ಪ್ರಯಾಹಿ
ಸಾತ್ಯಕೇ ವಚೋ ಬ್ರವೀಹಿ ಮೇ ನೃಪಾಧಮೌ ।
ಸಮೇತ್ಯ ವಾಂ
ವರಾಯುಧೈಃ ಕರಂ ದದಾನ್ಯಸಂಶಯಮ್ ॥೧೭.೨೩೫॥
‘ಓ ಸಾತ್ಯಕಿಯೇ, ತೆರಳು, ಆ ರಾಜಾಧಮರನ್ನು ಕುರಿತು ನನ್ನ ಈ ಮಾತನ್ನು ಹೇಳು: ‘ನಿಮ್ಮಿಬ್ಬರನ್ನು
ಹೊಂದಿ ಆಯುಧಗಳಿಂದ ಕಪ್ಪವನ್ನು ಕೊಡುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ.
ಉಪೈತಮಾಶು
ಸಂಯುಗಾರ್ತ್ಥಿನೌ ಚ ಪುಷ್ಕರಂ ಪ್ರತಿ ।
ಇತೀರಿತಃ
ಶಿನೇಃ ಸುತೋ ಜಗಾಮ ವಿಪ್ರಸಂಯುತಃ ॥೧೭.೨೩೬॥
ಯುದ್ಧವನ್ನು ಬಯಸುವ ನೀವಿಬ್ಬರು ಪುಷ್ಕರವನ್ನು ಕುರಿತು ಶೀಘ್ರದಲ್ಲಿ ಬನ್ನಿರಿ’ ಎಂದು ಹೇಳು’
ಎಂದು ಶ್ರೀಕೃಷ್ಣನಿಂದ ಹೇಳಲ್ಪಟ್ಟ ಶಿನಿಯ
ಮೊಮ್ಮಗನಾದ ಸಾತ್ಯಕಿಯು ಆ ಬ್ರಾಹ್ಮಣನ ಜೊತೆಗೇ ತೆರಳಿದನು.
ಉಪೇತ್ಯ ತೌ
ಹರೇರ್ವಚೋ ಜಗಾದ ಸಾತ್ಯಕಿರ್ಬಲೀ ।
ವಿಧಾಯ ತೌ
ತೃಣೋಪಮೌ ಗಿರಾ ಜಗಾಮ ಕೇಶವಮ್ ॥೧೭.೨೩೭॥
ಹಂಸ-ಡಿಭಕರಲ್ಲಿಗೆ ತೆರಳಿದ ಬಲಿಷ್ಠನಾದ ಸಾತ್ಯಕಿಯು ಪರಮಾತ್ಮನ ಮಾತನ್ನು ಅವರಿಗೆ ಹೇಳಿದನು.
ಅವರಿಬ್ಬರನ್ನೂ ತನ್ನ ಮಾತಿನಿಂದಲೇ ಹುಲ್ಲಿಗೆ ಸಮಾನರನ್ನಾಗಿ ಮಾಡಿದ ಸಾತ್ಯಕಿ, ಮರಳಿ ಪರಮಾತ್ಮನ
ಬಳಿ ಬಂದ.
ತತಃ ಪುರೈವ
ತಾವುಭೌ ದ್ವಿಜಂ ಹರಸ್ವರೂಪಿಣಮ್ ।
ಸುದುಃಖವಾಸನಾಮಕಂ
ಪ್ರಚಕ್ರತುಸ್ತೃಣೋಪಮಮ್ ॥೧೭.೨೩೮॥
ಈ ಘಟನೆಗೂ ಮೊದಲೇ ಒಮ್ಮೆ ಹಂಸ-ಡಿಭಕರು, ರುದ್ರನ
ಸ್ವರೂಪವಾಗಿರುವ, ಸುದುಃಖವಾಸ(ದುರ್ವಾಸ) ಎಂದು ಹೆಸರುಳ್ಳ ಮುನಿಯನ್ನು ಹುಲ್ಲಿಗಿಂತ ಕಡೆಯಾಗಿ ನಡೆಸಿಕೊಂಡರು.
ದಶತ್ರಿಕೈಃ
ಶತೈರ್ವೃತೋ ಯತೀಶ್ವರೈಃ ಸ ಸರ್ವವಿತ್ ।
ವಿಪಾಟಿತಾತ್ಮಕೌಪಿನಾದಿಸರ್ವಮಾತ್ರಕೋsಭವತ್ ॥೧೭.೨೩೯॥
ದುರ್ವಾಸರ ಹಾಗೂ ಅವರ ಜೊತೆಗಿದ್ದ ಸುಮಾರು ಮೂರುಸಾವಿರ ಯತೀಶ್ವರರ ಕೌಪೀನವನ್ನು ಹರಿದ ಹಂಸ-ಡಿಭಕರು, ಅವರ ದಂಡ-ಕಮಂಡಲಾದಿ ಪಾತ್ರೆಗಳನ್ನು ಒಡೆದು ಹಾಕಿದರು.
[ಈರೀತಿ ಅವಮಾನಕ್ಕೊಳಪಟ್ಟರೂ ಕೂಡಾ ದುರ್ವಾಸರು ಹಂಸ-ಡಿಭಕರಿಗೆ ಏಕೆ ಶಾಪ ಕೊಡಲಿಲ್ಲಾ
ಎಂದರೆ: ]
ವರಾತ್
ಸ್ವಸಮ್ಭವಾದಸೌ ನ ಶಾಪಶಕ್ತಿಮಾನಭೂತ್ ।
ತತಃ
ಸಮಸ್ತಭಞ್ಜನೋರುಶಕ್ತಿಮಾಪ ಕೇಶವಮ್ ॥೧೭.೨೪೦॥
ಸ್ವಯಂ ರುದ್ರರೂಪದಿಂದ ತಾನೇ ಹಂಸ-ಡಿಭಕರಿಗೆ ವರವನ್ನು ಕೊಟ್ಟದ್ದರಿಂದ, ದುರ್ವಾಸರಿಗೆ
ಇಲ್ಲಿ ಶಾಪಕೊಡಲಾಗಲಿಲ್ಲ. ಆ ಕಾರಣದಿಂದ ಅವರು ಸಮಸ್ತ ದುರ್ಜನರನ್ನೂ ಕೊಲ್ಲುವುದರಲ್ಲಿ ಉತ್ಕೃಷ್ಟ
ಶಕ್ತಿಯುಳ್ಳ ಕೇಶವನನ್ನು(ಶ್ರೀಕೃಷ್ಣನನ್ನು) ಹೊಂದಿದರು.
ಸ ತಾನ್ ಸಮರ್ಚ್ಚ್ಯ
ಮಾಧವಃ ಪ್ರದಾಯ ಚೋರುಮಾತ್ರಕಾಃ ।
ಯಯೌ ಚ ತೈಃ
ಸಮನ್ವಿತೋ ವಧಾಯ ಸಾಲ್ವಪುತ್ರಯೋಃ ॥೧೭.೨೪೧॥
ತನ್ನಲ್ಲಿಗೆ ಬಂದ ಸಮಸ್ತ ಯತೀಶ್ವರರನ್ನು ಗೌರವಿಸಿ,
ಉತ್ಕೃಷ್ಟವಾದ ಬಟ್ಟೆ ಮೊದಲಾದವುಗಳನ್ನು ಕೊಟ್ಟು ಸತ್ಕರಿಸಿದ ಶ್ರೀಕೃಷ್ಣನು, ಸಾಲ್ವ ಪುತ್ರರ
ವಧೆಗಾಗಿ, ಆ ಯತಿಶ್ರೇಷ್ಠರೊಡಗೂಡಿ ತೆರಳಿದನು.
[ಹರಿವಂಶದಲ್ಲಿ ಈ ಕುರಿತಾದ ವಿವರಣೆಯನ್ನು ಸ್ವಲ್ಪ ವ್ಯತ್ಯಾಸದೊಂದಿಗೆ ಈ ರೀತಿ ಹೇಳಿರುವುದನ್ನು
ನಾವು ಕಾಣುತ್ತೇವೆ: ಛಿನ್ನಂ ತಾಭ್ಯಾಂ ಸಮಾದಾಯ ಶಿಕ್ಯಂ ದಾರುಮಯಂ ತಥಾ । ದ್ವಿದಲಂ ಕರ್ಪಟಂ ಚೈವ ಕೌಪೀನಮಥ ವಲ್ಕಲಂ ।
ಕಮನ್ಡಲುಂ ತದಾ ರಾಜನ್ನರ್ಧಪ್ರೋತಕಪಾಲಕಮ್ । ಏತಾನನ್ಯಾನ್ ಸಮಾದಾಯ ದ್ರುಷ್ಟುಂ
ಕೇಶವಮಾಯಯುಃ । ಪಂಚ[1] ಚೈವ ಸಹಸ್ರಾಣಿ ಪುರಸ್ಕೃತ್ಯ
ಮಹಾಮುನಿಮ್ । ದುರ್ವಾಸಸಂ ತಪೋಯೋನಿಮೀಶ್ವರಸ್ಯಾsತ್ಮಸಮ್ಭವಮ್’
[ಭವಿಷ್ಯತ್ ಪರ್ವಣಿ ೧೧೦.೧೨-೧೪] (ಒಡೆದುಹೋದ
ಮರದ ಪಾತ್ರೆಗಳು, ಹರಿದುಹೋದ ಕೌಪೀನ ಎಲ್ಲವನ್ನೂ ಸಾಕ್ಷೀಭೂತವಾಗಿ ತೆಗೆದುಕೊಂಡ
ದುರ್ವಾಸರು, ಶ್ರೀಕೃಷ್ಣನಲ್ಲಿಗೆ ತೆರಳಿದರು. ಇಲ್ಲಿ ದುರ್ವಾಸರನ್ನು ‘ಈಶ್ವರಸ್ಯಾsತ್ಮಸಮ್ಭವಮ್’
ಎಂದು ಸಂಬೋಧಿಸಿರುವುದನ್ನು ಗಮನಿಸಬೇಕು. ಇದು ದುರ್ವಾಸರು ರುದ್ರಾವತಾರ ಎನ್ನುವುದನ್ನು ಸ್ಫುಟವಾಗಿ
ತಿಳಿಸುತ್ತದೆ).
‘ಜೇಷ್ಯಾಮಿ ತೌ ರಣೇ ವಿಪ್ರ ಹಂಸಂ ಡಿಭಕಮೇವಚ
। ಗಿರೀಶೋ ವಾ ವರಂ ದದ್ಯಾಚ್ಛಕ್ರೋ ವಾ ಧನದೋsಪಿ ವಾ । ಯಮೋ
ವಾ ವರುಣೋ ವಾsಪಿ ಬ್ರಹ್ಮಾ ವಾsಥ ಚತುರ್ಮುಖಃ
। ಸಬಲೌ ಸಾನುಗೌ ಹತ್ವಾ ಪುನರ್ದಾಸ್ಯಾಮಿ ವೋ ರತಿಮ್’ [ಭವಿಷ್ಯತ್
ಪರ್ವಣಿ ೧೧೨.೩-೪] (ನಿಮ್ಮ ಸಂತೋಷಕ್ಕಾಗಿ ನಾನು ಹಂಸ ಡಿಭಕರನ್ನು ಕೊಲ್ಲುತ್ತೇನೆ ಎಂದು ದುರ್ವಾಸರು
ಹಾಗು ಇತರ ಮುನಿಗಳ ಮುಂದೆ ಶ್ರೀಕೃಷ್ಣ ಪ್ರತಿಜ್ಞೆ ಮಾಡಿದ)].
ತಮತ್ರಿಜಂ
ಹರಾತ್ಮಕಂ ಯತೋ ಹಿ ವೇದ ಮಾಗಧಃ ।
ತತೋsತ್ಯಜತ್ ಸ್ವಶಿಷ್ಯಕೌ ನಿಶಮ್ಯ ತತ್ಪ್ರತೀಪಕೌ ॥೧೭.೨೪೨॥
ಜರಾಸಂಧನು ಯಾವ ಕಾರಣದಿಂದ ಅತ್ರಿ ಋಷಿಗಳ ಮಗನಾದ ದುರ್ವಾಸರನ್ನು ಸಾಕ್ಷಾತ್ ಶಿವಾ ಎಂದು
ತಿಳಿದಿದ್ದಾನೋ, ಆಕಾರಣದಿಂದ, ರುದ್ರನಿಗೆ ವಿರುದ್ಧವಾಗಿ ನಡೆದುಕೊಂಡ ತನ್ನ ಶಿಷ್ಯರಾದ ಹಂಸ-
ಡಿಭಕರನ್ನು ತ್ಯಜಿಸಿದ (ಈ ಕಾರಣದಿಂದ ಹಂಸ-ಡಿಭಕರ ಯುದ್ಧದಲ್ಲಿ ಜರಾಸಂಧ ಪಾಲ್ಗೊಳ್ಳಲಿಲ್ಲ.)
[ಇದನ್ನು ಹರಿವಂಶದ ಭವಿಷ್ಯತ್ ಪರ್ವದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ: ‘ತತಃ ಶ್ರುತ್ವಾ
ಜರಾಸನ್ಧೋ ವಿಗ್ರಹಂ ಯದುಭಿಃ[2]
ಸಹ । ನಾಕರೋನ್ನೃಪ ಸಾಹಾಯ್ಯಂ ಪಾಪಂ ಮೇ ಭವಿತೇತಿ
ಹ’ (೧೨೧.೧೬). ಜರಾಸಂಧನಿಗೆ ಹಂಸ-ಡಿಭಕರು ದುರ್ವಾಸರೊಂದಿಗೆ ಜಗಳವಾಡಿದ ವಿಷಯ ತಿಳಿಯಿತು.
ಅದರಿಂದಾಗಿ ತಾನು ಅವರಿಗೆ ಸಹಾಯ ಮಾಡಿದರೆ ಅದು ಪಾಪವಾಗುತ್ತದೆ ಎಂದು ತಿಳಿದ ಆತ ಸಹಾಯ ಮಾಡಲಿಲ್ಲ].
No comments:
Post a Comment