ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, March 13, 2023

Mahabharata Tatparya Nirnaya Kannada 26-211-219

 

ಚಮೂಂ ಪರೇಷಾಮಭ್ಯಾಗಾದ್ ಧೃಷ್ಟದ್ಯುಮ್ನಸ್ತಮಾಶು ಚ ।

ದ್ರೌಣಿದುರ್ಯ್ಯೋಧನೌ ತತ್ರ ವಿರಥೀಕೃತ್ಯ ಮಾರುತಿಃ ॥೨೬.೨೧೧ ॥

 

ದ್ರಾವಯಾಮಸ ತತ್ ಸೈನ್ಯಂ ಪಶ್ಯತಾಂ ಸರ್ವಭೂಭೃತಾಮ್ ।

ಅಕ್ಷೋಹಿಣ್ಯಸ್ತು ಸಪ್ತೈವ ಸೇನಯೋರುಭಯೋರಪಿ ॥೨೬.೨೧೨ ॥

 

ಹತಾಸ್ತಾಸಾಂ ಚ ಭೀಮೇನ  ತಿಸ್ರೋ ದ್ವೇ ಫಲ್ಗುನೇನ ಚ ।

ಸೌಭದ್ರಸಾತ್ಯಕಿಮುಖೈಸ್ತನ್ಮದ್ಧ್ಯೇ ಷೋಡಶಾಂಶಕಃ  ॥೨೬.೨೧೩ ॥

 

ಹೈಡಿಮ್ಬಪಾರ್ಷತಮುಖೈಸ್ತ್ರಯಾಚ್ಚ ದಶಮಾಂಶಕಃ ।

ಭೀಷ್ಮದ್ರೋಣದ್ರೌಣಿಭಿಶ್ಚ ದ್ವೇ ಸಮಂ ನಿಹತೇ ತದಾ ॥೨೬.೨೧೪ ॥

 

ತದನ್ಯೈರ್ಮ್ಮಿಳಿತೈಃ ಸರ್ವೈಸ್ತಚ್ಚತುರ್ತ್ಥಾಂಶ ಏವ ಚ ।

ತತೋ ರಾತ್ರೌ ಪಞ್ಚಭಿಶ್ಚ ಪಾರ್ತ್ಥಾಃ ಷಡ್-ಭಿಶ್ಚ ಕೌರವಾಃ ॥೨೬.೨೧೫ ॥

 

ಧೃಷ್ಟದ್ಯುಮ್ನನು ಕೂಡಲೇ ಶತ್ರುಗಳ ಸೇನೆಯನ್ನು ಎದುರುಗೊಂಡ. ಆ ರಾತ್ರಿ ಯುದ್ಧದಲ್ಲಿ ಭೀಮಸೇನನು ಅಶ್ವತ್ಥಾಮ ಹಾಗೂ ದುರ್ಯೋಧನನನ್ನು ರಥಹೀನರನ್ನಾಗಿ ಮಾಡಿ, ಅವರ ಸೈನ್ಯವನ್ನು ಎಲ್ಲರು ನೋಡುತ್ತಿರುವಾಗಲೇ ಓಡಿಸಿದನು.

ಇಲ್ಲಿಯ ತನಕದ(ಹದಿನಾಲ್ಕು ದಿನಗಳ) ಯುದ್ಧದಲ್ಲಿ ಒಟ್ಟು ೭ ಅಕ್ಷೋಹಿಣಿ ಸೇನೆ ಸಂಪೂರ್ಣವಾಗಿ ನಾಶವಾಗಿತ್ತು. ಮೂರು ಅಕ್ಷೋಹಿಣಿ ಸೇನೆಯನ್ನು  ಭೀಮಸೇನ ಕೊಂದರೆ, ಎರಡು ಅಕ್ಷೋಹಿಣಿ ಸೇನೆಯನ್ನು ಅರ್ಜುನ ಕೊಂದಿದ್ದ. ಭೀಮಸೇನನಿಂದ ಹತರಾದ ಅಕ್ಷೋಹಿಣಿಯ ಮಧ್ಯದಲ್ಲಿ ಅದರ ಹತ್ತನೇ ಒಂದಂಶ ಘಟೋತ್ಕಚ, ಧೃಷ್ಟದ್ಯುಮ್ನ, ಮೊದಲಾದವರಿಂದ ಸಂಹರಿಸಲ್ಪಟ್ಟಿತು. ಅದೇ ರೀತಿ ಅರ್ಜುನನಿಂದ ಹತವಾದ ಎರಡು ಅಕ್ಷೋಹಿಣಿ ಮಧ್ಯದಲ್ಲಿ ಅದರ ಹದಿನಾರನೇ ಒಂದಂಶವು ಅಭಿಮನ್ಯು, ಸಾತ್ಯಕಿ, ಇವರೇ ಮೊದಲಾದವರಿಂದ ಸಂಹರಿಸಲ್ಪಟ್ಟಿತು. ಹೀಗೆ  ಐದು ಅಕ್ಷೋಹಿಣಿ ಸೇನೆ ಕೌರವರ ಕಡೆ ನಾಶವಾದರೆ, ಭೀಷ್ಮ, ದ್ರೋಣ ಹಾಗೂ ಅಶ್ವತ್ಥಾಮ ಮತ್ತು ಇತರರು ಪಾಂಡವರ ಕಡೆಯ ೨ ಅಕ್ಷೋಹಿಣಿ ಸೇನೆಯನ್ನು ಸಮವಾಗಿ ನಾಶ ಮಾಡಿದ್ದರು. ಈ ಎರಡು ಅಕ್ಷೋಹಿಣಿಯ ಮಧ್ಯ ನಾಲ್ಕನೇ ಒಂದು ಭಾಗ ಕೌರವರ ಕಡೆಯ ಇತರರಿಂದ ಸಂಹಾರ ಮಾಡಲ್ಪಟ್ಟಿತ್ತು. ಹೀಗಿರಬೇಕಾದರೆ, ಪಾಂಡವರ ಐದು ಅಕ್ಷೋಹಿಣಿ ಸೇನೆ ಹಾಗೂ ಕೌರವರ ಆರು ಅಕ್ಷೋಹಿಣಿ ಸೇನೆ ಉಳಿದಿತ್ತು.

 

[ಒಂದು ಅಕ್ಷೋಹಿಣಿ ಎಂದರೆ ೨೧,೮೭೦ ಆನೆಗಳು, ಅಷ್ಟೇ ಸಂಖ್ಯೆಯ ರಥಗಳು. ೬೫,೬೧೦ ಕುದುರೆಗಳು, ೧,೦೯,೩೫೦ ಪದಾತಿದಳ (ಕಾಲಾಳುಗಳು).   ಇಂತಹ ಕೌರವರ ಮೂರು ಅಕ್ಷೋಹಿಣಿಯ ಹತ್ತನೇ ಒಂಬತ್ತು ಭಾಗವನ್ನು(೯/೧೦) ಭೀಮ ಸಂಹಾರ ಮಾಡಿದರೆ, ಉಳಿದ ಹತ್ತನೇ ಒಂದು ಭಾಗವನ್ನು(೧/೧೦) ಭೀಮನ ಜೊತೆಗೇ ಯುದ್ಧ ಮಾಡುತ್ತಿದ್ದ ಘಟೋತ್ಕಚ, ಧೃಷ್ಟದ್ಯುಮ್ನ ಮೊದಲಾದವರು ಸಂಹಾರ ಮಾಡಿದ್ದರು. ಅದೇ ರೀತಿ ಕೌರವರ ಎರಡು ಅಕ್ಷೋಹಿಣಿಯ ಹದಿನಾರನೇ ಹದಿನೈದು ಭಾಗವನ್ನು(೧೫/೧೬) ಅರ್ಜುನ ಸಂಹಾರ ಮಾಡಿದರೆ, ಉಳಿದ ಹದಿನಾರನೇ ಒಂದು(೧/೧೬) ಭಾಗವನ್ನು ಅವನ ಜೊತೆಗೇ ಯುದ್ಧ ಮಾಡುತ್ತಿದ್ದ ಅಭಿಮನ್ಯು, ಸಾತ್ಯಕಿ, ಮೊದಲಾದವರು ಸಂಹಾರ ಮಾಡಿದ್ದರು( ಹಿಂಬಾಲಕರು ಮಾಡಿದ್ದನ್ನು ಕೂಡ ನಾಯಕರು ಮಾಡಿದಂತೆಯೇ ಪರಿಗಣಿಸಿ ಹೇಳುವುದು ರೂಢಿ). ಅದೇ ರೀತಿ ಪಾಂಡವರ  ೨ ಅಕ್ಷೋಹಿಣಿ ಸೇನೆಯನ್ನು ಭೀಷ್ಮ, ದ್ರೋಣ ಹಾಗೂ ಅಶ್ವತ್ಥಾಮ ಹಾಗೂ ಇತರರು ಸೇರಿ ಸಮವಾಗಿ ಸಂಹಾರ ಮಾಡಿದ್ದರು. ಅಂದರೆ ಪಾಂಡವ ಸೇನೆಯ ೨ ಅಕ್ಷೋಹಿಣಿಯ ನಾಲ್ಕನೇ ಒಂದು ಭಾಗವನ್ನು ಇತರರು ಸಂಹಾರ ಮಾಡಿದರೆ, ಉಳಿದ ೩ ಭಾಗವನ್ನು ಸಮನಾಗಿ ಭೀಷ್ಮ, ದ್ರೋಣ ಹಾಗೂ ಅಶ್ವತ್ಥಾಮರು ಸಂಹಾರ ಮಾಡಿದ್ದರು. ಹೀಗೆ ಯುದ್ಧದ ಹದಿನಾಲ್ಕನೇ ದಿನವಾದ ಅಂದು ಯುದ್ಧ ಪ್ರಾರಂಭವಾದ ದಿನದಿಂದ ಅಲ್ಲಿಯ ತನಕ ಒಟ್ಟು ೭ ಅಕ್ಷೋಹಿಣಿ ಸೈನ್ಯ ನಾಶವಾಗಿತ್ತು].

 

ಅಕ್ಷೋಹಿಣೀಭಿಃ ಸಂವ್ಯೂಹ್ಯ ಯುದ್ಧಂ ಚಕ್ರುಃ ಸುದಾರುಣಮ್ ।

ಭೀಮಂ ಸೇನಾಂ ದ್ರಾವಯನ್ತಂ ಪುನಃ ಕರ್ಣ್ಣಃ ಸಮಾಸದತ್  ॥೨೬.೨೧೬ ॥

 

ಹೀಗೆ ಅಳಿದುಳಿದ ಅಕ್ಷೋಹಿಣಿಯಿಂದ ವ್ಯೂಹವನ್ನು ರಚನೆಮಾಡಿ, ಅತಿ ಭಯಂಕರವಾದ ಯುದ್ಧವನ್ನು ಮಾಡಿದರು. ಸೇನೆಯನ್ನು ಓಡಿಸುತ್ತಿರುವ ಭೀಮಸೇನನನ್ನು ಕರ್ಣನು ಪುನಃ ಹೊಂದಿದನು.

 

ಸ ಕರ್ಣ್ಣಪುರತೋ  ಭೀಮೋ ದುಷ್ಕರ್ಣ್ಣಂ ಕರ್ಣ್ಣಮೇವ ಚ ।

ದುರ್ಯ್ಯೋಧನಸ್ಯಾವರಜೌ ನಿಷ್ಪಿಪೇಷ ಪದಾ ಕ್ಷಣಾತ್ ॥೨೬.೨೧೭ ॥

 

ರಥಾಶ್ವಧ್ವಜಸೂತೈಶ್ಚ ಸಹ ತೌ ನ ವ್ಯದೃಶ್ಯತಾಮ್ ।

ನಿರಾಯುಧೋSಹಮಿತಿ ಮಾಂ ತ್ವಮಾತ್ಥ ಪರುಷಂ ವಚಃ ॥೨೬.೨೧೮ ॥

 

ನಿರಾಯುಧಃ  ಪದೈವಾಹಂ  ತ್ವಾಂ ಹನ್ತುಮಶಕಂ ತದಾ ।

ಇತಿ ಕರ್ಣ್ಣಸ್ಯ ತೌ ಭೀಮಃ ಸಙ್ಜ್ಞಯಾ ಜ್ಞಾಪಯನ್  ಭುವಿ ॥೨೬.೨೧೯ ॥

 

ಆ ಭೀಮನು ಕರ್ಣ ನೋಡುತ್ತಿರುವಾಗಲೇ, ರಥ, ಕುದುರೆ, ಧ್ವಜ, ಸೂತ, ಇವೆಲ್ಲವುದರಿಂದ ಸಹಿತರಾದ  ದುಷ್ಕರ್ಣ ಮತ್ತು ಕರ್ಣ ಎನ್ನುವ ದುರ್ಯೋಧನನ ತಮ್ಮಂದಿರರಿಬ್ಬರನ್ನು ತನ್ನ ಕಾಲಿನಿಂದ ಜಜ್ಜಿ ಕೊಂದ.

ತನ್ನನ್ನು ನಿರಾಯುಧನೆಂದು ತಿಳಿದು ಹಿಂದೆ ಕೆಟ್ಟ ಮಾತುಗಳಿಂದ ಬೈದಿರುವ ಕರ್ಣನಿಗೆ, ಯಾವುದೇ ಆಯುಧವಿಲ್ಲದೆ, ಕೇವಲ ಕಾಲಿನಿಂದ ನಿನ್ನನ್ನು ಕೊಲ್ಲಲು ನಾನು ಸಮರ್ಥನಿದ್ದೇನೆ ಎಂದು ಸಂಕೇತದಿಂದ ತೋರಿಸಲು ಅವರಿಬ್ಬರನ್ನು ಭೀಮ ಈರೀತಿಯಾಗಿ ಕೊಂದ.  

 

[‘ತತಃ ಸುತೌ ತೇ ಬಲಿನೌ ಶೂರೌ ದುಷ್ಕರ್ಣದುರ್ಮದೌ । ಮುಷ್ಟಿನಾSSಹತ್ಯ ಸಙ್ಕ್ರುದ್ಧೋ ಮಮರ್ದ ಚರಣೇನ ಹ (ದ್ರೋಣಪರ್ವ ೧೫೬.೩)- ಭೀಮಸೇನನು ನಿನ್ನ ಮಕ್ಕಳಾದ ಆ ಬಲಶಾಲೀ ದುಷ್ಕರ್ಣ-ದುರ್ಮದರನ್ನು ಮುಷ್ಟಿಯಿಂದ ಹೊಡೆದು, ಕಾಲಿನಿಂದ ತುಳಿದು ಸಂಹರಿಸಿದನು. ‘ದುರ್ಮದಸ್ಯ ಚ ವೀರಸ್ಯ ದುಷ್ಕರ್ಣಸ್ಯ ಚ ತಂ ರಥಂ । ಪಾದಪ್ರಹಾರೇಣ ಧರಾಂ ಪ್ರಾವೇಶಯದರಿನ್ದಮಃ’ (೧೫೬.೪೩)- ಕರ್ಣ ಹಾಗು ಇತರರು  ನೋಡುತ್ತಿದ್ದಂತೆಯೇ ಭೀಮಸೇನನು ವೀರ ದುರ್ಮದ-ದುಷ್ಕರ್ಣರ ರಥವನ್ನು ಕಾಲಿನಿಂದಲೇ ಒದ್ದು ಭೂಮಿಗುರುಳಿಸಿದನು.]  

No comments:

Post a Comment