ಸ ನ್ಯಸ್ಯ ಕರ್ಮ್ಮಾಣಿ
ತದಾSಖಿಲಾನಿ
ಯೋಗಾರೂಢಃ ಪರಮಂ ವಾಸುದೇವಮ್ ।
ಸರ್ವೇಶ್ವರಂ
ನಿತ್ಯನಿರಸ್ತದೋಷಂ ದ್ಧ್ಯಾಯನ್ ಮುಕ್ತ್ವಾ ದೇಹಮಗಾತ್ ಸ್ವಧಾಮ ॥೨೬.೨೯೧ ॥
ಆಗ ದ್ರೋಣಾಚಾರ್ಯರು ಹುಟ್ಟಿದಂದಿನಿಂದ ಈತನಕ ಯಾವಯಾವ ಕರ್ಮಗಳನ್ನು
ಮಾಡಿದ್ದರೋ,
ಅದೆಲ್ಲವನ್ನೂ ಭಗವಂತನಲ್ಲರ್ಪಿಸಿ, ಧ್ಯಾನದಲ್ಲಿದ್ದು, ಎಲ್ಲರಿಗೂ ಒಡೆಯನಾದ, ದೋಷರಹಿತ
ಶ್ರೀಕೃಷ್ಣನನ್ನು ಧ್ಯಾನ ಮಾಡುತ್ತಾ, ದೇಹವನ್ನು ಬಿಟ್ಟು, ಸ್ವರ್ಗಲೋಕಕ್ಕೆ ತೆರಳಿದರು.
[‘ಪರಮಂ ಪುರುಷಂ
ವಿಷ್ಣುಂ ಜಗಾಮ ಮನಸಾ ಪರಮ್’ (೧೯೩.೫೨) ‘ಜಗಾಮ
ಪರಮಂ ಸ್ಥಾನಂ ದೇಹಂ ನ್ಯಸ್ಯ ರಥೋತ್ತಮೇ’(೫೫) - ಪರಮಾತ್ಮನನ್ನು ಸ್ಮರಣೆ ಮಾಡುತ್ತಾ
ದ್ರೋಣಾಚಾರ್ಯರು ದೇಹವನ್ನು ತ್ಯಜಿಸಿ
ತೆರಳಿದರು].
ತಂ ಕೇಶವಃ ಪಾಣ್ಡವಾ
ಗೌತಮಶ್ಚ ಯಾನ್ತಂ ಸ್ವಲೋಕಂ ದದೃಶುರ್ವಿಹಾಯಸಾ ।
ಧೃಷ್ಟದ್ಯುಮ್ನಃ
ಪಾಣ್ಡವೈರ್ವಾರ್ಯ್ಯಮಾಣೋSಪ್ಯಗಾತ್ ಖಡ್ಗಂ ಚರ್ಮ್ಮ ಚಾSದಾಯ ತತ್ರ ॥೨೬.೨೯೨ ॥
ಹೀಗೆ ಆಕಾಶಮಾರ್ಗವಾಗಿ ತಮ್ಮ ಲೋಕಕ್ಕೆ ಉತ್ಕ್ರಮಿಸುತ್ತಿರುವ
ದ್ರೋಣಾಚಾರ್ಯರನ್ನು ಶ್ರೀಕೃಷ್ಣನು, ಪಾಂಡವರು, ಕೃಪಾಚಾರ್ಯರು ನೋಡಿದರು. ಅದೇಸಮಯದಲ್ಲಿ ಪಾಂಡವರಿಂದ ತಡೆಯಲ್ಪಟ್ಟರೂ ಕೂಡಾ, ಧೃಷ್ಟದ್ಯುಮ್ನನು ಖಡ್ಗವನ್ನೂ,
ಗುರಾಣಿಯನ್ನೂ ಹಿಡಿದು ದ್ರೋಣಾಚಾರ್ಯರ ಸಮೀಪವನ್ನು ಕುರಿತು ತೆರಳಿದನು.
[‘ವಯಮೇವ ತದಾSದ್ರಾಕ್ಷ್ಮ ಪಞ್ಚ ಮಾನುಷಯೋನಯಃ
। ಯೋಗಯುಕ್ತಂ ಮಹಾತ್ಮಾನಂ ಗಚ್ಛಂತಂ ಪರಮಾಂ ಗತಿಮ್ । ಅಹಂ ಧನಂಜಯಃ ಪಾರ್ಥಃ ಕೃಪಃ ಶಾರದ್ವತೋ
ದ್ವಿಜಃ । ವಾಸುದೇವಶ್ಚ ವಾರ್ಷ್ಣೇಯೋ ಧರ್ಮಪುತ್ರಶ್ಚ ಪಾಂಡವಃ’ (೧೯೩-೫೯-೬೦). ‘ನಾನು, ಅರ್ಜುನ, ಕೃಪ, ವಾಸುದೇವ, ಧರ್ಮಪುತ್ರ- ದ್ರೋಣಾಚಾರ್ಯರು ಉತ್ಕ್ರಮಿಸುತ್ತಿರುವುದನ್ನು ನೋಡಿದೆವು’ ಎಂದು ಸಂಜಯ ಹೇಳುತ್ತಾನೆ. ಇಲ್ಲಿ
‘ಧನಂಜಯಃ ಪಾರ್ಥಃ - ಧರ್ಮಪುತ್ರಶ್ಚ ಪಾಂಡವಃ’ ಎನ್ನುವುದನ್ನು ‘ಪಂಚ ಪಾಂಡವರು’ ಎಂದು ತಿಳಿಯಬೇಕೆಂದು ಆಚಾರ್ಯರು ನಿರ್ಣಯ ನೀಡಿದ್ದಾರೆ]
ಛಿತ್ವಾSಸಿನಾ ತಸ್ಯ ಶಿರಃ ಪುನಶ್ಚ ರಥಂ
ಸ್ವಕೀಯಂ ತ್ವರಯಾ ಸಮಾಸ್ಥಿತಃ ।
ದೃಷ್ಟ್ವಾ ಕೃಪಸ್ತಂ
ಸುಭೃಶಂ ಭಯಾರ್ದ್ದಿತಃ ಸಮ್ಪ್ರಾದ್ರವದ್ ವಾಜಿನಮೇಕಮಾಸ್ಥಿತಃ ॥೨೬.೨೯೩ ॥
ಧೃಷ್ಟದ್ಯುಮ್ನನು ದ್ರೋಣಾಚಾರ್ಯರ
ತಲೆಯನ್ನು ಕತ್ತರಿಸಿ,
ಮತ್ತೆ ತನ್ನ ರಥವನ್ನು ವೇಗದಿಂದ ಏರಿದನು. ಈ ಘಟನೆಯನ್ನು ನೋಡಿದ ಕೃಪಾಚಾರ್ಯರು ಬಹಳ ಹೆದರಿ, ಒಂದು ಕುದುರೆಯನ್ನೇರಿ ಓಡಿಹೋದರು.
ಸಞ್ಛಿನ್ನೇ
ದ್ರೋಣಶಿರಸಿ ಗರ್ಹಯಾಮಾಸ ವಾಸವಿಃ ।
ಯುಧಿಷ್ಠಿರಂ ಚ
ಪಾಞ್ಚಾಲ್ಯಂ ಸಾತ್ಯಕಿಶ್ಚಾಪಿ ಕೋಪಿತಃ ॥೨೬.೨೯೪ ॥
ಈರೀತಿಯಾಗಿ ದ್ರೋಣನ
ತಲೆಯು ಕಡಿಯಲ್ಪಡಲು, ಅರ್ಜುನನು
ಯುಧಿಷ್ಠಿರನನ್ನೂ, ಧೃಷ್ಟದ್ಯುಮ್ನನನ್ನೂ ನಿಂದಿಸಿದ. ಸಾತ್ಯಕಿಯೂ ಕೂಡಾ ಸಿಡುಕಿದ.
[ಮಹಾಭಾರತದಲ್ಲಿ ಅರ್ಜುನನ ಮಾತನ್ನು ಈರೀತಿ ವಿವರಿಸಿದ್ದಾರೆ- ‘ಉಪಚೀರ್ಣೋ ಗುರುರ್ಮಿಥ್ಯಾ ಭವತಾ ರಾಜ್ಯಕಾರಣಾತ್ । ಧರ್ಮಜ್ಞೇನ ಸತಾ ನಾಮ ಸೋSಧರ್ಮಃ ಸುಮಹಾನ್ ಕೃತಃ(೧೯೭.೩೬)- ಧರ್ಮಜ್ಞನೂ, ಸತ್ಪುರುಷನೂ ಆಗಿದ್ದರೂ, ರಾಜ್ಯದ ಕಾರಣದಿಂದ ನೀನು ಗುರುವಿಗೆ ಸುಳ್ಳನ್ನು ಹೇಳಿ ಮೋಸಗೊಳಿಸಿ ಮಹಾ ಅಧರ್ಮವನ್ನು ಮಾಡಿರುವೆ. ‘ನ್ಯಸ್ತಶಸ್ತ್ರಮಧರ್ಮೇಣ ಪಾತಯಿತ್ವಾ ಗುರುಂ ಭವಾನ್ । ರಕ್ಷತ್ವಿದಾನೀಂ ಸಾಮಾತ್ಯೋ ಯದಿ ಶಕ್ತೋSಸಿ ಪಾರ್ಷತಮ್’ (೪೨) ಆಯುಧವನ್ನು ಕೆಳಗಿಟ್ಟ ದ್ರೋಣಾಚಾರ್ಯರನ್ನು ಅಧರ್ಮದಿಂದ ಕೊಲ್ಲಿಸಿದ ನೀನು ಶಕ್ಯನಾದರೆ ಅಮಾತ್ಯರೊಂದಿಗೆ ಈ ಧೃಷ್ಟದ್ಯುಮ್ನನನ್ನು ರಕ್ಷಿಸು. ‘ಗುರುಂ ಮೇ ಯತ್ರ ಪಾಞ್ಚಾಲ್ಯಃ ಕೇಶಪಕ್ಷೇ ಪರಾಮೃಶತ್ । ತನ್ನ ಜಾತು ಕ್ಷಮೇದ್ ದ್ರೌಣಿರ್ಜಾನನ್ ಪೌರುಷಮಾತ್ಮನಃ’ (೧೯೭.೩೫) ತನ್ನ ಪೌರುಷವು ಎಷ್ಟಿರುವುದೆಂದು ತಿಳಿದಿರುವ ದ್ರೌಣಿಯು ನನ್ನ ಗುರುವಿನ ಮುಡಿಯನ್ನು ಹಿಡಿದು ಕೊಂದಿರುವವನನ್ನು ಖಂಡಿತವಾಗಿಯೂ ಕ್ಷಮಿಸುವುದಿಲ್ಲ.
ಸಾತ್ಯಕಿ ಹೇಳುತ್ತಾನೆ:
‘ಅನಾರ್ಯಂ ತಾದೃಶಂ ಕೃತ್ವಾ ಪುನರೇವಂ ಗುರುಂ ಕ್ಷಿಪನ್ । ವಧ್ಯಸ್ತ್ವಂ ನ ತ್ವಯಾSರ್ಥೋSಸ್ತಿ ಮುಹೂರ್ತಮಪಿ ಜೀವತಾ’(೧೯೯.೧೪) -
ಆ ರೀತಿ ಮಾಡಬಾರದ್ದನ್ನು
ಮಾಡಿ ಪುನಃ ಗುರುವನ್ನು ನಿಂದಿಸುತ್ತಿರುವ ನೀನು ವಧ್ಯನು. ಮುಹೂರ್ತಕಾಲವೂ ನೀನು
ಜೀವಿಸಿರುವುದರಲ್ಲಿ ಅರ್ಥವಿಲ್ಲ ]
ಧೃಷ್ಟದ್ಯುಮ್ನಸ್ತು
ತಾವಾಹ ಕಥಂ ಭೂರಿಶ್ರವಾ ಹತಃ ।
ಇತಿ ತಂ ಸಾತ್ಯಕಿಃ
ಕ್ರುದ್ಧೋ ಗದಾಪಾಣಿಃ ಸಮಭ್ಯಯಾತ್ ॥೨೬.೨೯೫ ॥
ಆಗ ಧೃಷ್ಟದ್ಯುಮ್ನನು ‘ಭೂರೀಶ್ರವನು
ಹೇಗೆ ಸಂಹರಿಸಲ್ಪಟ್ಟಿರುತ್ತಾನೆ ’ ಎಂದು ಕೇಳುತ್ತಾನೆ. ಈರೀತಿಯಾಗಿ ಹೇಳಿದಾಗ ಮುನಿದ ಸಾತ್ಯಕಿಯು ಗದೆಯನ್ನು
ಹಿಡಿದು ಧೃಷ್ಟದ್ಯುಮ್ನನ ಮೇಲೇರಿ ಬಂದ.
[ಧೃಷ್ಟದ್ಯುಮ್ನನ
ಮಾತನ್ನು ಮಹಾಭಾರತದಲ್ಲಿ ಈರೀತಿ ವಿವರಿಸಿದ್ದಾರೆ- ‘ಪರಾನ್ ಕ್ಷಪನ್ತಿ ದೋಷೇಣ ಸ್ವೇಷು ದೋಷೇಷ್ವದೃಷ್ಟಯಃ
। ಯಃ ಸ ಭೂರಿಶ್ರವಾಶ್ಛಿನ್ನಭುಜಃ ಪ್ರಾಯಗತಸ್ತ್ವಯಾ ।
ವಾರ್ಯಮಾಣೇನ ಹಿ ಹತಸ್ತತಃ ಪಾಪತರಂ ನು ಕಿಮ್’ (೨೦೦.೩೦) – ‘ತಮ್ಮ ದೋಷದ ಬಗ್ಗೆ ಗೊತ್ತಿಲ್ಲದೇ
ಬೇರೊಬ್ಬರ ಬಗ್ಗೆ ಮಾತನಾಡುತ್ತಾರೆ. ಭುಜ ಕಳೆದುಕೊಂಡ ಭೂರೀಶ್ರವ ಪ್ರಾಯೋಪವೇಶ ಮಾಡುತ್ತಿದ್ದ
ಕಾಲದಲ್ಲಿ ಸಂಹರಿಸಲ್ಪಟ್ಟ. ಇದು ಪಾಪವೆಂದಾದರೆ ಅದೂ
ಪಾಪವೇ. ಅದು ಪಾಪ ಅಲ್ಲವೆಂದರೆ ಇದೂ ಪಾಪವಲ್ಲ’ ಎನ್ನುತ್ತಾನೆ ಧೃಷ್ಟದ್ಯುಮ್ನ.]
ಆಹ್ವಯಾಮಾಸ
ಪಾಞ್ಚಾಲ್ಯಸ್ತಂ ಧೃತಾಸಿರವಿಸ್ಮಯಃ ।
ತದಾ ಜಗ್ರಾಹ ಶೈನೇಯಂ
ಭೀಮಃ ಕೃಷ್ಣಪ್ರಚೋದಿತಃ ।
ಶಮಯಾಮಾಸ ಪಾರ್ತ್ಥಂ ಚ
ಪಾಞ್ಚಾಲ್ಯಸ್ನೇಹಯನ್ತ್ರಿತಃ ॥೨೬.೨೯೬ ॥
ಇದರಿಂದ ಧೃಷ್ಟದ್ಯುಮ್ನನಿಗೆ
ಯಾವುದೇ ಆಶ್ಚರ್ಯವಾಗಲಿಲ್ಲ. ಅವನು ನಿರ್ಭೀತಿಯಿಂದ ‘ಬಾ’ ಎಂದು ಸಾತ್ಯಕಿಯನ್ನು ಕರೆದ. ಆಗ
ಕೃಷ್ಣನಿಂದ ಪ್ರಚೋದಿಸಲ್ಪಟ್ಟ ಭೀಮಸೇನನು ಸಾತ್ಯಕಿಯನ್ನು ಹಿಡಿದುಕೊಂಡ. ಧೃಷ್ಟದ್ಯುಮ್ನನ ಮೇಲಿನ
ಪ್ರೀತಿಯಿಂದ ಅರ್ಜುನನನ್ನೂ ಸಮಾಧಾನಗೊಳಿಸಿದ.
ತೇ ವಾಸುದೇವೇನ ತದಾSನುಶಿಕ್ಷಿತಾಃ ಸ್ನೇಹಂ ಪುನಃ
ಪೂರ್ವವದಾಪುರುತ್ತಮಮ್ ।
ಯತ್ತಾಶ್ಚ ಯುದ್ಧಾಯ
ಸಮುದ್ಯತಾಶ್ಚ ತದಾSSಗಮದ್
ದ್ರೌಣಿರಪ್ಯಾತ್ತಧನ್ವಾ ॥೨೬.೨೯೭ ॥
ಆಗ ಶ್ರೀಕೃಷ್ಣನಿಂದ
ಚೆನ್ನಾಗಿ ಬುದ್ಧಿಹೇಳಲ್ಪಟ್ಟ ಅವರು ಮತ್ತೆ ಹಿಂದಿನಂತೆಯೇ ಮೈತ್ರಿಯನ್ನು ಬೆಳೆಸಿಕೊಂಡರು. ಆಯುಧವನ್ನು
ಧರಿಸಿ, ಯುದ್ಧಕ್ಕಾಗಿ
ಸಿದ್ದರಾದರು. ಆಗ ಬಿಲ್ಲನ್ನು ಹಿಡಿದು ಅಶ್ವತ್ಥಾಮನು ಬಂದ.
ಆಶ್ರುತ್ಯ ತಾತಂ ನಿಹತಂ
ಪ್ರತಿಜ್ಞಾಂ ಚಕಾರ ನಿಃಶೇಷರಿಪುಪ್ರಮಾಥನೇ ।
ನಾರಾಯಣಾಸ್ತ್ರಂ ವಿಸಸರ್ಜ್ಜ
ಕೋಪಾತ್ ತದಾ ಭೀತಾ ಭೀಮಮೃತೇ ಸಮಸ್ತಾಃ ॥೨೬.೨೯೮ ॥
ನನ್ನ ಅಪ್ಪ
ಸತ್ತಿದ್ದಾನೆ ಎಂದು ಕೇಳಿ ಅಶ್ವತ್ಥಾಮ, ಎಲ್ಲಾ ಶತ್ರುಗಳನ್ನು ಕೊಲ್ಲುವ ವಿಷಯದಲ್ಲಿ ಪ್ರತಿಜ್ಞೆಮಾಡಿದ ಮತ್ತು ಕೋಪದಿಂದ ನಾರಾಯಣಾಸ್ತ್ರವನ್ನು
ಬಿಟ್ಟ ಕೂಡಾ. ಆಗ ಭೀಮಸೇನನನ್ನು ಬಿಟ್ಟು ಇತರ ಎಲ್ಲರೂ ಭಯಗೊಂಡರು.
[‘ಪಾಣ್ಡುಸೈನ್ಯಮೃತೇ
ಭೀಮಂ ಸುಮಹದ್
ಭಯಮಾವಿಶತ್’ (ದ್ರೋಣಪರ್ವ ೨೦೦.೬೮)- ಭೀಮಸೇನನನ್ನು ಬಿಟ್ಟು ಎಲ್ಲರಿಗೂ
ಭಯವಾಯಿತು]
ಯುಧಿಷ್ಠಿರಃ ಪ್ರಾಹ
ವಿಷಣ್ಣಚೇತನಃ ಶೈನೇಯಪೂರ್ವಾಃ ಪ್ರತಿಯಾನ್ತು ಸರ್ವೇ ।
ಸಭ್ರಾತೃಕೋsಹಂ ದ್ರೌಣಿವರಾಸ್ತ್ರಮಗ್ನೋ
ಭವೇಯಮಿತ್ಯತ್ರ ಜಗಾದ ಕೇಶವಃ ॥೨೬.೨೯೯ ॥
ಯುಧಿಷ್ಠಿರನು ಬಹಳ
ಖತಿಗೊಂಡು, ‘ಸಾತ್ಯಕಿಯೇ ಮೊದಲಾದವರೆಲ್ಲರೂ ತೆರಳಿರಿ. ನಮಗಾಗಿ ನೀವು ಸಾಯುವುದು ಬೇಡ. ನಾನು
ನನ್ನ ತಮ್ಮಂದಿರೊಡಗೂಡಿ ನಾರಾಯಣಾಸ್ತ್ರಕ್ಕೆ ಎದೆಗೊಟ್ಟು ಸಾಯುತ್ತೇನೆ’ ಎಂದು ಹೇಳಿದ. ಆಗ
ಶ್ರೀಕೃಷ್ಣ ಹೇಳುತ್ತಾನೆ-
[ಯುಧಿಷ್ಠಿರನ ಈ
ಮಾತನ್ನು ಮಹಾಭಾರತದಲ್ಲಿ ಹೀಗೆ ವರ್ಣಿಸಿದ್ದಾರೆ- ‘ಸಙ್ಗ್ರಾಮಸ್ತು ನ ಕರ್ತವ್ಯಃ ಸರ್ವಸೈನ್ಯಾನ್
ಬ್ರವೀಮಿ ವಃ । ಅಹಂ ಹಿ ಸಹ ಸೋದರ್ಯೈಃ ಪ್ರವೇಕ್ಷ್ಯೇ ಹವ್ಯವಾಹನಮ್’ (೨೦೦.೩೦)]
ನಮಧ್ವಮಸ್ತ್ರಸ್ಯ ತತೋ
ವಿಮೋಕ್ಷ್ಯಥೇತ್ಯಥ ಪ್ರಣೇಮುಶ್ಚ ಧನಞ್ಜಯಾಧಿಕಾಃ ।
ಸರ್ವೇ ನ
ಭೀಮಸ್ತದಮುಷ್ಯ ಮೂರ್ಧ್ನಿ ಪಪಾತ ಸೋSಗ್ನಾವಿವ ಸಂಸ್ಥಿತೋSಗ್ನಿಃ ॥೨೬.೩೦೦ ॥
‘ಎಲ್ಲರೂ ಕೂಡಾ
ಅಸ್ತ್ರವನ್ನು ಕುರಿತು ನಮಸ್ಕರಿಸಿರಿ, ಆಗ ಅದರಿಂದ ಬಿಡುಗಡೆ ಹೊಂದುತ್ತೀರಿ’ ಎಂದನು. ಆಗ ಅರ್ಜುನನೇ ಮೊದಲಾದವರು
ನಮಸ್ಕರಿಸಿದರು. ಭೀಮನು ನಮಸ್ಕರಿಸಲಿಲ್ಲ. ಆಗ ಆ ಅಸ್ತ್ರವು ಭೀಮನ ತಲೆಯ ಮೇಲೆ
ಹೊಳೆಯಲಾರಂಭಿಸಿತು. ಭೀಮಸೇನನು ಬೆಂಕಿಯಲ್ಲಿ ಬೆಂಕಿ ನಿಂತಂತೆ ನಿಂತ.
[‘ಯೇSಞ್ಜಲಿಂ ಕುರ್ವತೇ ವೀರ ನಮನ್ತಿ
ಚ ವಿವಾಹನಾಃ । ತಾನ್ ನೈತದಸ್ತ್ರಂ ಸಙ್ಗ್ರಾಮೇ ನಿಹನಿಷ್ಯತಿ ಮಾನವಾನ್’ (ದ್ರೋಣಪರ್ವ ೨೦೦.೪೭)- ಯಾರು ನಮಸ್ಕಾರ
ಮಾಡುತ್ತಾರೋ ಅವರಿಗೆ ಆ ಅಸ್ತ್ರ ಏನೂ ಮಾಡುವುದಿಲ್ಲ. ‘ತೇಷು
ನಿಕ್ಷಿಪ್ತಶಸ್ತ್ರೇಷು ವಾಹನೇಭ್ಯಶ್ಚ್ಯುತೇಷು ಚ । ತದಸ್ತ್ರವೀರ್ಯಂ ವಿಪುಲಂ
ಭೀಮಮೂರ್ಧನ್ಯಥಾಪತತ್’
(೨೦೦.೭೦) ಅವರೆಲ್ಲರೂ ಅಸ್ತ್ರವನ್ನು ಕೆಳಗಿಡಲು, ಅದು ಎಲ್ಲರನ್ನೂ ಬಿಟ್ಟಿತು ಮತ್ತು ಭೀಮನ ಮೇಲೆ ನಿಂತಿತು. ‘ಅಗ್ನಾವಗ್ನಿರಿವ
ನ್ಯಸ್ತೋ ಜ್ವಾಲಾಮಾಲೀ ಸುದುರ್ದೃಶಃ’ (೨೦೧.೩) ಅವನು ಬೆಂಕಿಯಲ್ಲಿ ಬೆಂಕಿ ಇದ್ದಂತೆ ಕಾಣುತ್ತಿದ್ದ.]
No comments:
Post a Comment