ್ಯಂತ ಪೀಡಿತನಾಗಿದ್ದ ಕರ್ಣ, ಇಂದ್ರ ಕೊಟ್ಟ ಹಿರಿದಾದ ಶಕ್ತ್ಯಾಯುಧವನ್ನು ತೆಗೆದುಕೊಂಡ.

 

ತಾಮಮ್ಬರಸ್ಥಾಯ ಘಟೋತ್ಕಚಾಯ ಶೈಲೋಪಮಾಯಾತುಲವಿಕ್ರಮಾಯ ।

ಚಿಕ್ಷೇಪ ಮೃತ್ಯೋ ರಸನೋಪಮಾಮಲಂ ಪ್ರಕಾಶಯನ್ತೀಂ ಪ್ರದಿಶೋ ದಿಶಶ್ಚ ॥೨೬.೨೫೭ ॥

 

ಮೃತ್ಯುವಿನ ನಾಲಿಗೆಯಂತೆ ಇರುವ, ದಿಕ್ಕು-ವಿದಿಕ್ಕನ್ನು ಬೆಳಗಿಸುತ್ತಿರುವ ಆ ಶಕ್ತಿಯನ್ನು, ಬೆಟ್ಟದಂತಿರುವ, ಎಣೆಯಿರದ ಪರಾಕ್ರಮವುಳ್ಳ ಘಟೋತ್ಕಚನಿಗಾಗಿ ಕರ್ಣ ಎಸೆದ. 

 

 

ನಿರ್ಭಿಣ್ಣವಕ್ಷಾಃ ಸ ತಯಾ ಪಪಾತ ವಿಚೂರ್ಣ್ಣಯಞ್ಛತ್ರುಬಲಂ ಹತೋSಪಿ

ತಸ್ಮಿನ್  ಹತೇ ಜಹೃಷುರ್ದ್ದಾರ್ತ್ತರಾಷ್ಟ್ರಾ  ಉಚ್ಚುಕ್ರುಶುರ್ದ್ದುಧುವುಶ್ಚಾಮ್ಬರಾಣಿ ॥೨೬.೨೫೮ ॥

 

ಸೀಳಲ್ಪಟ್ಟ ಎದೆಯುಳ್ಳವನಾಗಿ ಆ ಘಟೋತ್ಕಚನು ಬಿದ್ದ. ಅವನು ಸಾಯುವಾಗಲೂ ಕೂಡಾ ಶತ್ರುಗಳನ್ನು ಪುಡಿ-ಪುಡಿ ಮಾಡುತ್ತಾ ಬಿದ್ದ. ಅವನು ಸಾಯಲು ದುರ್ಯೋಧನಾದಿಗಳು ಹರ್ಷಗೊಂಡರು. ಕಿರುಚಿದರು.  ಬಟ್ಟೆಗಳನ್ನು ಹಾರಿಸಿದರು.

No comments:

Post a Comment