ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, March 6, 2023

Mahabharata Tatparya Nirnaya Kannada 26-139-151

 

ಭೀಮಸ್ಯ ನಾನದತ ಏವ ಮಹಾಸ್ವನೇನ ವಿಣ್ಮೂತ್ರಶೋಣಿತಮಥೋ ಮೃತಿಮಾಪುರೇಕೇ ।

ಭೀತೇಷು ಸರ್ವನೃಪತಿಷ್ವಮುಮಾಪ ತೂರ್ಣ್ಣಂ ಕರ್ಣ್ಣೋ ವಿಕರ್ಣ್ಣಮುಖರಾ ಅಪಿ ಧಾರ್ತ್ತರಾಷ್ಟ್ರಾಃ ॥೨೬.೧೩೯ ॥

 

ಗಟ್ಟಿಯಾಗಿ ನಾದ ಮಾಡಿದ ಭೀಮಸೇನನ ಮಹಾಧ್ವನಿಯಿಂದಲೇ ಬಹಳ ಜನ ಮಲ-ಮೂತ್ರ ವಿಸರ್ಜನೆ ಮಾಡಿಕೊಂಡರು. ಅಷ್ಟೇ ಅಲ್ಲ, ಎಷ್ಟೋ ಜನ ರಕ್ತವನ್ನು ಕಾರಿಕೊಂಡರು. ಕೆಲವರು ಸತ್ತೇ ಹೋದರು. ಹೀಗೆ ಎಲ್ಲಾ ರಾಜರು ಭಯಗೊಳ್ಳಲು, ಕೂಡಲೇ ಕರ್ಣನು ಭೀಮಸೇನನನ್ನು ಹೊಂದಿದನು. ಜೊತೆಗೆ ವಿಕರ್ಣ ಮೊದಲಾಗಿರುವ ಧೃತರಾಷ್ಟ್ರನ ಮಕ್ಕಳೂ ಕೂಡಾ ಭೀಮಸೇನನನ್ನು ಯುದ್ಧಕ್ಕಾಗಿ ಹೊಂದಿದರು.

[‘ಪುನರ್ಘೋರೇಣ ನಾದೇನ ಪಾಣ್ಡವಸ್ಯ ಮಹಾತ್ಮನಃ । ಸಮರೇ ಸರ್ವಯೋಧಾನಾಂ ಧನೂಂಷ್ಯಭ್ಯಪತನ್ ಕ್ಷಿತೌ । ಶಸ್ತ್ರಾಣಿ ನ್ಯಪತನ್ ದೋರ್ಭ್ಯಃ  ಕೇಷಾಞ್ಚಿಚ್ಚಾಸವೋSದ್ರವನ್ । ವಿತ್ರಸ್ತಾನಿ ಚ ಸರ್ವಾಣಿ ಶಕೃನ್ಮೂತ್ರಂ ಪ್ರಸುಸ್ರುವುಃ । ವಾಹನಾನಿ ಚ ಸರ್ವಾಣಿ ಬಭೂವುರ್ವಿಮನಾಂಸಿ ಚ’ (ದ್ರೋಣಪರ್ವ ೧೨೯.೧೬-೧೮) ಪುನಃ ಮಹಾತ್ಮ ಪಾಂಡವನ ಸಿಂಹನಾದದಿಂದ ಸಮರದಲ್ಲಿದ್ದ ಯೋಧರ ಧನುಸ್ಸುಗಳು, ಶಸ್ತ್ರಗಳು  ನೆಲದ ಮೇಲೆ ಬಿದ್ದವು. ಕೆಲವರ ಪ್ರಾಣಪಕ್ಷಿ ಹಾರಿ ಹೋಯಿತು.  ವಾಹಕ ಪ್ರಾಣಿಗಳೆಲ್ಲವೂ ಹೆದರಿ ಮಲ-ಮೂತ್ರ ವಿಸರ್ಜಿಸಿದವು. ಅವುಗಳು ಯುದ್ಧದಲ್ಲಿ ತಮ್ಮ ಲವಲವಿಕೆಯನ್ನು ಕಳೆದುಕೊಂಡವು.

 ವನಪರ್ವದಲ್ಲಿ(೧೨೦.೧೪) ಬಲರಾಮ ಭೀಮಸೇನನ ಘರ್ಜನೆಯ ಘನಘೋರ ಪರಿಣಾಮವನ್ನು ಹೀಗೆ  ಹೇಳುತ್ತಾನೆ-  ಶ್ರುತ್ವೈವ ಶಬ್ದಂ ಹಿ ವೃಕೋದರಸ್ಯ ಮುಞ್ಚನ್ತಿ ಸೈನ್ಯಾನಿ ಶಕೃತ್ ಸಮೂತ್ರಮ್’ .

ಇನ್ನು ಭೀಷ್ಮಪರ್ವದಲ್ಲೂ(೪೪.೮-೧೨) ಭೀಮಸೇನನ ಸಿಂಹನಾದದಿಂದಾದ ಪರಿಣಾಮವನ್ನು ವಿವರಿಸುವುದನ್ನು ನಾವು ಕಾಣಬಹುದು. ‘ಭೀಮಸೇನೋ ಮಹಾಬಾಹುಃ ಪ್ರಾಣದದ್ ಗೋವೃಷೋ ಯಥಾ ।    ಶಙ್ಖದುನ್ದುಭಿನಿರ್ಘೋಷಂ ವಾರಣಾನಾಂ ಚ ಬೃಂಹಿತಮ್ ।  ಸಿಂಹನಾದಂ ಚ ಸೈನ್ಯಾನಾಂ ಭೀಮಸೇನರವೋSಭ್ಯಭೂತ್ ।    ಹಯಾನಾಂ ಹೇಷಮಾಣಾನಾಮನೀಕೇಷು ಸಹಸ್ರಶಃ । ಸರ್ವಾನಭ್ಯಭವಚ್ಛಬ್ದಾನ್  ಭೀಮಸ್ಯ ನದತಃ ಸ್ವನಃ  । ತಂ ಶ್ರುತ್ವಾ ನಿನದಂ ತಸ್ಯ ಸೈನ್ಯಾಸ್ತವ ವಿತತ್ರಸುಃ ।  ಜೀಮೂತಸ್ಯೇವ ನದತಃ ಶಕ್ರಾಶನಿಸಮಸ್ವನಮ್ । ವಾಹನಾನಿ ಚ ಸರ್ವಾಣಿ ಶಕೃನ್ಮೂತ್ರಂ ಪ್ರಸುಸ್ರುವುಃ । ಶಬ್ದೇನ ತಸ್ಯ ವೀರಸ್ಯ ಸಿಂಹಸ್ಯೇವೇತರೇ ಮೃಗಾಃ’]

 

ಹತ್ವಾ ವಿಕರ್ಣ್ಣಮುತ ತತ್ರ ಚ ಚಿತ್ರಸೇನಂ ಸಞ್ಚೂರ್ಣ್ಣಿತಂ ಚ ವಿದಧೇ ರಥಮರ್ಕ್ಕಸೂನೋಃ ।

ಘೋರೈಃ ಶರೈಃ ಪುನರಪಿ ಸ್ಮ ಸಮರ್ದ್ದ್ಯಮಾನಃ  ಕರ್ಣ್ಣೋSಪಯಾನಮಕರೋದ್ ದ್ರುತಮೇವ ಭೀಮಾತ್ ॥೨೬.೧೪೦ ॥

 

ಆ ಯುದ್ಧದಲ್ಲಿ ಭೀಮ ವಿಕರ್ಣ ಹಾಗೂ ಚಿತ್ರಸೇನನನ್ನು ಸಂಹರಿಸಿ, ಸೂರ್ಯಪುತ್ರ ಕರ್ಣನ ರಥವನ್ನು  ಪುಡಿ-ಪುಡಿ ಮಾಡಿದನು. ಭೀಮನಿಂದ ಮತ್ತೆಮತ್ತೆ ಘೋರವಾದ ಬಾಣಗಳಿಂದ ಪೀಡಿತನಾದ ಕರ್ಣನು ಶೀಘ್ರದಲ್ಲಿಯೇ ಪಲಾಯನ ಮಾಡಿದನು.

 

ಆಶ್ವಾಸ್ಯ ಚೈವ ಸುಚಿರಂ ಪುನರೇವ ಭೀಮಂ ಯುದ್ಧಾಯ ಯಾತಿ ಧೃತರಾಷ್ಟ್ರಸುತೈಸ್ತಥಾSನ್ಯೈಃ ।

ತಾಂಶ್ಚೈವ ತತ್ರ ವಿನಿಹತ್ಯ ತಥೈವ ಕರ್ಣ್ಣೋ ವ್ಯಶ್ವಾಯುಧಃ ಕೃತ ಉತಾಪಯಯೌ ಕ್ಷಣೇನ ॥೨೬.೧೪೧ ॥

 

ಶಿಬಿರದಲ್ಲಿ ಸ್ವಲ್ಪ ಹೊತ್ತು ಚೇತರಿಸಿಕೊಂಡ ಕರ್ಣ ಮತ್ತೆ ಅಳಿದುಳಿದ ಧೃತರಾಷ್ಟ್ರನ ಮಕ್ಕಳ ಜೊತೆಗೆ ಯುದ್ಧಕ್ಕೆಂದು ಭೀಮಸೇನನನ್ನು ಹೊಂದಿದನು. ಆಗಲೂ  ಯುದ್ಧದಲ್ಲಿ ಭೀಮಸೇನ ಧೃತರಾಷ್ಟ್ರನ ಮಕ್ಕಳನ್ನು  ಸಂಹರಿಸಿದನು. ಕ್ಷಣದಲ್ಲೇ  ಕರ್ಣನು ಕುದುರೆ ಹಾಗು ರಥವನ್ನು ಕಳೆದುಕೊಂಡು ಮತ್ತೆ ಹಿಂತೆರಳಿದನು.  

 

ವಿಕರ್ಣ್ಣಚಿತ್ರಸೇನಾದ್ಯಾ ಏವಂ ವೀರತಮಾಃ ಸುತಾಃ ।

ಕರ್ಣ್ಣಸ್ಯ ಪಶ್ಯತೋ ಭೀಮಬಾಣಕೃತ್ತಶಿರೋಧರಾಃ ॥ ೨೬.೧೪೨ ॥

 

ನಿಪೇತುರ್ದ್ಧೃತರಾಷ್ಟ್ರಸ್ಯ ರಥೇಭ್ಯಃ ಪೃಥಿವೀತಳೇ ।

ತ್ರಯೋವಿಂಶತಿರೇವಾತ್ರ ಕರ್ಣ್ಣಸಾಹಾಯ್ಯಕಾಙ್ಕ್ಷಿಣಃ ॥ ೨೬.೧೪೩ ॥

 

ಏಕವಿಂಶತಿವಾರಂ ಚ ವ್ಯಶ್ವಸೂತರಥಧ್ವಜಃ ।

ಗಾಢಮಭ್ಯರ್ದ್ದಿತಸ್ತೀಕ್ಷ್ಣೈಃ ಶರೈರ್ಭೀಮೇನ ಸಂಯುಗೇ ॥ ೨೬.೧೪೪ ॥

 

ಹೀಗೆ ಕರ್ಣನಿಗೆ ಸಹಾಯ ಮಾಡುತ್ತಿದ್ದ ಪರಾಕ್ರಮಿಗಳಾಗಿರುವ ವಿಕರ್ಣ, ಚಿತ್ರಸೇನ, ಮೊದಲಾದ ಪ್ರಬಲರಾಗಿರುವ ಇಪ್ಪತ್ಮೂರು ಧೃತರಾಷ್ಟ್ರನ ಮಕ್ಕಳು ಕರ್ಣ ನೋಡುತ್ತಿರುವಾಗಲೇ ಭೀಮಸೇನನ ಬಾಣದಿಂದ ತಲೆಯನ್ನು ಕಳೆದುಕೊಂಡು ಬಿದ್ದರು.

ಭೀಮನ ತೀಕ್ಷ್ಣ ಬಾಣಗಳಿಂದ ಚೆನ್ನಾಗಿ ಪೆಟ್ಟುತಿಂದ ಕರ್ಣ, ಇಪ್ಪತ್ತೊಂದು ಬಾರಿ ರಥ, ಕುದುರೆ, ಧ್ವಜವನ್ನು ಕಳೆದುಕೊಂಡು.

[ಈ ಕುರಿತಾದ ಮಹಾಭಾರತದ(ದ್ರೋಣಪರ್ವ ೧೩೭.೪೧) ಪ್ರಚಲಿತಪಾಠ ಹೀಗಿದೆ- ‘ಏಕತ್ರಿಂಶನ್ಮಹಾರಾಜ ಪುತ್ರಾಂಸ್ತವ ನಿಪಾತಿತಾನ್’ ಇಲ್ಲಿ ಭೀಮ ‘ಮೂವತ್ತೊಂದು’ ಜನ ಧೃತರಾಷ್ಟ್ರನ ಪುತ್ರರನ್ನು ಕೊಂದಿರುವುದು ಎಂದು ಹೇಳಲಾಗಿದೆ.  ಆದರೆ ಆಚಾರ್ಯರು ಪ್ರಚಲಿತ ಪಾಠದ ತಪ್ಪನ್ನು ಸರಿಪಡಿಸಿ ‘ಇಪ್ಪತ್ಮೂರು’ ಎಂದು ಹೇಳಿರುವುದನ್ನು ನಾವು ಗಮನಿಸಬೇಕು].

 

ಪ್ರಾಣಸಂಶಯಮಾಪನ್ನಃ ಸರ್ವಲೋಕಸ್ಯ ಪಶ್ಯತಃ ।

ರಣಂ ತ್ಯಕ್ತ್ವಾ ಪ್ರ ದುದ್ರಾವ ರುದನ್ ದುಃಖಾತ್ ಪುನಃಪುನಃ ॥ ೨೬.೧೪೫ ॥

 

ಎಲ್ಲರೂ ನೋಡುತ್ತಿರುವಾಗಲೇ, ತಾನು ಬದುಕುಳಿಯುವ ವಿಷಯದಲ್ಲಿ ಸಂಶಯವನ್ನು ಹೊಂದಿದವನಾಗಿ  ಕರ್ಣ  ರಣಭೂಮಿಯನ್ನು ಬಿಟ್ಟು ದುಃಖದಿಂದ ಮತ್ತೆಮತ್ತೆ ಗಟ್ಟಿಯಾಗಿ ಅಳುತ್ತಾ, ಓಡಿಹೋದನು.

[ಈರೀತಿ ಕರ್ಣ ಮಹಾಭಯದಿಂದ ಓಡಿರುವುದನ್ನು ಮಹಾಭಾರತ ವರ್ಣಿಸುವುದನ್ನು ದ್ರೋಣಪರ್ವದಲ್ಲಿ ನಾವು ಕಾಣಬಹುದು- ‘ಸ ವಿಹ್ವಲೋ ಮಹಾರಾಜ ಕರ್ಣೋ ಭೀಮಶರಾಹತಃ । ಪ್ರಾದ್ರವಜ್ಜವನೈರಶ್ವೈಃ ರಣಂ ಹಿತ್ವಾ ಮಹಾಭಯಾತ್’ (೧೩೪.೩೩).]

 

ದ್ವಾವಿಂಶತಿಮಯುದ್ಧೇ ತು ರಾಮದತ್ತಂ ಸುಭಾಸ್ವರಮ್ ।

ಅಭೇದ್ಯಂ ರಥಮಾರುಹ್ಯ ವಿಜಯಂ ಧನುರೇವ ಚ ॥ ೨೬.೧೪೬ ॥

 

ತದ್ದತ್ತಮೇವ ಸಙ್ಗೃಹ್ಯ ತೂಣೀ ಚಾಕ್ಷಯಸಾಯಕೌ ।

ಆಸಸಾದ್ ರಣೇ ಭೀಮಂ ಕರ್ಣ್ಣೋ ವೈಕರ್ತ್ತನೋ ವೃಷಾ ॥ ೨೬.೧೪೭ ॥

 

ಇಪ್ಪತ್ತೆರಡನೇ ಬಾರಿ ಸೂರ್ಯನ ಮಗನಾಗಿರುವ ಕರ್ಣನು ಯುದ್ಧದಲ್ಲಿ ಪರಶುರಾಮನಿಂದ ಕೊಡಲ್ಪಟ್ಟ, ಹೊಳೆಯುತ್ತಿರುವ, ಯಾರಿಂದಲೂ  ಛೇದಿಸಲು ಸಾಧ್ಯವಾಗದ  ರಥವನ್ನೇರಿ,  ಪರಶುರಾಮನಿಂದಲೇ ಕೊಡಲ್ಪಟ್ಟ ‘ವಿಜಯ’ ಎನ್ನುವ ಧನುಸ್ಸು ಮತ್ತು ಮುಗಿಯಲಾರದ ಬಾಣವಿರುವ ಬತ್ತಳಿಕೆಯನ್ನೂ ಹಿಡಿದುಕೊಂಡು,  ಸಿಟ್ಟಿನಿಂದ ರಣದಲ್ಲಿ ಭೀಮನನ್ನು ಎದುರುಗೊಂಡ.

 

ಸುಘೋರ ಆಸೀತ್ ಸ ತಯೋರ್ವಿಮರ್ದ್ದೋ ಭೀಮಸ್ಯ ಕರ್ಣ್ಣಸ್ಯ ಚ ದೀರ್ಘಕಾಲಮ್ ।

ಆಕಾಶಮಾಚ್ಛಾದಯತೋಃ ಶರೌಘೈಃ ಪರಸ್ಪರಂ ಚೈವ ಸುರಕ್ತನೇತ್ರಯೋಃ ॥ ೨೬.೧೪೮ ॥

 

ಕೆಂಪರಳಿದ ಕಣ್ಗಳ ಕರ್ಣ ಹಾಗೂ ಭೀಮಸೇನರ ನಡುವೆ, ಬಾಣಗಳ ಸಮೂಹದಿಂದ ಪರಸ್ಪರವಾಗಿ, ದಿಕ್ಕುಗಳೆಲ್ಲವನ್ನೂ ತುಂಬುವಂತೆ ಧೀರ್ಘಕಾಲದ ಘೋರ ಯುದ್ಧವಾಯಿತು.

 

ತತೋ ಭೀಮೋ ಮಹಾಬಾಹುಃ ಸಹಜಾಭ್ಯಾಂ ಚ ಸಂಯುತಮ್ ।

ತ್ವಾಂ ತು ಕುಣ್ಡಲವರ್ಮ್ಮಭ್ಯಾಂ ಶಕ್ನುಯಾಂ ಹನ್ತುಮಞ್ಜಸಾ ॥ ೨೬.೧೪೯ ॥

 

ಇತಿ ಜ್ಞಾಪಯಿತುಂ ತಸ್ಯ ಕುಣ್ಡಲೇ ಕವಚಂ ತಥಾ ।

ಶರೈರುತ್ಕೃತ್ಯ ಸಮರೇ ಪಾತಯಾಮಾಸ ಭೂತಳೇ ॥ ೨೬.೧೫೦ ॥

 

ತದನಂತರ ದೊಡ್ಡ ತೋಳ್ಗಳುಳ್ಳ ಭೀಮಸೇನನು ‘ಒಂದು ವೇಳೆ ನಿನ್ನಲ್ಲಿ ಹುಟ್ಟುವಾಗಲೇ ಇದ್ದ ಸಹಜವಾದ ಕುಂಡಲ ಹಾಗೂ ಕವಚ ಇದ್ದರೂ ನಿನ್ನನ್ನು ಕೊಲ್ಲಲು ನಾನು ಸಮರ್ಥನಿದ್ದೇನೆ’ ಎಂದು ತಿಳಿಸಿಕೊಡುವುದಕ್ಕಾಗಿ, ಅವನು ಧರಿಸಿದ್ದ ಕುಂಡಲವನ್ನೂ, ಕವಚವನ್ನೂ ಬಾಣಗಳಿಂದ ಸೀಳಿ, ಭೂಮಿಯಲ್ಲಿ ಬೀಳಿಸಿದನು.

 

ಏವಂ ತಾನ್ಯಪಕೃಷ್ಯಾಹಂ ಹನ್ಯಾಂ ತ್ವಾಮಿತಿ ವೇದಯನ್ ।

ಪುನಶ್ಚ ಬಹುಭಿಸ್ತೀಕ್ಷ್ಣೈಃ ಶರೈರೇನಂ ಸಮಾರ್ದ್ದಯತ್ ॥ ೨೬.೧೫೧ ॥

 

ಹೀಗೆ ‘ಸಹಜವಾದ ಕವಚ-ಕುಂಡಲದಿಂದ ಬಂದಿದ್ದರೂ ಕೂಡಾ, ನಾನು ನಿನ್ನನ್ನು ಕೊಲ್ಲಲು ಸಮರ್ಥನಿದ್ದೇನೆ’ ಎನ್ನುವುದನ್ನು ತೋರಿಸುತ್ತಾ, ಮತ್ತೆ ಬಹಳ ತೀಕ್ಷ್ಣವಾದ ಬಾಣಗಳಿಂದ ಕರ್ಣನನ್ನು ಘಾಸಿಗೊಳಿಸಿದನು.

No comments:

Post a Comment