ಶಕ್ತಿಂ ತು ತದ್ರಥಗತಾಂ
ಪ್ರಸಮೀಕ್ಷ್ಯ ಕೃಷ್ಣಃ ಸಂಸ್ಥಾಪ್ಯ ಪಾರ್ತ್ಥಮಪಿ
ಸಾತ್ಯಕಿಮೇವ ಯೋದ್ಧುಮ್ ।
ದತ್ವಾ ಸ್ವಕೀಯರಥಮೇವ
ವಿರೋಚನಸ್ಯ ಪುತ್ರೇಣ ಸೋSದಿಶದಮುಷ್ಯ ಬಲಂ ಪ್ರದಾಯ ॥ ೨೬.೧೬೯ ॥
ಶ್ರೀಕೃಷ್ಣನು ಕರ್ಣನ
ರಥದಲ್ಲಿರುವ ಶಕ್ತಿಯಾಯುಧವನ್ನು ಕಂಡು, ಅರ್ಜುನನನ್ನು ತಡೆದು, ಸಾತ್ಯಕಿಗೆ ತನ್ನ ರಥವನ್ನು
ಕೊಟ್ಟು, ಅವನಿಗೆ ಕರ್ಣನೊಂದಿಗೆ ಯುದ್ಧ ಮಾಡುವ ಸಾಮರ್ಥ್ಯವನ್ನು
ಕೊಟ್ಟು, ಸೂರ್ಯನ ಮಗನಾದ ಕರ್ಣನೊಂದಿಗೆ ಯುದ್ಧಮಾಡಲು ಸಾತ್ಯಕಿಯನ್ನು
ಕಳುಹಿಸಿದನು.
ಶಿಷ್ಯಂ ತ್ವಶಕ್ತಮಿಹ
ಮೇ ಪ್ರತಿಯೋಧನಾಯ ಪಾರ್ತ್ಥೋ ಹ್ಯದಾದಿತಿ ಸ ಸಾತ್ಯಕಿಮೀಕ್ಷಮಾಣಃ ।
ಸಂಸ್ಪರ್ದ್ಧಯೈವ
ಯುಯುಧೇ ವಿರಥಂ ಚಕಾರ ತೇನೈವ ಸಾತ್ಯಕಿರಮುಂ ಹರಿಯಾನಸಂಸ್ಥಃ ॥೨೬.೧೭೦ ॥
‘ಅಶಕ್ತನಾಗಿರುವ ತನ್ನ
ಶಿಷ್ಯನಾದ ಸಾತ್ಯಕಿಯನ್ನು ಅರ್ಜುನನು ನನ್ನ ವಿರುದ್ಧ ಯುದ್ಧಕ್ಕೆಂದು ಕಳುಹಿಸಿದ್ದಾನೆ’ ಎಂದು
ಸಾತ್ಯಕಿಯನ್ನು ಕುರಿತು ಯೋಚನೆ ಮಾಡುತ್ತಾ, ಸ್ಪರ್ಧಾಮನೋಭಾವದಿಂದ ಕರ್ಣ ಯುದ್ಧಮಾಡಲು ತೊಡಗಿದ. ಹೀಗೆ ಸ್ಪರ್ಧಾಪೂರಕವಾಗಿ ಬಂದ
ಕರ್ಣನನ್ನು ಪರಮಾತ್ಮನ ರಥದಲ್ಲಿದ್ದ ಸಾತ್ಯಕಿಯು
ರಥಹೀನನನ್ನಾಗಿ ಮಾಡಿದ.
[‘ನಚ ತಾವತ್ ಕ್ಷಮಃ ಪಾರ್ಥ
ತವ ಕರ್ಣೇನ ಸಙ್ಗರಃ । ಪ್ರಜ್ವಲನ್ತಿ ಮಹೋಲ್ಕೇವ
ತಿಷ್ಠತ್ಯಸ್ಮಿನ್ ಹಿ ವಾಸವೀ । ತ್ವದರ್ಥಂ ಪೂಜ್ಯಮಾನೈಷಾ ರಕ್ಷ್ಯತೇ ಪರವೀರಹನ್’ (ದ್ರೋಣಪರ್ವ ೧೪೫.೧೭). ಓ ಪಾರ್ಥನೇ, ನಿನಗೆ ಕರ್ಣನೊಂದಿಗೆ ಯುದ್ಧವು
ಯೋಗ್ಯವಾದುದ್ದಲ್ಲ. ಅವನ ರಥದಲ್ಲಿ ಹೊಳೆಯುತ್ತಿರುವ ಶಕ್ತ್ಯಾಯುಧವಿದೆ. ನಿನಗಾಗಿ ಅವನು ಆ
ಆಯುಧವನ್ನಿಟ್ಟುಕೊಂಡಿದ್ದಾನೆ. ‘ಸ ಕೇಶವಸ್ಯಾನುಮತೇ ರಥಂ ದಾರುಕಸಂಯುತಮ್ । ಆರುರೋಹ ಶಿನೇಃ
ಪೌತ್ರೋ ಜ್ವಲನಾದಿತ್ಯಸನ್ನಿಭಮ್’ (೩೧)] ಆ
ಸಾತ್ಯಕಿಯು ಕೇಶವನ ಅನುಮತಿಯನ್ನು ಪಡೆದು, ದಾರುಕನಿಂದ ನಡೆಸಲ್ಪಡುವ ಶ್ರೀಕೃಷ್ಣನ
ರಥವನ್ನೇರಿದ.]
ನ ಕೇಶವರಥೇ ಕಶ್ಚಿತ್
ಸ್ಥಿತೋ ಯಾತಿ ಪರಾಜಯಮ್ ।
ಅತಶ್ಚ ಸಾತ್ಯಕಿರ್ನ್ನಾSಪ ಕರ್ಣ್ಣೇನಾತ್ರ ಪರಾಜಯಮ್ ॥೨೬.೧೭೧
॥
ಕೇಶವನ ರಥದಲ್ಲಿದ್ದು
ಯಾರೇ ಯುದ್ಧ ಮಾಡಿದರೂ ಕೂಡಾ ಅವರು ಸೋಲನ್ನು ಹೊಂದುವುದಿಲ್ಲ. ಆ ಕಾರಣದಿಂದಲೂ ಸಾತ್ಯಕಿಯು ಕರ್ಣನಿಂದ ಸೋಲನ್ನು
ಅನುಭವಿಸಲಿಲ್ಲ.
[ಕರ್ಣ ಭೀಮಸೇನನನ್ನು ಏಕೆ ತೂಬರ(ಸರಿಯಾಗಿ ಗಡ್ಡ-ಮೀಸೆ ಬಾರದವ) ಎಂದು ಬೈದ ಎನ್ನುವುದರ ಹಿನ್ನೆಲೆಯನ್ನು ವಿವರಿಸುತ್ತಾರೆ:]
ಶಸ್ತ್ರಸಙ್ಗ್ರಹಕಾಲೇ
ತು ಕುಮಾರಾಣಾಂ ವ್ರತಂ ಭವೇತ್ ।
ಇತ್ಯುಕ್ತಂ
ಜಾಮದಗ್ನ್ಯೇನ ಧನುರ್ವಿದ್ಯಾಪುರಾಕೃತಾ ॥೨೬.೧೭೨ ॥
ತಚ್ಛತ್ರುವಧರೂಪಂ ಚ
ಪೂರ್ವಾಸಿದ್ಧಂ ಚ ಗೂಹಿತಮ್ ।
ಅವಿರುದ್ಧಂ ಚ ಧರ್ಮ್ಮಸ್ಯ
ಕಾರ್ಯ್ಯಂ ರಾಮಸ್ಯ ತುಷ್ಟಿದಮ್ ॥೨೬.೧೭೩ ॥
ಅನುಪದ್ರವಂ ಚ
ಲೋಕಸ್ಯೇತ್ಯತೋ ಭೀಮೋ ವ್ರತಂ ತ್ವಿದಮ್ ।
ಚಕಾರ ತೂಬರೇತ್ಯುಕ್ತೇ
ಹನ್ಯಾಮಿತಿ ರಹಃ ಪ್ರಭುಃ ॥೨೬.೧೭೪ ॥
ಅನುಪದ್ರವಾಯ ಲೋಕಸ್ಯ
ಸುವ್ಯಞ್ಜಚ್ಛ್ ಮಶ್ರುಮಣ್ಡಲಃ ।
ಸುಶ್ಮಶ್ರುಂ ಮಾಂ ನ
ಕಶ್ಚಿದ್ಧಿ ತಥಾ ಬ್ರೂಯಾದಿತಿ ಸ್ಫುಟಮ್ ॥೨೬.೧೭೫ ॥
ಬಿಲ್ಗಾರಿಕೆಯ
ವಿದ್ಯೆಯನ್ನು ಆವಿಷ್ಕರಿಸಿ ಉಪದೇಶಿಸಿದ ಪರಶುರಾಮನಿಂದ – ‘ಶಸ್ತ್ರವನ್ನು ಅಧ್ಯಯನ ಮಾಡುವ
ಕಾಲದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ಒಂದು ವ್ರತವನ್ನು ಜೀವನಪರ್ಯಂತ ಮಾಡಿಕೊಂಡು
ಬರಬೇಕು’ ಎಂದು ಹೇಳಲ್ಪಟ್ಟಿದೆ.
ಪ್ರತಿಯೊಬ್ಬನೂ
ಮಾಡಲೇಬೇಕಾದ ಆ ವ್ರತವು ಶತ್ರುವಧಾರೂಪವಾಗಿರಬೇಕು. ಅದನ್ನು ಹಿಂದೆ ಸ್ವಯಂ ಅಥವಾ ಇತರ ಯಾರೂ
ಮಾಡಿರಬಾರದು. ಈ ಪ್ರತಿಜ್ಞೆ ಗುಪ್ತವಾಗಿರಬೇಕು ಮತ್ತು ಧರ್ಮಕ್ಕೆ ವಿರುದ್ಧವಾಗಿರಬಾರದು. ಈ
ವ್ರತದಿಂದ ಲೋಕಕ್ಕೆ ಉಪದ್ರವವಾಗಬಾರದು.
ಈ ಹಿನ್ನೆಲೆಯಲ್ಲಿ ಭೀಮಸೇನ
‘ಯಾರು ನನ್ನನ್ನು ತೂಬರ ಎಂದು ಕರೆಯುತ್ತಾರೋ, ಅವರನ್ನು ಕೊಲ್ಲುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದ.
ಚೆನ್ನಾಗಿ ಕಾಣಿಸುವ ಗಡ್ಡ-ಮೀಸೆಯುಳ್ಳ ತನ್ನನ್ನು ಯಾರೂ ತೂಬರ ಎಂದು ಹೇಳುವುದಿಲ್ಲ, ಇದರಿಂದ ಲೋಕಕ್ಕೂ ಯಾವುದೇ ಉಪದ್ರವವಿಲ್ಲ ಎಂದು ಭೀಮ ಏಕಾಂತದಲ್ಲಿ ಹೀಗೆ
ಪ್ರತಿಜ್ಞೆ ಮಾಡಿದ್ದ.
ತದರ್ಜ್ಜುನೋ ವಿಜಾನಾತಿ
ಸ್ನೇಹಾದ್ ಭೀಮೋದಿತಂ ರಹಃ ।
ಅರ್ಜ್ಜುನಸ್ಯಾಪಿ
ಗಾಣ್ಡೀವಂ ದೇಹಿತ್ಯುಕ್ತೋ ನಿಹನ್ಮ್ಯಹಮ್ ॥೨೬.೧೭೬ ॥
ಇತಿ ತಚ್ಚ ವಿಜಾನಾತಿ
ಭೀಮ ಏಕೋ ನ ಚಾಪರಃ ।
ಗಾಣ್ಡೀವಸ್ಯಾSಗಮಂ ಪೂರ್ವಂ ಜಾನಾತ್ಯೇವ ಹಿ
ನಾರದಾತ್ ॥೨೬.೧೭೭ ॥
ಭೀಮನ ಈ
ಪ್ರತಿಜ್ಞೆಯನ್ನು ಅರ್ಜುನನೊಬ್ಬನೇ ತಿಳಿದಿದ್ದ. ಭೀಮ ಸ್ನೇಹದಿಂದ ತಾನೇ ಅವನಿಗೆ ಇದನ್ನು ಹೇಳಿದ್ದ.
ಇನ್ನು ಅರ್ಜುನನ ಪ್ರತಿಜ್ಞೆ ‘ಗಾಣ್ಡೀವವನ್ನು ತ್ಯಜಿಸು ಅಥವಾ ಯಾರಿಗಾದರೂ ಕೊಡು’ ಎಂದು ಯಾರಾದರೂ
ಹೇಳಿದರೆ, ಅವನನ್ನು ಕೊಲ್ಲುತ್ತೇನೆ ಎನ್ನುವುದಾಗಿತ್ತು. ಇದನ್ನು ಭೀಮಸೇನನೊಬ್ಬನೇ ತಿಳಿದಿದ್ದ. (ಅರ್ಜುನನಿಗೆ
ಗಾಣ್ಡೀವ ದೊರೆತಿರುವುದು ಖಾಣ್ಡವವನ ದಹನದಲ್ಲಿ. ಆದರೆ ಅವನು ಪ್ರತಿಜ್ಞೆ ಮಾಡಿರುವುದು
ದ್ರೋಣಾಚಾರ್ಯರಲ್ಲಿ ಅಭ್ಯಾಸ ಮಾಡುವಾಗ. ಇಲ್ಲಿ ವ್ಯತ್ಯಾಸ ಆಯಿತಲ್ಲವೇ ಎಂದರೆ-) ಮುಂದೆ ಗಾಣ್ಡೀವ
ಬರುತ್ತದೇ ಎಂದು ಅರ್ಜುನ ನಾರದರಿಂದ ಮೊದಲೇ ತಿಳಿದಿದ್ದ. (ಅದರಿಂದಾಗಿ ಮುಂದೆ ಬರುವ ಗಾಣ್ಡೀವದ
ಕುರಿತಾಗಿ ಆಗಲೇ ಪ್ರತಿಜ್ಞೆ ಮಾಡಿದ್ದ).
ಪ್ರತಿಜ್ಞಾಂ
ಭೀಮಸೇನಸ್ಯ ಬ್ರುವತಃ ಫಲ್ಗುನೇ ರಹಃ ।
ದುರ್ಯ್ಯೋಧನಸ್ತು
ಶುಶ್ರಾವ ತಾಂ ಚ ಕರ್ಣ್ಣಾಯ ಸೋSಬ್ರವೀತ್ ॥೨೬.೧೭೮ ॥
ಭೀಮಸೇನ ತನ್ನ ಈ
ಪ್ರತಿಜ್ಞೆಯನ್ನು ಅರ್ಜುನನಿಗೆ ಹೇಳುತ್ತಿರುವಾಗ ದುರ್ಯೋಧನ ಅದನ್ನು ಕದ್ದು ಕೇಳಿದ್ದ ಮತ್ತು ಅವನು
ಅದನ್ನು ಕರ್ಣನಿಗೆ ಹೇಳಿದ್ದ.
ಅತೂಬರೋSಪಿ ತೇನಾಸೌ ತಸ್ಮಾತ್ ತೂಬರ
ಇತ್ಯಲಮ್ ।
ಉಕ್ತಃ ಪ್ರಕೋಪನಾಯೈವ
ತಸ್ಮಾದರ್ಜ್ಜುನಮಬ್ರವೀತ್ ॥೨೬.೧೭೯ ॥
ಜಾನಾಸಿ ಮತ್ಪ್ರತಿಜ್ಞಾಂ
ತ್ವಂ ತ್ವತ್ಪ್ರತಿಜ್ಞಾಮಹಂ ತಥಾ ।
ತತ್ರ ಹನ್ತವ್ಯತಾಂ
ಪ್ರಾಪ್ತೋ ಮಮ ವೈಕರ್ತ್ತನೋSತ್ರ ಹಿ ॥೨೬.೧೮೦ ॥
ಪ್ರತಿಜ್ಞಾತೋ
ವಧಶ್ಚಾಸ್ಯ ತ್ವಯಾSಪಿ
ಮದನುಜ್ಞಯಾ ।
ಅತಸ್ತ್ವಯಾ ಮಯಾ ವಾSಯಂ ಹನ್ತವ್ಯಃ ಸೂತನನ್ದನಃ ॥೨೬.೧೮೧
॥
ಆ ಕಾರಣದಿಂದ ತೂಬರನಲ್ಲದಿದ್ದರೂ
ಕೂಡಾ ಕೇವಲ ಕೆರಳಿಸಲು ಭೀಮಸೇನನನ್ನು ಕರ್ಣ ತೂಬರ ಎಂದು ಕರೆದಿದ್ದ.
ಆಗ ಭೀಮಸೇನ ಅರ್ಜುನನನ್ನು
ಕುರಿತು ಹೇಳುತ್ತಾನೆ- ‘ನನ್ನ ಪ್ರತಿಜ್ಞೆ ಏನು ಎನ್ನುವುದು ನಿನಗೆ ತಿಳಿದಿದೆ, ನಿನ್ನ ಪ್ರತಿಜ್ಞೆ ಏನು
ಎನ್ನುವುದೂ ನನಗೆ ಗೊತ್ತಿದೆ. ಈ ಸಂದರ್ಭದಲ್ಲಿ ಕರ್ಣನು ನನ್ನಿಂದ ಕೊಲ್ಲಲರ್ಹನಾಗಿದ್ದಾನೆ. ಇನ್ನು
ಸಭೆಯಲ್ಲಿ ನಾನು ಅನುಜ್ಞೆ ಕೊಟ್ಟಿದ್ದುದರಿಂದ ‘ಕರ್ಣನ ವಧೆ ಮಾಡುತ್ತೇನೆ’ ಎಂದು ನೀನು ಪ್ರತಿಜ್ಞೆ ಮಾಡಿರುವೆ. ಹೀಗಾಗಿ ಈಗ ನಮ್ಮಿಬ್ಬರಲ್ಲೊಬ್ಬನಿಂದ
ಕರ್ಣನು ಸಂಹರಿಸಲ್ಪಡಬೇಕು’.
ಇತ್ಯುಕ್ತೋ ವಾಸವಿಃ
ಪ್ರಾಹ ಹನ್ತವ್ಯೋSಯಂ
ಮಯೈವ ಹಿ ।
ತ್ವದೀಯೋSಹಂ ಯತಸ್ತೇನ ಮತ್ಕೃತಂ ತ್ವತ್ಕೃತಂ
ಭವೇತ್ ॥೨೬.೧೮೨ ॥
ನ ತ್ವತ್ಕೃತಂ ಮತ್ಕೃತಂ
ಸ್ಯಾದ್ ಗುರುರ್ಮ್ಮಮ ಯತೋ ಭವಾನ್ ।
ಅತೋ ಮಯೈವ ಹನ್ತವ್ಯ
ಇತ್ಯುಕ್ತ್ವಾ ಕರ್ಣ್ಣಮಬ್ರವೀತ್ ॥೨೬.೧೮೩ ॥
ಈರೀತಿಯಾಗಿ ಹೇಳಲ್ಪಟ್ಟ
ಅರ್ಜುನನು – ‘ಕರ್ಣನು ನನ್ನಿಂದಲೇ ಕೊಲ್ಲಲ್ಪಡಬೇಕಾದವನು. ನಾನು ಯಾವ ಕಾರಣದಿಂದ ನಿನ್ನವನೋ
ಹಾಗಾಗಿ ನಾನು ಮಾಡಿದರೆ ಅದು ನೀನು ಮಾಡಿದ ಹಾಗೇ. ಆದರೆ ನೀನು ಮಾಡಿದ್ದು ನಾನು ಮಾಡಿದ ಹಾಗೆ
ಆಗುವುದಿಲ್ಲ. ಯಾವ ಕಾರಣದಿಂದ ನೀನು ನನ್ನ ಗುರುವೋ. ಆ ಕಾರಣದಿಂದ ನಾನೇ ಅವನನ್ನು ಕೊಲ್ಲಬೇಕು’
ಎಂದು ಹೇಳಿ,
ಕರ್ಣನನ್ನು ಕುರಿತು ಅರ್ಜುನ ಮಾತನ್ನಾಡಿದ-
ರೂಕ್ಷಾ ವಾಚಃ
ಶ್ರಾವಿತೋSಯಂ
ಭೀಮಃ ಕೃಷ್ಣಸ್ಯ ಶೃಣ್ವತಃ ।
ಯಚ್ಛಾಭಿಮನ್ಯುರ್ಯ್ಯುಷ್ಮಾಭಿರೇಕಃ
ಸಮ್ಭೂಯ ಪಾತಿತಃ ॥೨೬.೧೮೪ ॥
ಅತಸ್ತ್ವಾಂ
ನಿಹನಿಷ್ಯಾಮಿ ತ್ವತ್ಪುತ್ರಂ ಚ ತವಾಗ್ರತಃ ।
ಇತ್ಯುಕ್ತೋSನ್ಯರಥಂ ಪ್ರಾಪ್ಯ ಕರ್ಣ್ಣ
ಆವೀಜ್ಜಯದ್ರಥಮ್ ॥೨೬.೧೮೫ ॥
‘ಕೃಷ್ಣ
ಕೇಳುತ್ತಿರುವಾಗಲೇ ಭೀಮಸೇನನಿಗೆ ಅತ್ಯಂತ ದುರ್ಭಾಷೆ ಬಳಸಿ ಬೈದೆಯಲ್ಲಾ, ಈಗ ನನ್ನ ಮಾತನ್ನು ಕೇಳು- ನೀವೆಲ್ಲರೂ ಒಟ್ಟು ಸೇರಿ ಒಂಟಿಯಾಗಿದ್ದ
ಅಭಿಮನ್ಯುವನ್ನು ಕೊಂದಿರಿ. ಅದರಿಂದಾಗಿ ನಿನ್ನ ಮಗನನ್ನು ನಿನ್ನ ಕಣ್ಣ ಮುಂದೆಯೇ ನಾನು
ಕೊಲ್ಲುತ್ತೇನೆ’. ಈರೀತಿಯಾಗಿ ಅರ್ಜುನ ಹೇಳಿದಾಗ, ಕರ್ಣ ಅಲ್ಲಿಂದ ಹೊರಟುಹೋದ ಮತ್ತು ಇನ್ನೊಂದು
ರಥವನ್ನೇರಿ ಜಯದ್ರಥನ ರಕ್ಷಣೆಯನ್ನು ಮಾತ್ರ ಬಯಸಿದ.
[ತಾತ್ಪರ್ಯ: ಗುರು
ಮಾಡುವ ಪುಣ್ಯದ ಕೆಲಸ ಅವರ ಶಿಷ್ಯರಿಗೆ ಬರುವುದಿಲ್ಲ. ಆದರೆ ಶಿಷ್ಯ ಏನು ಪುಣ್ಯಕಾರ್ಯ ಮಾಡುತ್ತಾನೆ, ಅದು ಗುರುಗಳಿಗೆ ತಲುಪುತ್ತದೆ.
ಇದು ಆಚಾರ್ಯರು ಕೊಟ್ಟ ಖಚಿತ ನಿರ್ಣಯ. ಗುರು ತನ್ನ ಶಿಷ್ಯರಿಗೆ ಕೊಡುವ ಜ್ಞಾನದಿಂದ ಯಾವ ಫಲವನ್ನು
ಪಡೆಯುತ್ತಾನೋ, ಆ ಫಲದ ಎರಡುಪಟ್ಟು ಫಲ ಗುರುಗಳ
ಗುರುವಿಗೆ ಹೋಗುತ್ತದೆ. ಉದಾಹರಣೆಗೆ: ಒಬ್ಬ ಗುರು
ಇದ್ದಾನೆ, ಅವನ ಶಿಷ್ಯ ತಾನು ಮಾಡುವ ಪಾಠದಿಂದ ಏನು ಪುಣ್ಯವನ್ನು ಪಡೆಯುತ್ತಾನೋ, ಆ ಪುಣ್ಯದ
ಎರಡುಪಟ್ಟು ಅವನ ಗುರುಗಳಿಗೆ ಹೋಗುತ್ತದೆ. ಅದರ ಎರಡುಪಟ್ಟು ಪುಣ್ಯ ಗುರುಗಳ ಗುರುಗಳಿಗೆ
ಹೋಗುತ್ತದೆ. ಅದರ ಎರಡುಪಟ್ಟು ಪುಣ್ಯ ಗುರುಗಳ ಗುರುಗಳ ಗುರುವಿಗೆ ಹೋಗುತ್ತದೆ. ಹೀಗೆ ಸಕಲ
ಜೀವಪ್ರಪಂಚದ ಸಮಗ್ರ ಜ್ಞಾನಪ್ರಸಾರದ ಪುಣ್ಯ ಬ್ರಹ್ಮದೇವರಿಗೆ ಹೋಗುತ್ತದೆ. ಇದು ಶಾಸ್ತ್ರದಲ್ಲಿ
ಹೇಳಿದ ಕರ್ಮನಿರ್ಣಯ. ಹೀಗಾಗಿ ಶಿಷ್ಯ ಪರಂಪರೆಯನ್ನು
ಬೆಳೆಸಬೇಕು ಎಂದು ಎಲ್ಲರೂ ಹಂಬಲಿಸುತ್ತಾರೆ.
ಮಹಾಭಾರತದಲ್ಲಿ ಭೀಮ ತಾನು ಮಾಡಿದ ಪ್ರತಿಜ್ಞೆಯ ಕುರಿತು ಅರ್ಜುನನಲ್ಲಿ ಮಾತನಾಡುವುದನ್ನು
ಹೀಗೆ ವರ್ಣಿಸಿದ್ದಾರೆ: ‘ಪುನಃಪುನಸ್ತೂಬರಕ
ಮೂಢ ಔದರಿಕೇತಿ ಚ । ಅಕೃತಾಸ್ತ್ರಕ ಮಾ ಯೋತ್ಸೀರ್ಬಾಲ
ಸಙ್ಗ್ರಾಮಕಾತರ ।
ಇತಿ ಮಾಮಬ್ರವೀತ್ ಕರ್ಣಃ ಪಶ್ಯತಸ್ತೇ ಧನಞ್ಜಯ । ಏವಂ ವಕ್ತಾ ಚ ಮೇ ವಧ್ಯಸ್ತೇನ ಚೋಕ್ತಸ್ತಥಾ
ಹ್ಯಹಮ್ । ಏತದ್ ವ್ರತಂ ಮಹಾಬಾಹೋ ತ್ವಯಾ ಸಹ ಕೃತಂ ಮಯಾ । ತಥೈತನ್ಮಮ ಕೌನ್ತೇಯ ಯಥಾ ತವ ನ ಸಂಶಯಃ
। ತದ್ವಧಾಯ ನರಶ್ರೇಷ್ಠ ಸ್ಮರೈತದ್ ವಚನಂ ಮಮ ।
ಯಥಾ ಭವತಿ ತತ್ ಸತ್ಯಂ ತಥಾ ಕುರು ಧನಞ್ಜಯ’ (೧೪೬.೩-೬) - ಧನಂಜಯನೇ, ನೋಡು, ನೀನು ಕೇಳುತ್ತಿರುವಾಗಲೇ ಕರ್ಣ ಕೆಟ್ಟ ಮಾತುಗಳನ್ನಾಡಿದ. ನನ್ನನ್ನು ತೂಬರಕ ಎಂದು
ಹೇಳಿದವರನ್ನು ನಾನು ಕೊಲ್ಲುತ್ತೇನೆ ಎಂದು ನಾನು ನಿನ್ನ ಜೊತೆಗೇ ಪ್ರತಿಜ್ಞೆ ಮಾಡಿದ್ದೇನೆ. ಇದು
ನನ್ನ ವ್ರತ. ಈಗ ನನ್ನನ್ನು ಹಾಗೆ ಬೈದ ಕರ್ಣ ನನ್ನಿಂದ ವಧ್ಯನಾಗಬೇಕು. ನನ್ನ ಮಾತನ್ನು
ನೆನಪಿಸಿಕೋ. ನನ್ನ ಪ್ರತಿಜ್ಞೆಯನ್ನು ಸತ್ಯಮಾಡುವುದು ನಿನ್ನ ಹೊಣೆ(ನನ್ನ ಪ್ರತಿಜ್ಞೆ ಸತ್ಯ
ಮಾಡಬೇಕು ಎಂದಾದರೆ ನೀನು ಪ್ರತಿಜ್ಞೆ ಬಿಡಬೇಕು). ಆಗ ಅರ್ಜುನ - ‘ನಾನು ಮತ್ತು ಕೇಶವನು ನೋಡುತ್ತಿರುವಾಗಲೇ ಭೀಮನನ್ನು ಕುರಿತು ಕರ್ಣ ಏನು ಹೇಳಿದ, ಅದು ಸತ್ಯವಾದದ್ದಲ್ಲ.
ಈ ಕರ್ಣನನ್ನು ನಾನು ಸಂಹಾರ ಮಾಡುತ್ತೇನೆ’ ಎಂದ. ಮಹಾಭಾರತದ ಈ ಭಾಗದಲ್ಲಿ ಹೇಗೆ ಇಬ್ಬರ
ಪ್ರತಿಜ್ಞೆ ಪೂರ್ಣವಾಗುತ್ತದೇ ಎಂದು ಹೇಳಿಲ್ಲವಾದರೂ ಕೂಡಾ, ಆಶ್ವಮೇದಿಕ
ಪರ್ವದಲ್ಲಿ ‘ದೊಡ್ಡವರು ಮಾಡಿರುವುದು ಚಿಕ್ಕವರಿಗೆ ಬರುವುದಿಲ್ಲ ಆದರೆ ಚಿಕ್ಕವರು ಮಾಡಿದ ಕರ್ಮ
ದೊಡ್ಡವರಿಗೆ ಬರುತ್ತದೆ’ ಎಂದು ಕೃಷ್ಣ ಹೇಳುವುದನ್ನು ನಾವು ಕಾಣಬಹುದು. ಈ ಎಲ್ಲಾ ಮಾತಿನ ಹಿಂದಿನ ತಾತ್ಪರ್ಯವನ್ನು
ಒಟ್ಟು ಸೇರಿಸಿ ಆಚಾರ್ಯರು ಮೇಲಿನ ನಿರ್ಣಯವನ್ನು ನೀಡಿದ್ದಾರೆ.]
No comments:
Post a Comment