ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 25, 2023

Mahabharata Tatparya Nirnaya Kannada 27-17-22

 

ವಿನ್ದಾನುವಿನ್ದಾವಥ ಕೈಕಯೌ ರಣೇ  ಸಮಾಸದತ್ ಸಾತ್ಯಕಿರುಗ್ರವಿಕ್ರಮಃ ।

ತಯೋರಮುಷ್ಯಾಭವದುಗ್ರವೈಶಸಂ ಪ್ರವರ್ಷತೋರುತ್ತಮಸಾಯಕಾನ್ ಬಹೂನ್ ॥೨೭.೧೭॥

 

ಇನ್ನೊಂದು ಕಡೆ ಪರಾಕ್ರಮಿಯಾಗಿರುವ ಸಾತ್ಯಕಿಯು ವಿನ್ದಾನುವಿನ್ದ ಎನ್ನುವ ಕೇಕಯ ದೇಶದವರನ್ನು ಯುದ್ಧದಲ್ಲಿ ಎದುರುಗೊಂಡು ಅವರ ಮೇಲೆ ಅತ್ಯುತ್ತಮ ಬಾಣಗಳ ಮಳೆಗರೆದನು. ಅವರ ನಡುವೆ ಉಗ್ರವಾಗಿರುವ ಯುದ್ಧವಾಯಿತು.

 

ತಾಭ್ಯಾಂ ನಿರುದ್ಧಃ ಸಹಸಾ ಜಹಾರ ತತ್ರಾನುವಿನ್ದಸ್ಯ ಶಿರೋSಥ ವಿನ್ದಃ ।

ಯುಯೋಧ ಶೈನೇಯಮಥಾರಥಾವುಭೌ ಪರಸ್ಪರಂ ಚಕ್ರತುರುತ್ತಮಾಹವೇ ॥೨೭.೧೮॥

 

ಅವರಿಬ್ಬರಿಂದ ತಡೆಯಲ್ಪಟ್ಟ ಸಾತ್ಯಕಿಯು ತತ್ಕ್ಷಣದಲ್ಲಿ ಅನುವಿನ್ದನ ತಲೆಯನ್ನು ಕತ್ತರಿಸಿದನು. ಆನಂತರ ವಿನ್ದನು ಸಾತ್ಯಕಿಯನ್ನು ಕುರಿತು ಯುದ್ಧಮಾಡಿದನು. ಇಬ್ಬರೂ ಕೂಡಾ ಪರಸ್ಪರ ರಥಹೀನರನ್ನಾಗಿ ಮಾಡಿಕೊಂಡರು.

 

ತತಶ್ಚ ಚರ್ಮ್ಮಾಸಿಧರೌ ಪ್ರಚೇರತುಃ ಶ್ಯೇನೌ ಯಥಾSಕಾಶತಳೇ ಕೃತಶ್ರಮೌ ।

ನಿಕೃತ್ಯ ಚಾನ್ಯೋನ್ಯಮುಭೌ ಚ ಚರ್ಮ್ಮಣೀ ವರಾಸಿಪಾಣೀ ಯುಗಪತ್ ಸಮೀಯತುಃ ॥೨೭.೧೯॥

 

ತದನಂತರ ಅವರಿಬ್ಬರೂ ಕೂಡಾ ಕತ್ತಿ-ಗುರಾಣಿಗಳನ್ನು ಧರಿಸಿ, ಹೇಗೆ ಆಕಾಶದಲ್ಲಿ ಮಾಂಸಕ್ಕಾಗಿ ಎರಡು ಗಿಡುಗಗಳು ಕಚ್ಚಾಡುತ್ತವೋ ಹಾಗೆ ತಿರುಗಿದರು. ಪರಸ್ಪರವಾಗಿ ಗುರಾಣಿಗಳನ್ನೂ ಕತ್ತರಿಸಿಕೊಂಡ ಅವರು, ಕೇವಲ ಕತ್ತಿಯುಳ್ಳವರಾಗಿ ಒಟ್ಟಿಗೇ ಮುಂದೆ ಬಂದರು.

 

ತತ್ರಾಪಹಸ್ತೇನ ಶಿರಃ ಸಕುಣ್ಡಲಂ ಜಹಾರ ವಿನ್ದಸ್ಯ ಮೃಧೇ ಸ ಸಾತ್ಯಕಿಃ ।

ನಿಹತ್ಯ ತಂ ಬನ್ಧುಜನೈಃ ಸುಪೂಜಿತೋ ಜಗಾಮ ಶತ್ರೂನಪರಾನ್ ಪ್ರಕಮ್ಪಯನ್ ॥೨೭.೨೦॥

 

ಸಾತ್ಯಕಿ ತನ್ನ ಕೈಯಿಂದ ವಿನ್ದನ ತಲೆಯನ್ನು ಹಿಡಿದು, ಕುಂಡಲದಿಂದ ಸಹಿತವಾಗಿರುವ ಅವನ ಕತ್ತನ್ನು ಕತ್ತರಿಸಿದನು. ಈರೀತಿಯಾಗಿ ವಿನ್ದಾವಿನ್ದರನ್ನು ಕೊಂದು, ಅಲ್ಲಿರುವ ಬಂಧುಗಳಿಂದ ಸತ್ಕೃತನಾದ ಸಾತ್ಯಕಿಯು, ಉಳಿದ ಶತ್ರುಗಳನ್ನು ನಡುಗಿಸುತ್ತ, ಅವರತ್ತ ನಡೆದನು.

 

ಕೃಪಮಾಯಾನ್ತಮೀಕ್ಷ್ಯೈವ ತಪಸಾ ಮಾಂ ಪ್ರಪೀಡಯೇತ್ ।

ಇತಿ ಮತ್ವಾ ಪಾರ್ಷತಸ್ತು ಭೀಮಂ ಶರಣಮೇಯಿವಾನ್ ॥೨೭.೨೧॥

 

ಇತ್ತ ಧೃಷ್ಟದ್ಯುಮ್ನನು ಬರುತ್ತಿರುವ ಕೃಪಾಚಾರ್ಯರನ್ನು ನೋಡಿ, ‘ಅವರು ತಮ್ಮ ತಪೋಬಲದಿಂದ ನನ್ನನ್ನು ಪೀಡಿಸಬಹುದು’ ಎಂದು ತಿಳಿದು, ಭೀಮಸೇನನನ್ನು ರಕ್ಷಕನಾಗಿ ಹೊಂದಿದನು.   

 

ಕರ್ಣ್ಣಂ ಸಮನ್ತಾತ್ ಪ್ರತಿಕಾಲಯನ್ತಂ ವರೂಥಿನೀಮಿನ್ದ್ರಸುತಃ ಸಮಭ್ಯಯಾತ್ ।

ಕ್ಷಣಾತ್ ತಮಾಜೌ ವಿರಥಂ ಚ ಚಕ್ರೇ ತತೋSಪಹಾರಂ ಸ ಚಕಾರ ಚಮ್ವಾಃ ॥೨೭.೨೨॥

 

ಇನ್ನೊಂದೆಡೆ ಎಲ್ಲಾ ಕಡೆಯಿಂದ ಸೇನೆಯನ್ನು ನಾಶಮಾಡುತ್ತಿರುವ ಕರ್ಣನನ್ನು ಅರ್ಜುನನು ಎದುರುಗೊಂಡು, ಕೆಲವೇ ಕ್ಷಣದಲ್ಲಿ ಅವನನ್ನು ರಥಹೀನನನ್ನಾಗಿ ಮಾಡಿದನು. ತದನಂತರ ಕರ್ಣ ಸೇನೆಯನ್ನು ಅಪಹಾರಮಾಡಿದನು. (ಹದಿನಾರನೇ ದಿನದ ಯುದ್ಧವನ್ನು ಕೊನೆಗೊಳಿಸಿದನು)

No comments:

Post a Comment