ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 19, 2023

Mahabharata Tatparya Nirnaya Kannada 26-312-319

 ಪುನಃ ಪ್ರಯೋಕ್ತುಮಸ್ತ್ರಂ ತಂ ಧಾರ್ತ್ತರಾಷ್ಟ್ರೋSಭ್ಯಚೋದಯತ್ ।

ದ್ರೌಣಿರ್ನ್ನ ಶಕ್ಯಮಿತ್ಯುಕ್ತ್ವಾ ಧೃಷ್ಟದ್ಯುಮ್ನಂ ಸಮಭ್ಯಯಾತ್ ॥೨೬.೩೧೨ ॥

 

ದುರ್ಯೋಧನನು ಅಶ್ವತ್ಥಾಮನ ಬಳಿ ಆ ನಾರಾಯಣಾಸ್ತ್ರವನ್ನು ಪುನಃ ಪ್ರಯೋಗಿಸುವಂತೆ ಹೇಳಿದ. ಆಗ ದ್ರೌಣಿ ಅದು ಶಕ್ಯವಲ್ಲವೆಂದು ಹೇಳಿ, ಧೃಷ್ಟದ್ಯುಮ್ನನನ್ನು ಕುರಿತು ತೆರಳಿದನು.

 

ಆಯಾನ್ತಮೀಕ್ಷ್ಯೈವ ಗುರೋಃ ಸುತಂ ತಂ ಧೃಷ್ಟದ್ಯುಮ್ನಂ ಸಾತ್ಯಕಿರನ್ವಯಾದ್ ರಣೇ ।

ಉಭೌ ಚ ತೌ ಸಾಯಕಾಭ್ಯಾಮವಿದ್ಧ್ಯನ್ನಿಪೇತತುಸ್ತೌ ಚ ವಿಮೂರ್ಚ್ಛಿತೌ ರಣೇ ॥೨೬.೩೧೩ ॥

 

ಬರುತ್ತಿರುವ ಅಶ್ವತ್ಥಾಮನನ್ನು ಕಂಡು, ಸಾತ್ಯಕಿಯು ಧೃಷ್ಟದ್ಯುಮ್ನನಿಗೆ ರಕ್ಷಣೆ ಕೊಡಲು ಹಿಂಬಾಲಿಸಿದನು. ಅವರಿಬ್ಬರೂ ಕೂಡಾ ಅಶ್ವತ್ಥಾಮನ ಬಾಣಗಳಿಂದ ಮೂರ್ಛೆಹೊಂದಿ ಬಿದ್ದರು.

 

ಭೀಮಸ್ಯಾಭ್ಯಾಗತಸ್ಯಾಶ್ವಾನ್ ದ್ರೌಣಿರ್ವ್ಯದ್ರಾವಯದ್ ರಣೇ ।

ಸಂಸ್ಥಾಪಯತಿ ತಾನ್ ಭೀಮೇ ದದರ್ಶ ದ್ರೌಣಿಮರ್ಜ್ಜುನಃ  ॥೨೬.೩೧೪ ॥

 

ತನ್ನ ಎದುರು ಬರುತ್ತಿರುವ ಭೀಮನ ಕುದುರೆಗಳನ್ನು ದ್ರೌಣಿಯು ಬಾಣಗಳಿಂದ ಓಡಿಸಿದ. ಭೀಮಸೇನ ಮುಂದೆ ಹೋಗಿ ಕುದುರೆಗಳನ್ನು ನಿಗ್ರಹಿಸುತ್ತಿರಲು, ಅರ್ಜುನನು ದ್ರೌಣಿಯನ್ನು ಹೊಂದಿದ.

 

ತತೋSರ್ಜ್ಜುನಸ್ತಂ ಪ್ರತಿಯೋದ್ಧುಮಾಗಮದ್ ರೂಕ್ಷಾ ವಾಚಃ ಶ್ರಾವಯನ್ ಕ್ರುದ್ಧರೂಪಃ ।

ತತ್ರಾSಗ್ನೇಯಂ ದ್ರೌಣಿರಮುಞ್ಚದಸ್ತ್ರಂ ತೇನ ವ್ಯಾಪ್ತಾ ಪೃತನಾ ಪಾಣ್ಡವಾನಾಮ್ ॥೨೬.೩೧೫ ॥

 

ತದನಂತರ ಅರ್ಜುನನು ಕ್ರೂರವಾದ ಮಾತುಗಳನ್ನಾಡುತ್ತಾ ಅಶ್ವತ್ಥಾಮನನ್ನು ಹೊಂದಿದನು. ಆಗ ಅಶ್ವತ್ಥಾಮ ಕ್ರುದ್ಧನಾಗಿ  ಅಗ್ನಿದೇವತಾಕವಾದ ಅಸ್ತ್ರವನ್ನು(ಆಗ್ನೇಯಾಸ್ತ್ರವನ್ನು) ಬಿಟ್ಟನು. ಅದರಿಂದ ಪಾಂಡವರ ಸೇನೆಯು ವ್ಯಾಪ್ತವಾಯಿತು.

[ತಸ್ಮಾದನರ್ಹಮಶ್ಲೀಲಮಪ್ರಿಯಂ ದ್ರೌಣಿಮುಕ್ತವಾನ್ । ಮಾನ್ಯಮಾಚಾರ್ಯತನಯಂ ರೂಕ್ಷಂ ಕಾಪುರುಷಂ ಯಥಾ’ (೨೦೨.೧೩)- ಅನರ್ಹರೀತಿಯಲ್ಲಿ, ಅಶ್ಲೀಲವಾದ ಮತ್ತು ಅಪ್ರಿಯವಾದ ಮಾತುಗಳನ್ನು ಅರ್ಜುನನು  ದ್ರೌಣಿಗೆ ಹೇಳಿದನು.]

 

ಅಕ್ಷೋಹಿಣೀ ನಿಹತಾ ಚಾತ್ರ ಸೇನಾ ಪಾರ್ತ್ಥಂ ಸಯಾನಂ ಹರಿರುಜ್ಜಹಾರ ।

ಜೀವನ್ತಮಾಲೋಕ್ಯ ಸುರೇನ್ದ್ರನನ್ದನಂ ದ್ರೌಣಿಃ ಕೋಪಾತ್ ಕಾರ್ಮ್ಮುಕಂ ಚಾಪಹಾಯ ।

ಯಯೌ ತಮಾಗತ್ಯ ಜಗಾದ ಕೃಷ್ಣೋ ವೇದಾನ್ತಕೃತ್  ಪೂರ್ಣ್ಣಷಾಡ್ಗುಣ್ಯದೇಹಃ ॥೨೬.೩೧೬ ॥

 

ಆ  ಅಸ್ತ್ರದಿಂದ ಯುದ್ಧದಲ್ಲಿ ಒಂದು ಅಕ್ಷೋಹಿಣೀ ಸೇನೆಯು ಸತ್ತಿತು. ಶ್ರೀಕೃಷ್ಣಪರಮಾತ್ಮನು ಅರ್ಜುನನನ್ನು ರಥ ಸಹಿತವಾಗಿ ಮೇಲೆತ್ತಿ, ಆ ವಲಯದಿಂದ ಬೇರೆಡೆಗೆ ಒಯ್ದನು. ದ್ರೌಣಿಯು ಇನ್ನೂ ಅರ್ಜುನ ಬದುಕಿರುವುದನ್ನು ನೋಡಿ, ಕೋಪದಿಂದ ಬಿಲ್ಲನ್ನು ಎಸೆದು, ಯುದ್ಧಭೂಮಿಯಿಂದ ಹೊರನಡೆದನು. ಆಗ ವೇದಗಳ ನಿರ್ಣಯ ಮಾಡತಕ್ಕ, ಷಡ್ಗುಣವೇ ಮೈವೆತ್ತು ಬಂದಿರುವ ವೇದವ್ಯಾಸರು ಅಶ್ವತ್ಥಾಮನಲ್ಲಿಗೆ ಬಂದು ಹೀಗೆ  ಹೇಳಿದರು-

 

ಮಾ ಯಾಹಿ ಸಾಕ್ಷಾದ್ ಗಿರಿಶಃ ಸುರಾಣಾಂ ಕಾರ್ಯ್ಯಾಯ ಭೂಮೌ ಬಲವಾನಜಾಯಥಾಃ ।

ಮಹಚ್ಚ ಕಾರ್ಯ್ಯಂ ಪುನರಸ್ತಿ ದೃಷ್ಟಂ ತವಾSಶು ತಚ್ಚ ಪ್ರತಿಪಾದಯೇತಿ ॥೨೬.೩೧೭ ॥

 

‘ಯುದ್ಧವನ್ನು ಬಿಟ್ಟು ಹೋಗಬೇಡ. ನೀನು ಸಾಕ್ಷಾತ್ ರುದ್ರನೇ ಆಗಿದ್ದೀಯ. ದೇವತೆಗಳ ಕೆಲಸಕ್ಕಾಗಿ ಭೂಮಿಯಲ್ಲಿ ಹುಟ್ಟಿರುವೆ. ಇನ್ನೂ ಅನೇಕ ಮಹತ್ತಾದ ಕಾರ್ಯವನ್ನು ನೀನು ಮಾಡಬೇಕಿದೆ. ಆದುದರಿಂದ  ಅಂತಹ ಕಾರ್ಯವನ್ನು ಬೇಗನೇ ಮಾಡು.’

  

ತಥೋದಿತಃ ಪ್ರಾತರಿತಿ ಬ್ರುವಾಣೋ ಯಯೌ ಪ್ರಣಮ್ಯಾಖಿಲವೇದಯೋನಿಮ್ ।

ಯಯುಸ್ತಮನ್ವೇವ ಸುಯೋಧನಾದಯೋ ದುಃಖಾನತಾಸ್ತೇ ಶಿಬಿರಾಯ ಭೀತಾಃ ॥೨೬.೩೧೮ ॥

 

ಆರೀತಿಯಾಗಿ ವೇದವ್ಯಾಸ ದೇವರಿಂದ ಹೇಳಲ್ಪಟ್ಟ ಅಶ್ವತ್ಥಾಮಾಚಾರ್ಯರು ನಾಳೆ ಮಾಡುವೆನು ಎಂದು ಹೇಳುತ್ತಾ, ಸಮಸ್ತ ವೇದವನ್ನು ಪ್ರಪಂಚಕ್ಕೆ ಕೊಟ್ಟ ವೇದವ್ಯಾಸರನ್ನು ನಮಸ್ಕರಿಸಿ, ಶಿಬಿರಕ್ಕೆ ತೆರಳಿದರು. ದುರ್ಯೋಧನಾದಿಗಳು ಭಯಗೊಂಡು ನೋವಿನಿಂದ ಭಾಗಿ ಅವರನ್ನು ಅನುಸರಿಸಿದರು.

 

ಪಾರ್ತ್ಥಾಶ್ಚ ಸರ್ವೇ ಮುದಿತಾ ಜನಾರ್ದ್ದನಂ ಪರಂ ಸ್ತುವನ್ತಃ ಶಿಬಿರಾಯ ಜಗ್ಮುಃ ।

ತತ್ರಾಪಿ ರಾತ್ರಾವಮಿತಾನ್ ಹರೇರ್ಗ್ಗುಣಾನನುಸ್ಮರನ್ತೋ ಮುಮುದುಃ ಸಮೇತಾಃ ॥೨೬.೩೧೯ ॥

 

ಎಲ್ಲಾ ಪಾಂಡವರೂ ಕೂಡಾ ಸಂತಸಗೊಂಡು ಎಲ್ಲರಿಗಿಂತಲೂ ಮಿಗಿಲಾಗಿರುವ ನಾರಾಯಣನನ್ನು ಸ್ತೋತ್ರಮಾಡುತ್ತಾ ಶಿಬಿರಕ್ಕೆ ತೆರಳಿದರು. ರಾತ್ರಿಯಲ್ಲಿ ಶಿಬಿರದಲ್ಲಿಯೂ ಕೂಡಾ, ಎಲ್ಲರೂ ಒಟ್ಟಿಗೇ,  ಎಣಿಯಿರದ ಪರಮಾತ್ಮನ ಗುಣಗಳನ್ನು ನೆನೆಯುತ್ತಾ, ಸಂತೋಷಪಟ್ಟರು.

 

[ ಆದಿತಃ ಶ್ಲೋಕಾಃ ೩೯೩೦+೩೧೯=೪೨೪೯ ]

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ನಾರಾಯಣಾಸ್ತ್ರೋಪಶಮನಂ ನಾಮ ಷಡ್ವಿಂಶೋsದ್ಧ್ಯಾಯಃ ॥

 

*********


No comments:

Post a Comment