ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, August 31, 2020

Mahabharata Tatparya Nirnaya Kannada 18129_18136

 

ತದ್ದೇಹಗಾ ಭಾರತೀ ತು ಕೇಶವಂ ಶಙ್ಕರೇ ಸ್ಥಿತಮ್ ।

ತೋಷಯಾಮಾಸ ತಪಸಾ ಕರ್ಮ್ಮೈಕ್ಯಾರ್ತ್ಥಂ ಹಿ ಪೂರ್ವವತ್ ॥೧೮.೧೨೯॥

 

ಇನ್ದ್ರಸೇನೆಯ ದೇಹದಲ್ಲಿರುವ ಭಾರತಿಯಾದರೋ, ಹಿಂದಿನಂತೇ ಕರ್ಮೈಕ್ಯಾರ್ಥವಾಗಿ ಶಙ್ಕರನ ಅಂತರ್ಯಾಮಿಯಾದ ಕೇಶವನನ್ನು ಕುರಿತು ತಪಸ್ಸನ್ನು ಮಾಡಿದಳು.

 

ಉಮಾದ್ಯಾ ರೌದ್ರಮೇವಾತ್ರ ತಪಶ್ಚಕ್ರುರ್ಯ್ಯಥಾ ಪುರಾ ।

ಪ್ರತ್ಯಕ್ಷೇ  ಚ ಶಿವೇ ಜಾತೇ ತದ್ದೇಹಸ್ಥೇ ಚ ಕೇಶವೇ ॥೧೮.೧೩೦॥

 

 

ಪೃಥಕ್ಪೃಥಕ್ ಸ್ವಭರ್ತ್ತ್ರಾಪ್ತ್ಯೈ ತಾಃ ಪಞ್ಚಾಪ್ಯೇಕದೇಹಗಾಃ ।

ಪ್ರಾರ್ತ್ಥಯಾಮಾಸುರಭವತ್ ಪಞ್ಚಕೃತ್ವೋ ವಚೋ ಹಿ ತತ್ ॥೧೮.೧೩೧॥

 

ಪಾರ್ವತಿಯೇ ಮೊದಲಾದವರು ಇಲ್ಲಿ ಮೊದಲಿನಂತೆಯೇ ರುದ್ರ ಸಂಬಂಧಿಯಾದ ತಪಸ್ಸನ್ನು ಮಾಡಿದರು. ಆಗ ಶಿವನೂ ಮತ್ತು  ಅವನೊಳಗಿರುವ ಕೇಶವನೂ ಪ್ರತ್ಯಕ್ಷವಾಗಲು, ಅವರೆಲ್ಲರೂ ಕೂಡಾ ಬೇರೆ ಬೇರೆಯಾಗಿ ಇದ್ದು  ‘ತಮ್ಮತಮ್ಮ ಗಂಡಂದಿರ ಪ್ರಾಪ್ತಿಗಾಗಿ ಪ್ರಾರ್ಥಿಸಿದರು.

[ಕೇಶವನಲ್ಲಿ ಭಾರತಿಯೂ, ಶಿವನಲ್ಲಿ ಉಳಿದ ನಾಲ್ವರು  ಗಂಡಬೇಕೆಂದು ಕೇಳಿದರು.  ಕೇಳಿದ್ದು ಒಮ್ಮೆ,  ದೇಹ,  ಮನಸ್ಸು, ವಾಗೀನ್ದ್ರಿಯ ಒಂದೇ. ಆದರೆ ಅದರ ಹಿಂದಿನ  ಅಭಿಮಾನ ಮಾತ್ರ ಐದು. ಹಾಗಾಗಿ ಒಂದು ದೇಹದಿಂದ ಹೇಳಿದ ಮಾತು ಐದಾಗಿ ಕೇಳಿಸಿತು. ಬ್ರಹ್ಮವೈವರ್ತಪುರಾಣದ  ಪ್ರಕೃತಿಖಂಡದಲ್ಲಿ (೧೪.೫೮) ಈಕುರಿತಾದ ವಿವರ ಕಾಣಸಿಗುತ್ತದೆ:  ಪತಿಂ ದೇಹಿ ಪತಿಂ ದೇಹಿ ಪತಿಂ ದೇಹಿ ತ್ರಿಲೋಚನ । ಪತಿಂ ದೇಹಿ ಪತಿಂ ದೇಹಿ ಪಞ್ಚವಾರಂ  ಪತಿವ್ರತಾ’].

 

ಶಿವದೇಹಸ್ಥಿತೋ ವಿಷ್ಣುರ್ಭಾರತ್ಯೈ ತು ದದೌ ಪತಿಮ್ ।

ಅನ್ಯಾಸಾಂ ಶಿವ ಏವಾಥ ಪ್ರದದೌ ಚತುರಃ ಪತೀನ್ ॥೧೮.೧೩೨॥

 

ರುದ್ರನ ದೇಹದಲ್ಲಿರತಕ್ಕಂತಹ ಶ್ರೀವಿಷ್ಣುವು ಮೊದಲಿನಂತೇ ಭಾರತಿಗೆ ವರವನ್ನಿತ್ತ. ಉಳಿದವರಿಗೆ ಶಿವನೇ ನಾಲ್ಕು ಗಂಡನ್ದಿರನ್ನು ಕೊಟ್ಟ.

[ಈ ಎಲ್ಲಾ ವಿವರಗಳನ್ನೂ ಬ್ರಹ್ಮವೈವರ್ತಪುರಾಣದ ಪ್ರಕೃತಿಖಂಡದಲ್ಲಿ(೧೪.೫೯) ಕಾಣಬಹುದು. ಶಿವಸ್ತತ್ಪ್ರಾರ್ಥನಾಂ ಶ್ರುತ್ವಾ ಸಸ್ಮಿತೋ  ರಸಿಕೇಶ್ವರಃ । ಪ್ರಿಯೇ ತವ ಪ್ರಿಯಾಃ  ಪಞ್ಚ ಭವನ್ತೀತಿ ವರಂ ದದೌ’].

 

ದೇವ್ಯಶ್ಚತಸ್ರಸ್ತು ತದಾ ದತ್ತಮಾತ್ರೇ ವರೇsಮುನಾ ।

ದೇವಾನಾಮವತಾರಾರ್ತ್ಥಂ ಪಞ್ಚ ದೇವ್ಯಃ ಸ್ಮ ಇತ್ಯಥ ॥೧೮.೧೩೩॥

 

ನಾಜಾನನ್ನೇಕದೇಹತ್ವಾಚ್ಚಿದ್ಯೋಗಾತ್ ಕ್ಷೀರನೀರವತ್ ।

ತಾಃ ಶ್ರುತ್ವಾ ಸ್ವಪತಿಂ ದೇವಿ ನಚಿರಾತ್ ಪ್ರಾಪ್ಸ್ಯಸೀತಿ ಚ ॥೧೮.೧೩೪॥

 

ವಿಷ್ಣೂಕ್ತಂ ಶಙ್ಕರೋಕ್ತಂ ಚ ಚತ್ವಾರಃ ಪತಯಃ ಪೃಥಕ್ ।

ಭವಿಷ್ಯನ್ತೀತ್ಯಥೈಕಸ್ಯಾ ಮೇನಿರೇ ಪಞ್ಚಭರ್ತ್ತೃತಾಮ್ ॥೧೮.೧೩೫॥

 

ವರವನ್ನು ಪಡೆಯುತ್ತಿದ್ದಂತೆಯೇ, ಭಾರತಿಯನ್ನು ಬಿಟ್ಟು ಉಳಿದ ನಾಲ್ವರು ದೇವಿಯರಿಗೆ, ‘ದೇವತೆಗಳ  ಅವತಾರಕ್ಕಾಗಿ ಐದು ಜನ ದೇವಿಯರು ನಾವಿಲ್ಲಿ ಇದ್ದೇವೆ’ ಎನ್ನುವುದು ಮರೆತುಹೋಯಿತು. ಒಂದೇ ದೇಹ ಇದ್ದುದರಿಂದ. ಮನಸ್ಸಿನ ಜ್ಞಾನವು ಕಲಸುಮೇಲೋಗರವಾದ್ದರಿಂದ,  ಹಾಲೂ-ನೀರು ಬೆರೆತರೆ ಯಾವುದು ಹಾಲು ಯಾವುದು ನೀರು ಎಂದು ಸ್ಫುಟವಾಗಿ ವಿಂಗಡಿಸಲು ಸಾಧ್ಯವಿಲ್ಲವೋ, ಹಾಗೇ ಅವರ ಜ್ಞಾನವು ಕಲಸುಮೇಲೋಗರವಾಗಿತ್ತು.

[ಮಹಾಭಾರತದ ಆದಿಪರ್ವದಲ್ಲಿ(೨೧೩.೧೭) ಈಕುರಿತು ಹೇಳುತ್ತಾರೆ: ಪಞ್ಚಕೃತ್ವಸ್ತ್ವಯಾ ಚೋಕ್ತಃ  ಪತಿಂ ದೇಹೀತ್ಯಹಂ ಪುನಃ । ಪಞ್ಚ ತೇ ಪತಯೋ ಭದ್ರೇ ಭವಿಷ್ಯಂತಿ  ಸುಖಾವಹಾಃ’]  

‘ನಿನ್ನ ಪತಿಯನ್ನು ಹೊಂದುತ್ತೀ’ ಎಂದು ಒಂದಾವರ್ತಿ ವಿಷ್ಣುವಿನಿಂದ ಮತ್ತು ನಾಲ್ಕಾವರ್ತಿ ಶಂಕರನಿಂದ ಕೇಳಿದ ಆ ನಾಲ್ವರು,  ‘ನಮಗೆ ಪತಿಯಲ್ಲದೇ ಮತ್ತೆ ನಾಲ್ಕು ಜನ ಗಂಡಂದಿರಗುತ್ತಾರೆ ಎಂದು  ತಿಳಿದರು. ಒಟ್ಟಿನಲ್ಲಿ ಒಬ್ಬರಿಗೆ ಐದು ಜನ ಗಂಡನ್ದಿರಾಗುತ್ತಾರೆ ಎಂದು ಅವರು ತಪ್ಪಾಗಿ ತಿಳಿದುಕೊಂಡರು.

 

ರುರುದುಶ್ಚೈಕದೇಹಸ್ಥಾ ಏಕೈವಾಹಮಿತಿ ಸ್ಥಿತಾಃ ।

ಅಥಾಭ್ಯಾಗಾನ್ಮಹೇನ್ದ್ರೋsತ್ರ ಸೋsಬ್ರವೀತ್ ತಾಂ ವರಸ್ತ್ರಿಯಮ್ ॥೧೮.೧೩೬॥

 

ಅವರೆಲ್ಲರೂ ಒಂದೇ ದೇಹದಲ್ಲಿದಿದ್ದರೂ ಕೂಡಾ, ದೇಹದಲ್ಲಿ ಒಬ್ಬಳೇ ಇದ್ದೇನೆಂದು ಪ್ರತಿಯೊಬ್ಬರೂ(ಸರ್ವಜ್ಞಳಾದ  ಭಾರತೀದೇವಿಯನ್ನು ಬಿಟ್ಟು ಉಳಿದ ನಾಲ್ವರು) ಅಂದುಕೊಂಡರು, ಅತ್ತರೂ ಕೂಡಾ. ಹೀಗೆ ಅಳುತ್ತಿರುವಾಗ ಅಲ್ಲಿಗೆ ದೇವೇಂದ್ರನ ಆಗಮನವಾಯಿತು. ಅವನು ಅಲ್ಲಿ ಅಳುತ್ತಿರುವ ಹೆಣ್ಣುಮಗಳನ್ನು ನೋಡಿದ.

Sunday, August 30, 2020

Mahabharata Tatparya Nirnaya Kannada 18122_18128

 

ತದಾssಸೀನ್ಮುದ್ಗಲೋ ನಾಮ ಮುನಿಸ್ತಪಸಿ ಸಂಸ್ಥಿತಃ ।

ಚಕಮೇ ಪುತ್ರಿಕಾಂ ಬ್ರಹ್ಮೇತ್ಯಶೃಣೋತ್ ಸ ಕಥಾನ್ತರೇ ॥೧೮.೧೨೨॥

 

ಆಗ ಮುದ್ಗಲ ಎಂಬ ಹೆಸರಿನ ಮುನಿಯು ತಪಸ್ಸಿನಲ್ಲಿ ಸ್ಥಿತನಾಗಿದ್ದ. ಉಪನಿಷತ್ತಿನ ಯಾವುದೋ ಒಂದು ಕಥೆಯನ್ನು ಕೇಳುವಾಗ ‘ಬ್ರಹ್ಮನು ತನ್ನ ಮಗಳನ್ನೇ ಬಯಸಿದ’ ಎನ್ನುವುದನ್ನು ಆತ ಕೇಳಿದ.

 

ಅಪಾಹಸತ್ ಸೋsಬ್ಜಯೋನಿಂ ಶಶಾಪೈನಂ ಚತುರ್ಮ್ಮುಖಃ ।

ಭಾರತ್ಯಾದ್ಯಾಃ ಪಞ್ಚ ದೇವೀರ್ಗ್ಗಚ್ಛ ಮಾನಿನ್ನಭೂತಯೇ ॥೧೮.೧೨೩॥

 

ಮಗಳನ್ನೇ ಬಯಸಿದ ಬ್ರಹ್ಮ ಎನ್ನುವ ಪರಿಹಾಸ್ಯದಿಂದ ಮುದ್ಗಲನು ಗಟ್ಟಿಯಾಗಿ ನಕ್ಕನಂತೆ. ಆಗ  ಬ್ರಹ್ಮದೇವರು ಅವನಿಗೆ ಶಾಪಕೊಟ್ಟರು. ‘ನಾನೇ ಧರ್ಮದಲ್ಲಿ ನಡೆಯುತ್ತಿದ್ದೇನೆ ಎನ್ನುವ  ದಾರ್ಢ್ಯದಿಂದ ನೀನು ಹೀಗೆ ಅಪಹಾಸ್ಯ ಮಾಡಿರುವುದರಿಂದ, ಭಾರತೀ ಮೊದಲಾದ ಐದು ಜನ ದೇವಿಯರನ್ನು ನಿನ್ನ ಪಥನಕ್ಕಾಗಿ ಸೇರು’ ಎನ್ನುವ ಶಾಪ.

 

ಇತೀರಿತಸ್ತಂ ತಪಸಾ ತೋಷಯಾಮಾಸ ಮುದ್ಗಲಃ ।

ಶಾಪಾನುಗ್ರಹಮಸ್ಯಾಥ ಚಕ್ರೇ ಕಞ್ಜಸಮುದ್ಭವಃ ॥೧೮.೧೨೪॥

 

ಈರೀತಿಯಾಗಿ ಹೇಳಲ್ಪಟ್ಟ ಮುದ್ಗಲನು ಬ್ರಹ್ಮದೇವರನ್ನು ತಪಸ್ಸಿನಿಂದ ತೃಪ್ತಿಪಡಿಸಿದ. ತದನಂತರ ಬ್ರಹ್ಮದೇವರು ಅವನಿಗೆ ಶಾಪಾನುಗ್ರಹವನ್ನು ಮಾಡಿದರು.

 

ನ ತ್ವಂ ಯಾಸ್ಯಸಿ ತಾ ದೇವೀರ್ಮ್ಮರುತಸ್ತ್ವಚ್ಛರೀರಗಃ ।

ಯಾಸ್ಯತಿ ತ್ವಂ ಸದಾ ಮೂರ್ಚ್ಛಾಂ ಗತೋ ನೈವ ವಿಬುದ್ಧ್ಯಸೇ ॥೧೮.೧೨೫॥

 

ನಚ ಪಾಪಂ ತತಸ್ತೇ ಸ್ಯಾದಿತ್ಯುಕ್ತೇ ಚೈನಮಾವಿಶತ್ ।

ಮಾರುತೋsಥೇನ್ದ್ರಸೇನಾಂ ಚ ಗೃಹೀತ್ವಾsಥಾಭವದ್ ಗೃಹೀ ॥೧೮.೧೨೬॥

 

‘ನೀನು ಆ ದೇವಿಯರನ್ನು ಹೊಂದುವುದಿಲ್ಲ. ಏಕೆಂದರೆ ಮುಖ್ಯಪ್ರಾಣನು ನಿನ್ನ ಶರೀರದಲ್ಲಿದ್ದು ಅವರನ್ನು ಹೊಂದುತ್ತಾನೆ. ನೀನು ಸದಾ ಮೂರ್ಛೆಯನ್ನು ಹೊಂದಿ ಏಳುವುದೇ ಇಲ್ಲಾ ಮತ್ತು ನಿನಗೆ ಯಾವ ಪಾಪವೂ ಬರುವುದಿಲ್ಲ’. ಈರೀತಿಯಾಗಿ ಹೇಳಲು ಮುಖ್ಯಪ್ರಾಣನು ಮುದ್ಗಲನ ದೇಹವನ್ನು ಪ್ರವೇಶಿಸಿದ.  ಅಂತವನು ಇಂದ್ರಸೇನೆಯನ್ನು ಮದುವೆಯಾಗಿ ಗೃಹಸ್ಥನಾದ.

ಇದನ್ನೂ ಮಹಾಭಾರತದಲ್ಲಿ ಹೇಳಿದ್ದಾರೆ: ‘ಇಂದ್ರಸೇನೇತಿ ವಿಖ್ಯಾತಾ ಪುರಾ ನಾಳಾಯನೀ ಶುಭಾ । ಮುದ್ಗಲಂ ಪತಿಮಾಸಾದ್ಯ ಚಚಾರ ವಿಗತಜ್ವರಾ’ (ಆದಿಪರ್ವ ೨೧೩.೩), ನಾಳಾಯನೀ ಚೇಂದ್ರಸೇನಾ ಬಭೂವ ವಶ್ಯಾ ನಿತ್ಯಂ ಮುದ್ಗಲಸ್ಯಾsಜಮೀಢ’ (ವನಪರ್ವ ೧೧೪.೨೪),  ನಾಳಾಯನೀ ಚೇಂದ್ರಸೇನಾ ರೂಪೇಣಾಪ್ರತಿಮಾ ಭುವಿ । ಪತಿಮನ್ವಚರದ್ ವೃದ್ಧಂ ಪುರಾ ವರ್ಷಸಹಸ್ರಿಣಮ್’ (ವಿರಾಟಪರ್ವ ೨೪.೨೧)    

 

ರೇಮೇ ಚ ಸ ತಯಾ ಸಾರ್ದ್ಧಂ ದೀರ್ಘಕಾಲಂ ಜಗತ್ಪ್ರಭುಃ ।

ತತೋ ಮುದ್ಗಲಮುದ್ಬೋದ್ಧ್ಯ ಯಯೌ ಚ ಸ್ವಂ ನಿಕೇತನಮ್ ॥೧೮.೧೨೭॥

 

ಅವನು ಜಗತ್ತಿಗೇ ಒಡೆಯನಾದವನಾಗಿ ಧೀರ್ಘಕಾಲ ಅವಳ ಜೊತೆಗೆ ಕ್ರೀಡಿಸಿದ. ತದನಂತರ  ಮುದ್ಗಲನನ್ನು ಎಬ್ಬಿಸಿ, ಮುಖ್ಯಪ್ರಾಣದೇವರು ಆ ದೇಹದಿಂದ ಹೊರಟುಹೋದರು.

 

ತತೋ ದೇಶಾನ್ತರಂ ಗತ್ವಾ ತಪಶ್ಚಕ್ರೇ ಸ ಮುದ್ಗಲಃ ।

ಸೇನ್ದ್ರಸೇನಾ ವಿಯುಕ್ತಾsಥ ಭರ್ತ್ತ್ರಾ ಚಕ್ರೇ ಮಹತ್ ತಪಃ ॥೧೮.೧೨೮॥

 

ಈ ಮುದ್ಗಲನು ಅಲ್ಲಿಂದ ದೇಶಾಂತರ ಹೋಗಿ, ತಪಸ್ಸನ್ನು ಮಾಡಿದ. ಆಮೇಲೆ ಆ ಇನ್ದ್ರಸೇನೆಯು ಗಂಡನಿಂದ ವಿಯೋಗ ಹೊಂದಿದವಳಾಗಿ, ಮಹತ್ತಾದ ತಪಸ್ಸನ್ನು ಮಾಡಿದಳು.

[ಮಹಾಭಾರತದ ಆದಿಪರ್ವದಲ್ಲಿ(೨೧೩.೫)  ಹೀಗಿದೆ: ‘ತತಃ ಕದಾಚಿತ್ ಧರ್ಮಾತ್ಮಾ ತೃಪ್ತಃ ಕಾಮೈರ್ವ್ಯರಜ್ಯತ । ಅನ್ವಿಚ್ಛನ್ ಪರಮಂ ಧರ್ಮಂ ಬ್ರಹ್ಮಯೋಗಪರೋsಭವತ್’.. ಇಲ್ಲಿ ಹೇಳಿದ ಬ್ರಹ್ಮಯೋಗಪರೋsಭವತ್’ ಎನ್ನುವುದಕ್ಕೆ ಆಚಾರ್ಯರು ಈ ಎಲ್ಲಾ ವ್ಯಾಖ್ಯಾನವನ್ನು ನೀಡಿರುವುದನ್ನು ನಾವು ಗಮನಿಸಬೇಕು].

Mahabharata Tatparya Nirnaya Kannada 18108_18121

 

[ಉಮಾ, ಶಚೀ, ಶಾಮಳೆ ಮತ್ತು ಉಷಾದೇವಿಯರು, ಭಾರತೀದೇವಿಯೊಂದಿಗೆ ಸೇರಿ ಒಂದೇ ದೇಹದಲ್ಲಿ ಅವತರಿಸಿರುವ ಹಿನ್ನೆಲೆಯನ್ನು ಮುಂದೆ ವಿವರಿಸುತ್ತಾರೆ: ]

 

ಪೂರ್ವಂ ಹ್ಯುಮಾ ಚ ದೇವ್ಯಸ್ತಾಃ ಕದಾಚಿದ್ ಭರ್ತ್ತೃಭಿರ್ಯ್ಯುತಾಃ ।

ವಿಲಾಸಂ ದರ್ಶಯಾಮಾಸುರ್ಬ್ರಹ್ಮಣಃ ಪಶ್ಯತೋsಧಿಕಮ್ ॥೧೮.೧೦೮॥

 

ಹಿಂದೊಮ್ಮೆ ಉಮಾ, ಶಚೀ, ಶಾಮಳೆ ಮತ್ತು ಉಷಾದೇವಿಯರು ತಮ್ಮ ಗಂಡಂದಿರಿಂದ ಕೂಡಿಕೊಂಡು, ಬ್ರಹ್ಮದೇವರು ನೋಡುತ್ತಿರುವುದನ್ನು ಲೆಕ್ಕಿಸದೇ, ಅವರ ಮುಂದೇ ಬಹಳ ಹಾವಭಾವಗಳನ್ನು(ವಿಲಾಸವನ್ನು) ತೋರಿದರು.

 

ಶಶಾಪ ತಾಸ್ತದಾ ಬ್ರಹ್ಮಾ ಮಾನುಷೀಂ ಯೋನಿಮಾಪ್ಸ್ಯಥ ।

ತತ್ರಾನ್ಯಗಾಶ್ಚ ಭವತೇತ್ಯೇವಂ ಶಪ್ತಾಃ ಸುರಾಙ್ಗನಾಃ ॥೧೮.೧೦೯॥

 

ವಿಚಾರ್ಯ್ಯ ಭಾರತೀಮೇತ್ಯ ಸರ್ವಮಸ್ಯೈ ನಿವೇದ್ಯ ಚ ।

ಸಹಸ್ರವತ್ಸರಂ ಚೈನಾಂ ಶುಶ್ರೂಷಿತ್ವಾ ಬಭಾಷಿರೇ ॥೧೮.೧೧೦॥

 

ಆಗ ಬ್ರಹ್ಮದೇವರು ‘ಮಾನುಷ್ಯಯೋನಿಯನ್ನು ಹೊಂದಿ ಎಂದು ಅವರನ್ನು ಶಪಿಸಿದರು. ‘ಮನುಷ್ಯಯೋನಿಯಲ್ಲಿ ನಿಮ್ಮ ಗಂಡನ್ದಿರನ್ನೂ, ಬೇರೆಯವರನ್ನೂ ಹೊಂದುವವರಾಗುವಿರಿ’ ಎಂಬ ಶಾಪಕ್ಕೆ ಗುರಿಯಾದ ಆ ಸುರಾಙ್ಗನೆಯರೆಲ್ಲರೂ ಸೇರಿ ವಿಚಾರಮಾಡಿ, ಭಾರತೀದೇವಿಯ ಬಳಿ ಹೋಗಿ, ಅವಳಿಗೆ ಎಲ್ಲವನ್ನೂ ಕೂಡಾ ಒಪ್ಪಿಸಿ, ಸಾವಿರವರ್ಷಗಳ ಕಾಲ ಅವಳ ಸೇವೆಮಾಡಿ, ಮಾತನಾಡಿದರು.

 

ದೇವೀ ನೋ ಮಾನುಷಂ ಪ್ರಾಪ್ಯಮನ್ಯಗಾತ್ವಂ ಚ ಸರ್ವಥಾ ।

ತಥಾSಪಿ ಮಾರುತಾದನ್ಯಂ ನ ಸ್ಪೃಶೇಮ ಕಥಞ್ಚನ ॥೧೮.೧೧೧॥

 

‘ಓ ದೇವಿಯೇ, ನಮಗೆ ಮನುಷ್ಯಜನ್ಮ ಬರಲಿದೆ. ನಮ್ಮ ದೋಷದಿಂದಾಗಿ ‘ಬೇರೊಬ್ಬರನ್ನು ಹೊಂದಿ’ ಎನ್ನುವ ಶಾಪವೂ ಕೂಡಾ ನಮ್ಮಪಾಲಿನಲ್ಲಿದೆ. ಹೇಗಾದರೂ ಇದು ನಡದೇ ನಡೆಯುತ್ತದೆ. ಆದರೂ ಕೂಡಾ, ಮುಖ್ಯಪ್ರಾಣನನ್ನು ಹೊರತುಪಡಿಸಿ, ಯಾವರೀತಿಯಲ್ಲಿಯೂ ಕೂಡಾ ಇನ್ನ್ಯಾರನ್ನೂ ನಾವು ಮುಟ್ಟಲಾರೆವು’.

 

[ಬ್ರಹ್ಮದೇವರಿಂದ ಉಮಾ, ಶಚೀ, ಶಾಮಳೆ ಮತ್ತು ಉಷಾದೇವಿಯರು ಜೊತೆಯಾಗಿ ಪಡೆದ ಇನ್ನೊಂದು ಶಾಪವನ್ನು ವಿವರಿಸುತ್ತಾರೆ:]

 

ಬ್ರಹ್ಮಣೈವ  ಚ ಶಪ್ತಾಃ ಸ್ಮ ಪೂರ್ವಂ ಚಾನ್ಯತ್ರ ಲೀಲಯಾ 

ಏಕದೇಹತ್ವಮಾಪ್ಯೈನಂ ಯದಾ ವಞ್ಚಯಿತುಂ ಗತಾಃ ॥೧೮.೧೧೨॥

 

‘ಹಿಂದೆ, ಇನ್ನೊಂದು ಸಂದರ್ಭದಲ್ಲಿ, ಬಾಲಿಶವಾಗಿ ನಾವು ನಾಲ್ವರೂ(ಶಚೀ, ಶ್ಯಾಮಳೆ, ಉಷೆ ಮತ್ತು ಉಮಾ) ಒಂದೇ ದೇಹದಲ್ಲಿದ್ದುಕೊಂಡು ಬ್ರಹ್ಮನನ್ನು ವಂಚಿಸಲು ಹೋದೆವೋ, ಆಗಲೂ ಬ್ರಹ್ಮದೇವರಿಂದ ನಾವು ಶಾಪಗ್ರಸ್ತರಾಗಿದ್ದೇವೆ’.

 

ಏಕದೇಹಾ ಮಾನುಷತ್ವಮಾಪ್ಸ್ಯಥ ತ್ರಿಶ ಉದ್ಧತಾಃ ।

ತ್ರಿಶೋ ಮದ್ವಞ್ಚನಾಯೇತಾ ಇತಿ ತೇನೋದಿತಾ ವಯಮ್ ॥೧೮.೧೧೩॥

 

‘ಒಂದೇ ದೇಹವುಳ್ಳವರಾಗಿ, ಮನುಷ್ಯಶರೀರವನ್ನು ಹೊಂದಿ. ಮೂರುಬಾರಿ ನನ್ನನ್ನು ಮೋಸ ಮಾಡಲು ಬಂದಿರಿ, ಹಾಗಾಗಿ ಮೂರು ಬಾರಿ ಒಂದೇ ದೇಹವನ್ನು ಹೊಂದಿ’ ಎಂದು ಆಗ ಬ್ರಹ್ಮದೇವರು ಶಪಿಸಿದರು’.

[ಒಟ್ಟಿನಲ್ಲಿ ‘ಮೂರು ಬಾರಿ ಒಂದೇ ದೇಹ(ಮಾನುಷ ದೇಹ) ಬರಲಿ’ ಎನ್ನುವ ಒಂದು ಶಾಪ, ‘ಗಂಡನಲ್ಲದೇ ಬೇರೆಯವರೊಂದಿಗೆ ಸಂಪರ್ಕವಾಗಲಿ’ ಎನ್ನುವ ಇನ್ನೊಂದು ಶಾಪ]. 

 

ಅತಸ್ತ್ವಯೈಕದೇಹತ್ವಮಿಚ್ಛಾಮೋ ದೇವಿ ಜನ್ಮಸು।

ಚತುರ್ಷ್ವಪಿ ಯತೋsಸ್ಮಾಕಂ ಶಾಪದ್ವಯನಿಮಿತ್ತತಃ ॥೧೮.೧೧೪॥

 

ಚತುರ್ಜ್ಜನ್ಮ ಭವೇದ್ ಭೂಮೌ ತ್ವಾಂ ನಾನ್ಯೋ ಮಾರುತಾದ್ ವ್ರಜೇತ್ ।

ನಿಯಮೋsಯಂ ಹರೇರ್ಯ್ಯಸ್ಮಾದನಾದಿರ್ನ್ನಿತ್ಯ ಏವ ಚ ॥೧೮.೧೧೫॥

 

ಈ ಎರಡು ಶಾಪದ ನಿಮಿತ್ತ,  ನಿನ್ನಿಂದ, ನಾಲ್ಕೂ ಜನ್ಮಗಳಲ್ಲಿ ಒಂದೇ ದೇಹವನ್ನು ಪಡೆಯಲು ಬಯಸುತ್ತೇವೆ. 

ನಾಲ್ಕು ದೇಹ ಬರಲೇ ಬೇಕು. ಅದರಿಂದಾಗಿ ನಿನ್ನ ದೇಹದೊಳಗಡೆ ನಾವು ಬರುತ್ತೇವೆ. ಆಗ ನಿನ್ನನ್ನು ಮುಖ್ಯಪ್ರಾಣನಲ್ಲದೇ ಬೇರೊಬ್ಬರು ಹೊಂದುವುದಿಲ್ಲ. ನಿನ್ನನ್ನು ಮುಖ್ಯಪ್ರಾಣನಲ್ಲದೇ ಇನ್ನೊಬ್ಬ ಮುಟ್ಟಬಾರದು ಎಂದು ಅನಾದಿಕಾಲದ ನಿಯಮವೇನಿದೆ, ಅದು ನಿತ್ಯಸತ್ಯ. 

[ವಿಪ್ರಕನ್ಯಯಾಗಿ ಹನುಮಂತನ ಅವತಾರದಲ್ಲಿ, ಇಂದ್ರಸೇನಾ ನಳನನ್ದಿನಿ, ಭೀಮಾವತಾರದಲ್ಲಿ ದ್ರೌಪದಿ, ಮಧ್ವಾವತಾರದಲ್ಲಿ   ಚಂದ್ರಾ, ಹೀಗೆ ಭಾರತೀದೇವಿಯ ನಾಲ್ಕು ಅವತಾರಗಳು.  ಇದನ್ನು ‘ಕಾಳೀ ಚನ್ದ್ರೇತಿ ಚೋಚ್ಯತೇ’ ಎಂದು ಆಚಾರ್ಯರು ಈಗಾಗಲೇ ಎರಡನೇ ಅಧ್ಯಾಯದಲ್ಲಿ ಸೂಚಿಸಿದ್ದಾರೆ (೨.೧೨೦). ಇದಕ್ಕೆ ಪೂರಕವಾಗಿ ‘ತದೈವ ಕೃಷ್ಣಾsಪಿ ಭುವಿ ಪ್ರಜಾತಾ ಎಂದು ಮಹಾಭಾರತ ತಾತ್ಪ್ಪರ್ಯ ನಿರ್ಣಯದಲ್ಲೇ (೩೨.೧೩೨) ಮುಂದೆ ಹೇಳುತ್ತಾರೆ ಕೂಡಾ].

 

ಅತಸ್ತ್ವಯೈಕದೇಹಾನ್ನೋ ನಾನ್ಯ ಆಪ್ನೋತಿ ಮಾರುತಾತ್ ।

ಇತೀರಿತೇ ತಥೇತ್ಯುಕ್ತ್ವಾ ಪಾರ್ವತ್ಯಾದಿಯುತೈವ ಸಾ ॥೧೮.೧೧೬॥

 

ವಿಪ್ರಕನ್ಯಾsಭವತ್ ತತ್ರ ಚತಸ್ರಃ ಪಾರ್ವತೀಯುತಾಃ ।

ಏಕದೇಹಸ್ಥಿತಾಶ್ಚಕ್ರುರ್ಗ್ಗೀರೀಶಾಯ ತಪೋ ಮಹತ್ ॥೧೮.೧೧೭॥

 

‘ಆ ಕಾರಣದಿಂದ ನಿನ್ನ ಜೊತೆಗೆ ಒಂದೇದೇಹವನ್ನು ಹೊಂದಿದರೆ, ನಮ್ಮನ್ನು ಮುಖ್ಯಪ್ರಾಣನಿಗಿಂತ ಇನ್ನೊಬ್ಬ ಹೊಂದುವುದಿಲ್ಲ’ ಎಂದು ಅವರು ಪ್ರಾರ್ಥಿಸಲು, ಹಾಗೇ ಆಗಲಿ ಎಂದು ಹೇಳಿದ ಭಾರತೀದೇವಿ, ಪಾರ್ವತೀ ಮೊದಲಾದವರಿಂದ ಕೂಡಿಯೇ ಬ್ರಾಹ್ಮಣಕನ್ಯೆಯಾಗಿ ಹುಟ್ಟಿದಳು. ಈ ಜನ್ಮದಲ್ಲಿ  ಪಾರ್ವತಿಯಿಂದ ಕೂಡಿದ ಉಳಿದ ನಾಲ್ವರು ಒಂದೇ ದೇಹದಲ್ಲಿದ್ದುಕೊಂಡು, ಗಿರೀಶನನ್ನು(ರುದ್ರದೇವರನ್ನು) ಕುರಿತು ತಪಸ್ಸನ್ನಾಚರಿಸಿದರು.

 

ತದ್ದೇಹಸ್ಥಾ ಭಾರತೀ ತು ರುದ್ರದೇಹಸ್ಥಿತಂ ಹರಿಮ್ ।

ತೋಷಯಾಮಾಸ ತಪಸಾ ಕರ್ಮ್ಮೈಕ್ಯಾರ್ತ್ಥಂ ಧೃತವ್ರತಾ ॥೧೮.೧೧೮॥

 

ಅವರ ದೇಹದಲ್ಲಿರುವ ಭಾರತಿಯಾದರೋ, ರುದ್ರನ ದೇಹದ ಒಳಗಡೆ ಇರುವ (ಅಂತರ್ಯಾಮಿ) ನರಸಿಂಹನನ್ನು ತಪಸ್ಸಿನಿಂದ ಸಂತಸಗೊಳಿಸಿದಳು. ‘ಇವರೆಲ್ಲರ ಹಿತರಕ್ಷಣೆಯಲ್ಲಿ ಧೀಕ್ಷೆಯನ್ನು ತೊಟ್ಟಿದ್ದ ಭಾರತೀದೇವಿ, ಒಂದು ದೇಹ ಹಾಗೂ ಮನಸ್ಸಿಗೆ ಒಂದೇ ಕರ್ಮವಿರಲಿ ಎಂದು ನೇರವಾಗಿ ಹರಿ ಚಿಂತನೆ ಮಾಡದೇ, ರುದ್ರನ ಅಂತರ್ಯಾಮಿಯಾದ  ಹರಿಯ ತಪಸ್ಸನ್ನು ಮಾಡಿದಳು.

[ಇದನ್ನು ಮಹಾಭಾರತದ  ಆದಿಪರ್ವದಲ್ಲಿ(೨೧೪.೫೬, ವೈವಾಹಿಕಪರ್ವ) ಹೀಗೆ ವಿವರಿಸಿದ್ದಾರೆ: ಆಸೀತ್ ತಪೋವನೇ ಕಾಚಿದೃಷೇಃ ಕನ್ಯಾ ಮಹಾತ್ಮನಃ    ನಾಧ್ಯಗಚ್ಛತ್ ಪತಿಂ ಸಾ ತು ಕನ್ಯಾ ರೂಪವತೀ  ಸತೀ । ತೋಶಯಾಮಾಸ  ತಪಸಾ ಸಾ ಕಿಲೋಗ್ರೇಣ ಶಙ್ಕರಮ್’ (‘ಒಬ್ಬ ಋಷಿಕನ್ಯೆಯಿದ್ದಳು, ಅವಳು ಬಹಳ ಸುಂದರಿಯಾಗಿದ್ದಳು. ಅವಳಿಗೆ ಆ ಜನ್ಮದಲ್ಲಿ ಗಂಡನೇ ಸಿಗಲಿಲ್ಲ. ತಪಸ್ಸು ಮಾಡಿಕೊಂಡಿದ್ದಳು’ ಎಂದು ಅವರ ಒಂದು ಜನ್ಮದ ಕಥೆಯನ್ನು  ಇಲ್ಲಿ ವರ್ಣಿಸಿರುವುದನ್ನು ನಾವಿಲ್ಲಿ ಕಾಣಬಹುದು)

 

ತಸ್ಯೈ ಸ ರುದ್ರದೇಹಸ್ಥೋ ಹರಿಃ ಪ್ರಾದಾದ್ ವರಂ ಪ್ರಭುಃ ।

ಅನನ್ತತೋಷಣಂ ವಿಷ್ಣೋಃ ಸ್ವಭರ್ತ್ತ್ರಾ ಸಹ ಜನ್ಮಸು ॥೧೮.೧೧೯॥

 

ಶಿವನ ಅಂತರ್ಯಾಮಿಯ ತಪಸ್ಸನ್ನು ಮಾಡಿದ ಭಾರತೀದೇವಿಗೆ ರುದ್ರನ ಅಂತರ್ಯಾಮಿ ಪರಮಾತ್ಮನು ವರವನ್ನು ನೀಡಿದ. ‘ಪರಮಾತ್ಮನಿಗೆ ನಿನ್ನಿಂದ ಬಹಳ ಸಂತೋಷವುಂಟಾಗಲಿ. ನಿನ್ನ ಜನ್ಮಗಳಲ್ಲಿ ಗಂಡನೊಂದಿಗೆ ಕೂಡಿ, ಪರಮಾತ್ಮನನ್ನು ಸಂತಸಗೊಳಿಸು’ ಎನ್ನುವ ವರ.

 

ಸರ್ವೇಶ್ವಪೀತಿ ಚಾನ್ಯಾಸಾಂ ದದೌ ಶಙ್ಕರ ಏವ ಚ ।

ವರಂ ಸ್ವಭರ್ತ್ತೃಸಂಯೋಗಂ ಮಾನುಷೇಷ್ವಪಿ ಜನ್ಮಸು ॥೧೮.೧೨೦॥

 

ತತಸ್ತದೈವ ದೇಹಂ ತಾ ವಿಸೃಜ್ಯ ನಳನನ್ದಿನೀ ।

ಬಭೂವುರಿನ್ದ್ರಸೇನೇತಿ ದೇಹೈಕ್ಯೇನ ಸುಸಙ್ಗತಾಃ ॥೧೮.೧೨೧॥

 

ಉಳಿದವರಿಗೆ ಸಾಕ್ಷಾತ್ ರುದ್ರದೇವರು ವರವನ್ನಿತ್ತರು: ‘ನಿಮಗೆ ನಿಮ್ಮ ಗಂಡನ ಸಂಯೋಗ ಮನುಷ್ಯಶರೀರ ರೂಪವಾಗಿರುವಾಗ ಆಗಲೀ’ ಎನ್ನುವ ವರ. ತದನಂತರ ಆ ಕನ್ಯೆ ತನ್ನ ದೇಹವನ್ನು ತ್ಯಜಿಸಿದಳು. ಮುಂದೆ ನಳ-ನಂದಿನೀ (ನಳನ ಪುತ್ರಿಯಾಗಿ), ‘ಇಂದ್ರಸೇನಾ’ ಎನ್ನುವ ಹೆಸರಿನಿಂದ ಹುಟ್ಟಿ, ಒಂದೇ ದೇಹವನ್ನು ಎಲ್ಲರೂ ಪಡೆದರು. (ಒಂದೇ ದೇಹ ಐದು ಜೀವ).

Mahabharata Tatparya Nirnaya Kannada 1897_18107

 

ಯಾಜೋಪಯಾಜಾವಾನೀಯಾಥಾರ್ಬುದೇನ ಗವಾಂ ನೃಪಃ ।

ಚಕಾರೇಷ್ಟಿಂ ತು ತದ್ಭಾರ್ಯ್ಯಾ ದ್ವಿಜಾಭ್ಯಾಮತ್ರ ಚಾsಹುತಾ ॥೧೮.೯೭ ॥

 

ದ್ರುಪದನು ಹತ್ತುಕೋಟಿ  ಗೋವುಗಳಿಂದ ಯಾಜ ಹಾಗೂ ಉಪಯಾಜರನ್ನು ಕರೆತಂದು, ಯಾಗವನ್ನು ಮಾಡಿದನು. ಆ ಸಂದರ್ಭದಲ್ಲಿ ದ್ರುಪದನ ಹೆಂಡತಿಯು ಯಾಜೋಪಯಾಜರಿಂದ ಕರೆಯಲ್ಪಟ್ಟಳು.

[ಮಹಾಭಾರತದ ಆದಿಪರ್ವದಲ್ಲಿ(೧೪೯.೪೧) ಈ ಕುರಿತ ವಿವರವನ್ನು ಕಾಣಬಹುದು. ‘ತತ್ ಕರ್ಮ ಕುರುಮೇ ಯಾಜ  ವಿತರಾಮ್ಯರ್ಬುದಂ ಗವಾಮ್’] .

 

ದ್ರುಪದಾತ್ ಸುತಲಬ್ಧ್ಯರ್ತ್ಥಮ್ ಸಾsಹಙ್ಕಾರಾದ್ ವ್ಯಳಮ್ಬಯತ್ ।

ಕಿಮೇತಯೇತ್ಯವಜ್ಞಾಯ ತಾವುಭೌ ವಿಪ್ರಸತ್ತಮೌ ॥೧೮.೯೮ ॥

 

ಅಜುಹ್ವತಾಂ ತತ್ ಪುತ್ರಾರ್ತ್ಥಂ ಪತ್ನ್ಯಾಃ ಪ್ರಾಶ್ಯಂ ಹವಿಸ್ತದಾ ।

ಹುತೇ ಹವಿಷಿ ಮನ್ತ್ರಾಭ್ಯಾಂ ವೈಷ್ಣವಾಭ್ಯಾಂ ತದೈವ ಹಿ ॥೧೮.೯೯ ॥

 

ದೀಪ್ತಾಙ್ಗಾರನಿಭೋ ವಹ್ನಿಃ ಕುಣ್ಡಮದ್ಧ್ಯಾತ್ ಸಮುತ್ಥಿತಃ ।

ಕಿರೀಟೀ ಕುಣ್ಡಲೀ ದೀಪ್ತೋ ಹೇಮಮಾಲೀ ವರಾಸಿಮಾನ್ ॥೧೮.೧೦೦ ॥


ರಥೇನಾsದಿತ್ಯವರ್ಣ್ಣೇನ ನದನ್ ದ್ರುಪದಮಾದ್ರವತ್ ।

ಧೃಷ್ಟತ್ವಾದ್ ದ್ಯೋತನತ್ವಾಚ್ಚ ಧೃಷ್ಟದ್ಯುಮ್ನ ಇತೀರಿತಃ ॥೧೮.೧೦೧ ॥

 

ಮುನಿಭಿರ್ದ್ದ್ರುಪದೇನಾಪಿ ಸರ್ವವೇದಾರ್ತ್ಥತತ್ವವಿತ್ ।

ಅನ್ವೇನಂ ಭಾರತೀ ಸಾಕ್ಷಾದ್ ವೇದಿಮದ್ಧ್ಯಾತ್ ಸಮುತ್ಥಿತಾ  ॥೧೮.೧೦೨ ॥

  

ದ್ರುಪದನಿಂದ, ಮಗನನ್ನು ಪಡೆಯುವ ಸಲುವಾಗಿ ಕರೆದರೂ, ಅವಳು ಅಹಂಕಾರದಿಂದ ವಿಳಂಬ ಮಾಡಿದಳು. ಆಗ, ‘ಇವಳಿಂದೇನು ಪ್ರಯೋಜನ ಎಂದು ಆಕೆಯನ್ನು ನಿರ್ಲಕ್ಷಿಸಿದ ಆ ಯಾಜೋಪಯಾಜರು, ಮಕ್ಕಳನ್ನು ಪಡೆಯುವುದಕ್ಕಾಗಿ ಹೆಂಡತಿಯಿಂದ ಕುಡಿಯಬೇಕಾಗಿದ್ದ ಹವಿಸ್ಸನ್ನು ಬೆಂಕಿಯಲ್ಲೇ ಹೋಮಮಾಡಿದರು. ಹೀಗೆ ವೈಷ್ಣವ ಮಂತ್ರಗಳಿಂದ ಆ ಹವಿಸ್ಸು ಹೋಮಿಸಲ್ಪಡುತ್ತಿರಲು, ಬೆಂಕಿಯಂತೆ ಹೊಳೆಯುತ್ತಿರುವ ದೇಹವುಳ್ಳ ವಹ್ನಿಯು, ಕುಂಡದ ಮಧ್ಯದಿಂದ ಮೇಲಕ್ಕೆ ಬಂದನು. ಕಿರೀಟ ಹಾಗು ಕುಂಡಲವನ್ನು ಧರಿಸಿರುವ, ಹೊಳೆಯುವ ಬಂಗಾರದ ಮಾಲೆಯುಳ್ಳ, ಒಳ್ಳೆಯ ಕತ್ತಿಯನ್ನು ಹಿಡಿದ ಆತ, ಸೂರ್ಯನಂತೆ  ಬಣ್ಣವುಳ್ಳ ರಥವನ್ನು ಏರಿ ಘರ್ಜಿಸುತ್ತಾ, ದ್ರುಪದನ ಬಳಿ ಬಂದನು.

ಎಲ್ಲಾ ವೇದದ ತತ್ತ್ವವನ್ನು ತಿಳಿದವನಾದ ಅವನು, ಮುನಿಗಳಿಂದಲೂ, ದ್ರುಪದನಿಂದಲೂ, ‘ಧೃಷ್ಟದ್ಯುಮ್ನ’ ಎಂದು ನಾಮಕರಣ ಮಾಡಲ್ಪಟ್ಟನು. (ಅಸಾಧಾರಣವಾದ ಧೈರ್ಯ(ಧೃಷ್ಟ) ಹಾಗೂ ಚನ್ನಾಗಿ ಹೊಳೆಯುತ್ತಿರುವ(ದ್ಯುಮ್ನ) ಅವನು   ಧೃಷ್ಟದ್ಯುಮ್ನ’ ಎಂದು  ಹೆಸರಾದನು). ಅವನನ್ನು ಅಸುಸರಿಸಿ, ಸಾಕ್ಷಾತ್ ಭಾರತೀದೇವಿಯು ಯಜ್ಞಕುಂಡದ ಮಧ್ಯದಿಂದ ಮೇಲೆದ್ದು ಬಂದಳು.  

 

ಪ್ರಾಣೋ ಹಿ ಭರತೋ ನಾಮ ಸರ್ವಸ್ಯ ಭರಣಾಚ್ಛ್ರುತಃ ।

ತದ್ಭಾರ್ಯ್ಯಾ ಭಾರತೀ ನಾಮ ವೇದರೂಪಾ ಸರಸ್ವತೀ ॥೧೮.೧೦೩ ॥

 

ಎಲ್ಲರನ್ನೂ ಹೊತ್ತದ್ದರಿಂದ ಮುಖ್ಯಪ್ರಾಣನನ್ನು ‘ಭರತ’ ಎಂದೂ ಕರೆಯುತ್ತಾರೆ. ಭರತನಿಗೆ ಸಂಬಂಧಪಟ್ಟವಳು(ಪತ್ನಿ) ಭಾರತೀ (ಭಾರತಸ್ಯ ಸಂಬಂಧಿನೀ ಭಾರತೀ). ಸಾಕ್ಷಾತ್ ವೇದವೇ ಮೈವೆತ್ತು ಬಂದವಳಾದ ಅವಳನ್ನು ‘ಸರಸ್ವತೀ’ ಎಂದೂ ಕರೆಯುತ್ತಾರೆ.    

ಈ ವಿಷಯವನ್ನು ಮಹಾಭಾರತದ ಆದಿಪರ್ವದಲ್ಲಿ(೧೪೯.೭೧-೭೩) ವಿವರಿಸಿರುವುದನ್ನು ಕಾಣಬಹುದು:  ತಯೋಸ್ತು ನಾಮನಿ ಚಕ್ರುರ್ದ್ವಿಜಾಃ ಸಂಪೂರ್ಣಮಾನಸಾಃ । ಧೃಷ್ಟತ್ವಾದಪ್ರಧೃಷ್ಯತ್ವಾದ್ ದ್ಯುಮ್ನಾದ್ ದುತ್ಸಮ್ಭವಾದಪಿ ।  ಧೃಷ್ಟದ್ಯುಮ್ನಃ ಕುಮಾರೋsಯಂ ದ್ರುಪದಸ್ಯ ಭವತ್ವಿತಿ  । ಕೃಷ್ಣೇತ್ಯೇವಾಭವತ್ ಕನ್ಯಾ ಕೃಷ್ಣಾsಭೂತ್  ಸಾ ಹಿ ವರ್ಣತಃ ।  (ಬಣ್ಣದಿಂದ ಕಪ್ಪಗಿದ್ದುದರಿಂದ ಕೃಷ್ಣಾ ಎಂದು ಅವಳ ಹೆಸರಾಯಿತು) ತದಾ ತನ್ಮಿಥುನಂ ಜಜ್ಞೇ ದ್ರುಪದಸ್ಯ  ಮಹಾಮಖೇ । ವೈದಿಕಾಧ್ಯಯನೇ ಪಾರಂ ಧೃಷ್ಟದ್ಯುಮ್ನೋ  ಗತಸ್ತದಾ’.   

ಇನ್ನು ಪ್ರಾಣದೇವರನ್ನು ‘ಭರತ’ ಎನ್ನುವ ಹೆಸರಿನಿಂದ ಕರೆಯುತ್ತಾರೆ ಎನ್ನುವುದನ್ನು  ಪ್ರಾಣೋ ಭರತಃ’ ಎಂದು  ಐತರೇಯ ಬ್ರಾಹ್ಮಣದಲ್ಲಿ(೧೦.೨) ಹೇಳಿರುವುದರಲ್ಲಿ ತಿಳಿಯುತ್ತದೆ].

  

ಶಂರೂಪಮಾಶ್ರಿತಾ ವಾಯುಂ ಶ್ರೀರಿತ್ಯೇವ ಚ ಕೀರ್ತ್ತಿತಾ ।

ಅವೇಶಯುಕ್ತಾ ಶಚ್ಯಾಶ್ಚ ಶ್ಯಾಮಳಾಯಾಸ್ತಥೋಷಸಃ  ॥೧೮.೧೦೪ ॥

 

ಆನಂದವೇ ಮೈವೆತ್ತುಬಂದ ಮುಖ್ಯಪ್ರಾಣನನ್ನು ಆಶ್ರಯಿಸಿದ್ದರಿಂದ ‘ಶ್ರೀಃ’ ಎಂದೇ ಅವಳ ಹೆಸರು. ಅವಳು ಶಚಿ, ಶಾಮಳೆ ಮತ್ತು ಉಷೆಯ ಆವೇಶದಿಂದ ಕೂಡಿದ್ದಳು ಕೂಡಾ.

[ಮಹಾಭಾರತದಲ್ಲಿ ಅನೇಕ ಕಡೆ ದ್ರೌಪದಿಯನ್ನು ‘ಶ್ರೀಃ’  ಎಂದು ಸಂಬೋಧಿಸುವುದನ್ನು ನಾವು ಕಾಣುತ್ತೇವೆ. ಶ್ರೀಃ ಎಂದರೆ ‘ಶಂ ರೂಪನಾಗಿರುವವನನ್ನು ಆಶ್ರಯಿಸಿದ್ದಾಳೆ ಎಂದರ್ಥ. ಮಹಾಭಾರತದ ಆದಿಪರ್ವದಲ್ಲಿ  ಮಾನುಷಂ ವಿಗ್ರಹಂ ಕೃತ್ವಾ ಸಾಕ್ಷಾಚ್ಛ್ರೀರಿವ ವರ್ಣಿನಿ’ (೧೪೯.೬೨)  ಎಂದು ಹೇಳಿ ಮುಂದೆ  ‘ತಾಂ ಚಾಪ್ಯೇಷಾಂ ಯೋಷಿತಂ ಲೋಕಕಾನ್ತಾಂ  ಶ್ರಿಯಂ ಭಾರ್ಯಾಂ  ವ್ಯದಧಾನ್ಮಾನುಷೇಷು' (೨೧೪.೩೦) ಎಂದು ಹೇಳುವುದನ್ನು ಕಾಣುತ್ತೇವೆ. ಮುಂದೆ ಸ್ವರ್ಗಾರೋಹಣ ಪರ್ವದಲ್ಲಿ(೪.೧೨) ಶ್ರೀರೇಷಾ ದ್ರೌಪದೀರೂಪಾ  ತ್ವದರ್ಥೇ ಮಾನುಷಂ ಗತಾ । ಅಯೋನಿಜಾ ಲೋಕಕಾನ್ತಾ ಪುಣ್ಯಗನ್ಧಾ ಯುಧಿಷ್ಠಿರ’ ಎಂದು ಸ್ಫುಟವಾಗಿ ‘ಶ್ರೀಃ’ ಎಂದು ಹೇಳಿದ್ದಾರೆ. ಈರೀತಿ ಪ್ರಯೋಗವನ್ನು ತಪ್ಪಾಗಿ ಶ್ರೀಲಕ್ಷ್ಮಿ ಎಂದು ತಿಳಿಯಬಾರದು. ‘ಶಂ ಎಂದರೆ ಮುಖ್ಯಪ್ರಾಣ. ಅವನಲ್ಲಿ ಸದಾರತಳಾಗಿರುವವಳು ಭಾರತೀದೇವಿ.  ಆದ್ದರಿಂದ ಅವಳನ್ನು ‘ಶ್ರೀಃ’ ಎಂದೂ ಕರೆಯುತ್ತಾರೆ].  

 

ತಾಶ್ಚೇನ್ದ್ರಧರ್ಮ್ಮನಾಸತ್ಯಸಂಶ್ರಯಾಚ್ಛ್ರಿಯ ಈರಿತಾಃ ।

ಸಾ ಕೃಷ್ಣಾ ನಾಮತಶ್ಚಾsಸೀದುತ್ಕೃಷ್ಟತ್ವಾದ್ಧಿ ಯೋಷಿತಾಮ್ ॥೧೮.೧೦೫ ॥

 

ಶಚೀ, ಶಾಮಳೆ ಮತ್ತು ಉಷಾದೇವಿಯರೂ ಕೂಡಾ ಇಂದ್ರ, ಯಮ ಮತ್ತು ಅಶ್ವೀದೇವತೆಗಳನ್ನು ಆಶ್ರಯಿಸಿರುವುದರಿಂದ  ‘ಶ್ರೀಯಃ ’ ಎಂದು ಕರೆಸಿಕೊಳ್ಳಲ್ಪಡುತ್ತಾರೆ. ಈರೀತಿ ದ್ರುಪದರಾಜನ ಯಜ್ಞಕುಂಡದಿಂದ ಮೇಲೆದ್ದು ಬಂದ, ಹೆಣ್ಣುಮಕ್ಕಳಲ್ಲೇ ಅತ್ಯಂತ ಶ್ರೇಷ್ಠಳಾದ ಅವಳಿಗೆ ‘ಕೃಷ್ಣಾ’ ಎನ್ನುವ  ಹೆಸರು ಬಂತು.

 

ಕೃಷ್ಣಾ ಸಾ ವರ್ಣ್ಣತಶ್ಚಾsಸೀದುತ್ಕೃಷ್ಟಾನನ್ದಿನೀ ಚ ಸಾ ।

ಉತ್ಪತ್ತಿತಶ್ಚ ಸರ್ವಜ್ಞಾ ಸರ್ವಾಭರಣಭೂಷಿತಾ ॥೧೮.೧೦೬ ॥

 

ಆಕೆ ಬಣ್ಣದಿಂದಲೂ ಕೂಡಾ ‘ಕೃಷ್ಣಾ. ಅಲ್ಲದೇ, ಉತ್ಕೃಷ್ಟವಾದ ಆನಂದವನ್ನು ಕೊಡುವವಳಾದ್ದರಿಂದ ಅವಳನ್ನು ‘ಕೃಷ್ಣಾ’ ಎಂದು ಕರೆಯುತ್ತಾರೆ. ಆಕೆ ಹುಟ್ಟುವಾಗಲೇ ಎಲ್ಲವನ್ನೂ ಬಲ್ಲವಳೂ. ಸರ್ವಾಭರಣಭೂಷಿತಳೂ ಆಗಿದ್ದಳು.   

 

ಸಮ್ಪ್ರಾಪ್ತಯೌವನೈವಾsಸೀದಜರಾ ಲೋಕಸುನ್ದರೀ ।

ಉಮಾಂಶಯುಕ್ತಾsತಿತರಾಂ ಸರ್ವಲಕ್ಷಣಸಂಯುತಾ ॥೧೮.೧೦೭ ॥

 

ಅವಳಿಗೆ ಬಾಲ್ಯವೆಂಬುದಿರಲಿಲ್ಲ. ಸಂಪೂರ್ಣ ಯೌವನವನ್ನು ಹೊಂದಿಯೇ ಅವಳಿದ್ದಳು. ಅವಳಿಗೆ ಮುಪ್ಪು ಇರಲಿಲ್ಲ. ಲೋಕದಲ್ಲಿ ಅತ್ಯಂತ ಸುಂದರಿಯಾಗಿದ್ದಳು. ಅವಳು ಉಮೆಯ ಅಂಶದಿಂದಲೂ. ಎಲ್ಲಾ ಲಕ್ಷಣಗಳಿಂದಲೂ ಕೂಡಿದ್ದಳು.