ತತಸ್ತು ಭೀಮಸ್ಯ ಬಭೂವ
ಬುದ್ಧಿರಸ್ಪರ್ದ್ಧಿನಃ ಸರ್ವಜಯೋ ಹಿ ದತ್ತಃ ।
ಅಮುಷ್ಯ ರಾಮೇಣ ನ ಚ ಸ್ಪೃಧಾSಯಂ ಕರ್ಣ್ಣೋ ಮಯಾ ಯುದ್ಧ್ಯತಿ
ಕೃಚ್ಛ್ರಗೋ ಹ್ಯಯಮ್ ॥೨೬.೧೫೨ ॥
ತಥಾSಪಿ ಮೇ
ಭಗವಾನತ್ಯನುಗ್ರಹಾಜ್ಜಯಂ ದದಾತ್ಯಾತ್ಮವಚೋSಪಹಾಯ ।
ಮಯಾ ತು ಮಾನ್ಯಂ ವಚನಂ
ಹರೇಃ ಸದಾ ತಸ್ಮಾದ್ ದಾಸ್ಯೇ ವಿವರಂ ತ್ವದ್ಯ ಶತ್ರೋಃ ॥ ೨೬.೧೫೩ ॥
ತದನಂತರ ಭೀಮಸೇನನಿಗೆ ಒಂದು
ಚಿಂತನೆ ಬಂದಿತು- ‘ಕರ್ಣನಿಗೆ ಪರಶುರಾಮನಿಂದ, ಯಾವುದೇ ಸ್ಪರ್ಧಾಮನೋಭಾವ ಇಲ್ಲದೇ ಯುದ್ಧ ಮಾಡಿದರೆ
ಎಲ್ಲರನ್ನೂ ಗೆಲ್ಲುವ ವರವು ಕೊಡಲ್ಪಟ್ಟಿದೆಯಷ್ಟೇ, ಈ ಕರ್ಣನಾದರೋ ನನ್ನ ಜೊತೆಗೆ ಸ್ಪರ್ಧೆಯಿಂದ ಯುದ್ಧ
ಮಾಡುತ್ತಿಲ್ಲ. ಯುದ್ಧದಿಂದ ಓಡಿಹೋದೆ ಎಂದಾಗಬಾರದು ಎಂದು ಬಹು ಕಷ್ಟದಿಂದ ನನ್ನೊಡನೆ ಯುದ್ಧ
ಮಾಡುತ್ತಿದ್ದಾನೆ.
ಕರ್ಣನಿಗೆ ಸರ್ವರ ಜಯವು
ವರವಾಗಿ ಕೊಟ್ಟಿದ್ದರೂ ಕೂಡಾ, ಪರಶುರಾಮರೂಪಿ ಭಗವಂತನು ನನ್ನ ಮೇಲಿಟ್ಟಿರುವ ಪರಮಾನುಗ್ರಹದಿಂದ,
ನನಗಾಗಿ ತನ್ನ ಮಾತನ್ನು ಮೀರಿ ನನಗೆ ಜಯವನ್ನು ಕೊಡುತ್ತಾನೆ. ಆದರೆ ದೇವರ ಮಾತನ್ನು ನಾನು
ಗೌರವಿಸಬೇಕು. ಆ ಕಾರಣದಿಂದ ಶತ್ರುವಿಗೆ ಈಗ ನನ್ನನ್ನು ಹೊಡೆಯಲು ಅವಕಾಶ ಕೊಡುತ್ತೇನೆ’ ಎಂದು
ಭೀಮಸೇನ ಚಿಂತಿಸಿದ.
ಏವಂ ಸ್ಮೃತ್ವಾ ತೇನ
ರನ್ಧ್ರೇ ಪ್ರದತ್ತೇ ಕರ್ಣ್ಣೋSಸ್ತ್ರವೀರ್ಯ್ಯೇಣ ಧನುರ್ನ್ನ್ಯಕೃನ್ತತ್ ।
ರಶ್ಮೀನ್ ಹಯಾನಾಂ ಚ ತತೋ ರಥಂ ಸ ತತ್ಯಾಜ ನೈಜಂ ಬಲಮೇವ ವೇದಯನ್ ॥ ೨೬.೧೫೪
॥
ಈರೀತಿಯಾಗಿ ಚಿಂತಿಸಿದ
ಭೀಮನಿಂದ ಅವಕಾಶವು ಕೊಡಲ್ಪಡುತ್ತಿರಲು, ಕರ್ಣನು ಅಸ್ತ್ರದಿಂದ ಭೀಮಸೇನನ ಧನುಸ್ಸನ್ನು
ಕತ್ತರಿಸಿದ. ತದನಂತರ ಕುದುರೆಗಳ ಕಡಿವಾಣವನ್ನು ಕತ್ತರಿಸಿ ಹಾಕಿದ. ಭೀಮನಾದರೋ ತನ್ನ ಸ್ವಾಭಾವಿಕ
ಬಲವನ್ನು ತೋರಿಸುತ್ತಾ, ರಥವನ್ನು
ಬಿಟ್ಟನು.
ನ ಮೇ ರಥಾದ್ಯೈರ್ದ್ಧನುಷಾSಪಿ ಕಾರ್ಯ್ಯಮಿತ್ಯೇವ ಸ ಖ್ಯಾಪಯಿತುಂ
ವೃಕೋದರಃ ।
ಖಮುತ್ಪಪಾತೋತ್ತಮವೀರ್ಯ್ಯತೇಜಾ
ರಥಂ ಚ ಕರ್ಣ್ಣಸ್ಯ ಸಮಾಸ್ಥಿತಃ ಕ್ಷಣಾತ್ ॥ ೨೬.೧೫೫ ॥
ನನಗೆ ರಥಗಳಿಂದ ಏನೂ
ಪ್ರಯೋಜನವಿಲ್ಲ, ಬಿಲ್ಲಿನಿಂದಲೂ ಕೂಡಾ ಯಾವ ಪ್ರಯೋಜನವೂ ಇಲ್ಲಾ ಎಂದು ಜಗತ್ತಿಗೇ ತೋರಿಸಲು, ಭೀಮಸೇನನು ಉತ್ಕೃಷ್ಟವಾದ
ಪರಾಕ್ರಮವುಳ್ಳವನಾಗಿ ಆಕಾಶಕ್ಕೆ ನೆಗೆದು ಕರ್ಣನ ರಥದಲ್ಲಿಳಿದ. [‘ವೈಹಾಯಸಂ
ಪ್ರಾಕ್ರಮದ್ ವೈ ಕರ್ಣಸ್ಯ ರಥಮಾವಿಶತ್’
(ದ್ರೋಣಪರ್ವ ೧೩೯.೭೪) ]
ಭೀತಸ್ತು ಕರ್ಣ್ಣೋ
ರಥಕೂಬರೇ ತದಾ ವ್ಯಲೀಯತಾತಃ ಸ ವೃಕೋದರೋ ರಥಾತ್ ।
ಅವಪ್ಲುತೋ ಜ್ಞಾಪಯಿತುಂ
ಸ್ವಶಕ್ತಿಂ ನಿರಾಯುಧತ್ವೇSಪ್ಯರಿನಿಗ್ರಹಾದೌ ॥ ೨೬.೧೫೬ ॥
ಆಗ ಕರ್ಣನು ಭಯಗ್ರಸ್ತನಾಗಿ
ರಥದ ನೋಗದಮೇಲೆ ಬಾಗಿ ನಿಂತನು. ‘ಆಯುಧ
ರಹಿತನಾದರೂ, ಶತ್ರುಗಳನ್ನು ಕೊಲ್ಲಬೇಕಾದರೆ ತನ್ನ ಶಕ್ತಿ ಏನು’ ಎನ್ನುವುದನ್ನು ಜಗತ್ತಿಗೆ
ತೋರಿಸಿ, ಭೀಮಸೇನ
ಆ ರಥದಿಂದ ಕೆಳಗೆ ಹಾರಿದ.
[‘ಸೋSತಿವಿದ್ಧೋ ಭೃಶಂ ಕರ್ಣಃ ಪಾಣ್ಡವೇನ
ತರಸ್ವಿನಾ । ರಥಕೂಬರಮಾಲಮ್ಬ್ಯ ನ್ಯಮೀಲಯತ
ಲೋಚನೇ’ (ದ್ರೋಣಪರ್ವ ೧೩೯.೯) -ಕರ್ಣ
ರಥಕೂಬರವನ್ನು ಆಲಂಬಿಸಿ ನಿಂತ. ‘ತಮದೃಷ್ಟ್ವಾ
ರಥೋಪಸ್ಥೇ ನಿಲೀನಂ ವ್ಯಥಿತೇನ್ದ್ರಿಯಮ್ । ಧ್ವಜಮಸ್ಯ ಸಮಾರುಹ್ಯ ತಸ್ಥೌ ಭೀಮೋ ಮಹೀತಳೇ’
(೭೬) – ಭಯಗೊಂಡು ರಥದಲ್ಲಿ ಅಡಗಿ ನಿಂತ ಕರ್ಣನನ್ನು ನೋಡಿ ಭೀಮಸೇನನು ರಥದ ಧ್ವಜಸ್ಥಂಭವನ್ನು
ಹಿಡಿದು ಭೂಮಿಗೆ ಹಾರಿದನು. (ಈರೀತಿ ಭೀಮಸೇನ ತನಗೆ ಯಾವುದೇ ಆಯುಧದ ಅಗತ್ಯವಿಲ್ಲ ಎನ್ನುವುದನ್ನು
ಜಗತ್ತಿಗೇ ತೋರಿಸಿದನು)]
ನೈಚ್ಛದ್ ಗೃಹೀತುಂ
ವಿನಿಹನ್ತುಮೇವ ವಾ ರಥಂ ಧನುರ್ವಾSಸ್ಯ ರಣೇSಪಹರ್ತ್ತುಮ್ ।
ದ್ರೋಣಸ್ಯ ಯದ್ವತ್
ಪೂರ್ವಮತೀವ ಶಕ್ತೋSಪ್ಯಮಾನಯದ್
ರಾಮವಚೋSಸ್ಯ ಭಕ್ತ್ಯಾ ॥ ೨೬.೧೫೭ ॥
ಕರ್ಣನನ್ನು ಸೆರೆಹಿಡಿಯುವುದನ್ನಾಗಲೀ,
ಕೊಲ್ಲುವುದನ್ನಾಗಲೀ, ರಥವನ್ನು
ಅಪಹರಿಸುವುದನ್ನಾಗಲೀ, ಧನುಸ್ಸನ್ನು ಅಪಹರಿಸುವುದನ್ನಾಗಲೀ, ಹೀಗೆ ಯಾವುದನ್ನೂ ಭೀಮಸೇನ ಮಾಡಲು ಬಯಸಲಿಲ್ಲ. ಯಾವರೀತಿ ಹಿಂದೆ ದ್ರೋಣಾಚಾರ್ಯರ
ರಥವನ್ನು ನಾಶ ಮಾಡಲು ಭೀಮ ಶಕ್ತನಾಗಿದ್ದನೋ ಹಾಗೆಯೇ ಕರ್ಣನ ರಥವನ್ನು ನಾಶಮಾಡಲು ಶಕ್ತನಾಗಿದ್ದರೂ,
ಪರಶುರಾಮನ ಮೇಲಿನ ಭಕ್ತಿಯಿಂದ ಕರ್ಣನಿಗಿರುವ ಪರಶುರಾಮನ ವರವನ್ನು ಭೀಮ ಗೌರವಿಸಿದ.
ಸತ್ಯಾಂ ಕರ್ತ್ತುಂ
ವಾಸವೇಶ್ಚ ಪ್ರತಿಜ್ಞಾಂ ಸಮ್ಮಾನಯನ್ ವೈಷ್ಣವತ್ವಾಚ್ಚ ಕರ್ಣ್ಣಮ್ ।
ದಾತುಂ ರನ್ಧ್ರಂ ಸೂರ್ಯ್ಯಜಸ್ಯ ಪ್ರಯಾತಃ ಶರಕ್ಷೇಪಾರ್ತ್ಥಂ ದೂರಮತಿಷ್ಠದತ್ರ ॥ ೨೬.೧೫೮ ॥
ಅರ್ಜುನನ
ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಲು, ಕರ್ಣನು ವಿಷ್ಣು ಭಕ್ತನಾಗಿರುವುದರಿಂದಲೂ, ಅವನನ್ನು ಕೊಲ್ಲಲು ಭೀಮ ಬಯಸಲಿಲ್ಲ. ಹೀಗಾಗಿ
ಸೂರ್ಯಪುತ್ರ ಕರ್ಣನಿಗೆ ಬಾಣ ಬಿಡಲು ಅವಕಾಶ ಮಾಡಿಕೊಟ್ಟು ಭೀಮ ಸ್ವಲ್ಪ ದೂರದಲ್ಲಿ ನಿಂತನು.
ತತಃ ಕರ್ಣ್ಣೋ ದೂರಗತಂ
ವೃಕೋದರಂ ಸಮ್ಮಾನಯನ್ತಂ ರಾಮವಾಕ್ಯಂ ವಿಜಾನನ್ ।
ಶರೈರವಿದ್ಧ್ಯತ್ ಸ ಚ
ತಾನವಾರಯದ್ ಗಜೈರ್ಮ್ಮೃತೈಸ್ತಾಂಶ್ಚ ಚಕರ್ತ್ತ ಕರ್ಣ್ಣಃ
॥ ೨೬.೧೫೯ ॥
ತದನಂತರ, ದೂರದಲ್ಲಿರುವ
ಭೀಮಸೇನನನ್ನು ಕಂಡು, ಪರಶುರಾಮನ ವಾಕ್ಯವನ್ನು ಗೌರವಿಸತಕ್ಕವನನ್ನಾಗಿ ತಿಳಿದ ಕರ್ಣ, ಬಾಣಗಳಿಂದ ಅವನನ್ನು ಹೊಡೆದ. ಭೀಮಸೇನನಾದರೋ, ಸತ್ತ
ಆನೆಗಳ ಶರೀರದಿಂದ ಅವನ ಬಾಣಗಳನ್ನು ತಡೆದ. ಆ ಆನೆಗಳನ್ನೂ ಕೂಡಾ ಕರ್ಣ ಬಾಣಗಳಿಂದ ಕತ್ತರಿಸಿದ.
[‘ಭೀಮಸ್ಯ
ಮತಮಾಜ್ಞಾಯ ಕರ್ಣೋ ಬುದ್ಧಿಮತಾಂ ವರಃ । ವಿರರಾಮ ರಣಾತ್ ತಸ್ಮಾತ್ ಪಶ್ಯತಾಂ ಸರ್ವಧನ್ವಿನಾಮ್’
(೧೪೦.೧೦೯). ಇಲ್ಲಿ ‘ಭೀಮನ ಮತವನ್ನು ಕರ್ಣ ತಿಳಿದ’ ಎಂದಷ್ಟೇ ಹೇಳಿದ್ದಾರೆ. ಆದರೆ ಭೀಮನ ಮತ ಏನಾಗಿತ್ತು ಎನ್ನುವುದನ್ನು ಮಹಾಭಾರತ
ವಿವರಿಸುವುದಿಲ್ಲ. ಆಚಾರ್ಯರು ಭೀಮನ ಮತ ಏನಾಗಿತ್ತು ಎನ್ನುವುದನ್ನು ಮೇಲಿನ ಶ್ಲೋಕದಲ್ಲಿ ನಮಗೆ ವಿವರಿಸಿದ್ದಾರೆ.
ಇನ್ನು ಭೀಮಸೇನ ಆನೆ ಮೊದಲಾದವುಗಳನ್ನು ಕರ್ಣನ ಬಾಣಕ್ಕೆ ಎದುರಾಗಿರಿಸಿ ಯುದ್ಧ
ಮಾಡಿರುವುದನ್ನೂ ಮಹಾಭಾರತ ವಿವರಿಸುವುದನ್ನು
ನಾವು ದ್ರೋಣಪರ್ವದಲ್ಲಿ ಕಾಣಬಹುದು. ‘ಹಸ್ತ್ಯಙ್ಗಾನ್ಯಥ ಕರ್ಣಾಯ ಪ್ರಾಹಿಣೋತ್ ಪಾಣ್ಡುನನ್ದನಃ । ಚಕ್ರಾಣ್ಯಶ್ವಾಂಸ್ತಥಾ
ಚಾನ್ಯದ್ ಯದ್ಯತ್ ಪಶ್ಯತಿ ಭೂತಳೇ’ (೧೩೯.೮೬) ].
ವ್ಯಸೂನ್ ಗಜಾನ್ ಪ್ರಕ್ಷಿಪನ್ತಂ
ಸಮೇತ್ಯ ಸಂಸ್ಪೃಶ್ಯ ಚಾಪೇನ ವಚಶ್ಚ ದುಷ್ಟಮ್ ।
ಸಂಶ್ರಾವಯಾಮಾಸ
ಸುಯೋಧನಸ್ಯ ಪ್ರೀತ್ಯೈ ಪ್ರಜಾನನ್ನಪಿ ತಸ್ಯ ವೀರ್ಯ್ಯಮ್ ॥ ೨೬.೧೬೦ ॥
ಸತ್ತ ಆನೆಗಳನ್ನು ಎಸೆಯುತ್ತಿರುವ
ಭೀಮನ ಬಳಿ ಬಂದ ಕರ್ಣ, ಭೀಮಸೇನನ ಪರಾಕ್ರಮಾದಿಗಳನ್ನು ತಿಳಿದವನಾದರೂ, ಬಿಲ್ಲಿನಿಂದ ತಿವಿದು, ದುರ್ಯೋಧನನ
ಪ್ರೀತಿಗಾಗಿ ಕೆಟ್ಟ ಮಾತನ್ನಾಡಿದ.
[ಕರ್ಣನ ಮಾತನ್ನು
ಮಹಾಭಾರತ ಹೀಗೆ ವರ್ಣಿಸಿದೆ: ‘ವಿಹಸನ್ನಿವ ರಾಧೇಯೋ ವಾಕ್ಯಮೇತದುವಾಚ ಹ । ಪುನಃಪುನಸ್ತೂಬರಕ
ಮೂಢ ಔದರಿಕೇತಿ ಚ । ಅಕೃತಾಸ್ತ್ರಕ ಮಾ ಯೋತ್ಸೀರ್ಬಾಲ ಸಙ್ಗ್ರಾಮಕಾತರ । ಯತ್ರ ಭೋಜ್ಯಂ ಬಹುವಿಧಂ ಭಕ್ಷ್ಯಂ ಪೇಯಂ ಚ ಪಾಣ್ಡವ । ತತ್ರ ತ್ವಂ ದುರ್ಮತೇ
ಯೋಗ್ಯೋ ನ ಯುದ್ಧೇಷು ಕದಾಚನ’(೧೩೯.೯೩-೯೫)
ನಗುತ್ತಿರುವನೋ ಎಂಬಂತೆ ರಾಧೇಯನು ಈ ಮಾತನ್ನು
ನುಡಿದ- ‘ತೂಬರಕ, ಮೂಢ, ಹೊಟ್ಟೆಬಾಕ, ಅಸ್ತ್ರ ತಿಳಿಯದವನೇ, ನನ್ನೊಡನೆ ಯುದ್ಧ ಮಾಡಬೇಡ. ಎಲ್ಲಿ ಭಕ್ಷ್ಯ-ಭೋಜ್ಯ-ಪಾನಗಳಿರುವುದೋ
ಅಲ್ಲಿಗೆ ಹೋಗು’ ಎಂದು. ]
ಸಂಶ್ರಾವಯನ್ತಂ ವಚನಾನಿ
ರೂಕ್ಷಾಣ್ಯಪಾಹನದ್ ಬಾಣವರೈಸ್ತದಾSರ್ಜ್ಜುನಃ ।
ಸ ವರ್ಮ್ಮಹೀನಃ ಪಾರ್ತ್ಥಬಾಣಾಭಿತಪ್ತೋ
ವ್ಯಪಾಗಮದ್ ಭೀಮ ಆಪಾSತ್ಮಯಾನಮ್
॥ ೨೬.೧೬೧ ॥
ಹೀಗೆ ಬಹಳ ಘೋರವಾದ
ಮಾತುಗಳನ್ನು ಭೀಮನನ್ನು ಕುರಿತು ಕೇಳಿಸುತ್ತಿರುವ ಆ ಕರ್ಣನನ್ನು ಕಂಡು ಸಿಟ್ಟುಗೊಂಡ ಅರ್ಜುನನು, ಶ್ರೇಷ್ಠವಾದ ಬಾಣಗಳಿಂದ ಅವನಿಗೆ
ಚೆನ್ನಾಗಿ ಹೊಡೆದ. ಆಗ ಕರ್ಣ ಕವಚ ರಹಿತನಾಗಿ, ಅರ್ಜುನನ ಬಾಣಗಳಿಂದ
ಕಂಗೆಟ್ಟು ಓಡಿದ. ತದನಂತರ ಭೀಮಸೇನನು ತನ್ನ ರಥವನ್ನು ಹೊಂದಿದನು.
ಕರ್ಣ್ಣೋ ಭೀಮೇ ವಾಸವೀಂ
ನೈವ ಶಕ್ತಿಂ ವಿಮೋಕ್ತುಮೈಚ್ಛನ್ನೈವ ಬೀಭತ್ಸುತೋSನ್ಯಾನ್ ।
ಹನ್ಯಾಮಿತಿ ಪ್ರಾಹ ಯತಃ
ಸ ಕುನ್ತ್ಯೈ ಯದ್ಯಪ್ಯವದ್ಧ್ಯಃ ಸ ತಯಾSಪಿ ಭೀಮಃ ॥ ೨೬.೧೬೨ ॥
ಕರ್ಣನು ಭೀಮಸೇನನಲ್ಲಿ
ಇಂದ್ರಕೊಟ್ಟ ಶಕ್ತಿಯನ್ನು ಬಿಡಲು ಬಯಸಲೇ ಇಲ್ಲ. ಏಕೆಂದರೆ ಅರ್ಜುನನನ್ನು ಹೊರತು ಇತರ
ಪಾಂಡವರನ್ನು ಕೊಲ್ಲಲಾರೆ ಎಂದು ಅವನು ಕುಂತಿಗೆ ಮಾತು ಕೊಟ್ಟಿದ್ದ. ಆದರೆ ವಸ್ತುತಃ ಭೀಮಸೇನನು ಶಕ್ತ್ಯಾಯುಧದಿಂದಲೂ
ಅವಧ್ಯನು.
ನಾರಾಯಣಾಸ್ತ್ರಂ ಶಿರಸಿ
ಪ್ರಪಾತಿತಂ ನ ಯಸ್ಯ ಲೋಮಾಪ್ಯದಹಚ್ಚಿರಸ್ಥಿತಮ್ ।
ಕಿಂ ತಸ್ಯ ಶಕ್ತಿಃ
ಪ್ರಕರೋತಿ ವಾಸವೀ ತಥಾSನ್ಯದಪ್ಯಸ್ತ್ರಶಸ್ತ್ರಂ
ಮಹಚ್ಚ ॥ ೨೬.೧೬೩ ॥
ತಲೆಯಮೇಲೆ ಇದ್ದ,
ಪ್ರಯೋಗಿಸಲ್ಪಟ್ಟ ನಾರಾಯಣಾಸ್ತ್ರವು, ಯಾವ ಭೀಮಸೇನನ ಒಂದು ಕೂದಲನ್ನೂ ಕೂಡಾ ಸುಡಲಿಲ್ಲವೋ, ಅಂತಹ ಭೀಮಸೇನನನ್ನು,
ಇಂದ್ರನ ಅಸ್ತ್ರ(ಶಕ್ತಿ) ಏನು ಮಾಡಲು ಸಾಧ್ಯ? (ನಾರಾಯಣಾಸ್ತ್ರದ ಪ್ರಯೋಗದ ಕುರಿತಾದ
ವಿವರ ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕಾಣಸಿಗುತ್ತದೆ).
ಭೀಮಃ ಕರ್ಣ್ಣರಥಂ
ಪ್ರಾಪ್ತಃ ಶಕ್ತಿಂ ನಾSದಾತುಮೈಚ್ಛತ
।
ಅಭಿಪ್ರಾಯಂ ಕೇಶವಸ್ಯ
ಜಾನನ್ ಹೈಡಿಮ್ಬಮೃತ್ಯವೇ ॥ ೨೬.೧೬೪ ॥
ಭೀಮಸೇನ ಕರ್ಣನ
ರಥವನ್ನು ಹೊಂದಿದರೂ ಕೂಡಾ, ಅಲ್ಲಿದ್ದ ಶಕ್ತ್ಯಾಯುಧಯನ್ನು ತೆಗೆದುಕೊಳ್ಳಲು ಬಯಸಲಿಲ್ಲ. ಘಟೋತ್ಕಚ
ಶಕ್ತ್ಯಾಯುಧದಿಂದ ಸಾಯುವುದು ಶ್ರೀಕೃಷ್ಣ ಪರಮಾತ್ಮನ ಸಂಕಲ್ಪ ಎನ್ನುವುದನ್ನು ತಿಳಿದವನಾಗಿ ಅವನು ಶಕ್ತಿಯನ್ನು ತೆಗೆದುಕೊಳ್ಳಲಿಲ್ಲ.
ತತಃ ಕರ್ಣ್ಣೋSನ್ಯಮಾಸ್ಥಾಯ ರಥಮರ್ಜ್ಜುನಮಭ್ಯಯಾತ್
।
ದಿವ್ಯಂ ರಥಂ ಧನುಶ್ಚೈವ
ಕೃಷ್ಣಬುದ್ಧ್ಯಾSರ್ಜ್ಜುನೋ
ಹರೇತ್ ॥ ೨೬.೧೬೫ ॥
ಇತಿ ಭೀತಸ್ತು ತಾಂ ಶಕ್ತಿಮಾದಾಯಾರ್ಜ್ಜುನಮೃತ್ಯವೇ
।
ಯುದ್ಧಾಯಾಯಾದ್ ರಥಂ
ಚಾಪಂ ಶಕ್ತಿಂ ಚೈಕತ್ರ ನಾಕರೋತ್ ॥ ೨೬.೧೬೬ ॥
ಏಕಂ ಹೃತಂ ಚೇದನ್ಯತ್
ಸ್ಯಾದಿತಿ ಮತ್ವಾ ಭಯಾಕುಲಃ ।
ಬಿಭೇತಿ ಸರ್ವದಾ ನೀತೇಃ
ಕೃಷ್ಣಸ್ಯಾಮಿತತೇಜಸಃ ॥ ೨೬.೧೬೭ ॥
ತದನಂತರ ಕರ್ಣನು ಇನ್ನೊಂದು ರಥವನ್ನೇರಿ, ಅರ್ಜುನನನ್ನು ಎದುರುಗೊಂಡ. ಕರ್ಣನಲ್ಲಿ ದಿವ್ಯರಥ, ದಿವ್ಯಧನುಸ್ಸು
ಮತ್ತು ಶಕ್ತ್ಯಾಯುಧ ಈ ಮೂರೂ ಇದ್ದಿದ್ದರೂ ಸಹ, ಕೃಷ್ಣನ ಪ್ರೇರಣೆಯಿಂದ ಅರ್ಜುನನು ಅವುಗಳನ್ನು ತನ್ನಿಂದ
ಅಪಹರಿಸಬಹುದು ಎಂದು ಭಯಗೊಂಡವನಾಗಿ, ಕೇವಲ ಶಕ್ತಿಯನ್ನು ಹಿಡಿದು, ಅರ್ಜುನನನ್ನು ಕೊಂದು ಬಿಡಬೇಕು
ಎನ್ನುವ ಸಂಕಲ್ಪದಿಂದ ಕರ್ಣ ಯುದ್ಧಕ್ಕಾಗಿ ಬಂದ. ಕರ್ಣ ಯುದ್ಧದಲ್ಲಿ ಯಾವತ್ತೂ ಕೂಡಾ ಈ ಮೂರನ್ನು ಒಟ್ಟಿಗೆ
ಹಿಡಿದುಕೊಂಡು ಬರುತ್ತಿರಲಿಲ್ಲ.
ಒಂದು ನಾಶವಾದರೆ
ಇನ್ನೊಂದು ಇರಲಿ ಎಂದು ಭಯದಿಂದ ಕೂಡಿಕೊಂಡು ಕರ್ಣ ಈರೀತಿ ಮಾಡುತ್ತಿದ್ದ. ಎಣೆಯಿರದ
ಪರಾಕ್ರಮವುಳ್ಳ ಕೃಷ್ಣನ ಬುದ್ಧಿಯಿಂದ ಅವನು ಯಾವಾಗಲೂ ಹೆದರುತ್ತಿದ್ದ.
ನಿಶ್ಚಿತೋ ಮರಣಾಯೈವ
ಮೃತಿಕಾಲೇ ತು ತಂ ರಥಮ್ ।
ಆರುಹ್ಯಾಗಾದ್ಧಿ
ಪೂರ್ವಂ ತು ನ ಕಾಲಂ ಮನ್ಯತೇ ಮೃತೇಃ ॥ ೨೬.೧೬೮ ॥
ಮುಂದೆ, ಮರಣ ನಿಶ್ಚಿತ ಎಂದು ತಿಳಿದ
ಮೇಲೆ, ಸಾಯುವ ಕಾಲದಲ್ಲಿ ದಿವ್ಯ ರಥವನ್ನೂ, ಬಿಲ್ಲನ್ನೂ ತೆಗೆದುಕೊಂಡು ಕರ್ಣ ಯುದ್ಧಕ್ಕೆ ತೆರಳುತ್ತಾನೆ.
ಅದಕ್ಕೂ ಮೊದಲು ‘ತಾನು ಸಾಯಲಿಕ್ಕೆ ಕಾಲ ಬಂದಿದೆ’ ಎಂದು ಅವನಿಗೆ ಅನಿಸುತ್ತಲೇ ಇರಲಿಲ್ಲ.
No comments:
Post a Comment