[ಉಮಾ, ಶಚೀ, ಶಾಮಳೆ
ಮತ್ತು ಉಷಾದೇವಿಯರು, ಭಾರತೀದೇವಿಯೊಂದಿಗೆ ಸೇರಿ ಒಂದೇ ದೇಹದಲ್ಲಿ ಅವತರಿಸಿರುವ ಹಿನ್ನೆಲೆಯನ್ನು
ಮುಂದೆ ವಿವರಿಸುತ್ತಾರೆ: ]
ಪೂರ್ವಂ ಹ್ಯುಮಾ ಚ ದೇವ್ಯಸ್ತಾಃ ಕದಾಚಿದ್ ಭರ್ತ್ತೃಭಿರ್ಯ್ಯುತಾಃ ।
ವಿಲಾಸಂ ದರ್ಶಯಾಮಾಸುರ್ಬ್ರಹ್ಮಣಃ ಪಶ್ಯತೋsಧಿಕಮ್ ॥೧೮.೧೦೮॥
ಹಿಂದೊಮ್ಮೆ ಉಮಾ, ಶಚೀ, ಶಾಮಳೆ
ಮತ್ತು ಉಷಾದೇವಿಯರು ತಮ್ಮ ಗಂಡಂದಿರಿಂದ ಕೂಡಿಕೊಂಡು, ಬ್ರಹ್ಮದೇವರು ನೋಡುತ್ತಿರುವುದನ್ನು
ಲೆಕ್ಕಿಸದೇ, ಅವರ ಮುಂದೇ ಬಹಳ ಹಾವಭಾವಗಳನ್ನು(ವಿಲಾಸವನ್ನು) ತೋರಿದರು.
ಶಶಾಪ ತಾಸ್ತದಾ ಬ್ರಹ್ಮಾ ಮಾನುಷೀಂ ಯೋನಿಮಾಪ್ಸ್ಯಥ ।
ತತ್ರಾನ್ಯಗಾಶ್ಚ ಭವತೇತ್ಯೇವಂ ಶಪ್ತಾಃ ಸುರಾಙ್ಗನಾಃ ॥೧೮.೧೦೯॥
ವಿಚಾರ್ಯ್ಯ ಭಾರತೀಮೇತ್ಯ ಸರ್ವಮಸ್ಯೈ ನಿವೇದ್ಯ ಚ ।
ಸಹಸ್ರವತ್ಸರಂ ಚೈನಾಂ ಶುಶ್ರೂಷಿತ್ವಾ ಬಭಾಷಿರೇ ॥೧೮.೧೧೦॥
ಆಗ ಬ್ರಹ್ಮದೇವರು ‘ಮಾನುಷ್ಯಯೋನಿಯನ್ನು ಹೊಂದಿ’ ಎಂದು ಅವರನ್ನು ಶಪಿಸಿದರು. ‘ಮನುಷ್ಯಯೋನಿಯಲ್ಲಿ ನಿಮ್ಮ
ಗಂಡನ್ದಿರನ್ನೂ, ಬೇರೆಯವರನ್ನೂ ಹೊಂದುವವರಾಗುವಿರಿ’ ಎಂಬ ಶಾಪಕ್ಕೆ ಗುರಿಯಾದ ಆ ಸುರಾಙ್ಗನೆಯರೆಲ್ಲರೂ ಸೇರಿ ವಿಚಾರಮಾಡಿ, ಭಾರತೀದೇವಿಯ ಬಳಿ ಹೋಗಿ, ಅವಳಿಗೆ ಎಲ್ಲವನ್ನೂ
ಕೂಡಾ ಒಪ್ಪಿಸಿ, ಸಾವಿರವರ್ಷಗಳ ಕಾಲ ಅವಳ ಸೇವೆಮಾಡಿ, ಮಾತನಾಡಿದರು.
ದೇವೀ ನೋ ಮಾನುಷಂ ಪ್ರಾಪ್ಯಮನ್ಯಗಾತ್ವಂ ಚ ಸರ್ವಥಾ ।
ತಥಾSಪಿ ಮಾರುತಾದನ್ಯಂ ನ ಸ್ಪೃಶೇಮ ಕಥಞ್ಚನ
॥೧೮.೧೧೧॥
‘ಓ ದೇವಿಯೇ, ನಮಗೆ ಮನುಷ್ಯಜನ್ಮ
ಬರಲಿದೆ. ನಮ್ಮ ದೋಷದಿಂದಾಗಿ ‘ಬೇರೊಬ್ಬರನ್ನು ಹೊಂದಿ’ ಎನ್ನುವ ಶಾಪವೂ ಕೂಡಾ ನಮ್ಮಪಾಲಿನಲ್ಲಿದೆ.
ಹೇಗಾದರೂ ಇದು ನಡದೇ ನಡೆಯುತ್ತದೆ. ಆದರೂ ಕೂಡಾ, ಮುಖ್ಯಪ್ರಾಣನನ್ನು
ಹೊರತುಪಡಿಸಿ, ಯಾವರೀತಿಯಲ್ಲಿಯೂ ಕೂಡಾ ಇನ್ನ್ಯಾರನ್ನೂ ನಾವು ಮುಟ್ಟಲಾರೆವು’.
[ಬ್ರಹ್ಮದೇವರಿಂದ ಉಮಾ, ಶಚೀ, ಶಾಮಳೆ ಮತ್ತು ಉಷಾದೇವಿಯರು ಜೊತೆಯಾಗಿ ಪಡೆದ ಇನ್ನೊಂದು ಶಾಪವನ್ನು
ವಿವರಿಸುತ್ತಾರೆ:]
ಬ್ರಹ್ಮಣೈವ ಚ ಶಪ್ತಾಃ
ಸ್ಮ ಪೂರ್ವಂ ಚಾನ್ಯತ್ರ ಲೀಲಯಾ ।
ಏಕದೇಹತ್ವಮಾಪ್ಯೈನಂ ಯದಾ ವಞ್ಚಯಿತುಂ ಗತಾಃ ॥೧೮.೧೧೨॥
‘ಹಿಂದೆ, ಇನ್ನೊಂದು ಸಂದರ್ಭದಲ್ಲಿ,
ಬಾಲಿಶವಾಗಿ ನಾವು ನಾಲ್ವರೂ(ಶಚೀ, ಶ್ಯಾಮಳೆ,
ಉಷೆ ಮತ್ತು ಉಮಾ) ಒಂದೇ ದೇಹದಲ್ಲಿದ್ದುಕೊಂಡು ಬ್ರಹ್ಮನನ್ನು ವಂಚಿಸಲು ಹೋದೆವೋ, ಆಗಲೂ
ಬ್ರಹ್ಮದೇವರಿಂದ ನಾವು ಶಾಪಗ್ರಸ್ತರಾಗಿದ್ದೇವೆ’.
ಏಕದೇಹಾ ಮಾನುಷತ್ವಮಾಪ್ಸ್ಯಥ ತ್ರಿಶ ಉದ್ಧತಾಃ ।
ತ್ರಿಶೋ ಮದ್ವಞ್ಚನಾಯೇತಾ ಇತಿ ತೇನೋದಿತಾ ವಯಮ್ ॥೧೮.೧೧೩॥
‘ಒಂದೇ ದೇಹವುಳ್ಳವರಾಗಿ, ಮನುಷ್ಯಶರೀರವನ್ನು ಹೊಂದಿ. ಮೂರುಬಾರಿ
ನನ್ನನ್ನು ಮೋಸ ಮಾಡಲು ಬಂದಿರಿ, ಹಾಗಾಗಿ ಮೂರು ಬಾರಿ ಒಂದೇ ದೇಹವನ್ನು ಹೊಂದಿ’ ಎಂದು ಆಗ
ಬ್ರಹ್ಮದೇವರು ಶಪಿಸಿದರು’.
[ಒಟ್ಟಿನಲ್ಲಿ ‘ಮೂರು ಬಾರಿ ಒಂದೇ ದೇಹ(ಮಾನುಷ ದೇಹ) ಬರಲಿ’ ಎನ್ನುವ
ಒಂದು ಶಾಪ, ‘ಗಂಡನಲ್ಲದೇ ಬೇರೆಯವರೊಂದಿಗೆ
ಸಂಪರ್ಕವಾಗಲಿ’ ಎನ್ನುವ ಇನ್ನೊಂದು ಶಾಪ].
ಅತಸ್ತ್ವಯೈಕದೇಹತ್ವಮಿಚ್ಛಾಮೋ ದೇವಿ ಜನ್ಮಸು।
ಚತುರ್ಷ್ವಪಿ ಯತೋsಸ್ಮಾಕಂ ಶಾಪದ್ವಯನಿಮಿತ್ತತಃ ॥೧೮.೧೧೪॥
ಚತುರ್ಜ್ಜನ್ಮ ಭವೇದ್ ಭೂಮೌ ತ್ವಾಂ ನಾನ್ಯೋ ಮಾರುತಾದ್ ವ್ರಜೇತ್ ।
ನಿಯಮೋsಯಂ ಹರೇರ್ಯ್ಯಸ್ಮಾದನಾದಿರ್ನ್ನಿತ್ಯ
ಏವ ಚ ॥೧೮.೧೧೫॥
ಈ ಎರಡು ಶಾಪದ ನಿಮಿತ್ತ, ನಿನ್ನಿಂದ, ನಾಲ್ಕೂ ಜನ್ಮಗಳಲ್ಲಿ ಒಂದೇ ದೇಹವನ್ನು
ಪಡೆಯಲು ಬಯಸುತ್ತೇವೆ.
ನಾಲ್ಕು ದೇಹ ಬರಲೇ ಬೇಕು. ಅದರಿಂದಾಗಿ ನಿನ್ನ ದೇಹದೊಳಗಡೆ
ನಾವು ಬರುತ್ತೇವೆ. ಆಗ ನಿನ್ನನ್ನು ಮುಖ್ಯಪ್ರಾಣನಲ್ಲದೇ ಬೇರೊಬ್ಬರು ಹೊಂದುವುದಿಲ್ಲ. ನಿನ್ನನ್ನು
ಮುಖ್ಯಪ್ರಾಣನಲ್ಲದೇ ಇನ್ನೊಬ್ಬ ಮುಟ್ಟಬಾರದು ಎಂದು ಅನಾದಿಕಾಲದ ನಿಯಮವೇನಿದೆ, ಅದು ನಿತ್ಯಸತ್ಯ.
[ವಿಪ್ರಕನ್ಯಯಾಗಿ ಹನುಮಂತನ ಅವತಾರದಲ್ಲಿ, ಇಂದ್ರಸೇನಾ ನಳನನ್ದಿನಿ, ಭೀಮಾವತಾರದಲ್ಲಿ
ದ್ರೌಪದಿ, ಮಧ್ವಾವತಾರದಲ್ಲಿ ಚಂದ್ರಾ, ಹೀಗೆ
ಭಾರತೀದೇವಿಯ ನಾಲ್ಕು ಅವತಾರಗಳು. ಇದನ್ನು ‘ಕಾಳೀ ಚನ್ದ್ರೇತಿ
ಚೋಚ್ಯತೇ’ ಎಂದು ಆಚಾರ್ಯರು ಈಗಾಗಲೇ ಎರಡನೇ ಅಧ್ಯಾಯದಲ್ಲಿ ಸೂಚಿಸಿದ್ದಾರೆ (೨.೧೨೦). ಇದಕ್ಕೆ
ಪೂರಕವಾಗಿ ‘ತದೈವ ಕೃಷ್ಣಾsಪಿ ಭುವಿ ಪ್ರಜಾತಾ’ ಎಂದು
ಮಹಾಭಾರತ ತಾತ್ಪ್ಪರ್ಯ ನಿರ್ಣಯದಲ್ಲೇ (೩೨.೧೩೨) ಮುಂದೆ ಹೇಳುತ್ತಾರೆ ಕೂಡಾ].
ಅತಸ್ತ್ವಯೈಕದೇಹಾನ್ನೋ ನಾನ್ಯ ಆಪ್ನೋತಿ ಮಾರುತಾತ್ ।
ಇತೀರಿತೇ ತಥೇತ್ಯುಕ್ತ್ವಾ ಪಾರ್ವತ್ಯಾದಿಯುತೈವ ಸಾ ॥೧೮.೧೧೬॥
ವಿಪ್ರಕನ್ಯಾsಭವತ್ ತತ್ರ ಚತಸ್ರಃ ಪಾರ್ವತೀಯುತಾಃ
।
ಏಕದೇಹಸ್ಥಿತಾಶ್ಚಕ್ರುರ್ಗ್ಗೀರೀಶಾಯ ತಪೋ ಮಹತ್ ॥೧೮.೧೧೭॥
‘ಆ ಕಾರಣದಿಂದ ನಿನ್ನ ಜೊತೆಗೆ ಒಂದೇದೇಹವನ್ನು ಹೊಂದಿದರೆ, ನಮ್ಮನ್ನು
ಮುಖ್ಯಪ್ರಾಣನಿಗಿಂತ ಇನ್ನೊಬ್ಬ ಹೊಂದುವುದಿಲ್ಲ’ ಎಂದು ಅವರು ಪ್ರಾರ್ಥಿಸಲು, ಹಾಗೇ ಆಗಲಿ ಎಂದು
ಹೇಳಿದ ಭಾರತೀದೇವಿ, ಪಾರ್ವತೀ ಮೊದಲಾದವರಿಂದ ಕೂಡಿಯೇ ಬ್ರಾಹ್ಮಣಕನ್ಯೆಯಾಗಿ ಹುಟ್ಟಿದಳು. ಈ
ಜನ್ಮದಲ್ಲಿ ಪಾರ್ವತಿಯಿಂದ ಕೂಡಿದ ಉಳಿದ ನಾಲ್ವರು
ಒಂದೇ ದೇಹದಲ್ಲಿದ್ದುಕೊಂಡು, ಗಿರೀಶನನ್ನು(ರುದ್ರದೇವರನ್ನು) ಕುರಿತು
ತಪಸ್ಸನ್ನಾಚರಿಸಿದರು.
ತದ್ದೇಹಸ್ಥಾ ಭಾರತೀ ತು ರುದ್ರದೇಹಸ್ಥಿತಂ ಹರಿಮ್ ।
ತೋಷಯಾಮಾಸ ತಪಸಾ ಕರ್ಮ್ಮೈಕ್ಯಾರ್ತ್ಥಂ ಧೃತವ್ರತಾ ॥೧೮.೧೧೮॥
ಅವರ ದೇಹದಲ್ಲಿರುವ ಭಾರತಿಯಾದರೋ, ರುದ್ರನ ದೇಹದ ಒಳಗಡೆ ಇರುವ (ಅಂತರ್ಯಾಮಿ)
ನರಸಿಂಹನನ್ನು ತಪಸ್ಸಿನಿಂದ ಸಂತಸಗೊಳಿಸಿದಳು. ‘ಇವರೆಲ್ಲರ ಹಿತರಕ್ಷಣೆಯಲ್ಲಿ ಧೀಕ್ಷೆಯನ್ನು
ತೊಟ್ಟಿದ್ದ ಭಾರತೀದೇವಿ, ಒಂದು ದೇಹ ಹಾಗೂ ಮನಸ್ಸಿಗೆ ಒಂದೇ ಕರ್ಮವಿರಲಿ
ಎಂದು ನೇರವಾಗಿ ಹರಿ ಚಿಂತನೆ ಮಾಡದೇ, ರುದ್ರನ ಅಂತರ್ಯಾಮಿಯಾದ ಹರಿಯ ತಪಸ್ಸನ್ನು ಮಾಡಿದಳು.
[ಇದನ್ನು ಮಹಾಭಾರತದ ಆದಿಪರ್ವದಲ್ಲಿ(೨೧೪.೫೬, ವೈವಾಹಿಕಪರ್ವ) ಹೀಗೆ ವಿವರಿಸಿದ್ದಾರೆ:
ಆಸೀತ್ ತಪೋವನೇ ಕಾಚಿದೃಷೇಃ ಕನ್ಯಾ ಮಹಾತ್ಮನಃ । ನಾಧ್ಯಗಚ್ಛತ್ ಪತಿಂ ಸಾ ತು ಕನ್ಯಾ ರೂಪವತೀ ಸತೀ । ತೋಶಯಾಮಾಸ ತಪಸಾ ಸಾ ಕಿಲೋಗ್ರೇಣ ಶಙ್ಕರಮ್’ (‘ಒಬ್ಬ ಋಷಿಕನ್ಯೆಯಿದ್ದಳು, ಅವಳು ಬಹಳ ಸುಂದರಿಯಾಗಿದ್ದಳು. ಅವಳಿಗೆ ಆ
ಜನ್ಮದಲ್ಲಿ ಗಂಡನೇ ಸಿಗಲಿಲ್ಲ. ತಪಸ್ಸು ಮಾಡಿಕೊಂಡಿದ್ದಳು’ ಎಂದು ಅವರ ಒಂದು ಜನ್ಮದ ಕಥೆಯನ್ನು ಇಲ್ಲಿ ವರ್ಣಿಸಿರುವುದನ್ನು ನಾವಿಲ್ಲಿ ಕಾಣಬಹುದು)
ತಸ್ಯೈ ಸ ರುದ್ರದೇಹಸ್ಥೋ ಹರಿಃ ಪ್ರಾದಾದ್ ವರಂ ಪ್ರಭುಃ ।
ಅನನ್ತತೋಷಣಂ ವಿಷ್ಣೋಃ ಸ್ವಭರ್ತ್ತ್ರಾ ಸಹ ಜನ್ಮಸು ॥೧೮.೧೧೯॥
ಶಿವನ ಅಂತರ್ಯಾಮಿಯ ತಪಸ್ಸನ್ನು ಮಾಡಿದ ಭಾರತೀದೇವಿಗೆ ರುದ್ರನ
ಅಂತರ್ಯಾಮಿ ಪರಮಾತ್ಮನು ವರವನ್ನು ನೀಡಿದ. ‘ಪರಮಾತ್ಮನಿಗೆ ನಿನ್ನಿಂದ ಬಹಳ ಸಂತೋಷವುಂಟಾಗಲಿ.
ನಿನ್ನ ಜನ್ಮಗಳಲ್ಲಿ ಗಂಡನೊಂದಿಗೆ ಕೂಡಿ, ಪರಮಾತ್ಮನನ್ನು
ಸಂತಸಗೊಳಿಸು’ ಎನ್ನುವ ವರ.
ಸರ್ವೇಶ್ವಪೀತಿ ಚಾನ್ಯಾಸಾಂ ದದೌ ಶಙ್ಕರ ಏವ ಚ ।
ವರಂ ಸ್ವಭರ್ತ್ತೃಸಂಯೋಗಂ ಮಾನುಷೇಷ್ವಪಿ ಜನ್ಮಸು ॥೧೮.೧೨೦॥
ತತಸ್ತದೈವ ದೇಹಂ ತಾ ವಿಸೃಜ್ಯ ನಳನನ್ದಿನೀ ।
ಬಭೂವುರಿನ್ದ್ರಸೇನೇತಿ ದೇಹೈಕ್ಯೇನ ಸುಸಙ್ಗತಾಃ ॥೧೮.೧೨೧॥
ಉಳಿದವರಿಗೆ ಸಾಕ್ಷಾತ್ ರುದ್ರದೇವರು ವರವನ್ನಿತ್ತರು: ‘ನಿಮಗೆ ನಿಮ್ಮ
ಗಂಡನ ಸಂಯೋಗ ಮನುಷ್ಯಶರೀರ ರೂಪವಾಗಿರುವಾಗ ಆಗಲೀ’ ಎನ್ನುವ ವರ. ತದನಂತರ ಆ ಕನ್ಯೆ ತನ್ನ
ದೇಹವನ್ನು ತ್ಯಜಿಸಿದಳು. ಮುಂದೆ ನಳ-ನಂದಿನೀ (ನಳನ ಪುತ್ರಿಯಾಗಿ), ‘ಇಂದ್ರಸೇನಾ’ ಎನ್ನುವ ಹೆಸರಿನಿಂದ
ಹುಟ್ಟಿ, ಒಂದೇ ದೇಹವನ್ನು ಎಲ್ಲರೂ ಪಡೆದರು. (ಒಂದೇ ದೇಹ ಐದು ಜೀವ).
No comments:
Post a Comment