ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, March 17, 2023

Mahabharata Tatparya Nirnaya Kannada 26-266-273

 

ಪುನಶ್ಚ ಚನ್ದ್ರೇSಭ್ಯುದಿತೇ ಯುಧೇ ತೇ ಸಮಾಯಯುಃ ಶಸ್ತ್ರಮಹಾಸ್ತ್ರವರ್ಷಾಃ ।

ತತ್ರಾSಯಾತಃ ಸಾತ್ಯಕಿಂ ಸೋಮದತ್ತೋ ಭೂರಿಶ್ಚ ತಾಭ್ಯಾಂ ಯುಯುಧೇ ಸ ಏಕಃ ॥೨೬.೨೬೬ ॥

 

ತದನಂತರ ಚಂದ್ರೋದಯವಾಗುತ್ತಿರಲು, ಎಲ್ಲರೂ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಮತ್ತೆ ಯುದ್ಧಕ್ಕೆ ಬಂದರು. ಆ ಯುದ್ಧದಲ್ಲಿ ಸೋಮದತ್ತ ಮತ್ತು ಭೂರಿ ಸಾತ್ಯಕಿಯನ್ನು ಹೊಂದಿದರು. ಅವರಿಬ್ಬರ ಜೊತೆಗೂ ಸಾತ್ಯಕಿ ಒಬ್ಬನೇ ಯುದ್ಧಮಾಡಿದನು.

 

ಹತೌ ಚ ತೌ ಪೇತತುಸ್ತೇನ ಭೂಮೌ ಬಾಹ್ಲೀಕ ಏನಂ ಸಮರೇ ತ್ವಯೋಧಯತ್ ।

ಸ ಸಾತ್ಯಕಿಂ ವಿರಥೀಕೃತ್ಯ ಬಾಣಂ ವಧಾಯ ತಸ್ಯಾSಶು ಮುಮೋಚ ವೀರಃ ॥೨೬.೨೬೭ ॥

 

ಭೂರಿ ಮತ್ತು ಸೋಮದತ್ತರು ಯುದ್ಧದಲ್ಲಿ ಸಾತ್ಯಕಿಯಿಂದ ಹೊಡೆಯಲ್ಪಟ್ಟವರಾಗಿ ಸತ್ತು ಹೋದರು. ಆಗ ಬಾಹ್ಲೀಕನು ಯುದ್ಧದಲ್ಲಿ ಸಾತ್ಯಕಿಯನ್ನು ಹೊಂದಿದನು. ವೀರನಾದ ಬಾಹ್ಲೀಕರಾಜನು ಸಾತ್ಯಕಿಯನ್ನು ರಥಹೀನನನ್ನಾಗಿ ಮಾಡಿ, ಅವನ ಸಂಹಾರಕ್ಕಾಗಿ ಬಾಣವನ್ನು ಬಿಟ್ಟನು.  

 

ಚಿಚ್ಛೇದ ತಂ ಭೀಮಸೇನಸ್ತ್ರಿದೈವ  ತಸ್ಮೈ ಶತಘ್ನೀಂ ಪ್ರಜಹಾರ ಬಾಹ್ಲಿಕಃ ।

ತಯಾ ಹತೋ ವಿಹ್ವಲಿತೋ ವೃಕೋದರೋ ಜಘಾನ ತಂ ಗದಯಾ ಸೋSಪತಚ್ಚ ॥೨೬.೨೬೮ ॥

 

ಭೀಮಸೇನನು ಬಾಹ್ಲೀಕನ ಆ ಬಾಣವನ್ನು ಮೂರಾಗಿ ಕತ್ತರಿಸಿದನು. ಆಗ ಬಾಹ್ಲೀಕನು ಭೀಮಸೇನನಿಗೆ ‘ಶತಘ್ನೀ’ ಎನ್ನುವ ಅಸ್ತ್ರದಿಂದ ಹೊಡೆದನು. ಆ ಶಕ್ತಿಯಿಂದ ಹೊಡೆಯಲ್ಪಟ್ಟು ಒಂದು ಕ್ಷಣ ನೋವುಂಡ ಭೀಮಸೇನನು, ಗದೆಯಿಂದ ಬಾಹ್ಲೀಕನನ್ನು ಹೊಡೆದ. ಬಾಹ್ಲೀಕ ಬಿದ್ದ(ಸತ್ತ) ಕೂಡಾ.

 

[ವಿಷ್ಣುಭಕ್ತರನ್ನು ಎಂದೂ ಸಂಹಾರ ಮಾಡದ ಭೀಮಸೇನ ಹೇಗೆ ಈ ಬಾಹ್ಲೀಕನನ್ನು ಸಂಹಾರ ಮಾಡಿದ ಎಂದರೆ-]

 

ಬಾಹ್ಲೀಕಃ ಪ್ರಾರ್ತ್ಥಯಾಮಾಸ ಪೂರ್ವಂ ಸ್ನೇಹಪುರಸ್ಸರಮ್ ।

ಭೀಮಂ ತ್ವಯೈವ ಹನ್ತವ್ಯೋ ರಣೇSಹಂ ಪ್ರೀತಿಮಿಚ್ಛತಾ ॥೨೬.೨೬೯ ॥

 

ತದಾ ಯಶಶ್ಚ ಧರ್ಮ್ಮಂ ಚ ಲೋಕಂ ಚ ಪ್ರಾಪ್ನುಯಾಮಹಮ್ ।

ಇತ್ಯುಕ್ತ ಆಹ ತಂ ಭೀಮೋ ನಿತರಾಂ ವ್ಯಥಿತಸ್ತದಾ ॥೨೬.೨೭೦ ॥

 

ಹನ್ಯಾಂ ನೈವಾನ್ಯಥಾ ಯುದ್ಧೇ ತತ್ ತೇ ಶುಶ್ರೂಷಣಂ ಭವೇತ್ ।

ಇತಿ ತೇನ ಹತಸ್ತತ್ರ ಭೀಮಸೇನೇನ ಬಾಹ್ಲಿಕಃ ॥೨೬.೨೭೧ ॥

 

ಹಿಂದೆ ಬಾಹ್ಲೀಕರಾಜನು ಸ್ನೇಹಪೂರ್ವಕವಾಗಿ  ಭೀಮಸೇನನನ್ನು ಪ್ರಾರ್ಥಿಸಿರುವನು- ‘ನೀನೇ ನನ್ನನ್ನು ಯುದ್ಧದಲ್ಲಿ ಕೊಲ್ಲಬೇಕು.  ಇದು ನನಗೆ ನೀನು ಮಾಡುವ ಪ್ರೀತಿಯ ಕೆಲಸ.

ನಿನ್ನಿಂದ ಸತ್ತರೆ, ಒಳ್ಳೆಯ ಕೀರ್ತಿ, ಪುಣ್ಯ ಸಿಗುತ್ತದೆ ಮತ್ತು ಉತ್ತಮ ಲೋಕವನ್ನು ಹೊಂದಿಯೇನು’. ಬಾಹ್ಲೀಕನು ಹೀಗೆ ವಿನಂತಿಸಿದಾಗ ಭೀಮನು– ‘ನೀನು ನನಗೆ ಬಹಳ ನೋವನ್ನುಂಟುಮಾಡಬೇಕು. ಆಗ ಮಾತ್ರ ನಾನು ನಿನ್ನನ್ನು ಯುದ್ಧದಲ್ಲಿ ಕೊಲ್ಲುತ್ತೇನೆ. ಇಲ್ಲದಿದ್ದರೆ ನಾನು ಹಾಗೆ ಮಾಡುವುದಿಲ್ಲ. ನನಗೆ ಅಂತಹ ನೋವನ್ನುಂಟುಮಾಡುವುದು ನಿನ್ನ ಸೇವೆಯಾಗುತ್ತದೆ ಮತ್ತು ಅದು ಪುಣ್ಯವನ್ನು ಪಡೆಯಲು ಮಾತ್ರ ಕಾರಣವಾಗುತ್ತದೆ’ ಎನ್ನುತ್ತಾನೆ.  ಹೀಗಾಗಿ ಭೀಮಸೇನನಿಂದ ಬಾಹ್ಲೀಕನು ಕೊಲ್ಲಲ್ಪಟ್ಟನು.

 

ಹತೇ ಬಾಹ್ಲೀಕೇ ಕೌರವಾ ಭೀಮಸೇನಮಭ್ಯಾಜಗ್ಮುಃ ಕರ್ಣ್ಣದುರ್ಯ್ಯೋಧನಾದ್ಯಾಃ ।

ದ್ರೌಣಿಂ ಪುರಸ್ಕೃತ್ಯ ಗುರುಂ ಚ ಪಾರ್ಷತಃ ಸಭ್ರಾತೃಕಃ ಸಾತ್ಯಕಿನಾ ಸಮಭ್ಯಯಾತ್ ॥೨೬.೨೭೨ ॥

 

ಹೀಗೆ ಬಾಹ್ಲೀಕನು ಕೊಲ್ಲಲ್ಪಡಲು,  ಕರ್ಣ-ದುರ್ಯೋಧನಾದಿ ಕೌರವರು ಅಶ್ವತ್ಥಾಮನನ್ನು ಮುಂದೆ ಮಾಡಿಕೊಂಡು ಭೀಮಸೇನನನ್ನು ಕುರಿತು ಎದುರುಗೊಂಡರು. ಇತ್ತ ಧೃಷ್ಟದ್ಯುಮ್ನ ತನ್ನ ಅಣ್ಣತಮ್ಮಂದಿರರಿಂದ ಕೂಡಿಕೊಂಡು, ಸಾತ್ಯಕಿಯಿಂದಲೂ ಕೂಡಿಕೊಂಡು, ಗುರು ದ್ರೋಣಾಚಾರ್ಯರನ್ನು ಎದುರಿಸಿದನು.

 

ಸಂಶಪ್ತಕೈರೇವ ಪಾರ್ತ್ಥೋ ಯುಯೋಧ ತದ್ ಯುದ್ಧಮಾಸೀದತಿರೌದ್ರಮದ್ಭುತಮ್ ।

ಅಕ್ಷೋಹಿಣೀ ತತ್ರ ಭೀಮಾರ್ಜ್ಜುನಾಭ್ಯಾಂ ನಿಸೂದಿತಾ ರಾತ್ರಿಯುದ್ಧೇ ಸಮಸ್ತಾ ॥೨೬.೨೭೩ ॥

 

ಸಂಶಪ್ತಕರಿಂದ ಕೂಡಿಕೊಂಡ ಅರ್ಜುನನು ಘೋರವಾಗಿ ಯುದ್ಧ ಮಾಡಿದನು. ಆ ಯುದ್ಧವು ಅತ್ಯಂತ ರೌದ್ರ, ಅತ್ಯಂತ ಅದ್ಭುತವಾದ ಯುದ್ಧವಾಗಿತ್ತು. ಒಟ್ಟಾರೆ ಆ ರಾತ್ರಿ ಭೀಮಾರ್ಜುನರಿಂದ ಒಂದು ಅಕ್ಷೋಹಿಣಿ ಕೊಲ್ಲಲ್ಪಟ್ಟಿತು.

No comments:

Post a Comment