ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, March 11, 2023

Mahabharata Tatparya Nirnaya Kannada 26-186-196

 

ದ್ರೌಣಿಕರ್ಣ್ಣಾಭಿಗುಪ್ತಂ ತಂ ನಾಶಕದ್ಧನ್ತುಮರ್ಜ್ಜುನಃ ।

ತತ್ರ ವೇಗಂ ಪರಂ ಚಕ್ರೇ ದ್ರೌಣಿಃ ಪಾರ್ತ್ಥನಿವಾರಣೇ ॥೨೬.೧೮೬ ॥

 

ಅಶ್ವತ್ಥಾಮ, ಕರ್ಣ, ಇವರಿಂದ ರಕ್ಷಿಸಲ್ಪಟ್ಟ ಜಯದ್ರಥನನ್ನು ಕೊಲ್ಲಲು ಅರ್ಜುನನು ಶಕ್ತನಾಗಲಿಲ್ಲ. ಅಶ್ವತ್ಥಾಮನು ಅರ್ಜುನನನ್ನು ತಡೆಯಲು ಇನ್ನೂ ರಭಸದಿಂದ ಯುದ್ಧಕ್ಕಿಳಿದ.

 

ನಚೈನಮಶಕತ್ ತರ್ತ್ತುಂ ಯತ್ನವಾನಪಿ ಫಲ್ಗುನಃ ।

ತಯೋರಾಸೀಚ್ಛಿರಂ ಯುದ್ಧಂ ಚಿತ್ರಂ ಲಘು ಚ ಸುಷ್ಠು ಚ ॥೨೬.೧೮೭ ॥

 

ಅರ್ಜುನನಾದರೋ ಪ್ರಯತ್ನಪಟ್ಟರೂ ಕೂಡಾ ಅಶ್ವತ್ಥಾಮನನ್ನು ಮೀರಲು ಶಕ್ತನಾಗಲಿಲ್ಲ. ಅವರಿಬ್ಬರಿಗೂ ಧೀರ್ಘಕಾಲ ಆಶ್ಚರ್ಯಕರವೂ, ವಿಪರೀತ ವೇಗದಿಂದ ಕೂಡಿರುವ ಯುದ್ಧ ಚೆನ್ನಾಗಿ ನಡೆಯಿತು.

 

ತದ್ ದೃಷ್ಟ್ವಾ ಭಗವಾನ್ ಕೃಷ್ಣೋ ಲೋಹಿತಾಯತಿ ಭಾಸ್ಕರೇ ।

ಅಜಿತೇ ದ್ರೋಣತನಯೇ ತ್ವಹತೇ ಚ ಜಯದ್ರಥೇ ।

ಅರ್ಜ್ಜುನಸ್ಯ ಜಯಾಕಾಙ್ಕ್ಷೀ ಸಸರ್ಜ್ಜ ತಮ ಊರ್ಜ್ಜಿತಮ್ ॥೨೬.೧೮೮ ॥

 

ಅದನ್ನು ನೋಡಿದ ಶ್ರೀಕೃಷ್ಣನು, ನೇಸರನು ಕೆಂಪಾಗುತ್ತಿರಲು, ಅಶ್ವತ್ಥಾಮನು ಸೋಲದೇ ಇರಲು, ಜಯದ್ರಥನು ಇನ್ನೂ ಸಂಹರಿಸಲ್ಪಡದೇ ಇರಲು, ಅರ್ಜುನನ ಜಯವನ್ನು ಬಯಸಿ, ಒಂದು ದಟ್ಟವಾದ ಕತ್ತಲೆಯನ್ನು ಸೃಷ್ಟಿಮಾಡಿದ. [‘ಜನಾರ್ದನೇನ ಸೃಷ್ಟಂ ವೈ ತಮ ಆದಿತ್ಯನಾಶನಮ್ ‘ (ದ್ರೋಣಪರ್ವ ೧೪೭.೬೭), (ಕೃಷ್ಣ ಚಕ್ರದಿಂದ ಸೂರ್ಯನನ್ನು ಅಡ್ಡ ಹಿಡಿದ ಎನ್ನುವ ಕಥೆ ಕುಮಾರವ್ಯಾಸನ ಸೃಷ್ಟಿ. ಮೂಲಭಾರತದಲ್ಲಿ ಶ್ರೀಕೃಷ್ಣ ಕತ್ತಲೆಯನ್ನು ಸೃಷ್ಟಿ ಮಾಡಿದ ಎಂದಷ್ಟೇ ಹೇಳಿದ್ದಾರೆ).]

 

ತಮೋವ್ಯಾಪ್ತೇ ಗಗನೇ ಸೂರ್ಯ್ಯಮಸ್ತಂ ಗತಂ ಮತ್ವಾ ದ್ರೌಣಿಪೂರ್ವಾಃ ಸಮಸ್ತಾಃ ।

ವಿಶಶ್ರಮುಃ ಸೈನ್ಧವಶ್ಚಾರ್ಜ್ಜುನಸ್ಯ ಹತಪ್ರತಿಜ್ಞಸ್ಯ ಮುಖಂ ಸಮೈಕ್ಷತ ॥೨೬.೧೮೯ ॥

 

ಕತ್ತಲೆಯಿಂದ ತುಂಬಿದ ಆಕಾಶದಲ್ಲಿ ಸೂರ್ಯನು ಅಸ್ತಂಗತನಾಗಿದ್ದಾನೆ  ಎಂದು ತಿಳಿದು,  ಅಶ್ವತ್ಥಾಮ ಮೊದಲಾದವರು ವಿಶ್ರಾಂತಿ ಹೊಂದಿದರು. ಸೈನ್ಧವನಾದರೋ, ಪ್ರತಿಜ್ಞೆಯನ್ನು ಈಡೇರಿಸಲಾಗದೇ ಹತಾಶೆಯಲ್ಲಿರುವ ಅರ್ಜುನನ ಮುಖವನ್ನು ನೋಡಬಯಸಿದ.

 

ತದಾ ಹರೇರಾಜ್ಞಯಾ ಶಕ್ರಸೂನುಶ್ಚಕರ್ತ್ತ ಬಾಣೇನ ಜಯದ್ರಥಸ್ಯ ।

ಅಗ್ನಿಂ ವಿವಿಕ್ಷನ್ನಿವ ದರ್ಶಿತಃ ಶಿರಸ್ತದಾ ವಚಃ ಪ್ರಾಹ ಜನಾರ್ದ್ದನಸ್ತಮ್ ॥೨೬.೧೯೦ ॥

 

ಅಗ್ನಿ ಪ್ರವೇಶ ಮಾಡಬೇಕು ಎಂಬುವನಂತೆ ಅರ್ಜುನ ಕಾಣಿಸಲ್ಪಟ್ಟ. ಆಗ ಪರಮಾತ್ಮನ ಆಜ್ಞೆಯಂತೆ ಅವನು ಬಾಣದಿಂದ ಜಯದ್ರಥನ ಕತ್ತನ್ನು ಕತ್ತರಿಸಿದ. ಆಗ ಶ್ರೀಕೃಷ್ಣನು ಅರ್ಜುನನನ್ನು ಕುರಿತು ಮಾತನ್ನು ಹೇಳಿದ.

 

ನೈತಚ್ಛಿರಃ ಪಾತಯ ಭೂತಳೇ ತ್ವಮಿತೀರಿತಃ ಪಾಶುಪತಾಸ್ತ್ರತೇಜಸಾ ।

ದಧಾರ ಬಾಣೈರನುಪುಙ್ಖಪುಙ್ಖೈಃ ಪುನಸ್ತಮೂಚೇ ಗರುಡಧ್ವಜೋ ವಚಃ ॥೨೬.೧೯೧ ॥

 

ಇದಂ ಪಿತುಸ್ತಸ್ಯ ಕರೇ ನಿಪಾತ್ಯತಾಂ ವರೋSಸ್ಯ ದತ್ತೋ ಹಿ ಪುರಾSಮುನಾSಯಮ್ ।

ಶಿರೋ ನಿಕೃತ್ತಂ ಭುವಿ ಪಾತಯೇದ್ ಯಸ್ತವಾಸ್ಯ ಭೂಯಾಚ್ಚ ಶಿರಃ ಸಹಸ್ರಧಾ ॥೨೬.೧೯೨ ॥

 

ಇತಿ ಸ್ಮ ವದ್ಧ್ಯಃ ಸ ಪಿತಾSಪಿ ತೇನೇತ್ಯುದೀರಿತೇ ತಸ್ಯ ಸನ್ಧ್ಯಾಕ್ರಿಯಸ್ಯ ।

ಅಙ್ಕೇ ವ್ಯಧಾತ್ ತಚ್ಛಿರ ಆಶು ವಾಸವಿಃ ಸ ಸಮ್ಭ್ರಮಾತ್ ತದ್ ಭುವಿ ಚ ನ್ಯಪಾತಯತ್ ॥೨೬.೧೯೩ ॥

 

‘ಇವನ ತಲೆಯನ್ನು ಭೂಮಿಯಲ್ಲಿ ಬೀಳಿಸಬೇಡ’ ಎಂದು ಶ್ರೀಕೃಷ್ಣನಿಂದ ಪ್ರಚೋದಿಸಲ್ಪಟ್ಟ ಅರ್ಜುನನು ಪಾಶುಪತಾಸ್ತ್ರದ ಪ್ರಭಾವದಿಂದಾಗಿ ಒಂದಾದ ಮೇಲೆ ಒಂದು ಬಾಣವನ್ನು ಬಿಡುತ್ತಾ, ಆ ತಲೆ ಕೆಳಗೆ ಬೀಳದಂತೆ ನೋಡಿಕೊಂಡ. ಮತ್ತೆ ಗರುಡಧ್ವಜ ಶ್ರೀಕೃಷ್ಣನು ಹೇಳಿದ: “ಈ ತಲೆಯು ಜಯದ್ರತನ ತಂದೆಯ ಕೈಯಲ್ಲಿ ಬೀಳಿಸಲ್ಪಡಲಿ. ಜಯದ್ರಥನಿಗೆ ಅವನ ತಂದೆಯಿಂದ-   ‘ಯಾರು ಇವನ ಕತ್ತರಿಸಲ್ಪಟ್ಟ ತಲೆಯನ್ನು ಭೂಮಿಯಲ್ಲಿ ಬೀಳಿಸುತ್ತಾನೋ, ಅವನ ತಲೆಯು ಸಾವಿರ ಹೋಳಾಗಲಿ’ ಎನ್ನುವ ವರವು ಕೊಡಲ್ಪಟ್ಟಿದೆ.

ಆ ಕಾರಣದಿಂದ ಜಯದ್ರತನ ತಂದೆಯೂ ಕೂಡಾ ಕೊಲ್ಲಲ್ಪಡಬೇಕಾದವನು”. ಈರೀತಿಯಾಗಿ ಶ್ರೀಕೃಷ್ಣನಿಂದ ಹೇಳಲ್ಪಡುತ್ತಿರಲು, ಅರ್ಜುನನು (ಕುರುಕ್ಷೇತ್ರದ ಆಸುಪಾಸಿನಲ್ಲಿ) ಸಂಧ್ಯಾವಂದನೆ ಮಾಡುತ್ತಿರುವ ಜಯದ್ರಥನ ತಂದೆಯ ತೊಡೆಯಮೇಲೆ ಜಯದ್ರಥನ ತಲೆಯು ಬೀಳುವಂತೆ ಮಾಡಿದ. ಆಗ ಜಯದ್ರಥನ ತಂದೆಯಾದ ವೃದ್ಧಕ್ಷತ್ರನು ಉದ್ವೇಗದಿಂದ ಮಗನ ತಲೆಯನ್ನು ಭೂಮಿಯಲ್ಲಿ ಬೀಳಿಸಿದ.

 

ತತೋSಭವತ್ ತಸ್ಯ ಶಿರಃ ಸಹಸ್ರಧಾ ಹರಿಶ್ಚ ಚಕ್ರೇ ತಮಸೋ ಲಯಂ ಪುನಃ ।

ತದೈವ ಸೂರ್ಯ್ಯೇ ಸಕಲೈಶ್ಚ ದೃಷ್ಟೇ ಹಾಹೇತಿ ವಾದಃ ಸುಮಹಾನಥಾSಸೀತ್ ॥೨೬.೧೯೪ ॥

 

ತದನಂತರ ಆ ವೃದ್ಧಕ್ಷತ್ರನ ತಲೆಯು ಸಾವಿರ ಚೂರಾಯಿತು. ಪರಮಾತ್ಮನೂ ಕೂಡಾ ತಾನು ನಿರ್ಮಿಸಿದ ಕತ್ತಲನ್ನು ಲಯ ಮಾಡಿದ. ಆಗಲೇ ಎಲ್ಲರಿಂದಲೂ ಸೂರ್ಯನು ಕಾಣಲ್ಪಡುತ್ತಿರಲು, ಬಹಳ ಪಶ್ಚಾತಾಪದಿಂದ ಕೂಡಿದ ಹಾಹಾಕಾರದ ಧ್ವನಿ ಎಲ್ಲೆಡೆ ಹರಡಿತು.

 

ಭೀಮಸ್ತದಾ ಶಲ್ಯಸುಯೋಧನಾದೀನ್ ಕೃಪಂ ಚ ಜಿತ್ವಾ ವ್ಯನದತ್ ಸುಭೈರವಮ್ ।

ಕುರ್ವನ್ ಸಾಹಾಯ್ಯಂ ಫಲ್ಗುನಸ್ಯೈವ ತುಷ್ಟೋ ಬಭೂವ ಶೈನೇಯ ಉತೋ ಹತೇ ರಿಪೌ ॥೨೬.೧೯೫ ॥

 

ಆಗ ಭೀಮಸೇನನು ಶಲ್ಯ, ದುರ್ಯೋಧನ ಮೊದಲಾದವರನ್ನೂ, ಕೃಪಾಚಾರ್ಯರನ್ನೂ ಗೆದ್ದು, ಭಯಂಕರವಾಗಿ ಸಿಂಹನಾದ ಮಾಡಿದ. ಶತ್ರುವಾದ ಜಯದ್ರಥನು ಕೊಲ್ಲಲ್ಪಡುತ್ತಿರಲು, ಅರ್ಜುನನಿಗೆ ಬೆಂಗಾವಲಾಗಿ ನಿಂತಿದ್ದ ಸಾತ್ಯಕಿಯಿಂದ ಕೂಡಿದ ಭೀಮ ಸಂತುಷ್ಟನಾದ.

 

ಅಪೂರಯತ್ ಪಾಞ್ಚಜನ್ಯಂ ಚ ಕೃಷ್ಣೋ ಮುದಾ ತದಾ ದೇವದತ್ತಂ ಚ ಪಾರ್ತ್ಥಃ ।

ಭೀಮಸ್ಯ ನಾದಂ ಸಹಪಾಞ್ಚಜನ್ಯಘೋಷಂ ಶ್ರುತ್ವಾ ನಿಹತಂ ಸಿನ್ಧುರಾಜಮ್ ।

ಜ್ಞಾತ್ವಾ ರಾಜಾ ಧರ್ಮ್ಮಸುತೋ ಮುಮೋದ ದುರ್ಯ್ಯೋಧನಶ್ಚಾSಸ ಸುದುಃಖಿತಸ್ತದಾ ॥೨೬.೧೯೬ ॥

 

ಆಗ ಶ್ರೀಕೃಷ್ಣನು ಪಾಂಚಜನ್ಯವನ್ನೂ, ಅರ್ಜುನನು ದೇವದತ್ತವನ್ನೂ ಊದಿದರು.  ಧರ್ಮರಾಜನು  ಪಾಂಚಜನ್ಯದೊಂದಿಗಿನ ಭೀಮಸೇನನ ಘರ್ಜನೆಯನ್ನು ಕೇಳಿ, ಜಯದ್ರಥನು ಕೊಲ್ಲಲ್ಪಟ್ಟಿದ್ದಾನೆ ಎಂದು ತಿಳಿದು ಸಂತೋಷಪಟ್ಟ. ದುರ್ಯೋಧನನಾದರೋ ಬಹಳ ದುಃಖಿತನಾದನು.  

No comments:

Post a Comment