ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 25, 2023

Mahabharata Tatparya Nirnaya Kannada 27-09-16

 

ಶರಾಸನೇ ಮಾರುತಿನಾ ನಿರಾಕೃತೋ ದ್ರೌಣಿರ್ಮ್ಮಹಾಸ್ತ್ರಾಣಿ ಮುಮೋಚ ತಸ್ಮಿನ್ ।

ತಾನ್ಯಸ್ತ್ರವರ್ಯೈರ್ಬಲವಾನವಿಸ್ಮಯಃ ಸಂಶಾಮಯಾಮಾಸ ಸುತೋSನಿಲಸ್ಯ ॥೨೭.೦೯॥

 

ಭೀಮನೊಂದಿಗೆ ಬಿಲ್ಲುಯುದ್ಧದಲ್ಲಿ ಸೋತ ಅಶ್ವತ್ಥಾಮನು ಮಹಾಮಹ ಅಸ್ತ್ರಗಳನ್ನು ಭೀಮಸೇನನಲ್ಲಿ ಬಿಟ್ಟ. ಅವುಗಳನ್ನು ಶ್ರೇಷ್ಠವಾದ ಅಸ್ತ್ರಗಳಿಂದ, ಬಲಿಷ್ಠನಾದ, ಯಾವುದೇ ಅಚ್ಚರಿಯನ್ನು ಹೊಂದದ ಭೀಮಸೇನನು ಶಾಂತಗೊಳಿಸಿದ.

 

ಪುನಃ ಶರೈರೇವ ಪರಸ್ಪರಂ ತಾವಯುದ್ಧ್ಯತಾಂ ಚಿತ್ರಮಲಂ ಚ ಸುಷ್ಠು ।

ತದಾ ತು ಭೀಮಸ್ಯ ಶರೈರ್ಭೃಶಾರ್ತ್ತೋ ದ್ರೌಣಿಃ ಪಪಾತಾSಶು ದೃಢಂ ವಿಚೇತನಃ ॥೨೭.೧೦॥

 

ಮತ್ತೆ ಬಾಣಗಳಿಂದಲೇ ಭೀಮ-ಅಶ್ವತ್ಥಾಮರು ಪರಸ್ಪರವಾಗಿ, ಚೆನ್ನಾಗಿ,  ಗಾಢವಾಗಿ, ಕಲಾತ್ಮಕತೆಯಿಂದ ಯುದ್ಧಮಾಡಿದರು. ಒಂದು ಹಂತದಲ್ಲಿ ಭೀಮಸೇನನ ಬಾಣಗಳಿಂದ ಬಹಳ ಪೀಡಿಸಲ್ಪಟ್ಟ ಅಶ್ವತ್ಥಾಮನು ಪ್ರಜ್ಞೆಕಳೆದುಕೊಂಡು ಬಿದ್ದನು.  

 

ಭೀಮಶ್ಚ ವಿಹ್ವಲತನುಃ ಸ ತು ಕಿಞ್ಚಿದೇವ ಪೂರ್ವಂ ಗತೇ ಗುರುಸುತೇ ಪ್ರಯಯೌ ಕ್ಷಣೇನ ।

ನಿರ್ದ್ಧೂತಯುದ್ಧಶ್ರಮ ಆತ್ತಧನ್ವಾ ಯೋದ್ಧುಂ ಗಜೌಘಂ ಪ್ರತಿನಾದಿತಾಶಃ ॥೨೭.೧೧॥

 

ಅಶ್ವತ್ಥಾಮ ಮೂರ್ಛೆಹೊಂದುತ್ತಿರಲು, ಆಯಾಸಗೊಂಡ ಶರೀರವುಳ್ಳವನಾದ ಭೀಮಸೇನನು ಒಂದು ಕ್ಷಣ ಯುದ್ಧಭೂಮಿಯಿಂದ ಹೊರಹೋಗಿ, ಮತ್ತೆ ಚೇತರಿಸಿಕೊಂಡು, ಬಿಲ್ಲನ್ನು ಹಿಡಿದು, ಆನೆಗಳ ಹಿಂಡನ್ನು ಕುರಿತು, ದಿಕ್ಕುಗಳನ್ನೆಲ್ಲಾ ಸದ್ದು ಮಾಡುತ್ತಾ ತೆರಳಿದನು.

[ತತಸ್ತು ಸಾರಥಿರ್ಜ್ಞಾತ್ವಾ ದ್ರೋಣಪುತ್ರಮಚೇತನಮ್ । ಅಪೋವಾಹ ರಣಾದ್ ರಾಜನ್ ಸರ್ವಸೈನ್ಯಸ್ಯ ಪಶ್ಯತಃ (ಕರ್ಣಪರ್ವ ೧೨.೪೩) – ಅಶ್ವತ್ಥಾಮ ಮೂರ್ಛೆಹೋಗಿರುವುದನ್ನು ತಿಳಿದ ಅಶ್ವತ್ಥಾಮನ ಸಾರಥಿಯು ಅವನನ್ನು ಸರ್ವಕ್ಷತ್ರಿಯರೂ ನೋಡುತ್ತಿದ್ದಂತೆ ಯುದ್ಧಭೂಮಿಯಿಂದ ಹೊರಗೆ ಕೊಂಡೊಯ್ದನು (೪೩). ತಥೈವ ಪಾಣ್ಡವಂ ರಾಜನ್ ವಿಹ್ವಲನ್ತಂ ಮುಹುರ್ಮುಹುಃ । ಅಪೋವಾಹ ರಥೇನಾಜೌ ವಿಶೋಕಃ ಶತ್ರುತಾಪನಮ್(೪೪)- ಹಾಗೆಯೇ, ವಿಹ್ವಲಿಸುತ್ತಿದ್ದ ಶತ್ರುತಾಪನ ಭೀಮಸೇನನನ್ನೂ ಕೂಡಾ ಅವನ ಸಾರಥಿಯಾದ ವಿಶೋಕನು ರಥದೊಂದಿಗೆ ಆಚೆ ಕೊಂಡೊಯ್ದನು].

 

ತಸ್ಮಿನ್ ಗಜಾನ್ ಮರ್ದ್ದಯತಿ ಧಾರ್ತ್ತರಾಷ್ಟ್ರೋ ಯುಧಿಷ್ಠಿರಮ್ ।

ಅಗಾದ್ ಯುದ್ಧಾಯ ತೌ ಯುದ್ಧಂ ರಾಜಾನೌ ಚಕ್ರತುಶ್ಚಿರಮ್ ॥೨೭.೧೨॥

 

ಭೀಮಸೇನನು ಆನೆಗಳನ್ನು ಕೊಲ್ಲುತ್ತಿರಲು, ದುರ್ಯೋಧನನು ಯುಧಿಷ್ಠಿರನನ್ನು ಕುರಿತು ಯುದ್ಧಕ್ಕೆಂದು  ತೆರಳಿದನು. ಅಲ್ಲಿ ಅವರಿಬ್ಬರೂ ಕೂಡಾ ಬಹಳ ಸಮಯ ಯುದ್ಧಮಾಡಿದರು.  

 

ತತ್ರ ತಂ ವಿರಥಂ ಚಕ್ರೇ ಸಹಸೈವ ಯುಧಿಷ್ಠಿರಃ ।

 ಸ ಗದಾಮಾದದೇ ಗುರ್ವೀಂ ತಂ ಭೀಮೋSಭ್ಯಪತದ್ ಗದೀ ॥೨೭.೧೩॥

 

ಆ ಯುದ್ಧದಲ್ಲಿ ಯುಧಿಷ್ಠಿರನು ಸ್ವಲ್ಪ ಹೊತ್ತಿಗೇ ದುರ್ಯೋಧನನನ್ನು ರಥಹೀನನನ್ನಾಗಿ ಮಾಡಿದನು. ಆಗ ಮುನಿದ ದುರ್ಯೋಧನನು ಭಾರವಾದ ಗದೆಯನ್ನು ತೆಗೆದುಕೊಂಡನು. ಇದನ್ನು ಕಂಡ ಭೀಮಸೇನನು ಗದೆಯನ್ನು ಹಿಡಿದು ದುರ್ಯೋಧನತ್ತ ತೆರಳಿದನು.

 

ದೃಷ್ಟ್ವಾ ಕೃಪಸ್ತಂ ಸ್ವರಥಮಾರೋಪ್ಯಾಪಯಯೌ ತತಃ ।

ತದೈವ ಕರ್ಣ್ಣನಕುಲೌ ಭೃಶಂ ಬಾಣೈರಯುದ್ಧ್ಯತಾಮ್ ॥೨೭.೧೪॥

 

ನಕುಲಂ ವಿರಥಂ ಕೃತ್ವಾ ಕರ್ಣ್ಣೋSಥ ಪ್ರಪಲಾಯಿತಮ್ ।

ಅನುದ್ರುತ್ಯ ಚ ವೇಗೇನ ಕಣ್ಠೇ ಧನುರವಾಸೃಜತ್ ॥೨೭.೧೫॥

 

ಈರೀತಿಯಾಗಿ ಭೀಮಸೇನ ಬರುವುದನ್ನು ಕಂಡ ಕೃಪಾಚಾರ್ಯರು ದುರ್ಯೋಧನನನ್ನು ತನ್ನ ರಥಕ್ಕೇರಿಸಿಕೊಂಡು ಅಲ್ಲಿಂದ ಪಲಾಯನ ಮಾಡಿದರು. ಆಗಲೇ ಕರ್ಣ ಹಾಗೂ ನಕುಲರಿಬ್ಬರು ಬಾಣದಿಂದ ಯುದ್ಧ ಮಾಡಿಕೊಂಡರು. ಸ್ವಲ್ಪ ಹೊತ್ತಾದ ಮೇಲೆ ಕರ್ಣನು ನಕುಲನನ್ನು ರಥಹೀನನನ್ನಾಗಿ ಮಾಡಿ, ಪಲಾಯನ ಮಾಡಲು ತೊಡಗಿದ ನಕುಲನನ್ನು ಅನುಸರಿಸಿ, ಅವನ ಕೊರಳಿಗೆ ತನ್ನ ಬಿಲ್ಲಿನಿಂದ ತಿವಿದನು.

 

ಉಕ್ತ್ವಾ ಚ ಪರುಷಾ ವಾಚಃ ಕುನ್ತ್ಯಾ ವಚನಗೌರವಾತ್ ।

ನ ಜಘಾನೈವ ನಕುಲಂ ವಿಸೃಜ್ಯ ಚ ಯಯೌ ಪರಾನ್ ॥೨೭.೧೬॥

 

ಕರ್ಣನು ನಕುಲನಿಗೆ ಕೆಟ್ಟ ಮಾತುಗಳನ್ನು ಹೇಳಿದ ಆದರೆ ಕುಂತಿಗೆ ತಾನು ಕೊಟ್ಟ ಮಾತನ್ನು ಗೌರವಿಸಿ  ಅವನನ್ನು ಕೊಲ್ಲಲಿಲ್ಲ. ಅವನನ್ನು ತಿರಸ್ಕಾರದಿಂದ ಅಲ್ಲೇ ಬಿಟ್ಟು, ಅವನು ಉಳಿದವರನ್ನು ಕುರಿತು ತೆರಳಿದನು.

[‘ಮಾ ಯೋತ್ಸೀಃ ಕುರುಭಿಃ ಸಾರ್ಧಂ ಬಲವದ್ಭಿಶ್ಚ ಪಾಣ್ಡವ’(ಕರ್ಣಪರ್ವ, ೧೫.೫೦) ‘ಗೃಹಂ ವಾ ಗಚ್ಛ ಮಾದ್ರೇಯ ಯತ್ರ ವಾ ಕೃಷ್ಣಫಲ್ಗುನೌ’(೫೧), ನಿನಗಿಂತಲೂ ಬಲವಂತರಲ್ಲಿ ಯುದ್ಧ ಮಾಡಬೇಡ. ನಿನ್ನಂತೆಯೇ ಇರುವವರೊಡನೆ ಯುದ್ಧಮಾಡು ಅಥವಾ ಕೃಷ್ಣ-ಪಲ್ಗುನರಿರುವಲ್ಲಿಗಾದರೂ ಹೋಗು. ಸ್ಮೃತ್ವಾ ಕುಂತ್ಯಾ ವಚೋ ರಾಜಂಸ್ತತ ಏನಂ ವ್ಯಸರ್ಜಯತ್ (೫೨)- ಕುಂತಿಗೆ ಕೊಟ್ಟ ಮಾತನ್ನು ಸ್ಮರಿಸಿಕೊಂಡ ಕರ್ಣ ಅವನನ್ನು ಹಾಗೆಯೇ ಬಿಟ್ಟನು.]

No comments:

Post a Comment