ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 4, 2023

Mahabharata Tatparya Nirnaya Kannada 26-112-128

 

ಶಿನಿಪ್ರವೀರೇ ತು ಗತೇ ಯುಧಿಷ್ಠಿರಃ ಪುನಶ್ಚ ಚಿನ್ತಾಕುಲಿತೋ ಬಭೂವ ಹ ।

ಜಗಾದ ಭೀಮಂ ಚ ನ ಗಾಣ್ಡಿವಧ್ವನಿಃ ಸಂ ಶ್ರೂಯತೇ ಪಾಞ್ಚಜನ್ಯಸ್ಯ ರಾವಃ ॥ ೨೬.೧೧೨ ॥

 

ಇತ್ತ ಸಾತ್ಯಕಿ ತೆರಳಿದ ಮೇಲೆ ಯುಧಿಷ್ಠಿರನು ಮತ್ತೆ ಚಿಂತಿತನಾಗಿ ಭೀಮನಲ್ಲಿ- ‘ಗಾಣ್ಡಿವದ ಧ್ವನಿ ಕೇಳಿಸುತ್ತಿಲ್ಲ, ಕೇವಲ ಪಾಂಚಜನ್ಯದ ಶಬ್ದ ಕೇಳಿಸುತ್ತಿದೆ’ ಎಂದು ಹೇಳಿದನು.

 

ಮಯಾ ನಿಯುಕ್ತಶ್ಚ ಗತಃ ಸ ಸಾತ್ಯಕಿರ್ಭಾರಂ ಚ ತಸ್ಯಾಧಿಕಮೇವ ಮನ್ಯೇ ।

ತತ್ ಪಾಹಿ ಪಾರ್ತ್ಥಂ ಯುಯುಧಾನಮೇವ ಚ ತ್ವಂ ಭೀಮ ಗತ್ವಾ ಯದಿ ಜೀವತಸ್ತೌ ॥ ೨೬.೧೧೩ ॥

 

‘ನನ್ನಿಂದ ನಿಯೋಗಿಸಲ್ಪಟ್ಟ ಸಾತ್ಯಕಿಯು ಇಲ್ಲಿಂದ ಹೋಗಿರುವನು. ಅವನ ಮೇಲೆ ಹೆಚ್ಚಿನ ಭಾರ ಹಾಕಿದೆನೋ ಏನೋ ಎಂದು ನನಗನಿಸುತ್ತಿದೆ. ಆದ ಕಾರಣ ಅರ್ಜುನ-ಸಾತ್ಯಕಿ ಬದುಕಿದ್ದರೆ ನೀನೇ ಹೋಗಿ ಅವರಿಬ್ಬರನ್ನು ರಕ್ಷಿಸು’.

 

 ಇತೀರಿತಃ ಪ್ರಾಹ ವೃಕೋದರಸ್ತಂ ನ ರಕ್ಷಿತಂ ವಾಸುದೇವೇನ ಪಾರ್ತ್ಥಮ್ ।

ಬ್ರಹ್ಮೇಶಾನಾವಪಿ ಜೇತುಂ ಸಮರ್ತ್ಥೌ ಕಿಂ ದ್ರೌಣಿಕರ್ಣ್ಣಾದಿಧನುರ್ಭೃತೋSತ್ರ ॥ ೨೬.೧೧೪ ॥

 

ಈರೀತಿಯಾಗಿ ಯುಧಿಷ್ಠಿರನಿಂದ ಹೇಳಲ್ಪಟ್ಟ ಭೀಮಸೇನನು ಹೇಳುತ್ತಾನೆ- ‘ವಾಸುದೇವನಿಂದ ರಕ್ಷಿಸಲ್ಪಟ್ಟ ಅರ್ಜುನನನ್ನು ಬ್ರಹ್ಮ-ರುದ್ರಾದಿಗಳೂ ಕೂಡಾ ಗೆಲ್ಲಲು ಸಮರ್ಥರಲ್ಲ. ಇನ್ನು ಅಶ್ವತ್ಥಾಮ, ಕರ್ಣ, ಮೊದಲಾದವರು ಅವನನ್ನು ಜಯಿಸುವ ವಿಷಯದಲ್ಲಿ ಅಸಮರ್ಥರು ಎಂದು ಏನು ಹೇಳಬೇಕು?  

 

ಅತೋ ಭಯಂ ನಾಸ್ತಿ ಧನಞ್ಚಯಸ್ಯ ನ ಸಾತ್ಯಕೇಶ್ಚೈವ ಹರೇಃ ಪ್ರಸಾದಾತ್ ।

ರಕ್ಷ್ಯಸ್ತ್ವಮೇವಾತ್ರ ಮತೋ ಮಮಾದ್ಯ ದ್ರೋಣೋ ಹ್ಯಯಂ ಯತತೇ ತ್ವಾಂ ಗೃಹೀತುಮ್ ॥ ೨೬.೧೧೫ ॥

 

ಪರಮಾತ್ಮನ ಅನುಗ್ರಹದಿಂದಾಗಿ ಅರ್ಜುನನಿಗಾಗಲೀ, ಸಾತ್ಯಕಿಗಾಗಲೀ ಭಯವಿಲ್ಲ. ಆದರೆ ಇಲ್ಲಿ  ದ್ರೋಣನು ನಿನ್ನನ್ನು ಹಿಡಿಯಲು ಪ್ರಯತ್ನಪಡುತ್ತಿದ್ದಾನೆ. ಹೀಗಾಗಿ ಈಗ ನನ್ನಿಂದ ನೀನೇ ರಕ್ಷಾರ್ಹನಾಗಿರುವೆ’.

 

ಇತೀರಿತಃ ಪ್ರಾಹ ಯುಧಿಷ್ಠಿರಸ್ತಂ ನ ಜೀವಮಾನೇ ಯುಧಿ ಮಾಂ ಘಟೋತ್ಕಚೇ ।

ಧೃಷ್ಟದ್ಯುಮ್ನೇ ಚಾಸ್ತ್ರವಿದಾಂ ವರಿಷ್ಠೇ ದ್ರೋಣೋ ವಶಂ ನೇತುಮಿಹ ಪ್ರಭುಃ ಕ್ವಚಿತ್ ॥ ೨೬.೧೧೬ ॥

 

ಈರೀತಿಯಾಗಿ ಹೇಳಲ್ಪಟ್ಟ ಯುಧಿಷ್ಠಿರ ಭೀಮಸೇನನನ್ನು ಕುರಿತು ಹೇಳುತ್ತಾನೆ- ‘ಯುದ್ಧದಲ್ಲಿ ಘಟೋತ್ಕಚ ಮತ್ತು ಅಸ್ತ್ರಜ್ಞರಲ್ಲಿ ಶ್ರೇಷ್ಠನಾದ ಧೃಷ್ಟದ್ಯುಮ್ನ ಬದುಕಿರುವ ತನಕ ದ್ರೋಣನು ನನ್ನನ್ನು ಸೆರೆಯಾಗಿ ಕೊಂಡಯ್ಯಲು ಸಮರ್ಥನಲ್ಲ.

 

ಯದಿ ಪ್ರಿಯಂ ಕರ್ತ್ತುಮಿಹೇಚ್ಛಸಿ ತ್ವಂ ಮಮ ಪ್ರಯಾಹ್ಯಾಶು ಚ ಪಾರ್ತ್ಥಸಾತ್ಯಕೀ ।

ರಕ್ಷಸ್ವ ಸಙ್ಜ್ಞಾಮಪಿ ಸಿಂಹನಾದಾತ್ ಕುರುಷ್ವ ಮೇ ಪಾರ್ತ್ಥಶೈನೇಯದೃಷ್ಟೌ ॥ ೨೬.೧೧೭ ॥

 

ನನಗೆ ಇಷ್ಟವಾದುದ್ದನ್ನು ಮಾಡಲು ನೀನು ಬಯಸುವಿಯಾದರೆ, ಶೀಘ್ರದಲ್ಲಿ ಅರ್ಜುನ-ಸಾತ್ಯಕಿಯರನ್ನು ಕುರಿತು ಹೋಗಿ ಅವರನ್ನು ರಕ್ಷಿಸು. ಅವರನ್ನು ನೋಡಿದಮೇಲೆ ಸಿಂಹನಾದದಿಂದ ನನಗೆ ಸೂಚನೆಯನ್ನು ಮಾಡು.

 

ತಥಾ ಹತೇ ಚೈವ ಜಯದ್ರಥೇ ಮೇ ಕುರುಷ್ವ ಸಙ್ಜ್ಞಾಮಿತಿ ತೇನ ಭೀಮಃ ।

ಉಕ್ತಸ್ತು ಹೈಡಿಮ್ಬಮಮುಷ್ಯ ರಕ್ಷಣೇ ವ್ಯಧಾಚ್ಚ ಸೇನಾಪತಿಮೇವ ಸಮ್ಯಕ್ ॥ ೨೬.೧೧೮ ॥

 

ಹಾಗೆಯೇ ಜಯದ್ರಥನು ಕೊಲ್ಲಲ್ಪಡುತ್ತಿರಲು ನನಗೆ ಸೂಚನೆಯನ್ನು ಮಾಡು’ ಎಂದು ಹೇಳಿದ. ಹೀಗೆ ಹೇಳಲ್ಪಟ್ಟ ಭೀಮಸೇನನು ಯುಧಿಷ್ಠಿರನ ರಕ್ಷಣೆಯ ವಿಷಯದಲ್ಲಿ ಘಟೋತ್ಕಚ ಮತ್ತು ಸೇನಾಧಿಪತಿ ಧೃಷ್ಟದ್ಯುಮ್ನನನ್ನು ನೇಮಿಸಿದನು.

 

ಸ ಚಾSಹ ಸೇನಾಪತಿರತ್ರ ಭೀಮಂ ಪ್ರಯಾಹಿ ತೌ ಯತ್ರ ಚ ಕೇಶವಾರ್ಜ್ಜುನೌ ।

ನ ಜೀವಮಾನೇ ಮಯಿ ಧರ್ಷಿತುಂ ಕ್ಷಮೋ ದ್ರೋಣೋ ನೃಪಂ ಮೃತ್ಯುರಹಂ ಚ ತಸ್ಯ ॥ ೨೬.೧೧೯ ॥

 

ಆಗ ಸೇನಾಧಿಪತಿಯಾದ ಧೃಷ್ಟದ್ಯುಮ್ನನು ಭೀಮನನ್ನು ಕುರಿತು ಹೇಳುತ್ತಾನೆ– ‘ಎಲ್ಲಿ ಕೃಷ್ಣಾರ್ಜುನರಿದ್ದಾರೋ ಅಲ್ಲಿಗೆ ಹೋಗು. ನಾನು ಬದುಕಿರಬೇಕಾದರೆ ದ್ರೋಣನು ಧರ್ಮರಾಜನನ್ನು ಸೆರೆಹಿಡಿಯಲು ಶಕ್ತನಲ್ಲ. ನಾನೇ ದ್ರೋಣನ ಸಾವೂ ಆಗಿದ್ದೇನೆ’ ಎಂದು.

 

ಇತಿ ಬ್ರುವಾಣೇ ಪ್ರಣಿಧಾಯ ಭೀಮಃ ಪುನಃ ಪುನಸ್ತಂ ನೃಪತಿಂ ಗದಾಧರಃ ।

ಯಯೌ ಪರಾನೀಕಮಧಿಜ್ಯಧನ್ವಾ ನಿರನ್ತರಂ ಪ್ರವಪನ್ ಬಾಣಪೂಗಾನ್ ॥ ೨೬.೧೨೦ ॥

 

ಈರೀತಿಯಾಗಿ ಅವರಿಂದ ಪುನಃ ಹೇಳಲ್ಪಟ್ಟ ಭೀಮಸೇನನು ಧೃಷ್ಟದ್ಯುಮ್ನನನ್ನು ಧರ್ಮರಾಜನ ರಕ್ಷಣೆಯಲ್ಲಿ ಸ್ಥಾಪಿಸಿ, ಗದೆಯನ್ನು ಹಿಡಿದು, ಧನುಸ್ಸಿನಿಂದ  ಶತ್ರುಗಳ ಸೈನ್ಯದ ಮೇಲೆ ಬಾಣಗಳ ಸಮೂಹವನ್ನು ನಿರಂತರವಾಗಿ ಎರಚುತ್ತಾ ಮುನ್ನುಗ್ಗಿದ.

 

ನ್ಯವಾರಯತ್ ತಂ ಶರವರ್ಷಧಾರೋ ದ್ರೋಣೋ ವಚಶ್ಚೇದಮುವಾಚ ಭೀಮಮ್ ।

ಶಿಷ್ಯಸ್ನೇಹಾದ್ ವಾಸವಿಃ ಸಾತ್ಯಕಿಶ್ಚ ಮಯಾ ಪ್ರಮುಕ್ತೌ ಭೃಶಮಾನತೌ ಮಯಿ ॥ ೨೬.೧೨೧ ॥

 

ಹೀಗೆ ಮುನ್ನುಗ್ಗುತ್ತಿರುವ ಭೀಮಸೇನನನ್ನು ಬಾಣಗಳ ಮಳೆಗರೆಯುತ್ತಿರುವ ದ್ರೋಣನು ತಡೆದು ಹೀಗೆ ಹೇಳಿದ- ‘ಶಿಷ್ಯ ಪ್ರೀತಿಯಿಂದಾಗಿ ಅರ್ಜುನನೂ, ಸಾತ್ಯಕಿಯೂ ನನ್ನಿಂದ ಬಿಡಲ್ಪಟ್ಟಿದ್ದಾರೆ.

 

ಸ್ವೀಯಾ ಪ್ರತಿಜ್ಞಾSಪಿ ಹಿ ಸೈನ್ಧವಸ್ಯ ಗುಪ್ತೌ ಮಯಾ ಪಾರ್ತ್ಥಕೃತೇ ವಿಸೃಷ್ಟಾ

ದಾಸ್ಯೇ ನ ತೇ ಮಾರ್ಗ್ಗಮಹಂ ಕಥಞ್ಚಿದ್ ಪಶ್ಯಾಸ್ತ್ರವೀರ್ಯಂ ಮಮ ದಿವ್ಯಮದ್ಭುತಮ್ ॥ ೨೬.೧೨೨ ॥

 

ಜಯದ್ರಥನನ್ನು ರಕ್ಷಿಸುತ್ತೇನೆ ಎಂದು ಮಾಡಿದ ನನ್ನ ಪ್ರತಿಜ್ಞೆಯೂ ಕೂಡಾ ಅರ್ಜುನನಿಗಾಗಿ ಬಿಡಲ್ಪಟ್ಟಿತು. ಆದರೆ ನಿನಗೆ ಮಾತ್ರ ಯಾವುದೇ ಕಾರಣಕ್ಕೂ ನಾನು ದಾರಿ ಕೊಡುವುದಿಲ್ಲ. ನನ್ನ ಅಲೌಕಿಕವಾಗಿರುವ ಅದ್ಭುತವಾಗಿರುವ ಅಸ್ತ್ರದ ಸಾಮರ್ಥ್ಯವನ್ನು ನೋಡು’.

 

ಇತ್ಯುಕ್ತವಾಕ್ಯಃ  ಸ ಗದಾಂ ಸಮಾದದೇ ಚಿಕ್ಷೇಪ ತಾಂ ದ್ರೋಣರಥಾಯ ಭೀಮಃ ।

ಉವಾಚ ಚಾಹಂ ಪಿತೃವನ್ಮಾನಯೇ ತ್ವಾಂ ಸದಾ ಮೃದುಸ್ತ್ವಾಂ ಪ್ರತಿ ನಾನ್ಯಥಾ ಕ್ವಚಿತ್ ॥ ೨೬.೧೨೩ ॥

 

ಈರೀತಿಯಾಗಿ ದ್ರೋಣಾಚಾರ್ಯರಿಂದ ಹೇಳಲ್ಪಟ್ಟಾಗ ಭೀಮನು ತನ್ನ ಗದೆಯನ್ನು ದ್ರೋಣನ ರಥವನ್ನು ಗುರಿಯಾಗಿಸಿಕೊಂಡು ಎಸೆದ ಮತ್ತು ಹೇಳಿದ ಕೂಡಾ- ‘ನಾನು ನಿನ್ನನ್ನು ತಂದೆಯಂತೆ ಗೌರವಿಸುತ್ತೇನೆ. ಅದರಿಂದಾಗಿಯೇ ನಿನ್ನ ಬಳಿ ಮೃದುವಾಗಿರುವೆನೇ ಹೊರತು ಬೇರೆ ಪ್ರಕಾರವಲ್ಲ.

[ಪಿತಾ ನಸ್ತ್ವಂ ಗುರುರ್ಬನ್ಧುಸ್ತದಾ ಪುತ್ರಾ ಹಿ ತೇ ವಯಮ್ ।  ಇತಿ ಮನ್ಯಾಮಹೇ ಸರ್ವೇ ಭವನ್ತಂ ಪ್ರಣತಾಃ ಸ್ಥಿತಾಃ । ನಾವು ನಿಮ್ಮನ್ನು ನಮ್ಮ ತಂದೆ, ಗುರು ಮತ್ತು ಬಂಧುವೆಂದೂ, ಹಾಗೆಯೇ ನಾವು ನಿಮ್ಮ ಮಕ್ಕಳೆಂದೂ ಎಲ್ಲರೂ ತಿಳಿದುಕೊಂಡು ಬಂದಿದ್ದೆವು ಮತ್ತು ನಿಮಗೆ ನಮಸ್ಕರಿಸಿ ನಿಲ್ಲುತ್ತಿದ್ದೆವು. ತದದ್ಯ ವಿಪರೀತಂ ತೇ ವದತೋSಸ್ಮಾಸು ದೃಶ್ಯತೇ । ಯದಿ ಶತ್ರುಂ ತ್ವಮಾತ್ಮಾನಂ ಮನ್ಯಸೇ ತತ್ ತಥಾSಸ್ತ್ವಿಹ । ಏಷ ತೇ ಸದೃಶಂ ಕರ್ಮ ಶತ್ರೋರ್ಭೀಮಃ ಕರಿಷ್ಯತಿ  ಆದರೆ ಈಗ ನೀವು ನಮ್ಮೊಡನೆ ಮಾತನಾಡುವುದನ್ನು ನೋಡಿದರೆ ಅವೆಲ್ಲವೂ ಬದಲಾದಂತಿವೆ. ನೀವು ನಮ್ಮನ್ನು ಶತ್ರುವೆಂದು ತಿಳಿದುಕೊಂಡಿದ್ದರೆ ಅದು ಹಾಗೆಯೇ ಆಗಲಿ. ಇಗೋ, ಶತ್ರುವಾದ ಭೀಮನು ಏನನ್ನು ಮಾಡಬೇಕೋ ಅದನ್ನು ಮಾಡುತ್ತಾನೆ. (ಮಹಾಭಾರತ ದ್ರೋಣಪರ್ವ ೧೨೭.೬೪-೬೫) ]

 

ಅಮಾರ್ದ್ದವೇ ಪಶ್ಯ ಚ ಯಾದೃಶಂ ಬಲಂ ಮಮೇತಿ ತಸ್ಯಾSಶು ವಿಚೂರ್ಣ್ಣಿತೋ ರಥಃ ।

ಗದಾಭಿಪಾತೇನ ವೃಕೋದರಸ್ಯ ಸಸೂತವಾಜಿಧ್ವಜಯನ್ತ್ರಕೂಬರಃ ॥ ೨೬.೧೨೪ ॥

 

ನಾನು ಸಿಡಿದರೆ ನನ್ನ ಬಲ ಯಾವ ರೀತಿ ಇರುತ್ತದೇ ಎನ್ನುವುದನ್ನು ನೀನು  ನೋಡು’  ಎಂದ ಭೀಮಸೇನ, ತನ್ನ ಗದೆಯನ್ನು ಎಸೆದ. ಭೀಮಸೇನನ ಗದಾಪ್ರಹಾರದಿಂದ ಸೂತ, ಕುದುರೆ, ಧ್ವಜ, ನೊಗ, ಇವೆಲ್ಲವುದರೊಂದಿಗೆ ಸಹಿತವಾದ ದ್ರೋಣಾಚಾರ್ಯರ ರಥ ಪುಡಿ-ಪುಡಿಯಾಯಿತು.

 

ದ್ರೋಣೋ ಗದಾಮಾಪತತೀಂ ನಿರೀಕ್ಷ್ಯ ತ್ವವಪ್ಲುತೋ ಲಾಘವತೋ ಧರಾತಳೇ ।

ತದೈವ ದುರ್ಯ್ಯೋಧನಯಾಪಿತಂ ರಥಂ ಪರಂ ಸಮಾಸ್ಥಾಯ ಶರಾನ್ ವವರ್ಷ ಹ ॥ ೨೬.೧೨೫ ॥

 

ದ್ರೋಣಾಚಾರ್ಯರು ಬರುತ್ತಿರುವ ಗದೆಯನ್ನು ನೋಡಿ, ವೇಗದಿಂದ ಭೂಮಿಗೆ ನೆಗೆದರು. ಆಗಲೇ ದುರ್ಯೋಧನ ಕಳುಹಿಸಿದ ಇನ್ನೊಂದು ರಥವನ್ನು ಏರಿದ ಅವರು ಮತ್ತೆ ಬಾಣಗಳ ಮಳೆಗೈದರು.

 

ಶರೈಸ್ತದೀಯೈಃ ಪರಮಾಸ್ತ್ರಮನ್ತ್ರಿತೈಃ ಪ್ರವೃಷ್ಯಮಾಣೋ ಜಗದೀರಣಾತ್ಮಜಃ ।

ಶಿರೋ ನಿಧಾಯಾSಶು ಪುರೋ ವೃಷೋ ಯಥಾ ತಮಭ್ಯಯಾದೇವ ರಥಾದವಪ್ಲುತಃ ॥ ೨೬.೧೨೬ ॥

 

ಅತ್ಯಂತ ಮಂತ್ರಪೂತವಾಗಿರುವ ಆ ಬಾಣಗಳಿಂದ ಎದುರುಗೊಂಡ ಮುಖ್ಯಪ್ರಾಣನ ಮಗನಾದ ಭೀಮಸೇನನು, ಗೂಳಿಯೊಂದು ತಲೆಯನ್ನು ಮುಂದೆ ಮಾಡಿಕೊಂಡು ಹೇಗೆ ಮುನ್ನುಗ್ಗುತ್ತದೋ ಹಾಗೇ, ರಥದಿಂದ ಇಳಿದವನಾಗಿ ತಲೆಯನ್ನು ಮುಂದೆ ಮಾಡಿಕೊಂಡು  ದ್ರೋಣಾಚಾರ್ಯರತ್ತ ನುಗ್ಗಿದನು.

[ಅಂಸೇ ಶಿರೋ ಭೀಮಸೇನಃ ಕರೌ ಕೃತ್ವೋರಸಿಸ್ಥಿರೌ ।  ವೇಗಮಾಸ್ಥಾಯ ಬಲವಾನ್ ಮನೋನಿಲ ಗರುತ್ಮತಾಮ್ । ಯಥಾ ಹಿ ಗೋವೃಷೋ ವರ್ಷಂ ಪ್ರತಿಗೃಹ್ಣಾತಿ ಲೀಲಯಾ । ತಥಾ ಭೀಮೋ ನರವ್ಯಾಘ್ರಃ ಶರವರ್ಷಂ ಸಮಗ್ರಹೀತ್’ (ದ್ರೋಣಪರ್ವ ೧೨೮.೧೬-೧೭)

ಯಾವರೀತಿ ಮುನ್ನುಗ್ಗುತ್ತಿರುವ ಗೂಳಿಯು ಜೋರಾಗಿ ಸುರಿಯುವ ಮಳೆಯನ್ನು ತಡೆದುಕೊಳ್ಳುತ್ತದೆಯೋ ಹಾಗೆ, ತನ್ನ ತೋಳನ್ನು ಮುಂದೆ ಮಾಡಿಕೊಂಡು, ತಲೆಯನ್ನು ಬಗ್ಗಿಸಿ ಮುನ್ನುಗ್ಗುತ್ತಿರುವ ನರವ್ಯಾಘ್ರ ಭೀಮನು ದ್ರೋಣಾಚಾರ್ಯರ  ಶರಗಳ ಮಳೆಯನ್ನು ನಿರಾತಂಕವಾಗಿ ಎದುರಿಸಿದ].

 

ಮನೋಜವಾದೇವ ತಮಾಪ್ಯ ಭೀಮೋ ರಥಂ ಗೃಹೀತ್ವಾSಮ್ಬರ ಅಕ್ಷಿಪತ್ ಕ್ಷಣಾತ್ ।

ಶಕ್ತೋSಪ್ಯಹಂ ತ್ವಾಂ ನ ನಿಹನ್ಮಿ ಗೌರವಾದಿತ್ಯೇವ ಸುಜ್ಞಾಪಯಿತುಂ ತದಸ್ಯ ॥ ೨೬.೧೨೭ ॥

 

‘ನನಗೆ ಶಕ್ತಿ ಇದ್ದರೂ ಕೂಡಾ ನಿಮ್ಮ ಮೇಲಿನ ಗೌರವ ಭಾವನೆಯಿಂದ ನಿಮ್ಮನ್ನು ಕೊಲ್ಲುವುದಿಲ್ಲ’ ಎಂದು ದ್ರೋಣಾಚಾರ್ಯರಿಗೆ ತನ್ನ ಬಲವನ್ನು ಚೆನ್ನಾಗಿ ನೆನಪಿಸಲು, ಭೀಮಸೇನನು ಮನಸ್ಸಿಗೆ ಮೀರಿದ ವೇಗದಿಂದ ದ್ರೋಣಾಚಾರ್ಯರನ್ನು ಹೊಂದಿ, ಅವರ ರಥವನ್ನು ಹಿಡಿದು ಆಕಾಶಕ್ಕೆಸೆದನು.  

 

ಸವಾಜಿಸೂತಃ ಸ ರಥಃ ಕ್ಷಿತೌ ಪತನ್ ವಿಚೂರ್ಣ್ಣಿತೋSಸ್ಮಾದ್ ಗುರುರಪ್ಯವಪ್ಲುತಃ ।

ತದಾ ವಿಶೋಕೋSಸ್ಯ ರಥಂ ಸಮಾನಯತ್ ತಮಾರುಹದ್ ಭೀಮ ಉದಾರವಿಕ್ರಮಃ ॥ ೨೬.೧೨೮ ॥

 

ಕುದುರೆ, ಸೂತ, ಮೊದಲಾದವರಿಂದ ಕೂಡಿಕೊಂಡ ಆ ರಥವು ಭೂಮಿಯಲ್ಲಿ ಬಿದ್ದು, ಪುಡಿ-ಪುಡಿಯಾಯಿತು. ಆ ರಥದಿಂದ ಗುರುಗಳಾದ ದ್ರೋಣಾಚಾರ್ಯರೂ ಕೆಳಗೆ ನೆಗೆದರು. ಆಗಲೇ ಭೀಮನ ಸಾರಥಿಯಾದ ವಿಶೋಕನು ರಥವನ್ನು ತಂದನು. ಉತ್ಕೃಷ್ಟವಾದ ಪರಾಕ್ರಮವುಳ್ಳ ಭೀಮಸೇನನು ತನ್ನ ರಥವನ್ನೇರಿದನು.

No comments:

Post a Comment