ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, March 12, 2023

Mahabharata Tatparya Nirnaya Kannada 26-205-210

 

ಸುಯೋಧನಃ ಕರ್ಣ್ಣಮಾಹ ಜಹಿ ಭೀಮಮಿಮಂ ಯುಧಿ ।

ಸ ಆಹ ನೈಷ ಶಕ್ಯೋ ಹಿ ಜೇತುಂ ದೇವೈಃ ಸವಾಸವೈಃ ॥೨೬.೨೦೫ ॥

 

ದೈವಾಜ್ಜೀವಾಮ್ಯಹಂ ರಾಜನ್ ಯುದ್ಧ್ಯನೇನಾತಿಪೀಡಿತಃ  ।

ಅತೋ ಘಟಾಮಹೇ ಶಕ್ತ್ಯಾ ಜಯೋ ದೈವೇ ಸಮಾಹಿತಃ ॥೨೬.೨೦೬ ॥

 

ದುರ್ಯೋಧನನು ಕರ್ಣನನ್ನು ಕುರಿತು ಹೇಳುತ್ತಾನೆ- ‘ಈ ಭೀಮಸೇನನನ್ನು ಯುದ್ಧದಲ್ಲಿ ಕೊಂದು ಬಿಡು’ ಎಂದು. ಆಗ ಕರ್ಣನು- ‘ಇಂದ್ರ ಮೊದಲಾದ ದೇವತೆಗಳಿಂದಲೂ ಕೂಡಾ, ಭೀಮನು ಜಯಿಸಲು ಶಕ್ಯನಲ್ಲ ಎಂದು ಹೇಳಿದನು. ಭೀಮಸೇನನೊಂದಿಗೆ ಯುದ್ಧ ಮಾಡುತ್ತಾ ಅತ್ಯಂತ ಪೀಡೆಗೆ ಒಳಗಾಗಿ, ದೇವ ಸಂಕಲ್ಪದಿಂದ ನಾನು ಬದುಕುಳಿದಿದ್ದೇನೆ. ಆ ಕಾರಣದಿಂದ ಶಕ್ತ್ಯಾನುಸಾರ  ಹೋರಾಡುತ್ತೇನೆ. ನಿಜವಾದ ಜಯ ದೈವಸಂಕಲ್ಪದಂತೆ  ಸಿಗುತ್ತದೆ.

[ದೃಢಲಕ್ಷೇಣ ವೀರೇಣ ಭೀಮಸೇನೇನ ಧನ್ವಿನಾ । ಭೃಶಂ ಭಿನ್ನತನುಃ ಸಙ್ಖ್ಯೇ ಶರಜಾಲೈರನೇಕಶಃ । ಸ್ಥಾತವ್ಯಮಿತಿ ತಿಷ್ಠಾಮಿ ರಣೇ ಸಂಪ್ರತಿ ಮಾನದ । ನಾಙ್ಗಮಿಙ್ಗತಿ ಕಿಞ್ಚಿನ್ಮೇ ಸಂತಪ್ತಸ್ಯ ಮಹೇಷುಭಿಃ । (ದ್ರೋಣಪರ್ವ-೧೪೬.೪೧-೪೨); ‘ಯತ್ತು ಭಕ್ತಿಮತಾ ಕಾರ್ಯಂ ಸತತಂ ಹಿತಕಾಙ್ಕ್ಷಿಣಾ ।  ತತ್ ಕರಿಷ್ಯಾಮಿ ಕೌರವ್ಯ ಜಯೋ ದೈವೇ ಪ್ರತಿಷ್ಠಿತಃ’ (೪೬)

ಇದು ಕರ್ಣನು ದುರ್ಯೋಧನನನ್ನು ಕುರಿತು ಹೇಳಿರುವ ಮಾತಾಗಿದೆ- ‘ಗುರಿಯಲ್ಲಿ ದೃಢನಾದ ಶೂರಧನ್ವಿ ಭೀಮಸೇನನ ಬಾಣಗಳಿಂದ ರಣದಲ್ಲಿ ನಾನು ತುಂಬಾ ಪೀಡೆಗೊಳಗಾಗಿದ್ದೇನೆ. ಕೇವಲ ಯುದ್ಧರಂಗದಲ್ಲಿ ಇರಬೇಕು ಎಂಬ ಒಂದೇ ಕಾರಣದಿಂದ ನಾನಿನ್ನೂ ಇಲ್ಲಿ ನಿಂತಿದ್ದೇನೆ. ಭೀಮಸೇನನ ಬಾಣಗಳಿಂದ ನನ್ನ ಅಂಗಾಂಗಗಳೆಲ್ಲವೂ ಅತಿನೋವನ್ನನುಭವಿಸಿವೆ. ಹೀಗಿದ್ದರೂ, ನಿನ್ನ ಸೇವಕನಾದ ನಾನು ನಿನಗಾಗಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಆದರೆ ಜಯವು ದೈವದ ಮೇಲೆ ನಿಂತಿದೆ’].

 

ದುರ್ಯ್ಯೋಧನೋ ದ್ರೋಣಮಾಹ ಸೈನ್ಧವಸ್ತ್ವದುಪೇಕ್ಷಯಾ ।

ಪಾರ್ತ್ಥೇನ ನಿಹತೋ ಭೀಮಸಾತ್ಯಕಿಭ್ಯಾಂ ಚ ಮೇ ಬಲಮ್ ॥೨೬.೨೦೭ ॥

 

ಪ್ರತಿಜ್ಞಾ ಚ ಪರಿತ್ಯಕ್ತಾ ಪಾಣ್ಡವಸ್ನೇಹತಸ್ತ್ವಯಾ ।

ಇತ್ಯುಕ್ತಃ ಕುಪಿತೋ ದ್ರೋಣಃ ಪ್ರತಿಜ್ಞಾಮಕರೋತ್ ತತಃ ॥೨೬.೨೦೮ ॥

 

ನಂತರ ದುರ್ಯೋಧನನು ದ್ರೋಣಾಚಾರ್ಯರನ್ನು ಕುರಿತು ಹೇಳಿದನು- ‘ನೀವು ಕಡೆಗಣಿಸಿದ್ದುದರಿಂದ ಜಯದ್ರಥನು ಅರ್ಜುನನಿಂದ ಸಂಹರಿಸಲ್ಪಟ್ಟ. ಭೀಮ ಹಾಗೂ ಸಾತ್ಯಕಿ ನನ್ನ ಸೈನ್ಯವನ್ನು ಕೊಂದರು. (ಇವೆಲ್ಲವುದಕ್ಕೂ ನೀವೇ ಹೊಣೆ ಎಂಬ ಧ್ವನಿ). ಪಾಂಡವರ ಮೇಲಿನ ಪ್ರೀತಿಯಿಂದ ನಿಮ್ಮಿಂದ ಪ್ರತಿಜ್ಞೆಯು ಬಿಡಲ್ಪಟ್ಟಿತು(ಜಯದ್ರತನನ್ನು ರಕ್ಷಿತ್ತೇನೆ ಎನ್ನುವ ಪ್ರತಿಜ್ಞೆ)’.  ಈರೀತಿಯಾಗಿ ಹೇಳಲ್ಪಟ್ಟ ದ್ರೋಣಾಚಾರ್ಯರು ಕುಪಿತರಾಗಿ ಪ್ರತಿಜ್ಞೆಯನ್ನು ಮಾಡಿದರು- 

 

ಇತಃ ಪರಂ ನೈವ ರಣಾದ್ ರಾತ್ರಾವಹನಿ ವಾ ಕ್ವಚಿತ್ ।

ಗಚ್ಛೇಯಂ ನಚ ಮೋಕ್ಷ್ಯಾಮಿ ವರ್ಮ್ಮ ಬದ್ಧಂ  ಕಥಞ್ಚನ ॥೨೬.೨೦೯ ॥

 

ಮತ್ಪುತ್ರಶ್ಚ ತ್ವಯಾ ವಾಚ್ಯಃ ಪಾಞ್ಚಾಲಾನ್ ನೈವ ಶೇಷಯೇಃ ।

ಸದೌಹಿತ್ರಾನಿತೀತ್ಯುಕ್ತ್ವಾ ವಿಜಗಾಹೇ ನಿಶಾಗಮೇ ॥೨೬.೨೧೦ ॥

 

ಇನ್ನು ಮುಂದೆ ರಾತ್ರಿಯಾಗಲೀ ಹಗಲಿನಲ್ಲಾಗಲೀ, ಯುದ್ಧಭೂಮಿಯಿಂದ ಹೋಗುವುದಿಲ್ಲ. ಇಲ್ಲೇ ಇದ್ದು ಯುದ್ಧ ಮಾಡುತ್ತೇನೆ.  ಕಟ್ಟಲ್ಪಟ್ಟ ಈ ಕವಚವನ್ನು ನಾನು ಬಿಚ್ಚುವುದೇ ಇಲ್ಲ.

ಒಂದು ವೇಳೆ ನಾನು ಸತ್ತರೆ, ನೀನು ನನ್ನ ಮಗನಿಗೆ ಈರೀತಿಯಾಗಿ ಹೇಳಬೇಕು- ‘ಯಾವುದೇ ಕಾರಣಕ್ಕೂ ಪಾಂಚಾಲ ದೇಶದವರನ್ನು ಉಳಿಸಬೇಡ. ಅಷ್ಟೇ ಅಲ್ಲಾ, ಪಾಂಡವರ(ಪಾಂಚಾಲ ದೇಶದವಳಾದ ದ್ರೌಪದಿಯ) ಮಕ್ಕಳನ್ನೂ ಕೂಡಾ ಕೊಲ್ಲಬೇಕು’ ಎಂದು ಹೇಳಿ, ರಾತ್ರಿಯಾಗುತ್ತಿದ್ದರೂ ದ್ರೋಣಾಚಾರ್ಯರು  ಯುದ್ಧ ಮುಂದುವರಿಸಿದರು.  

No comments:

Post a Comment