ಯದಾ ತೇ ಸರ್ವಶಸ್ತ್ರಾಸ್ತ್ರವೇದಿನೋ ರಾಜಪುತ್ರಕಾಃ ।
ಬಭೂವು ರಙ್ಗಮದ್ಧ್ಯೇ ತಾನ್ ಭಾರದ್ವಾಜೋsಪ್ಯದರ್ಶಯತ್ ॥೧೮.೩೦॥
ಯಾವಾಗ ಯುಧಿಷ್ಠಿರಾದಿ ರಾಜಪುತ್ರರು ಸಮಸ್ತ ಶಸ್ತ್ರಾಸ್ತ್ರಗಳನ್ನು
ಬಲ್ಲವರಾದರೋ, ಅವರನ್ನು ದ್ರೋಣರು ರಂಗದ
ಮಧ್ಯದಲ್ಲಿ ತೋರಿಸಿದರು. (ರಾಜಕುಮಾರರು ಎಷ್ಟು ಚನ್ನಾಗಿ ಕಲಿತಿದ್ದಾರೆ ಎಂದು ತೋರಿಸುವ ಒಂದು ರಂಗ
ಪ್ರದರ್ಶನ ಏರ್ಪಾಟಾಯಿತು).
ರಕ್ತಚನ್ದನಸತ್ಪುಷ್ಪವಸ್ತ್ರಶಸ್ತ್ರಗುಳೋದನೈಃ ।
ಸಮ್ಪೂಜ್ಯ ಭಾರ್ಗ್ಗವಂ ರಾಮಮನುಜಜ್ಞೇ ಕುಮಾರಕಾನ್ ॥೧೮.೩೧॥
ಕೆಂಪಾಗಿರತಕ್ಕಂತಹ
ಗಂಧ, ಒಳ್ಳೆಯ ಪುಷ್ಪಗಳು, ವಸ್ತ್ರ, ಶಸ್ತ್ರ, ಬೆಲ್ಲದ ಅನ್ನ(ಪಾಯಸ),
ಇವುಗಳಿಂದ ಭಾರ್ಗವ ಪರಶುರಾಮನನ್ನು ಪೂಜಿಸಿ, ಕುಮಾರರಿಗೆ ತಮ್ಮ
ಬಲಪ್ರದರ್ಶನ ಮಾಡಲು ದ್ರೋಣಾಚಾರ್ಯರು ಅನುಜ್ಞೆ ನೀಡಿದರು.
ತೇ ಭೀಷ್ಮದ್ರೋಣವಿದುರಗಾನ್ಧಾರೀಧೃತರಾಷ್ಟ್ರಕಾನ್ ।
ಸರಾಜಮಣ್ಡಲಾನ್ ನತ್ವಾ
ಕುನ್ತೀಂ ಚಾದರ್ಶಯಞ್ಛ್ರಮಮ್ ॥೧೮.೩೨॥
ಆ ರಾಜಕುಮಾರರು ರಾಜರ ಸಮೂಹದಿಂದ ಕೂಡಿರುವ ಭೀಷ್ಮ, ದ್ರೋಣ, ವಿದುರ, ಗಾಂಧಾರಿ, ಧೃತರಾಷ್ಟ್ರರನ್ನು ಹಾಗೂ ಕುಂತಿಯನ್ನೂ ಕೂಡಾ ನಮಸ್ಕರಿಸಿ, ತಮ್ಮ ವಿದ್ಯಾಪ್ರಾವಿಣ್ಯತೆಯನ್ನು ತೋರಿದರು.
ಸರ್ವೈಃ ಪ್ರದರ್ಶಿತೇsಸ್ತ್ರೇ ತು ದ್ರೋಣಾದಾತ್ತಮಹಾಸ್ತ್ರವಿತ್ ।
ದ್ರೌಣಿರಸ್ತ್ರಾಣ್ಯಮೇಯಾನಿ ದರ್ಶಯಾಮಾಸ ಚಾಧಿಕಮ್ ॥೧೮.೩೩॥
ಎಲ್ಲರಿಂದಲೂ ಅಸ್ತ್ರವು ಪ್ರದರ್ಶಿಸಲ್ಪಡಲು, ದ್ರೋಣರಿಂದ
ಸ್ವೀಕರಿಸಿದ ಮಹಾಸ್ತ್ರಗಳನ್ನು ಬಲ್ಲವನಾದ ಅಶ್ವತ್ಥಾಮನು, ನಂಬಲಸಾಧ್ಯವಾದ ಅಸ್ತ್ರಗಳನ್ನು
ಉಳಿದವರಿಗಿಂತಲೂ ಹೆಚ್ಚಿಗೆ ತೋರಿಸಿದನು.
ತತೋsಪ್ಯತಿತರಾಂ ಪಾರ್ತ್ಥೋ ದಿವ್ಯಾಸ್ತ್ರಾಣಿ
ವ್ಯದರ್ಶಯತ್ ।
ಅವಿದ್ಧ್ಯನ್ಮಾಶಕೇ ಪಾದೇ ಪಕ್ಷಿಣಃ ಪಕ್ಷ್ಮ ಏವ ಚ ॥೧೮.೩೪॥
ಅಶ್ವತ್ಥಾಮನಿಗಿಂತಲೂ ಮಿಗಿಲಾಗಿ ಅರ್ಜುನನು
ದಿವ್ಯಾಸ್ತ್ರಗಳನ್ನು ಪ್ರದರ್ಶಿಸಿದ. ನೊಣದ ಕಾಲಿಗೆ ಬಾಣವನ್ನು ಬಿಟ್ಟ. ಪಕ್ಷಿಯ ಹುಬ್ಬಿನಲ್ಲಿಯೂ
ಕೂಡಾ ಬಾಣವನ್ನು ಬಿಟ್ಟ.
ಏವಮಾದೀನಿ ಚಿತ್ರಾಣಿ ಬಹೂನ್ಯೇಷ ವ್ಯದರ್ಶಯತ್ ।
ತದೈವ ಕರ್ಣ್ಣ ಆಗತ್ಯ ರಾಮೋಪಾತ್ತಾಸ್ತ್ರಸಮ್ಪದಮ್ ॥೧೮.೩೫॥
ದರ್ಶಯನ್ನಧಿಕಃ ಪಾರ್ತ್ಥಾದಭೂದ್ ರಾಜನ್ಯಸಂಸದೀ ।
ಕುನ್ತೀ ನಿಜಂ ಸುತಂ ಜ್ಞಾತ್ವಾ ಲಜ್ಜಯಾ ನಾವದಚ್ಚ ತಮ್ ॥೧೮.೩೬॥
ಇವೇ ಮೊದಲಾಗಿರತಕ್ಕಂತಹ ಅತ್ಯಂತ ಆಶ್ಚರ್ಯಕರವಾದ ಬಹಳ
ಕೌಶಲಗಳನ್ನು ಅರ್ಜುನ ತೋರಿದ. ಆಗಲೇ ಕರ್ಣನು ಅಲ್ಲಿಗೆ ಬಂದು, ಪರಶುರಾಮನಿಂದ ಪಡೆದ ಅಸ್ತ್ರ
ಸಂಪತ್ತನ್ನೆಲ್ಲಾ ತೋರಿಸುತ್ತಾ, ಕ್ಷತ್ರಿಯರ ಆ ಸಮೂಹದಲ್ಲಿ
ಅರ್ಜುನನಿಗಿಂತಲೂ ಮಿಗಿಲೆನಿಸಿದ. (ದ್ರೋಣರ ಗುರುವಾಗಿರುವ ಪರಶುರಾಮನಿಂದಲೇ ಕರ್ಣ ಶಸ್ತ್ರಾಸ್ತ್ರ
ಪಡೆದಿರುವುದರಿಂದ, ಅಲ್ಲಿ ಸೇರಿದ್ದ ರಾಜರುಗಳು ಅವನನ್ನು ಅರ್ಜುನನಿಗಿಂತ ಹೆಚ್ಚು ಅಂದುಕೊಂಡರು
ಕೂಡಾ). ಕುಂತಿಯು ಕರ್ಣನನ್ನು ತನ್ನ ಮಗನನ್ನಾಗಿ ತಿಳಿದು ಲಜ್ಜಿತಳಾದಳು ಮತ್ತು ಏನನ್ನೂ
ವ್ಯಕ್ತಪಡಿಸಲಿಲ್ಲ. (ನಮಿಸಿದ ಕರ್ಣನನ್ನು ಮಾತನಾಡಿಸಲಿಲ್ಲ, ಕರ್ಣ
ತನ್ನ ಮಗ ಎಂದು ಹೇಳಲಿಲ್ಲ).
ಪಾರ್ತ್ಥೋsಸಹಂಸ್ತಂ ಯುದ್ಧಾಯೈವಾsಹ್ವಯಾಮಾಸ ಸಂಸದಿ ।
ರಣಾಯಾಕ್ಷತ್ರಿಯಾಹ್ವಾನಂ ಜಾನನ್ ಧರ್ಮ್ಮಪ್ರತೀಪಕಮ್ ॥೧೮.೩೭॥
ಅರ್ಜುನನು ಕರ್ಣನ ಶಸ್ತ್ರಾಸ್ತ್ರ ಪ್ರದರ್ಶನವನ್ನು ಸಹಿಸದೇ, ಎಲ್ಲರೂ ನೋಡುತ್ತಿರುವಾಗಲೇ ಅವನನ್ನು ಯುದ್ಧಕ್ಕೆಂದು ಕರೆದನು. ಯುದ್ಧಕ್ಕಾಗಿ ಕ್ಷತ್ರಿಯರಲ್ಲದವರನ್ನು ಆಹ್ವಾನಿಸುವುದು ಧರ್ಮ ವಿರುದ್ಧವಾದುದ್ದೆಂದು ತಿಳಿದವನಾಗಿ, ಭೀಮನು ಅರ್ಜುನನನ್ನು ತಡೆದನು.
ಭೀಮೋ ನಿವಾರ್ಯ್ಯ ಬೀಭತ್ಸುಂ ಕರ್ಣ್ಣಾಯಾದಾತ್ ಪ್ರತೋದಕಮ್ ।
ಅಕ್ಷತ್ರಸಂಸ್ಕಾರಯುತೋ ಜಾತೋsಪಿ ಕ್ಷತ್ರಿಯೇ ಕುಲೇ ॥೧೮.೩೮॥
ನ ಕ್ಷತ್ರಿಯೋ ಹಿ ಭವತಿ ಯಥಾ ವ್ರಾತ್ಯೋ ದ್ವಿಜೋತ್ತಮಃ ।
ನಿರುತ್ತರೇ ಕೃತೇ ಕರ್ಣ್ಣೇ ಭೀಮೇನೈವ ಸುಯೋಧನಃ ॥೧೮.೩೯॥
ಅಭ್ಯಷೇಚಯದಙ್ಗೇಷು ರಾಜಾನಂ ಪಿತ್ರನುಜ್ಞಯಾ ।
ಧೃತರಾಷ್ಟ್ರಃ ಪಕ್ಷಪಾತಾತ್ ಪುತ್ರಸ್ಯಾನು ವಶೋsಭವತ್ ॥೧೮.೪೦॥
ಕರ್ಣನನ್ನು ಯುದ್ಧಕ್ಕೆಂದು ಆಹ್ವಾನಿಸಿದ ಅರ್ಜುನನ್ನು ತಡೆದ ಭೀಮನು,
ಕರ್ಣನಿಗೆ ಕುದುರೆಯನ್ನು ತಾಡನಮಾಡುವ ಚಾಟಿಯನ್ನು
ನೀಡಿದನು. (ಅಂದರೆ: ಸೂತನಿಗೆ ರಥವನ್ನು ನಡೆಸುವುದು ಧರ್ಮವೇ ಹೊರತು, ಕ್ಷತ್ರಿಯರೊಂದಿಗೆ ಯುದ್ಧವಲ್ಲ ಎನ್ನುವ ಸಂಜ್ಞೆ
ಮಾಡುತ್ತಾನೆ ಭೀಮ. ಆದರೆ ಕ್ಷತ್ರಿಯ ಕನ್ಯೆಯಾದ
ಕುಂತಿಯಲ್ಲಿ ಜನಿಸಿಯೂ ಹೇಗೆ ಆತ ಸೂತನಾಗುತ್ತಾನೆ ಎಂದರೆ-), ಕ್ಷತ್ರಿಯ ಸಂಸ್ಕಾರ
ಇಲ್ಲದಿರುವುದರಿಂದ ಕ್ಷತ್ರಿಯ ಕುಲದಲ್ಲಿ ಹುಟ್ಟಿದರೂ ಕ್ಷತ್ರಿಯನಾಗುವುದಿಲ್ಲ. ಹೇಗೆ ಒಳ್ಳೆಯ
ಬ್ರಾಹ್ಮಣಕುಲದಲ್ಲಿ ಹುಟ್ಟಿದವನೂ ಕೂಡಾ ಸಂಸ್ಕಾರ ಇಲ್ಲದೇ ಹೋದರೆ ಬ್ರಾಹ್ಮಣನೆನಿಸುವುದಿಲ್ಲವೋ ಹಾಗೇ.
ಈರೀತಿಯಾಗಿ ಭೀಮ ಕರ್ಣನನ್ನು ಉತ್ತರಹೀನನನ್ನಾಗಿ ಮಾಡಲು, ದುರ್ಯೋಧನನು ಧೃತರಾಷ್ಟ್ರನ ಅನುಜ್ಞೆಯಿಂದ, ಕರ್ಣನನ್ನು
ಅಂಗ ದೇಶದ ರಾಜನನ್ನಾಗಿ ಮಾಡಿ ಪಟ್ಟಾಭಿಷೇಕ ಮಾಡಿ ಅಭಿಷೇಕ ಮಾಡಿದನು. ದೃತರಾಷ್ಟ್ರನು
ಪಕ್ಷಪಾತದಿಂದ ಪುತ್ರನನ್ನೇ ಅನುಸರಿಸಿದನು.
No comments:
Post a Comment