ಪರಾಜಿತಃ ಸಂಯತಿ ಸೂರ್ಯ್ಯಸೂನುಃ
ಸುತೇನ ಶಕ್ರಸ್ಯ ಸ ಧಾರ್ತ್ತರಾಷ್ಟ್ರಮ್ ।
ಜಗಾದ ಬಾಹುಂ
ಪ್ರತಿಗೃಹ್ಯ ಪಾರ್ತ್ಥೋ ಜಿಗಾಯ ಮಾಮನ್ಯಮನಸ್ಕಮಾಜೌ ॥೨೭.೨೩॥
ಯುದ್ಧದಲ್ಲಿ ಅರ್ಜುನನಿಂದ ಸೋತ ಸೂರ್ಯನ ಮಗನಾದ ಕರ್ಣನು, ದುರ್ಯೋಧನನ ಕೈಯನ್ನು ಹಿಡಿದುಕೊಂಡು
ಹೇಳಿದ- ನನ್ನ ಮನಸ್ಸನ್ನು ಬೇರೆಲ್ಲೋ ನೆಟ್ಟಿರುವಾಗ ಅರ್ಜುನನು ನನ್ನನ್ನು ಯುದ್ಧದಲ್ಲಿ ಗೆದ್ದ.
ಕಾಮಂ ರಥೋ ಮೇ
ಧನುರಪ್ಯಭೇದ್ಯಂ ದತ್ತಂ ಭೃಗೂಣಾಮಧಿಪೇನ ದಿವ್ಯಮ್ ।
ಯನ್ತಾ ನ ತಾದೃಙ್ ಮಮ
ಯಾದೃಶೋ ಹರಿಃ ಶಲ್ಯೋ ಯದಿ ಸ್ಯಾತ್ ತ್ವದರಿಂ ನಿಹನ್ಯಾಮ್ ॥೨೭.೨೪॥
ಭಾರ್ಗವ ವಂಶದಲ್ಲಿ ಬಂದವರಲ್ಲಿಯೇ ಶ್ರೇಷ್ಠನಾಗಿರುವ ಪರಶುರಾಮನಿಂದ ನನಗಾಗಿ
ಅಲೌಕಿಕವಾದ ಧನುಸ್ಸು, ಒಳ್ಳೆಯ ರಥವೂ ಕೊಡಲ್ಪಟ್ಟಿದೆ. ಆದರೆ, ಯಾವರೀತಿ ಕೃಷ್ಣ ಅರ್ಜುನನಿಗೆ ಸಾರಥಿಯಾಗಿದ್ದು, ಎಲ್ಲವನ್ನೂ
ನೋಡಿಕೊಳ್ಳುತ್ತಾನೋ ಹಾಗೇ ನನಗೆ ಒಳ್ಳೆಯ ಸಾರಥಿ ಇಲ್ಲ. ಒಂದು ವೇಳೆ ಶಲ್ಯನು ನನಗೆ ಸಾರಥಿ ಆದರೆ ನಿನ್ನ
ಶತ್ರುವಾಗಿರುವ ಅರ್ಜುನನನ್ನು ನಿಶ್ಚಯವಾಗಿ ಕೊಲ್ಲುತ್ತೇನೆ.
[ ‘ಸಾರಥಿಸ್ತಸ್ಯ
ಗೋವಿಂದೋ ಮಮ ತಾದೃಙ್ ನ ವಿದ್ಯತೇ’ (೨೨.೫೬), ಅಯಂ ತು ಸದೃಶಃ ಶೌರೇಃ ಶಲ್ಯಃ ಸಮಿತಿಶೋಭನಃ । ಸಾರಥ್ಯಂ ಯದಿ ಮೇ ಕುರ್ಯಾದ್
ಧ್ರುವಸ್ತೇ ವಿಜಯೋ ಭವೇತ್ ’ (೬೨) ಶ್ರೀಕೃಷ್ಣನು
ಅರ್ಜುನನ ರಥದ ಕುದುರೆಗಳ ಕಡಿವಾಣಗಳನ್ನು ಹಿಡಿದಿದ್ದಾನೆ. ಈ ಶಲ್ಯನು ಕೃಷ್ಣನಿಗೆ
ಸದೃಶನಾಗಿದ್ದಾನೆ. ಒಂದುವೇಳೆ ಅವನು ನನ್ನ ಸಾರಥ್ಯವನ್ನು ಮಾಡಿದರೆ ವಿಜಯ ನಿಶ್ಚಯ]
ಇತೀರಿತೇ ಸೌತ್ಯಕೃತೇ ಸ
ಶಲ್ಯಂ ಪ್ರೋವಾಚ ಸ ಕ್ರುದ್ಧ ಇವಾಭವತ್ ತದಾ ।
ದುರ್ಯ್ಯೋಧನೋ ರಥಿನಃ
ಸಾರಥೇಸ್ತು ವ್ಯಾವರ್ಣ್ಣಯನ್ನುತ್ತಮತಾಮಶಾಮಯತ್ ॥೨೭.೨೫॥
ಈರೀತಿಯಾಗಿ ಕರ್ಣ ಹೇಳಲು, ದುರ್ಯೋಧನನು ಕರ್ಣನ ಸಾರಥಿಯಾಗುವಂತೆ ಶಲ್ಯನನ್ನು
ಕುರಿತು ಹೇಳಿದನು. ಆಗ ಶಲ್ಯನು ಮುನಿಸಿಕೊಂಡವನಂತೆ ಆದನು. ದುರ್ಯೋಧನನು ರಥಿಕನಿಗಿಂತಲೂ
ಸಾರಥಿಯ ಉತ್ತಮತ್ವವನ್ನು ಹೇಳುತ್ತಾ, ಶಲ್ಯನನ್ನು ಸಮಾಧಾನ ಮಾಡಿದನು.
ಬುದ್ಧ್ಯಾ ಬಲೇನ
ಜ್ಞಾನೇನ ಧೈರ್ಯ್ಯಾದ್ಯೈರಪಿ ಯೋSಧಿಕಃ ।
ರಥಿನಃ ಸಾರಥಿಃ ಸ
ಸ್ಯಾದರ್ಜ್ಜುನಸ್ಯ ಯಥಾ ಹರಿಃ ॥೨೭.೨೬॥
ಯಥಾ ಶಿವಸ್ಯ ಬ್ರಹ್ಮಾSಭೂದ್ ದಹತಸ್ತ್ರಿಪುರಂ ಪುರಾ ।
ಇತ್ಯಾದಿವಾಕ್ಯೈಃ
ಸಂಶಾನ್ತ ಇವ ಶಲ್ಯೋSಸ್ಯ ಸಾರಥಿಃ ॥೨೭.೨೭॥
ಸಹಜ ಬುದ್ಧಿಯಿಂದಲೂ, ಬಲದಿಂದಲೂ, ಜ್ಞಾನದಿಂದಲೂ,
ಧೈರ್ಯ ಮೊದಲಾದವುಗಳಿಂದಲೂ, ರಥಿಕನಿಗಿಂತ ಯಾರು ಶ್ರೇಷ್ಠನೋ, ಅವನು ಸಾರಥಿಯಾಗುತ್ತಾನೆ.
ಹೇಗೆ
ಅರ್ಜುನನಿಗಿಂತ ಅಧಿಕನಾದ ಕೃಷ್ಣ ಸಾರಥಿ ಆಗಿರುವನೋ, ಹೇಗೆ ಹಿಂದೆ ತ್ರಿಪುರಾಸುರರನ್ನು ಸುಡಲಿರುವ ಶಿವನಿಗೆ ಬ್ರಹ್ಮ ಸಾರಥಿಯಾದನೋ, ಅದೇ
ರೀತಿ ಕರ್ಣನಿಗಿಂತ ಸಾರಥಿಯಾಗಿ ನೀನು ಉತ್ತಮನು ಎಂಬಿತ್ಯಾದಿಯಾಗಿ ದುರ್ಯೋಧನನಿಂದ ಹೇಳಲ್ಪಟ್ಟ
ಶಲ್ಯ, ಸಮಾಧಾನಗೊಂಡನೋ ಎಂಬಂತೆ ಕರ್ಣನ ಸಾರಥಿಯಾದನು.
ಬಭೂವ ತೇನ ಸಹಿತಃ
ಸೇನಾಂ ವ್ಯೂಹ್ಯ ರವೇಃ ಸುತಃ ।
ಗಚ್ಛನ್ ಯುದ್ಧಾಯ ದರ್ಪ್ಪೇಣ
ಪ್ರಾಹ ಯೋ ಮೇರ್ಜ್ಜುನಂ ಪುಮಾನ್ ॥೨೭.೨೮॥
ದರ್ಶಯೇತ್ ತಸ್ಯ
ದಾಸ್ಯಾಮಿ ಪ್ರೀತೋ ವಿತ್ತಮನರ್ಗ್ಗಳಮ್ ।
ಇತಿ ಬ್ರುವನ್ತಂ ಬಹುಶಃ
ಪ್ರಾಹ ಶಲ್ಯಃ ಪ್ರಹಸ್ಯ ಚ ॥೨೭.೨೯॥
(ಯುದ್ಧದ ಹದಿನೇಳನೇ ದಿನ)ಶಲ್ಯನಿಂದ ಕೂಡಿಕೊಂಡ ಸೂರ್ಯಪುತ್ರ ಕರ್ಣನು ಸೇನೆಯನ್ನು
ಆಯಕಟ್ಟಿನಲ್ಲಿ ನಿಲ್ಲಿಸಿ ಯುದ್ಧಕ್ಕಾಗಿ ಹೋಗುತ್ತಾ, ಅತ್ಯಂತ ಜಂಬದಿಂದ ‘ಯಾವ ಪುರುಷನು ಅರ್ಜುನನನ್ನು ನನಗೆ ತೋರಿಸಿಕೊಡುವನೋ, ಅವನಿಗೆ ಪ್ರೀತನಾಗಿ ಅಮಿತ ಹಣವನ್ನು ಕೊಡುತ್ತೇನೆ’ ಎಂದು ಘೋಷಿಸಿದನು. ಈರೀತಿಯಾಗಿ ಬಹಳ ಸಲ ಕರ್ಣ
ಹೇಳಿದಾಗ ಶಲ್ಯ ನಕ್ಕು ಅವನನ್ನು ಕುರಿತು
ಹೇಳುತ್ತಾನೆ-
ನಿವಾತಕವಚಾ ಯೇನ ಹತಾ
ದಗ್ಧಂ ಚ ಖಾಣ್ಡವಮ್ ।
ಕೋ ನಾಮ ತಂ ಜಯೇನ್ಮರ್ತ್ತ್ಯೋ
ದೃಷ್ಟೋ ವೋSಪಿ ಸ ಗೋಗ್ರಹೇ ॥೨೭.೩೦॥
ಯಾರಿಂದ ನಿವಾತಕವಚರು ಕೊಲ್ಲಲ್ಪಟ್ಟರೋ, ಖಾಂಡವವನವು ಸುಡಲ್ಪಟ್ಟಿತೋ, ಅಂತಹ ಅರ್ಜುನನನ್ನು ಯಾವ ಮನುಷ್ಯ ಗೆದ್ದಾನು? ನಿಮಗೆ ಗೋಗ್ರಹಣದ
ಕಾಲದಲ್ಲಿ ಅರ್ಜುನನ ಪರಾಕ್ರಮವು ಕಾಣಲ್ಪಟ್ಟಿದೆ ತಾನೇ?
ಕಾಕಗೋಮಾಯುಧರ್ಮ್ಮಾ
ತ್ವಂ ಹಂಸಸಿಂಹೋಪಮಂ ರಣೇ ।
ಮಾ ಯಾಹಿ ಪಾರ್ತ್ಥಂ ಮಾ
ಯಾಹಿ ಹತೋSನೇನ
ಯಮಕ್ಷಯಮ್ ॥೨೭.೩೧॥
ನೀನೋ, ಕಾಗೆಯಂತೆ ಇರುವವನು. ನರಿಯಂತೆ ಇರುವವನು. ಇಂತಹ ನೀನು ಹಂಸದಂತೆ,
ಸಿಂಹದಂತೆ ಇರುವ ಅರ್ಜುನನನ್ನು ಕುರಿತು ಹೋಗಬೇಡ.
ಅವನಿಂದ ಕೊಲ್ಲಲ್ಪಟ್ಟು ಯಮನ ಮನೆಗೆ ಹೋಗಬೇಡ.
[ಕರ್ಣಪರ್ವದಲ್ಲಿ ಈ ಕುರಿತು ಕಥೆಯೊಂದನ್ನು ಹೇಳಿದ್ದಾರೆ. ಒಂದು ಕಾಗೆ ಇತ್ತು. ಆ ಕಾಗೆ
ಎಂಜಲು ಅನ್ನವನ್ನು ತಿಂದುಕೊಂಡು ನಾನು ಬಹಳ ಬಲಿಷ್ಠನಾಗಿದ್ದೇನೆ ಎಂದು ಬ್ರಮಿಸಿತ್ತು. ಅದು ಒಂದು
ಹಂಸವನ್ನು ಕಂಡು ಅದಕ್ಕೆ ಸವಾಲೊಡ್ಡಿತು. ಅದು ತನಗೆ ಎಲ್ಲಾ ರೀತಿಯ ಹಾರುವಿಕೆ ಗೊತ್ತು ಎಂದು
ಹೇಳಿ, ನಾನು ಸಮುದ್ರವನ್ನೇ ದಾಟಬಲ್ಲೆ ಎಂದು ಹಾರಿ ಮಧ್ಯದಲ್ಲಿ ಆಯಾಸಗೊಂಡು ಹಾರಲಾಗದೇ ನೀರಿಗೆ
ಬಿತ್ತು. ಆಗ ಹಂಸ ಆ ಕಾಗೆಯನ್ನು ತನ್ನ ಬೆನ್ನಿನ ಮೇಲೆ ಹೊತ್ತುತಂದು, ತೀರಕ್ಕೆ ಬಿಟ್ಟು, ‘ನಿನ್ನ ಮಿತಿಯನ್ನು ತಿಳಿಯದೇ ಎಂದೂ ಮಾತನಾಡಬೇಡ’
ಎಂದು ಬುದ್ಧಿ ಹೇಳಿತು. ಆ ರೀತಿಯ ಕಾಗೆಯಂತಿರುವವನು ನೀನು. ಹಂಸದಿಂತಿರುವವನು ಅರ್ಜುನ. ಅದರಿಂದಾಗಿ
ನಿಮ್ಮಿಬ್ಬರ ನಡುವಿನ ಅಂತರ ನಿನಗೆ ಗೊತ್ತಿರಬೇಕು ಎಂದು ಶಲ್ಯ ಹೇಳುತ್ತಾನೆ. ಕರ್ಣಪರ್ವದಲ್ಲಿ(ಅಧ್ಯಾಯ ೩೫) ಈ
ಕಥೆಯನ್ನು ವಿಸ್ತಾರವಾಗಿ ಹೇಳಿದ್ದಾರೆ]
ಇತ್ಯುಕ್ತೇ ರವಿಜೋ
ಮದ್ರಾನ್ ನಿತರಾಂ ಪರ್ಯ್ಯಕುತ್ಸಯತ್ ।
ಶಲ್ಯೋSಪಿ ಸರ್ವದೇಶೇಷು ನೀಚಮದ್ಧ್ಯೋತ್ತಮಾ
ನರಾಃ ।
ಸನ್ತೀತ್ಯುಕ್ತ್ವಾSಸ್ಯ ಸಾರಥ್ಯಂ ಚಕ್ರೇ ಪಾರ್ತ್ಥಹಿತೇಪ್ಸಯಾ ॥೨೭.೩೨॥
ಈರೀತಿಯಾಗಿ ಶಲ್ಯನು ಹೇಳಲು, ಕರ್ಣನು ಮದ್ರದೇಶದವರನ್ನು
ಚೆನ್ನಾಗಿ ಬೈದ. ಆಗ ಶಲ್ಯನು, ಎಲ್ಲಾ ದೇಶದಲ್ಲೂ ಕೂಡಾ ನೀಚ-ಅಧಮ-ಉತ್ತಮ ಜನರು
ಇರುತ್ತಾರೆ ಎಂದು ಹೇಳಿ, ಪಾಂಡವರಿಗೆ ಹಿತವಾಗಬೇಕು ಎನ್ನುವ ಇಚ್ಛೆಯಿಂದ
ಕರ್ಣನ ಸಾರಥ್ಯವನ್ನು ಮಾಡಿದನು.
No comments:
Post a Comment