ನಿವಾರ್ಯ್ಯ ಶತ್ರುಂ ಸ ಶರೈರ್ಬ್ರಹ್ಮಾಸ್ತ್ರಮಸೃಜದ್ ದ್ವಿಜಃ ।
ತೇನ ಸನ್ದಾಹಯಾಮಾಸ
ಪಾಞ್ಚಾಲಾನ್ ಸುಬಹೂನ್ ರಣೇ ॥೨೬.೨೮೧ ॥
ಆ ದ್ರೋಣಾಚಾರ್ಯರು
ಬಾಣಗಳಿಂದ ಶತ್ರುಗಳನ್ನು ತಡೆದು, ಬ್ರಹ್ಮಾಸ್ತ್ರವನ್ನು ಪಾಂಡವ ಸೇನೆಯ ಮೇಲೆ ಪ್ರಯೋಗಿಸಿದರು. ಆ ಬ್ರಹ್ಮಾಸ್ತ್ರದಿಂದ ಯುದ್ಧದಲ್ಲಿ
ಅವರು ಬಹಳ ಜನ ಪಂಚಾಲರನ್ನು ಸುಟ್ಟರು.
ಪುರುಜಿತ್
ಕುನ್ತಿಭೋಜಶ್ಚ ತೇನಾನ್ಯೇ ಚ ಹತಾಸ್ತದಾ ।
ಭೀಮೋSರ್ಜ್ಜುನಃ ಸಾತ್ಯಕಿಶ್ಚ ಪರ್ಯ್ಯಾಯೇಣ
ಗುರೋಃ ಸುತಮ್ ॥೨೬.೨೮೨ ॥
ದೂರತೋ ವಾರಯಾಮಾಸುರ್ಮ್ಮಹತ್ಯಾ
ಸೇನಯಾ ಸಹ ।
ಕರ್ಣ್ಣದುರ್ಯ್ಯೋಧನಾದೀಂಶ್ಚ
ಶಲ್ಯಂ ಭೋಜಂ ಕೃಪಂ ತಥಾ ॥೨೬.೨೮೩ ॥
ಭೀಮಾರ್ಜ್ಜುನೌ ಶರೌಘೇಣ
ವಾರಯಾಮಾಸತೂ ರಣೇ ।
ತತ್ರ ಭೀಮೋ ಗಜಾನೀಕಂ
ಜಯತ್ಸೇನಂ ಚ ಮಾಗಧಮ್ ॥೨೬.೨೮೪ ॥
ಜಘಾನ ಸುಬಹೂಂಶ್ಚೈವ
ಮಾಗಧಾನಾಂ ರಥವ್ರಜಾನ್ ।
ಅಥ ಮಾಳವರಾಜಸ್ಯ ತ್ವಶ್ವತ್ಥಾಮಾಭಿದಂ
ಗಜಮ್ । ॥೨೬.೨೮೫ ॥
ಭೀಮಸೇನಹತಂ ದೃಷ್ಟ್ವಾ
ವಾಸುದೇವಪ್ರಚೋದಿತಃ ।
ಅಶ್ವತ್ಥಾಮಾ ಹತ ಇತಿ
ಪ್ರಾಹ ರಾಜಾ ಯುಧಿಷ್ಠಿರಃ ॥೨೬.೨೮೬ ॥
ದ್ರೋಣಾಚಾರ್ಯರಿಂದ (*)ಪುರುಜಿತ್, ಕುಂತಿಭೋಜ ಹಾಗೂ
ಇತರ ಬಹಳ ಜನ ಕೊಲ್ಲಲ್ಪಟ್ಟರು. (ಆಗ ದ್ರೋಣಾಚಾರ್ಯರನ್ನು ಸಂಹಾರ ಮಾಡಲು ಯುದ್ಧತಂತ್ರವನ್ನು
ರೂಪಿಸಿ ಅದರಂತೆ,) ಭೀಮಸೇನ, ಅರ್ಜುನ, ಸಾತ್ಯಕಿ, ಇವರೆಲ್ಲರೂ ಒಬ್ಬರಾದಮೇಲೆ ಒಬ್ಬರು ದೊಡ್ಡದಾದ ಸೇನೆಯಿಂದ ಕೂಡಿಕೊಂಡು ಅಶ್ವತ್ಥಾಮಾಚಾರ್ಯರನ್ನು ದೂರದಲ್ಲಿಯೇ ತಡೆದರು. ಭೀಮಾರ್ಜುನರು
ಕರ್ಣ, ದುರ್ಯೋಧನ, ಶಲ್ಯ, ಕೃತವರ್ಮ, ಕೃಪ, ಇವರೆಲ್ಲರನ್ನೂ ಕೂಡಾ, (ದ್ರೋಣಾಚಾರ್ಯರ ಹತ್ತಿರ ಇರಬಾರದು ಎಂದು) ದೂರದಲ್ಲೇ ಬಾಣಗಳ ಸಮೂಹದಿಂದ ತಡೆದರು. ಆ ಯುದ್ಧದಲ್ಲಿ ಭೀಮಸೇನನು ಬಹಳ ಆನೆಗಳ ಪಡೆಗಳನ್ನೂ,
ಮಾಗದದೇಶದ (**)ಜಯತ್ಸೇನ ಎಂಬುವವನನ್ನೂ ಕೊಂದ. ಹಾಗೇ ಬಹಳ ಜನ ಜರಾಸಂಧನ
ಪಕ್ಷದವರನ್ನು ಕೊಂದು ಹಾಕಿದ.
ಸ್ವಲ್ಪ ಹೊತ್ತಾದಮೇಲೆ, ಮಾಳವರಾಜನ ಅಶ್ವತ್ಥಾಮ
ಎನ್ನುವ ಆನೆಯು ಭೀಮಸೇನನಿಂದ ಕೊಲ್ಲಲ್ಪಟ್ಟದ್ದನ್ನು ನೋಡಿ, ಶ್ರೀಕೃಷ್ಣ
ಪರಮಾತ್ಮನಿಂದ ಪ್ರಚೋದಿಸಲ್ಪಟ್ಟ ಯುಧಿಷ್ಠಿರನು ‘ಅಶ್ವತ್ಥಾಮ ಸತ್ತಿದ್ದಾನೆ’ ಎಂದು ಹೇಳಿದ.
[*ಮಹಾಭಾರತದಲ್ಲಿ
ಮುಂದೆ, ಕರ್ಣಪರ್ವದ ಮೂರನೇ ಅಧ್ಯಾಯದಲ್ಲಿ ಯಾರ್ಯಾರು ಬದುಕಿದ್ದಾರೆ, ಯಾರ್ಯಾರು ಸತ್ತಿದ್ದಾರೆ
ಎಂದು ಲೆಕ್ಕ ಹೇಳುವಾಗ, ಈ ರೀತಿ ಒಂದು ಮಾತು ಬರುತ್ತದೆ: ‘ಪುರುಜಿತ್ ಕುನ್ತಿಭೋಜಶ್ಚ ಮಾತುಲೌ
ಸವ್ಯಸಾಚಿನಃ । ಸಙ್ಗ್ರಾಮನಿರ್ಜಿತಾನ್ ಲೋಕಾನ್ ಗಮಿತೌ ದ್ರೋಣಸಾಯಕೈಃ’ (ಕರ್ಣಪರ್ವ ೩.೨೨). ಇಲ್ಲಿ ಪುರುಜಿತ್,
ಕುಂತಿಭೋಜ ಮೊದಲಾದವರು ದ್ರೋಣಾಚಾರ್ಯರ ಬಾಣಕ್ಕೆ ತುತ್ತಾದರು ಎಂದು ಹೇಳಿದ್ದಾರೆ. ಆದರೆ ಯಾವ ದಿನ
ಅವರು ಸತ್ತರು ಎನ್ನುವುದನ್ನು ಅಲ್ಲಿ ಹೇಳಿಲ್ಲ. ಆ ವಿವರವನ್ನು ಆಚಾರ್ಯರು ಇಲ್ಲಿ ಹೇಳಿದ್ದಾರೆ.
** ‘ಜಯತ್ಸೇನಸ್ತಥಾ ರಾಜನ್ ಜಾರಾಸನ್ಧಿರ್ಮಹಾಬಲಃ
। ಮಾಗಧೋ ನಿಹತಃ ಸಙ್ಖೇ ಸೌಭದ್ರೇಣ ಮಹಾತ್ಮನಾ’ (ಕರ್ಣಪರ್ವ ೨.೩೩) - ಜಯತ್ಸೇನ ಎನ್ನುವ
ಜರಾಸಂಧನ ಮಗ, ಅವನು ಸೌಭದ್ರನಿಂದ ಸತ್ತ ಎಂದು ಕರ್ಣಪರ್ವದಲ್ಲಿ ಉಲ್ಲೇಖಿಸಿದ್ದಾರೆ. ಆಚಾರ್ಯರ
ನಿರ್ಣಯದ ಪ್ರಕಾರ ಇಲ್ಲಿ ‘ಸೌಭದ್ರೇಣ ಮಹಾತ್ಮನಾ’ ಎಂದರೆ ಭೀಮ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಇದು ಅರ್ವಾಚೀನ ಪಾಠ ವ್ಯತ್ಯಾಸವೂ ಇರಬಹುದು. ಪ್ರಾಯಃ ಇದು ‘ಭೀಮೋನಾಸೌ ಮಹಾತ್ಮನಾ’ ಎಂದೂ ಇರಬಹುದು.]
ಅಶ್ವತ್ಥಾಮವಧಂ
ಶ್ರುತ್ವಾ ನಾಹಂ ಯೋತ್ಸ್ಯ ಇತಿ ಸ್ವಯಮ್ ।
ಪುರೋಕ್ತಂ ಧರ್ಮ್ಮಜಾಯೈವ
ತೇನ ದ್ರೋಣೋ ಯುಧಿಷ್ಠಿರಮ್ ॥೨೬.೨೮೭ ॥
ಬ್ರೂಹಿ ಸತ್ಯಮಿತಿ
ಪ್ರಾಹ ಸತ್ಯಮಿತ್ಯೇವ ಸೋSಬ್ರವೀತ್ ।
ಉಪಾಂಶು ಕುಞ್ಜರಶ್ಚೇತಿ
ದ್ರೋಣೋSತೋ
ವ್ಯಥಿತೋSಭವತ್ ॥೨೬.೨೮೮ ॥
‘ಅಶ್ವತ್ಥಾಮನ ಸಂಹಾರವನ್ನು ಕೇಳಿ ನಾನು ಸರ್ವಥಾ ಯುದ್ಧ
ಮಾಡಲಾರೆ’ ಎಂದು ತಾನೇ ಧರ್ಮರಾಜನಿಗಾಗಿ ಹಿಂದೆ
ದ್ರೋಣಾಚಾರ್ಯರು ಹೇಳಿದ್ದರು. ಆ ಕಾರಣದಿಂದ ದ್ರೋಣಾಚಾರ್ಯರು ಯುಧಿಷ್ಠಿರನ ಬಳಿಗೆ ಹೋಗಿ, ‘ಸತ್ಯ ಹೇಳು’ ಎಂದು ಹೇಳಿದರು. ಯುಧಿಷ್ಠಿರನಾದರೋ ‘ಸತ್ಯವೇ’ ಎಂದು
ಹೇಳಿದನು. ಆದರೆ ಮೆಲ್ಲಗೆ ‘ಆನೆಯು’ ಎಂದು ಹೇಳಿದ. ಅಶ್ವತ್ಥಾಮನ
ಸಂಹಾರದ ವಿಷಯವನ್ನು ಕೇಳಿ ದ್ರೋಣಾಚಾರ್ಯರು ಅತ್ಯಂತ
ದುಃಖಕ್ಕೊಳಗಾದರು.
[‘ತತೋ ಭೀಮೋ
ಮಹಾಬಾಹುರನೀಕೇಷು ಮಹಾಗಜಮ್ । ಜಘಾನ ಗದಯಾ ರಾಜನ್ನಶ್ವತ್ಥಾಮಾನಮಿತ್ಯುತ । ಪರಪ್ರಮಥನಂ ಘೋರಂ ಮಾಳವಸ್ಯೇನ್ದ್ರವರ್ಮಣಃ’
(ದ್ರೋಣಪರ್ವ ೧೯೧.೧೪) ‘ಅಶ್ವತ್ಥಾಮಾ ಹತ ಇತಿ
ಶಬ್ದಮುಚ್ಚೈಶ್ಚಕಾರ ಹ ಅವ್ಯಕ್ತಮಬ್ರವೀದ್ ರಾಜನ್ ಹತಃ ಕುಞ್ಜರ ಇತ್ಯುತ’ (೧೯೧.೫೪)- ಧರ್ಮರಾಜನು ಅಶ್ವತ್ಥಾಮ ಸತ್ತ ಎಂದು
ಗಟ್ಟಿಯಾಗಿ ಹೇಳಿ, ‘ಆನೆಯು’ ಎಂದು ಗೊಣಗಿದ.]
ತಸ್ಯ ಭೀಮೋ ರಥೇಷಾಂ ಚ
ಗೃಹೀತ್ವಾ ನ ತವೇದೃಶಮ್ ।
ಯೋಗ್ಯಂ ಗುಣವತೋ
ನಿತ್ಯಂ ಪರಧರ್ಮ್ಮೋಪಜೀವನಮ್ ॥೨೬.೨೮೯ ॥
ಆಗ ಭೀಮಸೇನನು
ದ್ರೋಣಾಚಾರ್ಯರ ರಥದ ನೊಗವನ್ನು ಹಿಡಿದು, ‘ಗುಣವಂತರಾದ ನಿಮಗೆ ಈರೀತಿಯಾಗಿರುವ ಬೇರೆ ವರ್ಣಕ್ಕೆ ತಕ್ಕುದಾದ ಧರ್ಮದ ಉಪಜೀವನ ಯೋಗ್ಯವಲ್ಲ’
ಎಂದು ಹೇಳಿದನು.
[ತತೋ ಭೀಮೋ
ದೃಢಕ್ರೋಧೋ ದ್ರೋಣಸ್ಯಾSಶ್ಲಿಷ್ಯ ತಂ ರಥಂ । ಶನಕೈರಿವ ರಾಜೇಂದ್ರ ದ್ರೋಣಂ ವಚನಮಬ್ರವೀತ್ । ಯದಿ ನಾಮ ನ ಯುದ್ಧ್ಯೇರನ್ ಶಿಕ್ಷಿತಾ
ಬ್ರಹ್ಮಬನ್ಧವಃ । ಸ್ವಕರ್ಮಭಿರಸನ್ತುಷ್ಟಾ ನ ಸ್ಮ ಕ್ಷತ್ರಂ ಕ್ಷಯಂ ವ್ರಜೇತ್। ಅಹಿಂಸಾಂ
ಸರ್ವಭೂತೇಷು ಧರ್ಮಂ ಜ್ಯಾಯಸ್ತರಂ ವಿದುಃ । ತಸ್ಯ ಚ ಬ್ರಾಹ್ಮಣೋ ಮೂಲಂ ಭವಾಂಶ್ಚ ಬ್ರಹ್ಮವಿತ್ತಮಃ’
(ದ್ರೋಣಪರ್ವ ೧೯೩.೩೬-೩೮) ಸ್ವಕರ್ಮಸ್ಥಾನ್ ವಿಕರ್ಮಸ್ಥೋ ನ ವ್ಯಪತ್ರಪಸೇ ಕಥಮ್’(೪೦) ಭೀಮನು
ತನ್ನ ರಥವನ್ನು ದ್ರೋಣನ ರಥದ ಸಮೀಪ ನಿಲ್ಲಿಸಿ, ನಿಧಾನವಾಗಿ ಶಾಂತತೆಯಿಂದಲೇ ಈ ಮಾತನ್ನಾಡಿದನು.
ಶಿಕ್ಷಿತರಾಗಿರುವ ನಿಮ್ಮಂತಹ ಬ್ರಹ್ಮಬಂಧುಗಳು ಯುದ್ಧ ಮಾಡದೇ ಹೋಗಿದ್ದಿದ್ದರೆ ಕ್ಷತ್ರಿಯರು
ಈರೀತಿ ನಾಶವಾಗುತ್ತಿರಲಿಲ್ಲ. ನಿಮ್ಮಂತವರು ಅಹಿಂಸೆಯಿಂದ ನಡೆದುಕೊಳ್ಳುವುದು ಪರಮಧರ್ಮ. ಹಾಗೆಯೇ ಯುದ್ಧ
ಮಾಡುವುದು ಕ್ಷತ್ರಿಯರ ಸ್ವಕರ್ಮ. ನೀವಾದರೂ ಬ್ರಹ್ಮವಿತ್ತಮರಾಗಿದ್ದು, ಸ್ವಕರ್ಮದಲ್ಲಿ
ನಿರತರಾಗಿರುವ ಅನೇಕ ಕ್ಷತ್ರಿಯರನ್ನು ಸಂಹರಿಸುತ್ತಿದ್ದೀರಲ್ಲ, ಈರೀತಿ ಮಾಡಲು ನಿಮಗೆ
ನಾಚಿಕೆಯಾಗುವುದಿಲ್ಲವೇ’ ಎಂದು ಪ್ರಶ್ನಿಸುತ್ತಾನೆ ಭೀಮಸೇನ.]
ಇತ್ಯಾಹ ಖಸ್ಥಾ
ಮುನಯಶ್ಚಾಲಮೇಹೀತಿ ತಂ ತದಾ ।
ಊಚುಸ್ತದಖಿಲಂ ಜ್ಞಾತ್ವ
ದ್ರೋಣಃ ಶಸ್ತ್ರಮವಾಸೃಜತ್ ॥೨೬.೨೯೦ ॥
ಈರೀತಿಯಾಗಿ ಭೀಮಸೇನ ಹೇಳಿದ ಸಮಯದಲ್ಲಿ ಆಕಾಶದಲ್ಲಿರುವ ಮುನಿಗಳೂ ಕೂಡಾ ‘ಸಾಕು, ಬಾ’, ಎಂದು ದ್ರೋಣಾಚಾರ್ಯರಿಗೆ ಹೇಳಿದರು.
ಅದೆಲ್ಲವನ್ನೂ ತಿಳಿದು, ದ್ರೋಣಾಚಾರ್ಯರು ಶಸ್ತ್ರವನ್ನು ಬಿಟ್ಟರು.
[‘ವಿಶ್ವಾಮಿತ್ರೋ
ಜಮದಗ್ನಿರ್ಭರದ್ವಾಜೋಽಥ ಗೌತಮಃ । ವಸಿಷ್ಠಃ ಕಶ್ಯಪೋಽತ್ರಿಶ್ಚ ಬ್ರಹ್ಮಲೋಕಂ ನಿನೀಷವಃ । (೧೯೧.೩೨)
ತ ಏನಮಬ್ರುವನ್ ಸರ್ವೇ ದ್ರೋಣಮಾಹವಶೋಭಿನಂ । ಅಧರ್ಮತಃ ಕೃತಂ ಯುದ್ಧಂ ಸಮಯೋ ನಿಧನಸ್ಯ ತೇ । ನ್ಯಸ್ಯಾSಯುಧಂ ರಣೇ ದ್ರೋಣ
ಸಮೀಕ್ಷಾಸ್ಮಾನವಸ್ಥಿತಾನ್ । ನಾತಃ ಕ್ರೂರತರಂ ಕರ್ಮ ಪುನಃ ಕರ್ತುಮಿಹಾರ್ಹಸಿ । ವೇದವೇದಾಙ್ಗವಿದುಷಃ
ಸತ್ಯಧರ್ಮರತಸ್ಯ ಚ ।ಬ್ರಾಹ್ಮಣಸ್ಯ ವಿಶೇಷೇಣ ತವೈತನ್ನೋಪಪದ್ಯತೇ । ತ್ಯಜಾಯುಧಮಮೋಧೇಷೋ ತಿಷ್ಠ
ವರ್ತ್ಮನಿ ಶಾಶ್ವತೇ । ಪರಿಪೂರ್ಣಶ್ಚ ಕಾಲಸ್ತೇ ವಸ್ತುಂ ಲೋಕೇಽದ್ಯ ಮಾನುಷೇ । ಬ್ರಹ್ಮಾಸ್ತ್ರೇಣ
ತ್ವಯಾ ದಗ್ಧಾ ಅನಸ್ತ್ರಜ್ಞಾ ನರಾ ಭುವಿ । ಯದೇತದೀದೃಶಂ ವಿಪ್ರ ಕೃತಂ ಕರ್ಮ ನ ಸಾಧು ತತ್ । ನ್ಯಸ್ಯಾSಯುಧಂ ರಣೇ ವಿಪ್ರ ದ್ರೋಣ ಮಾ ತ್ವಂ ಚಿರಂ ಕೃಥಾಃ । ಮಾ ಪಾಪಿಷ್ಠತರಂ ಕರ್ಮ ಕರಿಷ್ಯಸಿ
ಪುನರ್ದ್ವಿಜ’ (೩೪-೩೯) – ವಿಶ್ವಾಮಿತ್ರ, ಜಮದಗ್ನಿ, ಭಾರಧ್ವಾಜ, ಗೌತಮ, ವಸಿಷ್ಠ, ಕಶ್ಯಪ, ಹೀಗೆ ಅನೇಕ ಋಷಿಗಳು ಆಕಾಶದಿಂದ ಮಾತನಾಡುತ್ತಾರೆ- ‘ಇಲ್ಲಿಗೇ ಕೊನೆ.
ಇದಕ್ಕಿಂತ ಕೆಟ್ಟ ಕೆಲಸವನ್ನು ಇನ್ನು ಮಾಡಬೇಡ. ಆಯುಧವನ್ನು ಕೆಳಗಿಡು. ಇಲ್ಲಿ ಬಂದು ನಿಂತಿರುವ
ನಮ್ಮನ್ನು ಸರಿಯಾಗಿ ನೋಡು. ಈ ಕ್ರೂರತರ ಕರ್ಮವನ್ನು ಮಾಡುವುದು ನಿನಗೆ ಸರಿಯಲ್ಲ. ವೇದ-ವೇದಾಂಗಪಾರಂಗತನಾಗಿರುವೆ.
ಸತ್ಯ-ಧರ್ಮಪರಾಯಣನಾಗಿರುವೆ. ಎಲ್ಲಕ್ಕಿಂತಲೂ ಮಿಗಿಲಾಗಿ ಬ್ರಾಹ್ಮಣನಾಗಿರುವೆ. ನಿನ್ನಂತವನಿಗೆ ಈ
ವಿನಾಶಕಾರ್ಯವು ಖಂಡಿತವಾಗಿ ಶೋಭಿಸುವುದಿಲ್ಲ. ಅಮೋಘ ಬಾಣಗಳನ್ನು
ಹೊಂದಿರುವವನೇ, ಆಯುಧವನ್ನು ತೊರೆ. ಶಾಶ್ವತದಲ್ಲಿ ಬುದ್ಧಿಯನ್ನಿರಿಸು. ಮನುಷ್ಯ ಲೋಕದಲ್ಲಿ ನಿನ್ನ
ವಾಸದ ಕಾಲವು ಪರಿಪೂರ್ಣವಾಗಿದೆ.]
No comments:
Post a Comment