ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 5, 2023

Mahabharata Tatparya Nirnaya Kannada 26-129-138

 

ದ್ರೋಣೋSಪಿ ದುರ್ಯ್ಯೋಧನದತ್ತಮನ್ಯಂ ರಥಂ ಸಮಾಸ್ಥಾಯ ಯುಧಿಷ್ಠಿರಂ ಯಯೌ ।

ಗೃಹೀತುಕಾಮಂ ನೃಪತಿಂ ಪ್ರಯಾನ್ತಂ ನ್ಯವಾರಯತ್ ಸಂಯತಿ ವಾಹಿನೀಪತಿಃ ॥ ೨೬.೧೨೯ ॥

 

ಭೀಮಸೇನನಿಂದಾಗಿ ನಷ್ಟವಾದ ರಥವುಳ್ಳವರಾದ ದ್ರೋಣಾಚಾರ್ಯರು ದುರ್ಯೋಧನನಿಂದ ಕೊಡಲ್ಪಟ್ಟ   ಇನ್ನೊಂದು ರಥವನ್ನೇರಿ, ಯುಧಿಷ್ಠಿರನನ್ನು ಕುರಿತು ತೆರಳಿದರು. ಧರ್ಮರಾಜನನ್ನು ಹಿಡಿಯಬೇಕೆಂದು ಬಯಸಿ ಬರುತ್ತಿರುವ ದ್ರೋಣಾಚಾರ್ಯರನ್ನು ಧೃಷ್ಟದ್ಯುಮ್ನನು ಯುದ್ಧದಲ್ಲಿ ತಡೆದನು.

 

ವಿದಾರಿತಾಂ ದ್ರೋಣಶರೈಃ ಸ್ವಸೇನಾಂ ಸಂಸ್ಥಾಪ್ಯ ಭೂಯೋ ದ್ರುಪದಾತ್ಮಜಃ ಶರೈಃ ।

ದ್ರೋಣಂ ನಿವಾರ್ಯ್ಯೈವ ಚಮೂಂ ಪರೇಷಾಂ ವಿದ್ರಾವಯಮಾಸ ಚ ತಸ್ಯ ಪಶ್ಯತಃ ॥ ೨೬.೧೩೦ ॥

 

ದ್ರೋಣಾಚಾರ್ಯರ ಬಾಣಗಳಿಂದ ಓಡಿಸಲ್ಪಡುತ್ತಿರುವ ತಮ್ಮ ಸೇನೆಯನ್ನು ಮರುಸ್ಥಾಪಿಸಿದ ಧೃಷ್ಟದ್ಯುಮ್ನ, ದ್ರೋಣಾಚಾರ್ಯರನ್ನು ತಡೆದು, ಅವರು ನೋಡುತ್ತಿರುವಾಗಲೇ ಕೌರವ ಸೇನೆಯನ್ನು ಓಡಿಸಿದನು.

 

ತಯೋರಭೂದ್ ಯುದ್ಧಮತೀವ ರೌದ್ರಂ ಜಯೈಷಿಣೋಃ ಪಾಣ್ಡವಧಾರ್ತ್ತರಾಷ್ಟ್ರಯೋಃ ।

ಅತ್ಯದ್ಭುತಂ ಸನ್ತತಬಾಣವರ್ಷಮನಾರತಂ ಸುಚಿರಂ ನಿರ್ವಿಶೇಷಮ್ ॥ ೨೬.೧೩೧ ॥

 

ದುರ್ಯೋಧನನಿಗೆ ಜಯವಾಗಬೇಕು ಎಂದು ಇಚ್ಛಿಸುವ ದ್ರೋಣಾಚಾರ್ಯರು ಹಾಗೂ ಪಾಂಡವರಿಗೆ ಜಯವಾಗಬೇಕು ಎಂದು ಇಚ್ಛಿಸುವ ಧೃಷ್ಟದ್ಯುಮ್ನ, ಹೀಗೆ ಅವರಿಬ್ಬರ ನಡುವೆ ಅತ್ಯಂತ ಅದ್ಭುತವೂ, ಭಯಾನಕವೂ ಆದ,  ನಿರಂತರವಾದ ಬಾಣದ ಮಳೆಗಳಿಂದ ಕೂಡಿದ, ಧೀರ್ಘಕಾಲದ ತನಕ ಸಮನಾದ ಯುದ್ಧವಾಯಿತು.

 

ತತಃ ಪ್ರಾಯಾದ್ ಭೀಮಸೇನೋSಮಿತೌಜಾ ಮೃದ್ನಞ್ಛರೈಃ ಕೌರವರಾಜಸೇನಾಮ್ ।

ವಿನ್ದಾನುವಿನ್ದಪ್ರಮುಖಾ ಧಾರ್ತ್ತರಾಷ್ಟ್ರಾಸ್ತಮಾಸೇದುರ್ದ್ದ್ವಾದಶ ವೀರಮುಖ್ಯಾಃ ॥ ೨೬.೧೩೨ ॥

 

ಇತ್ತ ಎಣೆಯಿರದ ಪರಾಕ್ರಮವುಳ್ಳ ಭೀಮಸೇನನು ದುರ್ಯೋಧನನ ಸೇನೆಯನ್ನು ತನ್ನ ಬಾಣಗಳಿಂದ ಕತ್ತರಿಸುತ್ತಾ ಮುಂದೆ ತೆರಳಿದ. ಅಂತಹ ಭೀಮಸೇನನನ್ನು ವೀರರಲ್ಲೇ ಅಗ್ರೇಸರರಾದ,  ವಿನ್ದ-ಅನುವಿನ್ದರೇ ಮುಖಂಡರಾಗಿ ಉಳ್ಳ, ಹನ್ನೆರಡು ಮಂದಿ ಧೃತರಾಷ್ಟ್ರನ ಮಕ್ಕಳು ಯುದ್ಧಕ್ಕೆಂದು ಎದುರುಗೊಂಡರು.  

 

ವಿದ್ಧಃ ಶರೈಸ್ತೈರ್ಬಹುಭಿರ್ವೃಕೋದರಃ ಶಿರಾಂಸಿ ತೇಷಾಂ ಯುಗಪಚ್ಚಕರ್ತ್ತ  

ಹತೇಷು ತೇಷು ಪ್ರವರೇಷು ಧನ್ವಿನಾಂ ಸತ್ಯವ್ರತಃ ಪುರುಮಿತ್ರೋ ಜಯಶ್ಚ  ॥ ೨೬.೧೩೩ ॥

 

ವೃನ್ದಾರಕಃ ಪೌರವಶ್ಚೇತ್ಯಮಾತ್ಯಾಃ  ಸಮಾಸೇದುರ್ದ್ಧಾರ್ತ್ತರಾಷ್ಟ್ರಸ್ಯ ಭೀಮಮ್ ।

ಸ ತೈಃ ಪೃಷತ್ಕೈರವಕೀರ್ಯ್ಯಮಾಣಃ  ಶಿತಾನ್ ವಿಪಾಠಾನ್ ಯುಗಪತ್ ಸಮಾದಧೇ ॥ ೨೬.೧೩೪ ॥

 

ಜಹಾರ ತೈರೇವ ಶಿರಾಂಸಿ ತೇಷಾಂ ಹತೇಷು ತೇಷ್ವೇವ ಪರೇ ಪ್ರದುದ್ರುವುಃ ।

ಸ ಸಿಂಹವತ್ ಕ್ಷುದ್ರಮೃಗಾನ್ ಸಮನ್ತತೋ ವಿದ್ರಾಪ್ಯ ಶತ್ರೂನ್ ಹೃದಿಕಾತ್ಮಜಂ ರಣೇ ॥ ೨೬.೧೩೫ ॥

 

ಆ ಹನ್ನೆರಡೂ ಜನರಿಂದ ಬಾಣಗಳಿಂದ ಹೊಡೆಯಲ್ಪಟ್ಟ ವೃಕೋದರನು, ಆ ಎಲ್ಲಾ  ಧೃತರಾಷ್ಟ್ರನ ಮಕ್ಕಳ ಶಿರವನ್ನು ಏಕಕಾಲದಲ್ಲಿ ಬಹಳ ಬಾಣಗಳಿಂದ ಕತ್ತರಿಸಿದನು. ಬಿಲ್ಗಾರರಲ್ಲೇ ಅಗ್ರಗಣ್ಯರಾದ ಅವರೆಲ್ಲರೂ  ಸಾಯಲು, ಸತ್ಯವ್ರತ, ಪುರುಮಿತ್ರ, ಜಯ, ವೃನ್ದಾರಕ, ಪೌರವ ಎನ್ನುವ ಐದುಮಂದಿ ದುರ್ಯೋಧನನ ಅಮಾತ್ಯರು ಭೀಮಸೇನನನ್ನು ಹೊಂದಿದರು. ಅವರಿಂದ ಬಾಣಗಳಿಂದ ಹೊಡೆಯಲ್ಪಟ್ಟವನಾದ ಭೀಮಸೇನ ಚೂಪಾಗಿರುವ ಐದು ಬಾಣಗಳನ್ನು ಒಮ್ಮೆಲೇ ತೆಗೆದುಕೊಂಡ ಮತ್ತು ಆ ಬಾಣಗಳಿಂದ ಅವರ ತಲೆಗಳನ್ನು ಕತ್ತರಿಸಿ ಹಾಕಿದ. ಅವರೆಲ್ಲರೂ ಸಾಯಲು, ಅವರ ಬೆಂಗಾವಲು ಪಡೆಯವರು ಓಡಿಹೋದರು. ಹೀಗೆ ಭೀಮಸೇನನು ಸಿಂಹವು ಕ್ಷುದ್ರ ಪ್ರಾಣಿಗಳನ್ನು ಓಡಿಸುವಂತೆ  ಎಲ್ಲೆಡೆಯಿಂದ ಮುತ್ತಿರುವ ಶತ್ರುಗಳನ್ನು ಓಡಿಸಿ, ಯುದ್ಧದಲ್ಲಿ ಕೃತವರ್ಮನನ್ನು ಎದುರುಗೊಂಡ,  

 

ಅಭ್ಯಾಗಮತ್ ತೇನ ನಿವಾರಿತಃ ಶರೈಃ ಕ್ಷಣೇನ ಚಕ್ರೇ ವಿರಥಾಶ್ವಸೂತಮ್ ।

ಸ ಗಾಢವಿದ್ಧಸ್ತು ವೃಕೋದರೇಣ ರಣಂ ವಿಸೃಜ್ಯಾಪಯಯೌ ಕ್ಷಣೇನ ॥ ೨೬.೧೩೬ ॥

 

ಕೃತವರ್ಮನಿಂದ ಬಾಣಗಳಿಂದ ತಡೆಯಲ್ಪಟ್ಟ ಭೀಮಸೇನನು ಕ್ಷಣದಲ್ಲಿ ಅವನನ್ನು ಸೂತಹೀನನೂ, ರಥಹೀನನನ್ನಾಗಿ ಮಾಡಿದನು. ಹೀಗೆ ಕೃತವರ್ಮನು ಭೀಮಸೇನನಿಂದ ಚೆನ್ನಾಗಿ ಪೆಟ್ಟುತಿಂದು, ಯುದ್ಧವನ್ನು ಬಿಟ್ಟು ಓಡಿಹೋದನು.

 

ವಿಜಿತ್ಯ ಹಾರ್ದ್ದಿಕ್ಯಮಥಾSಶು ಭೀಮೋ ವಿದ್ರಾವಯಾಮಾಸ ವರೂಥಿನೀಂ ತಾಮ್ ।

ಸಮ್ಪ್ರೇಷಯನ್ ಸರ್ವನರಾಶ್ವಕುಞ್ಜರಾನ್ ಯಮಾಯ ಯಾತೋ ಹರಿಪಾರ್ತ್ಥಪಾರ್ಶ್ವಮ್ ॥ ೨೬.೧೩೭ ॥

 

ಹೀಗೆ ಕೃತವರ್ಮನನ್ನು ಸುಲಭವಾಗಿ ಗೆದ್ದ ಭೀಮಸೇನನು ಅವನ ಬೆಂಗಾವಲು ಪಡೆಯನ್ನು ಓಡಿಸಿದ. ಎಲ್ಲಾ ಮನುಷ್ಯರು, ಕುದುರೆ, ಆನೆ, ಮೊದಲಾದವುಗಳನ್ನು ಯಮನಿಗೆ ಕಾಣಿಕೆ ಎಂಬಂತೆ ಕಳುಹಿಸುತ್ತಾ ಭೀಮಸೇನ ಕೃಷ್ಣಾರ್ಜುನರ ಸಮೀಪಕ್ಕೆ ತೆರಳಿದ.

 

ದೃಷ್ಟ್ವೈವ ಕೃಷ್ಣವಿಜಯೌ ಪರಮಪ್ರಹೃಷ್ಟಸ್ತಾಭ್ಯಾಂ ನಿರೀಕ್ಷಿತ ಉತ ಪ್ರತಿಭಾಷಿತಶ್ಚ ।

ಸಙ್ಜ್ಞಾಂ ನೃಪಸ್ಯ ಸ ದದಾವಪಿ ಸಿಂಹನಾದಾನ್ ಶ್ರುತ್ವಾ ಪರಾಂ ಮುದಮವಾಪ ಸ ಚಾಗ್ರ್ಯಬುದ್ಧಿಃ ॥೨೬.೧೩೮ ॥

 

ಹೀಗೆ ಕೃಷ್ಣಾರ್ಜುನರನ್ನು ಕಂಡು, ಪ್ರಸನ್ನನಾಗಿ, ಅವರಿಂದ ಕಾಣಲ್ಪಟ್ಟವನಾಗಿ, ಅವರ ಜೊತೆಗೆ ಮಾತನ್ನಾಡಿ, ಸಿಂಹನಾದದ ಮೂಲಕ ಭೀಮಸೇನ ಯುಧಿಷ್ಠಿರನಿಗೆ ಸಂಕೇತವನ್ನು ನೀಡಿದ. ಶ್ರೇಷ್ಠ ಬುದ್ಧಿಯುಳ್ಳ ಧರ್ಮರಾಜನು ಭೀಮನ ಸಿಂಹನಾದವನ್ನು ಕೇಳಿ ಆನಂದವನ್ನು ಹೊಂದಿದ.

No comments:

Post a Comment