ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, August 10, 2020

Mahabharata Tatparya Nirnaya Kannada 17280_17288

 

ವಿಧೂಯ ಸೈನಿಕಾಂಶ್ಚ ಸಃ ಪ್ರಗೃಹ್ಯ ಚಾಪಮಾತತಮ್ ।

ಹರಿಂ ಜಗಾಮ ಚೋನ್ನದನ್ ಮಹಾಸ್ತ್ರಶಸ್ತ್ರವರ್ಷಣಃ ॥೧೭.೨೮೦॥

 

ಯಾದವರ ಸಮಸ್ತ ಸೈನಿಕರನ್ನೂ ಓಡಿಸಿದ ಡಿಭಕನು, ತದನಂತರ ತನ್ನ ಬಿಲ್ಲನ್ನು ಹಿಡಿದು, ಗಟ್ಟಿಯಾಗಿ ಕಿರುಚುತ್ತಾ, ಮಹಾಸ್ತ್ರ-ಶಸ್ತ್ರಗಳೊಂದಿಗೆ ಶ್ರೀಕೃಷ್ಣನನ್ನು ಎದುರುಗೊಂಡನು.

 

ಹರಿವಮ್ಶದಲ್ಲಿ(ಭವಿಷ್ಯತ್ ಪರ್ವಣಿ ೧೨೭.೧೪) ಈ ಕುರಿತಾಗಿ ವಿವರಿಸಿರುವುದನ್ನು ಕಾಣಬಹುದು: ಭೀತಾಶ್ಚ ಯಾದವಾ ರಾಜನ್ ಪಲಾಯನಪರಾಯಣಾಃ’.

 

ತಮಾಶು ಕೇಶವೋsರಿಹಾ ಸಮಸ್ತಸಾಧನೋಜ್ಝಿತಮ್ ।

ಕ್ಷಣಾಚ್ಚಕಾರ ಸೋsಪ್ಯಗಾದ್ ವಿಸೃಜ್ಯ ತಂ ಹಲಾಯುಧಮ್ ॥೧೭.೨೮೧॥

 

ಶತ್ರುಸಂಹಾರಕನಾದ ಶ್ರೀಕೃಷ್ಣನು ಕ್ಷಣದಲ್ಲೇ ಡಿಭಕನನ್ನು ಎಲ್ಲಾ ಯುದ್ಧ ಸಾಧನರಹಿತನನ್ನಾಗಿ ಮಾಡಿದನು.  ಆಗ ಡಿಭಕನು ಶ್ರೀಕೃಷ್ಣನನ್ನು ಬಿಟ್ಟು ಹಲಾಯುಧನನ್ನು ಕುರಿತು ತೆರಳಿದನು. 

 

ಹಲಾಯುಧೋ ನಿರಾಯುಧಂ ವಿಧಾಯ ಹಂಸಮೋಜಸಾ ।

ವಿಕೃಷ್ಟಚಾಪ ಆಗತಂ ದದರ್ಶ ತಸ್ಯ ಚಾನುಜಮ್ ॥೧೭.೨೮೨॥

 

ಹಲಾಯುಧನು ತನ್ನ ಶಕ್ತಿಯಿಂದ ಹಂಸನನ್ನು ನಿರಾಯುಧನನ್ನಾಗಿ ಮಾಡುತ್ತಿದ್ದಾಗಲೇ ಹಂಸನ ತಮ್ಮ ಡಿಭಕನೂ ಕೂಡಾ ಅವನಲ್ಲಿಗೆ ಬಂದ.

 

ಸ ಹಂಸ ಆಶು ಕಾರ್ಮ್ಮುಕಂ ಪುನಃ ಪ್ರಗೃಹ್ಯ ತಂ ಬಲಮ್ ।

ಯದಾssಸಸಾದ ಕೇಶವೋ ನ್ಯವಾರಯತ್ ತಮೋಜಸಾ ॥೧೭.೨೮೩॥

 

ಹಂಸನು ಮತ್ತೆ ಬಿಲ್ಲನ್ನು ಹಿಡಿದು, ಬಲರಾಮನನ್ನು ಕುರಿತು ಯಾವಾಗ ಬಂದನೋ, ಆಗ ಕೇಶವನು ಅವನನ್ನು ತಡೆದನು.

 

ಶಿನೇಃ ಸುತಾತ್ಮಜೋsಪ್ಯಸೌ ವಿಹಾಯ ಹಂಸಕಾನುಜಮ್ ।

ರಥಾನ್ತರಂ ಸಮಾಸ್ಥಿತೋ ಜಗಾಮ ತಾತಮಸ್ಯ ಚ ॥೧೭.೨೮೪ ॥

 

ಅದೇ ಸಂದರ್ಭದಲ್ಲಿ, ಹಿಂದೆ ಡಿಭಕನಿಂದ ರಥಹೀನನಾಗಿ ಡಿಭಕನನ್ನು ಬಿಟ್ಟುಹೋಗಿದ್ದ  ಸಾತ್ಯಕಿಯು,  ಇನ್ನೊಂದು ರಥವನ್ನೇರಿ ಬಂದು ಬ್ರಹ್ಮದತ್ತನನ್ನು ಎದುರುಗೊಂಡ.

 

ವಯೋಗತಃ ಪಿತಾ ತಯೋರ್ಯುಯೋಧ ತೇನ ವೃಷ್ಣಿನಾ ।

ಶರಂ ಚ ಕಣ್ಠಕೂಬರೇ ವ್ಯಸರ್ಜ್ಜಯತ್ ಸ ಸಾತ್ಯಕೇಃ ॥೧೭.೨೮೫ ॥

 

ವೃದ್ಧನಾದ ಹಂಸ-ಡಿಭಕರ ತಂದೆಯಾದ ಬ್ರಹ್ಮದತ್ತನು ಸಾತ್ಯಕಿಯ ಜೊತೆಗೆ ಯುದ್ಧಮಾಡಿದನು ಮತ್ತು ಸಾತ್ಯಕಿಯ  ಕೊರಳಿನಹತ್ತಿರ ಬಲವಾಗಿ ಬಾಣಬಿಟ್ಟನು.  

 

ಸ ಸಾತ್ಯಕಿರ್ದ್ದೃಢಾಹತೋ ಜಗಾಮ ಮೋಹಮಾಶು ಚ ।

ಸುಲಬ್ದಸಞ್ಜ್ಞ ಉತ್ಥಿತಃ ಸಮಾದದೇsರ್ದ್ಧಚನ್ದ್ರಕಮ್ ॥೧೭.೨೮೬॥

 

ಗಟ್ಟಿಯಾಗಿ ಪೆಟ್ಟುತಿಂದ ಸಾತ್ಯಕಿಯು ಕೂಡಲೇ ಮೂರ್ಛೆಯನ್ನು ಹೊಂದಿದ. ಸ್ವಲ್ಪಹೊತ್ತಿನ ನಂತರ ಎಚ್ಚೆತ್ತ ಅವನು ಅರ್ಧಚಂದ್ರದ ಬಾಣವನ್ನು ತೆಗೆದುಕೊಂಡ.

 

ಸ ತೇನ ತಚ್ಛಿರೋ ಬಲೀ ಚಕರ್ತ್ತ ಶುಕ್ಲಮೂರ್ದ್ಧಜಮ್ ।

ಯದಮ್ಬಯಾSಭಿಕಾಮಿತಂ ಪುರಾ ಪಪಾತ ತತ್  ಕ್ಷಿತೌ ॥೧೭.೨೮೭॥

 

ಸಾತ್ಯಕಿಯು ಆ ಬಾಣದಿಂದ ಬಲಿಷ್ಠನಾದ, ಬಿಳಿಕೂದಲುಳ್ಳ ಬ್ರಹ್ಮದತ್ತನ(ಸಾಲ್ವನ) ತಲೆಯನ್ನು ಕತ್ತರಿಸಿದನು. ಯಾವ ತಲೆ ಹಿಂದೆ ಅಂಬೆಯಿಂದ ಪ್ರೀತಿಸಲ್ಪಟ್ಟಿತ್ತೋ, ಅದು ಇಂದು ಕತ್ತರಿಸಲ್ಪಟ್ಟು ಭೂಮಿಯಲ್ಲಿ ಬಿತ್ತು. 

 

ನದಂಶ್ಚ ಸಾತ್ಯಕಿರ್ಹರೇರ್ಜ್ಜಗಾಮ ಪಾರ್ಶ್ವಮುದ್ಧತಃ ।

ಬಲೋsಪಿ ಹಂಸಕಾನುಜಂ ಯುಯೋಧ ಸೇನಯಾ ಯುತಮ್ ॥೧೭.೨೮೮॥

 

ಸಾತ್ಯಕಿಯು ಗಟ್ಟಿಯಾಗಿ ಸಿಂಹನಾದ ಮಾಡುತ್ತಾ, ವಿಜಯದಿಂದ ಬೀಗುತ್ತಾ, ಪರಮಾತ್ಮನ ಸಮೀಪಕ್ಕೆ ತೆರಳಿದನು. ಬಲರಾಮನೂ ಕೂಡಾ ಸೇನೆಯಿಂದ ಕೂಡಿರುವ ಡಿಭಕನನ್ನು ಕುರಿತು ಯುದ್ಧಮಾಡಿದನು.

No comments:

Post a Comment