ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 9, 2020

Mahabharata Tatparya Nirnaya Kannada 17266_17271

 

ಗದಸ್ತು ಸಾಲ್ವಭೂಭೃತಾ ವಯೋಗತೇನ ಯೋಧಯನ್ ।

ವಿವಾಹನಂ ನಿರಾಯುಧಂ ಚಕಾರ ಸೋsಪ್ಯಪಾದ್ರವತ್ ॥೧೭.೨೬೬ ॥

 

ಗದನು ಮುದುಕನಾದ ಸಾಲ್ವರಾಜನೊಂದಿಗೆ(ಬ್ರಹ್ಮದತ್ತನೊಂದಿಗೆ) ಯುದ್ಧಮಾಡುತ್ತಾ, ಅವನನ್ನು ವಾಹನಹೀನನನ್ನಾಗಿಯೂ, ನಿರಾಯುಧನನ್ನಾಗಿಯೂ ಮಾಡಿದ. ಆಗ ಬ್ರಹ್ಮದತ್ತ ಯುದ್ಧದಿಂದ ಓಡಿಹೋದ.

 

ಸುತೇನ ತಸ್ಯ ಕನ್ಯಸಾ ಯುಯೋಧ ಸಾತ್ಯಕೀ ರಥೀ ।

ವರಾಸ್ತ್ರಶಸ್ತ್ರಯೋಧಿನೌ ವಿಜಹ್ರತುಶ್ಚ ತಾವುಭೌ ॥೧೭.೨೬೭ ॥

 

ಸಾತ್ಯಕಿಯು ರಥವನ್ನು ಏರಿ, ಬ್ರಹ್ಮದತ್ತನ ಕಿರಿಯಮಗನೊಂದಿಗೆ(ಡಿಭಕನೊಂದಿಗೆ) ಯುದ್ಧಮಾಡಿದ.  ಅವರಿಬ್ಬರೂ ಕೂಡಾ ಶ್ರೇಷ್ಠವಾದ ಅಸ್ತ್ರ-ಶಸ್ತ್ರಗಳಿಂದ ಯುದ್ಧಮಾಡುತ್ತಾ, ವಿಹಾರ ಮಾಡಿದರು.

 

ಚಿರಂ ಪ್ರಯುದ್ಧ್ಯ ಸಾತ್ಯಕಿಃ ಸ ಹಂಸಕನ್ಯಸಾ ಬಲೀ ।

ಶತಂ ಸಪಞ್ಚಕಮ್  ರಣೇ ಚಕರ್ತ್ತ ತಸ್ಯ ಧನ್ವನಾಮ್ ॥೧೭.೨೬೮ ॥

 

ಬಲಿಷ್ಠನಾಗಿರುವ ಸಾತ್ಯಕಿಯು ಹಂಸನ ತಮ್ಮನಾದ ಡಿಭಕನೊಂದಿಗೆ ಬಹಳಕಾಲದವರೆಗೆ ಯುದ್ಧಮಾಡಿ ಅವನ ನೂರಐದು  ಧನುಸ್ಸುಗಳನ್ನು ಕತ್ತರಿಸಿದನು.

[ಇದನ್ನು ಹರಿವಂಶದಲ್ಲಿ ಉಲ್ಲೇಖಿಸಿದ್ದಾರೆ : ‘ಏವಂ ಧನೂಷಿ ರಾಜೇಂದ್ರ ಶತಂ ಪಞ್ಚ ಚ ಪುಞ್ಜಶಃ । ಛಿತ್ವಾ ನಾನಾದ ಶೈನೇಯಃ  ಸರ್ವಕ್ಷತ್ರಸ್ಯ ಪಶ್ಯತಃ’  (ಭವಿಷ್ಯತ್ಪರ್ವಣಿ ೧೨೫.೧೨)]

 

 

ಸ ಖಢ್ಗಚರ್ಮ್ಮಭೃದ್ ರಣೇsಭ್ಯಯಾತ್ ಸುತಾತ್ಮಜಂ ಶಿನೇಃ ।

ಸ ಚೈನಮಭ್ಯಯಾತ್ ತಥಾ ವರಾಸಿಚರ್ಮ್ಮಭೃದ್ ವಿಭೀಃ ॥೧೭.೨೬೯ ॥

 

ಕೊನೆಗೆ ಡಿಭಕನು ಕತ್ತಿ ಗುರಾಣಿಗಳನ್ನು ಧರಿಸಿ, ಶಿನಿಯಮಗನಾದ ಸತ್ಯಕನ ಆತ್ಮಜನನ್ನು(ಸಾತ್ಯಕಿಯನ್ನು) ಯುದ್ಧದಲ್ಲಿ  ಎದುರುಗೊಂಡ. ಅವನಾದರೋ ಯಾವುದೇ ಭಯವಿಲ್ಲದೆ, ಕತ್ತಿ-ಗುರಾಣಿಗಳನ್ನು ಹಿಡಿದು ಡಿಭಕನನ್ನು ಎದುರುಗೊಂಡ.

 

ದ್ವಿಷೋಡಶಪ್ರಭೇದಕಂ ವರಾಸಿಯುದ್ಧಮಶ್ರಮೌ ।

ಪ್ರದರ್ಶ್ಯ ನಿರ್ವಿಶೇಷಕಾವುಭೌ ವ್ಯವಸ್ಥಿತೌ ಚಿರಮ್ ॥೧೭.೨೭೦ ॥

 

ಯಾವುದೇ ಶ್ರಮವಿಲ್ಲದೇ ೩೨ ರೀತಿಯ ಕತ್ತಿಯುದ್ಧದ ಪಟ್ಟುಗಳನ್ನು ತೋರಿಸಿಯೂ ಕೂಡಾ, ಯಾರೊಬ್ಬರೂ  ಯುದ್ಧದಲ್ಲಿ ಗೆಲ್ಲದೇ ಹಾಗೆಯೇ ನಿಂತರು.

[ಕತ್ತಿ ಯುದ್ಧದ ಈ ವಿಧಾನಗಳನ್ನೂ ಅಗ್ನಿಪುರಾಣದಲ್ಲಿ(೨೫೨.೧.೪).  ಹೇಳಿರುವುದನ್ನು ಕಾಣುತ್ತೇವೆ: ಭ್ರಾನ್ತಮುದ್ಭ್ರಾನ್ತಮಾವಿದ್ಧಮಾಪ್ಲುತಂ ವಿಪ್ಲುತಂ ಸೃತಮ್ । ಸಮ್ಪಾತಂ ಸಮುದೀರ್ಣಂ ಚ ಶ್ಯೇನಪಾತಮಥಾsಕುಲಮ್ । ಉದ್ಭೂತಮವಧೂತಂ ಚ ಸವ್ಯಂ ದಕ್ಷಿಣಮೇವ ಚ । ಅನಾಲಕ್ಷಿತವಿಸ್ಫೋಟೌ ಕರಾಳೇಂದುಮಹಾಮಖೌ ।  ವಿಕರಾಳನಿಪಾತೌ ಚ ವಿಭೀಷಣಭಯಾನಕೌ ।  ಸಮಗ್ರಾರ್ಧತೃತೀಯಾಂಶಪಾದಪಾದಾರ್ಧವಾರಿಜಾಃ  । ಪ್ರತ್ಯಾಲೀಢಮಥಾsಲೀಢಂ ವಾರಾಹಂ ಲುಳಿತಂ ತಥಾ । ಇತಿ ದ್ವಾತ್ರಿಂಶತೋ ಜ್ಞೇಯಾ ಖಡ್ಗಚರ್ಮವಿಧೌ ರಣೇ’ (ಇವಿಷ್ಟು ಕತ್ತಿ ಮತ್ತು ಗುರಾಣಿಯನ್ನು ಹಿಡಿದು ಯುದ್ಧಮಾಡುವಾಗ ತೋರಿಸುವ ೩೨ ರೀತಿಯ ಯುದ್ಧಗಳು)].

[ಸ್ವಲ್ಪ ವ್ಯತ್ಯಾಸದಿಂದ ಇದನ್ನು ಹರಿವಂಶದಲ್ಲೂ(ಭವಿಷ್ಯತ್ ಪರ್ವಣಿ ೧೨೫.೧೭-೨೧)  ಹೇಳಿದ್ದಾರೆ:   ಭ್ರಾನ್ತಮುದ್ ಭ್ರಾನ್ತಮಾವಿದ್ಧಂ  ಪ್ರವಿದ್ಧಂ ಪ್ರಸೃತಂ   ಸೃತಮ್ । ಆಕಿರಂ  ನಿಕಿರಂ ಭಿನ್ನಂ ನಿರ್ಮರ್ಯಾದಮಮಾನುಷಮ್ । ಸಙ್ಕೋಚಿತಂ ಕುರಚಿತಂ  ಸವ್ಯಜಾನು ವಿಜಾನು ಚ । ಆಹಿಕಂ ಚಿತ್ರಕಂ ಕ್ಷಿಪ್ತಂ ಕುಸುಮ್ಭಂ ಲಮ್ಭನಂ ಧೃತಮ್ । ಸವ್ಯಬಾಹುರ್ವಿನಿರ್ಬಾಹುಃ  ಸವ್ಯೇತರಮಥೋತ್ತರಮ್ । ವಿಬಾಹುಸ್ತುಙ್ಗಬಾಹುಶ್ಚ ಸವ್ಯೋನ್ನತಮುದಾಸಿ ಚ । ಪೃಷ್ಠತಃ ಪ್ರಹಿತಂ ಚೈವ ಯೌಧಿಕಂ ಪ್ರಥಿತಂ ತಥಾ । ಇತಿ ಪ್ರಕಾಶಯನ್ ದ್ವಾತ್ರಿಂಶಚ್ಚಕ್ರತುಃ  । ಖಡ್ಗಯೋಧಿನೌ’ ].

 

[ಇಲ್ಲಿ ನಮಗೆ ತಿಳಿಯುವ ಇನ್ನೊಂದು ವಿಷಯವೇನೆಂದರೆ :  ಪ್ರಾಚೀನ ಭಾರತದಲ್ಲಿ ಖಡ್ಗಯುದ್ಧದ ೩೨ ಬಗೆಗಳಿದ್ದವು. ಅದರಿಂದಾಗಿ ಈಗ ಏನು ಖಡ್ಗಯುದ್ಧ ವಿಧಾನವನ್ನು ಕ್ರೀಡೆಯಲ್ಲಿ ಬಳಸುತ್ತಾರೋ, ಅದೇನೂ ಹೊಸದಲ್ಲ ].

 

ಪರಸ್ಪರಾನ್ತರೈಷಿಣೌ ನಚಾನ್ತರಂ ವ್ಯಪಶ್ಯತಾಮ್ ।

ತತೋ ವಿಹಾಯ ಸಙ್ಗರಂ ಗತೌ ನಿರರ್ತ್ಥಕಂ ತ್ವಿತಿ ॥೧೭.೨೭೧॥

 

ಪರಸ್ಪರವಾಗಿ ಅವಕಾಶವನ್ನು ಇಚ್ಛಿಸುತ್ತಾ ಯುದ್ಧ ಮಾಡುತ್ತಿದ್ದ ಇಬ್ಬರೂ, ಒಬ್ಬರಿಗೊಬ್ಬರು ಯಾವುದೇ  ಅವಕಾಶವನ್ನು ನೋಡಲಿಲ್ಲ. ಆ ಕಾರಣದಿಂದ ಇದು ನಿರರ್ಥಕ ಎಂದು ಯುದ್ಧವನ್ನು ಬಿಟ್ಟು ತೆರಳಿದರು. 

No comments:

Post a Comment