ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 11, 2023

Mahabharata Tatparya Nirnaya Kannada 26-197-204

 

ತತೋ ದ್ರೌಣಿಮುಖಾಂ ಸೇನಾಂ ಸರ್ವಾಂ ಭೀಮೋSಭ್ಯವರ್ತ್ತತ ।

ಪಾರ್ತ್ಥಃ ಕರ್ಣ್ಣಮುಖಾಞ್ಛಿಷ್ಟಾನ್ ತತೋSಭಜ್ಯತ ತದ್ ಬಲಮ್ ॥೨೬.೧೯೭ ॥

 

ತದನಂತರ ಭೀಮಸೇನನು ಅಶ್ವತ್ಥಾಮನೇ ಪ್ರಧಾನನಾಗಿರುವ ಎಲ್ಲಾ ಸೇನೆಯನ್ನು ಕುರಿತು ಯುದ್ಧದಲ್ಲಿ ಪ್ರವೃತ್ತನಾದ. ಅರ್ಜುನನು ಕರ್ಣನೇ ಪ್ರಧಾನವಾಗಿರುವ ಸೇನೆಯನ್ನು ಕುರಿತು ಯುದ್ಧ ಮಾಡಲಾರಂಭಿಸಿದ. ಆಗ ಕೌರವರ ಬಲವು ಎರಡು ಸೀಳಾಗಿ ಹೋಯಿತು.

 

ಶೀರ್ಣ್ಣಾಂ ಸೇನಾಂ ಪ್ರವಿವಿಶುರ್ದ್ಧೃಷ್ಟದ್ಯುಮ್ನಪುರೋಗಮಾಃ ।

ತತಸ್ತಂ ದೇಶಮಾಪುಸ್ತೇ ಯತ್ರ ಭೀಮಧನಞ್ಜಯೌ ॥೨೬.೧೯೮ ॥

 

ಇದೇ ಸಮಯದಲ್ಲಿ ಧೃಷ್ಟದ್ಯುಮ್ನನೇ ಮೊದಲಾದವರು ಭೀಮಾರ್ಜುನರಿಂದ ಪರಾಜಯಹೊಂದಿ ಸೀಳಾಗಿರುವ ಕೌರವ ಸೇನೆಯನ್ನು ಪ್ರವೇಶಿಸಿ, ಭೀಮಾರ್ಜುನರಿದ್ದಲ್ಲಿಗೆ ಬಂದರು.

 

ತತ ಏಕೀಕೃತಾಃ ಸರ್ವೇ ಪಾಣ್ಡವಾಃ ಸಹಸೋಮಕಾಃ ।

ಪರಾನ್ ವಿದ್ರಾವಯಾಮಾಸುಸ್ತೇ ಭೀತಾಃ ಪ್ರಾದ್ರವನ್ ದಿಶಃ ॥೨೬.೧೯೯ ॥

 

ತದನಂತರ ಪಾಂಚಾಲರಿಂದ ಕೂಡಿರುವ ಎಲ್ಲಾ ಪಾಂಡವ ಪಕ್ಷದವರೂ ಕೂಡಾ ಶತ್ರುಗಳನ್ನು ಓಡಿಸಿದರು. ಆಗ ಕೌರವ ಪಾಳಯದವರು ಭಯಗೊಂಡು ಸಿಕ್ಕ-ಸಿಕ್ಕಲ್ಲಿ ಓಡಿದರು.  

 

ವಿದ್ರಾಪ್ಯಮಾಣಂ ಸೈನ್ಯಂ ತಂ ದೃಷ್ಟ್ವಾ ದುರ್ಯ್ಯೋಧನೋ ನೃಪಃ ।

ಜಯದ್ರಥವಧಾಚ್ಚೈವ ಕುಪಿತೋSಭ್ಯದ್ರವತ್ ಪರಾನ್ ॥೨೬.೨೦೦ ॥

 

ಓಡಿಸಲ್ಪಡುತ್ತಿರುವ ಸೈನ್ಯವನ್ನು ಕಂಡ, ಜಯದ್ರಥನ ಸಾವಿನಿಂದ ವಿಪರೀತ ಸಿಟ್ಟುಗೊಂಡಿರುವ ರಾಜ ದುರ್ಯೋಧನನು, ಶತ್ರುಗಳನ್ನು ಕುರಿತು ಯುದ್ಧಕ್ಕೆಂದು ತೆರಳಿದ.

 

ಸ ಭೀಮಸೇನಂ ಚ ಧನಞ್ಜಯಂ ಚ ಯುಧಿಷ್ಠಿರಂ ಮಾದ್ರವತೀಸುತೌ ಚ ।

ಧೃಷ್ಟದ್ಯುಮ್ನಂ ಸಾತ್ಯಕಿಂ ದ್ರೌಪದೇಯಾನ್ ಸರ್ವಾನೇಕಃ ಶರವರ್ಷೈರ್ವವರ್ಷ ॥೨೬.೨೦೧ ॥

 

ಆ ದುರ್ಯೋಧನನು ಭೀಮಸೇನನನ್ನು, ಅರ್ಜುನನನ್ನು, ಯುಧಿಷ್ಠಿರನನ್ನೂ, ನಕುಲ-ಸಹದೇವರನ್ನೂ, ಧೃಷ್ಟದ್ಯುಮ್ನ, ಸಾತ್ಯಕಿ, ಐದು ಜನ ದ್ರೌಪದೇಯರು, ಇವರೆಲ್ಲರನ್ನೂ ಒಬ್ಬನೇ ತನ್ನ ಶರವರ್ಷದಿಂದ ಪೀಡಿಸಿದನು.

 

ತೇ ವಿವ್ಯಧುಸ್ತಂ ಬಹುಭಿಃ ಶಿಲೀಮುಖೈಃ ಸ ತಾನನಾದೃತ್ಯ ಚಕರ್ತ್ತ ಬಾಣೈಃ ।

ಧನೂಂಷಿ ಚಿತ್ರಾಣಿ ಮಹಾರಥಾನಾಂ ಚಕಾರ ಸಙ್ಖೇ ವಿರಥೌ ಯಮೌ ಚ ॥೨೬.೨೦೨ ॥

 

ಅವರೆಲ್ಲರೂ ದುರ್ಯೋಧನನನ್ನು ಕುರಿತು, ಬಹಳ ಬಾಣಗಳಿಂದ ಹೊಡೆದರು. ದುರ್ಯೋಧನನಾದರೋ, ಯಾವುದನ್ನೂ ಲೆಕ್ಕಿಸದೇ, ಅವರನ್ನು ಕಡೆಗಣಿಸಿ, ಬಾಣಗಳಿಂದ ರಥಿಕರ ಬಹಳ ವಿಚಿತ್ರವಾಗಿರುವ ಬಿಲ್ಲುಗಳನ್ನು ಕತ್ತರಿಸಿದನು. ಯುದ್ಧದಲ್ಲಿ ನಕುಲ ಸಹದೇವರನ್ನು ರಥಹೀನರನ್ನಾಗಿ ಮಾಡಿದನು.

 

 

ಆದಾಯ ಚಾಪಾನಿ ಪರಾಣಿ ತೇSಪಿ  ದುರ್ಯ್ಯೋಧನಂ ವವೃಷುಃ ಸಾಯಕೌಘೈಃ ।

ಅಚಿನ್ತಯಿತ್ವೈವ ಶರಾನ್ತ್ಸ ಏಕೋ ನ್ಯವಾರಯತ್ ತಾನಖಿಲಾಂಶ್ಚ ಬಾಣೈಃ ॥೨೬.೨೦೩ ॥

 

ಅವರೆಲ್ಲರೂ ಕೂಡಾ, ಬೇರೆ ಬಿಲ್ಲುಗಳನ್ನು ತೆಗೆದುಕೊಂಡು ದುರ್ಯೋಧನನನ್ನು ಬಾಣಗಳ ಮಳೆಯಿಂದ ಪೀಡಿಸಿದರು. ದುರ್ಯೋಧನ ಒಬ್ಬನೇ ಅವರ ಬಾಣಗಳನ್ನು ಕಡೆಗಣಿಸಿ, ಅವರೆಲ್ಲರನ್ನೂ ಕೂಡಾ ಬಾಣಗಳಿಂದ ತಡೆದನು.

 

ತಂ ಗಾಹಮಾನಂ ದ್ವಿಷತಾಂ ಬಹೂನಾಂ ಮದ್ಧ್ಯೇ ದ್ರೋಣದ್ರೌಣಿಕೃಪಪ್ರಧಾನಾಃ ।

ದೃಷ್ಟ್ವಾ ಸರ್ವೇ ಜುಗುಪುಃ ಸ್ವಾತ್ತಚಾಪಾ ಅನಾರತಂ ಬಾಣಗಣಾನ್ ಸೃಜನ್ತಃ ॥೨೬.೨೦೪ ॥

 

ಹೀಗೆ, ಬಹಳ ಶತ್ರುಗಳ ನಡುವೆ ಸಿಕ್ಕಿಹಾಕಿಕೊಂಡಿರುವ ದುರ್ಯೋಧನನನ್ನು ನೋಡಿ, ದ್ರೋಣಾಚಾರ್ಯ, ಅಶ್ವತ್ಥಾಮ, ಕೃಪ, ಮೊದಲಾದ ಎಲ್ಲರೂ ಕೂಡಾ ಬಿಲ್ಲುಗಳನ್ನು ಹಿಡಿದುಕೊಂಡು, ಬಾಣಗಳನ್ನು ಎಸೆಯುತ್ತಾ ಬಂದು, ದುರ್ಯೋಧನನನ್ನು ರಕ್ಷಿಸಿದರು.

No comments:

Post a Comment