ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, August 23, 2020

Mahabharata Tatparya Nirnaya Kannada 1858_1862

 

ಅಥ ಪೃಷ್ಟೋ ದಕ್ಷಿಣಾರ್ತ್ಥಂ ದ್ರೋಣ ಆಹ ಕುಮಾರಕಾನ್ ।

ಬಧ್ವಾ ಪಾಞ್ಚಾಲರಾಜಾನಂ ದತ್ತೇತ್ಯೂಚುಸ್ತಥೇತಿ ತೇ ॥೧೮.೫೮॥

 

ತೇ ಧಾರ್ತ್ತರಾಷ್ಟ್ರಾಃ  ಕರ್ಣ್ಣೇನ ಸಹಿತಾಃ ಪಾಣ್ಡವಾ ಅಪಿ ।

ಯಯುರ್ದ್ದ್ರೋಣೇನ ಸಹಿತಾಃ ಪಾಞ್ಚಾಲನಗರಂ ಪ್ರತಿ ॥೧೮.೫೯॥

 

ತದನಂತರ ಗುರುದಕ್ಷಿಣೆಗಾಗಿ ಕೇಳಲ್ಪಟ್ಟ ದ್ರೋಣಾಚಾರ್ಯರು, ಕುಮಾರರನ್ನು ಕುರಿತು, ‘ಪಾಂಚಾಲ ದೇಶದ ದ್ರುಪದನನ್ನು ಕಟ್ಟಿ ತಂದು ಕೊಡಿ’ ಎಂದು ಹೇಳಿದರು. ಇದಕ್ಕೊಪ್ಪಿದ ಆ ಎಲ್ಲ ಧೃತರಾಷ್ಟ್ರನ ಮಕ್ಕಳು ಕರ್ಣನಿಂದ ಕೂಡಿಕೊಂಡು, ಪಾಂಡವರೂ ಕೂಡಾ ದ್ರೋಣನಿಂದ ಕೂಡಿಕೊಂಡು, ಪಾಂಚಾಲ ನಗರವನ್ನು ಕುರಿತು ತೆರಳಿದರು.

 

ಅಥಾsಹ ಭೀಮಃ ಸಾಮರ್ತ್ಥ್ಯವಿವೇಕಾಭೀಪ್ಸಯಾ ಗುರುಮ್ ।

ಗರ್ವ ಏಷ ಕುಮಾರಾಣಾಮನಿವಾರ್ಯ್ಯೋ ದ್ವಿಜೋತ್ತಮ ।

ಗಚ್ಛನ್ತ್ವೇತೇsಗ್ರತೋ ನೈಷಾಂ ವಶಗೋ ದ್ರುಪದೋ ಭವೇತ್ ॥೧೮.೬೦॥

 

ನಿವೃತ್ತೇಷ್ವಕೃತಾರ್ತ್ಥೇಷು ವಯಂ ಬಧ್ವಾ ರಿಪುಂ ತವ ।

ಆನಯಾಮ ನ ಸನ್ದೇಹ ಇತಿ ತಸ್ಥೌ ಸಸೋದರಃ           ॥೧೮.೬೧॥

 

ತದನಂತರ ತಮ್ಮತಮ್ಮ ಸಾಮರ್ಥ್ಯ ಎಷ್ಟಿದೆ ಎಂದು ತಿಳಿಯುವುದಕ್ಕಾಗಿ ಭೀಮನು ಗುರುಗಳನ್ನು ಕುರಿತು:  “ದ್ವಿಜೋತ್ತಮಾ, ಈ ದುರ್ಯೋಧನ ಮೊದಲಾದವರ ಗರ್ವವು ತಡೆಯಲಸಾಧ್ಯವಾದುದು.  ಅದರಿಂದಾಗಿ ಇವರು ಮುಂದೆ ಸಾಗಲಿ. ದ್ರುಪದನು ಇವರ ವಶನಾಗಲಾರ. ಈರೀತಿ ಅವರು ಕಾರ್ಯ ನೆರವೇರಿಸದೇ ಹಿಂತಿರುಗಿದಾಗ, ನಾವು ನಿನ್ನ ಶತ್ರುವನ್ನು ಕಟ್ಟಿ ತರುತ್ತೇವೆ. ಇದರಲ್ಲಿ ಯಾವುದೇ ಸಂದೇಹ ಬೇಡ’ ಎಂದು ಹೇಳಿ, ತನ್ನ ಅಣ್ಣತಮ್ಮಂದಿರಿಂದ ಕೂಡಿಕೊಂಡು ಅಲ್ಲೇ ನಿಂತನು.

[ಇದನ್ನು ಮಹಾಭಾರತದ ಆದಿಪರ್ವದಲ್ಲಿ (೧೪೮.೧೪-೧೬)  ಈರೀತಿ ವಿವರಿಸಿದ್ದಾರೆ: ಪೂರ್ವಮೇವ ತು ಸಮ್ಮನ್ತ್ರ್ಯ ಪಾರ್ಥೋ ದ್ರೋಣಮಥಾಬ್ರವೀತ್  । ದರ್ಪೋದ್ರೇಕಾತ್ ಕುಮಾರಾಣಾಮಾಚಾರ್ಯ  ದ್ವಿಜಸತ್ತಮ । ಎಷಾಂ ಪರಾಕ್ರಮಸ್ಯಾನ್ತೇ ವಯಂ ಕುರ್ಯಾಮ ಸಾಹಸಮ್ । ಎತೈರಶಕ್ಯಃ   ಪಾಞ್ಚಾಲೋ ಗ್ರಹೀತುಂ  ರಣಮೂರ್ಧನಿ । ಎವಮುತ್ತ್ವಾ ತು ಕೌನ್ತೇಯೋ ಭ್ರಾತೃಭಿಃ ಸಹಿತೋsನಘಃ  । ಅರ್ಧಕ್ರೋಶೋ ತು ನಗರಾದತಿಷ್ಠದ್ ಬಹಿರೇವ ಸಃ  ‘ಅವರು ಸೋತು ಬರುತ್ತಾರೆ, ಆಮೇಲೆ ನಾವು ಹೋಗೋಣ’ ಎನ್ನುತ್ತಾನೆ ಭೀಮ. ಇಲ್ಲಿ ಪಾರ್ಥ, ಕೌನ್ತೇಯ ಎನ್ನುವ ಪದಪ್ರಯೋಗವಿದೆ. ಇದರಿಂದ ನಾವು ಈ ಮಾತನ್ನು ‘ಅರ್ಜುನ ಹೇಳಿದ’ ಎಂದು ತಿಳಿಯುವ ಸಾಧ್ಯತೆ ಇದೆ. ಅದಕ್ಕಾಗಿ ಆಚಾರ್ಯರು ‘ಸಮಷ್ಟಿಯಾಗಿ ನೋಡಿದಾಗ, ಇಲ್ಲಿ ಹೇಳಿರುವ ಕುಂತಿಯ ಮಗ ‘ಭೀಮ’ ಎಂದಾಗುತ್ತದೆ’  ಎನ್ನುವ ನಿರ್ಣಯವನ್ನು ನೀಡಿದ್ದಾರೆ].

 

ಸದ್ರೋಣಕೇಷು ಪಾರ್ತ್ಥೇಷು ಸ್ಥಿತೇಷ್ವನ್ಯೇ ಸಸೂತಜಾಃ ।

ಯಯುರಾತ್ತಪ್ರಹರಣಾಃ ಪಾಞ್ಚಾಲಾನ್ತಃಪುರಂ ದ್ರುತಮ್ ॥೧೮.೬೨॥

 

ಈರೀತಿ ದ್ರೋಣನಿಂದ ಕೂಡಿಕೊಂಡ ಪಾಂಡವರು ನಿಲ್ಲಲು, ಕರ್ಣನಿಂದ ಕೂಡಿಕೊಂಡಿರುವ ದುರ್ಯೋಧನಾದಿಗಳು ಆಯುಧವನ್ನು ಹಿಡಿದು ಪಾಞ್ಚಾಲನ ಅಂತಃಪುರವನ್ನು ಕುರಿತು ತೆರಳಿದರು.

No comments:

Post a Comment