ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, March 15, 2023

Mahabharata Tatparya Nirnaya Kannada 26-234-240

 

ಸ ತು ತಂ ವಿರಥೀಕೃತ್ಯ ಧನುಃ ಕಣ್ಠೇSವಸಜ್ಯ ಚ ।

ಕುತ್ಸಯಾಮಾಸ  ಬಹುಶಃ ಸ ತು ನಿರ್ವೇದಮಾಗಮತ್ ॥೨೬.೨೩೪ ॥

 

ಕರ್ಣನು ಸಹದೇವನನ್ನು ರಥಹೀನನನ್ನಾಗಿ ಮಾಡಿ, ಬಿಲ್ಲನ್ನು ಕೊರಳಿಗೆ ನೇತುಹಾಕಿ, ಅವನನ್ನು ಬಹಳವಾಗಿ ನಿಂದಿಸಿದನು. ಅದರಿಂದ ಸಹದೇವ ವೈರಾಗ್ಯವನ್ನೇ ಹೊಂದಿದನು.

[‘ವಿರಥಃ ಸಹದೇವಸ್ತು ಖಡ್ಗಂ ಚರ್ಮ ಸಮಾದದೇ’(೧೬೮.೬),  ವಾರ್ಯಮಾಣಸ್ತು ವಿಶಿಖೈಃ ಸಹದೇವೋ ರಣಂ ಜಹೌ’(೧೪) ‘ಅಥೈನಂ ಧನುಷೋSಗ್ರೇಣ ತುದನ್ ಭೂಯೋSಬ್ರವೀದ್ ವಚಃ ।  ಏಷೋSರ್ಜುನೋ ರಣೇ ತೂರ್ಣಂ ಯುಧ್ಯತೇ ಕುರುಭಿಃ ಸಹತತ್ರ ಗಚ್ಛಸ್ವ ಮಾದ್ರೇಯ ಗೃಹಂ ವಾ ಯದಿ ಮನ್ಯಸೇ’ (೧೭-೧೮)  । ‘ಸಹದೇವಸ್ತತೋ ರಾಜನ್ ವಿಮನಾಃ ಶರಪೀಡಿತಃಕರ್ಣವಾಕ್-ಶರತಪ್ತಶ್ಚ ಜೀವಿತಾನ್ನಿರವಿದ್ಯತ’ (೨೧) ।  - ನಿನಗೇಕೆ ಯುದ್ಧ ಎಂದು ಸಹದೇವನನ್ನು ಬಹಳ ಕೆಟ್ಟ ರೀತಿಯಲ್ಲಿ ಕರ್ಣ ಅವಹೇಳನೆ ಮಾಡಿದ. ಕರ್ಣನ ಮಾತಿನ ಬಾಣಗಳಿಂದ ಪರಿತಪಿಸಿದ ಸಹದೇವ, ವಿಮನಸ್ಕನಾಗಿ, ಜೀವನದಲ್ಲಿಯೇ ವೈರಾಗ್ಯವನ್ನು ಹೊಂದಿದಂತಾದ.]

 

ನ ಹನ್ತುಮೈಚ್ಛತ್ ತಂ ಕರ್ಣ್ಣಃ ಪೃಥಾಯೈ ಸ್ವಂ ವಚಃ ಸ್ಮರನ್ ।

ತಂ ವಿಜಿತ್ಯ ರಣೇ ಕರ್ಣ್ಣೋ ಜಘ್ನೇ ಪಾರ್ತ್ಥವರೂಥಿನೀಮ್ ॥೨೬.೨೩೫ ॥

 

ಕರ್ಣನು ಕುಂತಿಗೆ ಕೊಟ್ಟ ತನ್ನ ಮಾತನ್ನು(ಅರ್ಜುನನನ್ನು ಹೊರತು ಬೇರೆ ಮಕ್ಕಳನ್ನು ಸಂಹಾರ ಮಾಡುವುದಿಲ್ಲ ಎನ್ನುವ ಮಾತನ್ನು) ಸ್ಮರಣೆ ಮಾಡುತ್ತಾ, ಸಹದೇವನನ್ನು ಕೊಲ್ಲಲು ಬಯಸಲಿಲ್ಲ. ಹೀಗೆ ಕರ್ಣನು ಸಹದೇವನನ್ನು ಗೆದ್ದು, ಪಾಂಡವರ ಸೇನೆಯನ್ನು ಸಂಹರಿಸಿದ.

 

ತತೋ ದ್ರೌಣಿರ್ವಿವಿಧೈರ್ಬಾಣಸಙ್ಘೈರ್ಜ್ಜಘಾನ ಪಾರ್ತ್ಥಸ್ಯ ಚಮೂಂ ಸಮನ್ತತಃ ।

ಸಾ ಹನ್ಯಮಾನಾ ರಣಕೋವಿದೇನ ನ ಶಂ ಲೇಭೇ ಮೃತ್ಯುನಾSSರ್ತ್ತಾ ಪ್ರಜೇವ ॥೨೬.೨೩೬ ॥

 

ಇನ್ನೊಂದು ಭಾಗದಲ್ಲಿ ಅಶ್ವತ್ಥಾಮಾಚಾರ್ಯರು ವಿಧವಿಧವಾದ ಬಾಣಗಳಿಂದ ಪಾಂಡವರ ಸೇನೆಯನ್ನು ಎಲ್ಲಾ ಕಡೆಯಿಂದ ಸಂಹರಿಸಿದರು. ಯುದ್ಧದಲ್ಲಿ ಕುಶಲನಾದ ಅಶ್ವತ್ಥಾಮರಿಂದ ಪೀಡಿಸಲ್ಪಡುತ್ತಿರುವ ಆ ಸೇನೆಯು, ಯಮನಿಂದ ಪೀಡಿತವಾದ ಪ್ರಜೆಯಂತೆ ನಾಶವನ್ನು ಹೊಂದಿತು.  

 

ದೃಷ್ಟ್ವಾ ಸೇನಾಂ ದ್ರೌಣಿಬಲಾಭಿಭೂತಾಂ ತಮಾಹ್ವಯಾಮಸ ಘಟೋತ್ಕಚೋ ಯುಧೇ ।

ದ್ರೌಣಿಸ್ತಮಾಹಾSಲಮಲಂ ನ ವತ್ಸ ಪುತ್ರಸ್ತಾತಂ ಯೋಧಯಸ್ವಾದ್ಯ ಮಾಂ ತ್ವಮ್ ॥೨೬.೨೩೭ ॥

 

ಅಶ್ವತ್ಥಾಮನ ಬಲದಿಂದ ಕಂಗೆಟ್ಟ ಸೇನೆಯನ್ನು ಕಂಡು, ಘಟೋತ್ಕಚನು ಯುದ್ಧಕ್ಕಾಗಿ ಅವನನ್ನು ಆಹ್ವಾನ ಮಾಡಿದ. ಅಶ್ವತ್ಥಾಮನು ಘಟೋತ್ಕಚನನ್ನು ಕುರಿತು- ‘ಮಗನೇ, ಮಗನಾದ ನೀನು (ನೀನು ನನಗೆ ಮಗ ಇದ್ದ ಹಾಗೆ)  ತಂದೆಯಲ್ಲಿ ಯುದ್ಧ ಮಾಡಬಾರದು’ ಎಂದು ಹೇಳಿದನು.

[‘ಗಚ್ಛ ವತ್ಸ ಸಹಾನ್ಯೈಸ್ತ್ವಂ ಯುಧ್ಯಸ್ವಾಮರವಿಕ್ರಮ । ನಹಿ ಪುತ್ರೇಣ ಹೈಡಿಮ್ಬ ಪಿತಾ ನ್ಯಾಯ್ಯಃ ಪ್ರಬಾಧಿತುಮ್’ (ದ್ರೋಣಪರ್ವ ೧೫೭.೯೩)– ಮಗೂ,  ಹೊರಟುಹೋಗು,  ಬೇರೆ ಯಾರೊಡನೆಯಾದರೂ ಯುದ್ಧಮಾಡು. ತಂದೆ ಯುದ್ಧದಲ್ಲಿ ಮಗನನ್ನು ಬಾದಿಸುವುದು ನ್ಯಾಯವಲ್ಲ. (ಅಶ್ವತ್ಥಾಮರಿಗೆ ಭೀಮಾರ್ಜುನರು ಅತ್ಯಂತ ಆಪ್ತಮಿತ್ರರು. ಹೀಗಾಗಿ ಮಿತ್ರರ ಮಕ್ಕಳು ತನ್ನ ಮಕ್ಕಳೇ ಎನ್ನುವ ಆತ್ಮೀಯತೆಯಿಂದ ಅವರು ಹೀಗೆ  ಹೇಳಿದರು) ]

 

ಇತ್ಯುಕ್ತ ಊಚೇ ನ ಪಿತಾ ಮಮ ತ್ವಂ ಸಖಾ ಪಿತುರ್ಯ್ಯದ್ಯಪಿ ಶತ್ರುಸಂಶ್ರಯಾತ್ ।

ಅರಿಶ್ಚ ಮೇSಸೀತಿ ತಮಾಹ ಯದ್ಯರಿಂ ಮಾಂ ಮನ್ಯಸೇ ತದ್ವದಹಂ ಕರೋಮಿ ತೇ ॥೨೬.೨೩೮ ॥

 

ಈರೀತಿಯಾಗಿ ಹೇಳಲ್ಪಟ್ಟ ಘಟೋತ್ಕಚನು - ‘ನೀನು ನನ್ನ ಅಪ್ಪನೇ ಅಲ್ಲ. ವಸ್ತುತಃ ನೀನು ನನ್ನ ತಂದೆಯ ಗೆಳೆಯ. ಶತ್ರುಗಳನ್ನು ಆಶ್ರಯಿಸಿರುವುದರಿಂದ ನೀನು ನನ್ನ ಶತ್ರುವೇ ಆಗಿದ್ದೀಯ’ ಎಂದು ಕಟುವಾಗಿ ಹೇಳಿದನು. ಆಗ ಅಶ್ವತ್ಥಾಮರು – ‘ಒಂದು ವೇಳೆ ನನ್ನನ್ನು ಶತ್ರು ಎಂದು ನೀನು ತಿಳಿದುಕೊಳ್ಳುವುದಾದರೆ, ನಾನೂ ಹಾಗೇ ಮಾಡಬೇಕಾಗುತ್ತದೆ   ಎಂದರು.

[ಘಟೋತ್ಕಚನ ಮಾತನ್ನು ಮಹಾಭಾರತದಲ್ಲಿ ಹೀಗೆ ವರ್ಣಿಸಿದ್ದಾರೆ: ‘ಭೀಮಾತ್ ಖಲು ಸಮುತ್ಪನ್ನಃ ಕುರೂಣಾಂ ವಿಪುಲೇ ಕುಲೇ । ಪಾಂಡವಾನಾಮಹಂ ಪುತ್ರಃ ಸಮರೇಷ್ವನಿವರ್ತಿನಾಮ್ । ರಕ್ಷಸಾಮಧಿರಾಜೋSಹಂ ದಶಗ್ರೀವಸಮೋ ಬಲೇ । ತಿಷ್ಠತಿಷ್ಠ ನ ಮೇ ಜೀವನ್ ದ್ರೋಣಪುತ್ರ ಗಮಿಷ್ಯಸಿ’(ದ್ರೋಣಪರ್ವ ೧೫೭.೯೭-೯೮) - ನಾನು ಪ್ರಸಿದ್ಧ ಕುರುಕುಲದಲ್ಲಿ ಭೀಮಸೇನನಿಂದ ಹುಟ್ಟಿದವನಾಗಿದ್ದೇನೆ. ಯುದ್ಧದಿಂದ ಎಂದೂ ಪಲಾಯನ ಮಾಡದ ಪಾಂಡವರ ಮಗ ನಾನು. ಬಲದಲ್ಲಿ ದಶಗ್ರೀವನ ಸಮನಾಗಿರುವ ನಾನು, ರಾಕ್ಷಸರ ರಾಜ. ಎಲೋ ದ್ರೋಣಪುತ್ರನೇ, ನಿಲ್ಲು. ನನ್ನಿಂದ ನೀನು ಜೀವಂತ ಹೋಗುವುದಿಲ್ಲ]

 

ಇತ್ಯೂಚಿವಾಞ್ಛಕ್ರಧನುಪ್ರಕಾಶಂ ವಿಷ್ಫಾರ್ಯ್ಯೇ ಚಾಪಂ ಪ್ರಕಿರಞ್ಛರೌಘಾನ್ ।

ಅಭ್ಯಾಗಮದ್ ರಾಕ್ಷಸಮುಗ್ರವೇಗಃ ಸ್ವಸೇನಯಾ ಸೋSಪಿ ತಮಭ್ಯವರ್ತ್ತತ ॥೨೬.೨೩೯ ॥

 

ಈರೀತಿಯಾಗಿ ಹೇಳುತ್ತಾ ಅಶ್ವತ್ಥಾಮರು, ಕಾಮನ ಬಿಲ್ಲಿನಂತೆ ದೊಡ್ಡದಾಗಿರುವ ಬಿಲ್ಲನ್ನು ಹೆದೆಯೇರಿಸಿ, ಠೇಂಕಾರ ಮಾಡಿ, ಬಾಣಗಳ ಮಳೆಗರೆಯುತ್ತಾ, ಉಗ್ರವಾದ ವೇಗವುಳ್ಳವನಾಗಿ ಘಟೋತ್ಕಚನನ್ನು ಎದುರುಗೊಂಡರು. ಘಟೋತ್ಕಚನೂ ಕೂಡಾ ತನ್ನ ಸೇನೆಯೊಂದಿಗೆ ಅವರನ್ನು ಎದುರುಗೊಂಡ.

 

ಸ ರಕ್ಷಸಾಂ ಲಕ್ಷಸಮಾವೃತೋ ಬಲೀ ನೃಭಿಶ್ಚ ವೀರೈರ್ಬಹುಭಿಃ ಸುಶಿಕ್ಷಿತೈಃ ।

ಅಕ್ಷೋಹಿಣೀ ಮಾತ್ರಬಲೇನ ರಾಕ್ಷಸಃ ಸಙ್ಕ್ಷೋಭಯಾಮಾಸ  ಗುರೋಃ ಸುತಂ ಶರೈಃ  ॥೨೬.೨೪೦ ॥

 

ಲಕ್ಷ ರಾಕ್ಷಸರಿಂದ ಕೂಡಿರುವ, ಅತ್ಯಂತ ಶಿಕ್ಷಿತರೂ ಆಗಿರುವ ಮನುಷ್ಯರಿರುವ, ಒಂದು ಅಕ್ಷೋಹಿಣಿ ಬಲದಿಂದ ಕೂಡಿರುವ, ಬಲಿಷ್ಠನಾದ ಘಟೋತ್ಕಚನು, ಗುರುಪುತ್ರ ಅಶ್ವತ್ಥಾಮನನ್ನು ಬಾಣಗಳಿಂದ ಕಂಗೆಡಿಸಿದನು.

No comments:

Post a Comment