ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, March 17, 2023

Mahabharata Tatparya Nirnaya Kannada 26-259-265

 

ತದಾ ನನರ್ತ್ತ ಕೇಶವಃ ಸಮಾಶ್ಲಿಷಚ್ಚ ಫಲ್ಗುನಮ್ ।

ನನಾದ ಶಙ್ಖಮಾಧಮಜ್ಜಹಾಸ ಚೋರುನಿಸ್ವನಃ ॥೨೬.೨೫೯ ॥

 

ಶಕ್ತ್ಯಾಯುಧದಿಂದ ಘಟೋತ್ಕಚ ಸಾಯುತ್ತಿರಲು, ಇತ್ತ ಶ್ರೀಕೃಷ್ಣಪರಮಾತ್ಮನು ಕುಣಿದಾಡಿದನು. ಅರ್ಜುನನನ್ನು ಆಲಂಗಿಸಿದ ಕೃಷ್ಣ, ಗಟ್ಟಿಯಾಗಿ ನಕ್ಕು (ಹೂಂಕಾರ ಮಾಡಿ) ಶಂಖವನ್ನೂದಿದನು.  

 

ತಮಪೃಚ್ಛದ್ ಗುಡಾಕೇಶಃ ಕಿಮೇತದಿತಿ ದುರ್ಮ್ಮನಾಃ ।

ಹತೇ ಸುತೇSಗ್ರಜೇSಸ್ಮಾಕಂ ವೀರೇ ಕಿಂ ನನ್ದಸಿ ಪ್ರಭೋ ॥೨೬.೨೬೦ ॥

 

ಆಗ ಅರ್ಜುನನು ದುಃಖಗೊಂಡ ಮನಸ್ಸಿನವನಾಗಿ – ‘ಏನಿದು ಕೃಷ್ಣಾ,  ನಮ್ಮ ವೀರನಾದ ಮೊದಲ ಮಗ ಸತ್ತರೆ ನೀನು ಸಂತೋಷಪಡುತ್ತಿರುವೆಯಲ್ಲಾ’  ಎಂದು ಕಹಿಯಾಗಿ ಕೇಳಿದನು.

 

ತಮಾಹ ಭಗವಾನ್ ಕೃಷ್ಣೋ ದಿಷ್ಟ್ಯಾ ಜೀವಸಿ ಫಲ್ಗುನ ।

ತ್ವದರ್ತ್ಥಂ ನಿಹಿತಾ ಶಕ್ತಿರ್ವಿಮುಕ್ತಾSಸ್ಮಿನ್ ಹಿ ರಾಕ್ಷಸೇ ॥೨೬.೨೬೧ ॥

 

ಆಗ ಶ್ರೀಕೃಷ್ಣ- ‘ಎಲೋ ಅರ್ಜುನನೇ, ಬದುಕಿದೆ ನೀನು. ನಿನಗಾಗಿ ಕಾದಿರಿಸಿದ ಶಕ್ತ್ಯಾಯುಧವು ಈ ಘಟೋತ್ಕಚನಲ್ಲಿ ಬಿಡಲ್ಪಟ್ಟಿತು' ಎಂದನು.

 

ತತೋ ಯುಧಿಷ್ಠಿರೋ ದುಃಖಾದಮರ್ಷಾಚ್ಚಾಭ್ಯವರ್ತ್ತತ ।

ಕರ್ಣ್ಣಂ ಪ್ರತಿ ತಮಾಹಾಥ ಕೃಷ್ಣದ್ವೈಪಾಯನಃ ಪ್ರಭುಃ ॥೨೬.೨೬೨ ॥

 

ತದನಂತರ ಯುಧಿಷ್ಠಿರನು ದುಃಖದಿಂದಲೂ, ಸಿಟ್ಟಿನಿಂದಲೂ, ಕರ್ಣನನ್ನು ಕುರಿತು ಯುದ್ಧಕ್ಕೆಂದು ಹೊರಟನು. ಆಗ ಅಲ್ಲಿ ಪ್ರತ್ಯಕ್ಷರಾದ ವೇದವ್ಯಾಸರು ಯುಧಿಷ್ಠಿರನನ್ನು ಕುರಿತು ಹೇಳಿದರು-

 

ಯಯಾSರ್ಜ್ಜುನೋ ನಿಹನ್ತವ್ಯಸ್ತಯಾSಸೌ ರಾಕ್ಷಸೋ ಹತಃ ।

ತನ್ಮಾ ಶುಚಸ್ತ್ವಂ ರಾಜೇನ್ದ್ರ ದಿಷ್ಟ್ಯಾ ಜೀವತಿ ಫಲ್ಗುನಃ ।

ಇತ್ಯುಕ್ತ್ವಾ ಪ್ರಯಯೌ ವ್ಯಾಸಸ್ತತೋ ಯುದ್ಧಮವರ್ತ್ತತ ॥೨೬.೨೬೩ ॥

 

‘ಯಾವುದರಿಂದ ಅರ್ಜುನನು ಕೊಲ್ಲಲ್ಪಡಬೇಕಿದ್ದನೋ, ಅದರಿಂದ ಈ ರಾಕ್ಷಸನೇ ಸಂಹರಿಸಲ್ಪಟ್ಟನು. ಆ ಕಾರಣ ಓ ರಾಜೇಂದ್ರ, ದುಃಖಿಸಬೇಡ. ಅರ್ಜುನನು ದೈವಸಂಕಲ್ಪದಿಂದ ಬದುಕಿದ್ದಾನೆ’. ಹೀಗೆ ಹೇಳಿ, ವೇದವ್ಯಾಸರು ಅಲ್ಲಿಂದ ತೆರಳಿದರು. ಆನಂತರ ಮತ್ತೆ ಯುದ್ಧ ಪ್ರಾರಂಭವಾಯಿತು.

 

ಭೀಮಾರ್ಜ್ಜುನಾಭ್ಯಾಮಿಹ ಹನ್ಯಮಾನೇ ಬಲೇ ಕುರೂಣಾಮಿತರೈಶ್ಚ ಪಾಣ್ಡವೇ ।

ಪ್ರದೀಪಹಸ್ತಾ ಅಥ ಯೋಧಕಾಶ್ಚ ಸರ್ವೇSಪಿ ನಿದ್ರಾವಶಗಾ ಬಭೂವುಃ ॥೨೬.೨೬೪ ॥

 

ಆ ರಾತ್ರಿ ಯುದ್ಧದಲ್ಲಿ ಭೀಮಸೇನ ಹಾಗೂ ಅರ್ಜುನರಿಂದ ಕೌರವಸೇನೆಯು ಕೊಲ್ಲಲ್ಪಡುತ್ತಿರಲು, ಹಾಗೆಯೇ ಕೌರವರಿಂದ ಪಾಂಡವಸೇನೆಯು ಕೊಲ್ಲಲ್ಪಡುತ್ತಿರಲು, ದೊಂದಿ(ದೀವಟಿಗೆ)ಯನ್ನು ಹಿಡಿದವರೂ, ಯುದ್ಧ ಮಾಡತಕ್ಕ ವೀರರೂ, ಹೀಗೆ ಎಲ್ಲರೂ ಕೂಡಾ ನಿದ್ರಾವಶರಾದರು.

 

ದೃಷ್ಟ್ವೈವ ತಾನಾಹ ಧನಞ್ಜಯಸ್ತದಾ ಸ್ವಪ್ಸ್ಯನ್ತು ಯಾವಚ್ಛಶಿನಃ ಪ್ರಕಾಶಃ ।

ಇತೀರಿತಾ ಆಶಿಷಃ ಫಲ್ಗುನಾಯ ಪ್ರಯುಜ್ಯ ಸರ್ವೇ ಸುಷುಪುರ್ಯ್ಯಥಾಸ್ಥಿತಾಃ ॥೨೬.೨೬೫ ॥

 

ಈರೀತಿ ನಿದ್ರಾಧೀನರಾದವರನ್ನು ಕಂಡ ಧನಂಜಯ- ‘ಚಂದ್ರನ ಬೆಳಕು ಆಗುವ ತನಕ ನೀವೆಲ್ಲರೂ ಮಲಗಿ’ ಎಂದು ಹೇಳಿದ. ಹೀಗೆ ಹೇಳಲ್ಪಟ್ಟ ಅವರೆಲ್ಲರೂ ಅರ್ಜುನನಿಗೆ ಆಶೀರ್ವಾದ ಮಾಡಿ, ಎಲ್ಲಿದ್ದರೋ ಅಲ್ಲೇ ಮಲಗಿದರು.

No comments:

Post a Comment