ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, August 12, 2020

Mahabharata Tatparya Nirnaya Kannada 1801_1810

 

೧೮. ಭೀಮಾರ್ಜ್ಜುನದಿಗ್ವಿಜಯಃ

 ಓಂ

ಯದಾ ರಾಮಾದವಾಪ್ತಾನಿ  ದಿವ್ಯಾಸ್ತ್ರಾಣಿ ಪ್ರಪೇದಿರೇ ।

ದ್ರೋಣಾತ್ ಕುಮಾರಾಸ್ತೇಷ್ವಾಸೀತ್ ಸರ್ವೇಷ್ವಪ್ಯಧಿಕೋsರ್ಜ್ಜುನಃ ॥೧೮.೦೧॥

 

ಯಾವಾಗ ಪರಶುರಾಮನಿಂದ ಪಡೆದ ಅಲೌಕಿಕ ಅಸ್ತ್ರಗಳನ್ನು ದ್ರೋಣಾಚಾರ್ಯರ ದೆಸೆಯಿಂದ ಕುರುಕುಲದ ರಾಜಕುಮಾರರು ಪಡೆದರೋ(ಅಭ್ಯಾಸ ಮಾಡಿದರೋ), ಆಗ ಅಸ್ತ್ರ ಪಡೆದ ಎಲ್ಲರಲ್ಲೂ ಕೂಡಾ ಅರ್ಜುನನು ಮಿಗಿಲೆನಿಸಿಕೊಂಡನು.

 

ನಿಜಪ್ರತಿಭಯಾ ಜಾನನ್ ಸರ್ವಾಸ್ತ್ರಾಣಿ ತತೋsಧಿಕಮ್ ।

ನಾಸ್ತ್ರಯುದ್ಧಂ ಕ್ವಚಿದ್ ಭೀಮೋ ಮನ್ಯತೇ ಧರ್ಮ್ಮಮಞ್ಜಸಾ ॥೧೮.೦೨॥

 

ತನ್ನ ಸ್ವಾಭಾವಿಕವಾದ ಪ್ರಜ್ಞೆಯಿಂದ ಎಲ್ಲಾ ಅಸ್ತ್ರಗಳನ್ನೂ, ಅದಕ್ಕೂ ಮಿಗಿಲಾದವುಗಳನ್ನು ತಿಳಿದವನಾದರೂ, ಭೀಮಸೇನನು ಅಸ್ತ್ರಯುದ್ಧವನ್ನು ಆತ್ಯಂತಿಕ ಧರ್ಮ ಎಂದು ತಿಳಿಯಲಿಲ್ಲ.

 

ನಹಿ ಭಾಗವತೋ ಧರ್ಮ್ಮೋ ದೇವತಾಭ್ಯುಪಯಾಚನಮ್ ।

ಜ್ಞಾನಭಕ್ತೀ ಹರೇಸ್ತೃಪ್ತಿಂ ವಿನಾ ವಿಷ್ಣೋರಪಿ ಕ್ವಚಿತ್ ॥೧೮.೦೩॥

 

ದೇವತೆಗಳನ್ನು ಬೇಡುವುದು(ಅಸ್ತ್ರ ಮಂತ್ರಗಳಿಂದ) ಮುಖ್ಯವಾಗಿ ಭಾಗವತ ಧರ್ಮವಲ್ಲ. ಪರಮಾತ್ಮನಿಂದಲೂ ಕೂಡಾ, ಜ್ಞಾನ-ಭಕ್ತಿ-ಪ್ರೀತಿ ಇವುಗಳನ್ನು ಬಿಟ್ಟು ಬೇರೆಯದನ್ನು ಬೇಡುವುದು ಭಾಗವತ ಧರ್ಮವಲ್ಲ.

 

ನಾsಕಾಙ್ಕ್ಷ್ಯಂ ಕಿಮುತಾನ್ಯೇಭ್ಯೋ ಹ್ಯಸ್ತ್ರಂ ಕಾಮ್ಯಫಲಪ್ರದಮ್ ।

ಶುದ್ಧೇ ಭಾಗವತೇ ಧರ್ಮ್ಮೇ ನಿರತೋ ಯದ್ ವೃಕೋದರಃ ॥೧೮.೦೪॥

 

ನ ಕಾಮ್ಯಕರ್ಮ್ಮಕೃತ್ ತಸ್ಮಾನ್ನಾಯಾಚದ್ ದೇವಮಾನುಷಾನ್ ।

ನ ಹರಿಶ್ಚಾರ್ತ್ಥಿತಸ್ತೇನ ಕದಾಚಿತ್ ಕಾಮಲಿಪ್ಸಯಾ ॥೧೮.೦೫॥

 

ದೇವರಿಂದಲೂ ಇದನ್ನು ಬಯಸಬಾರದು ಎಂದ ಮೇಲೆ ಇನ್ನು ಉಳಿದವರಿಂದ ಬಯಸಬಾರದೆಂದು ಏನು ಹೇಳಬೇಕು? ಅಸ್ತ್ರವು ಕಾಮ್ಯವನ್ನೇ ಕೊಡುವುದಷ್ಟೇ? ಯಾವ ಕಾರಣದಿಂದ ಭೀಮಸೇನನು ಶುದ್ಧವಾದ ಭಾಗವತ ಧರ್ಮದಲ್ಲಿಯೇ ರತನಾಗಿದ್ದಾನೋ, ಆ ಕಾರಣದಿಂದ ಕಾಮ್ಯಕರ್ಮವನ್ನು ಮಾಡಲಿಲ್ಲ. ದೇವತೆಗಳನ್ನಾಗಲೀ, ಮನುಷ್ಯರನ್ನಾಗಲೀ ಬೇಡಲಿಲ್ಲ. ನಾರಾಯಣನನ್ನೂ ಕೂಡಾ ಎಂದೂ  ಕಾಮಬೇಕೆಂದು ಭೀಮಸೇನ ಬೇಡಲಿಲ್ಲ.  

 

ಭಿಕ್ಷಾಮಟಂಶ್ಚ ಹುಙ್ಕಾರಾತ್ ಕರವದ್ ವೈಶ್ಯತೋsಗ್ರಹೀತ್ ।

ನಾನ್ಯದೇವಾ ನತಾಸ್ತೇನ ವಾಸುದೇವಾನ್ನ ಪೂಜಿತಾಃ ॥೧೮.೦೬॥

 

ಭಿಕ್ಷೆಯನ್ನು ಬೇಡುತ್ತಾ, ಹುಂಕಾರದಿಂದ, ವೈಶ್ಯನಿಂದ ಒಬ್ಬ ರಾಜ ಕರವನ್ನು ಹೇಗೆ ಸ್ವೀಕರಿಸಬೇಕೋ ಹಾಗೇ ಭೀಮಸೇನ ಸ್ವೀಕರಿಸಿದ. ಪರಮಾತ್ಮನಿಂದ ಹೊರತುಪಡಿಸಿ ಬೇರೆ ದೇವತೆಗಳು ಭೀಮಸೇನನಿಂದ ನಮಸ್ಕರಿಸಲ್ಪಡಲಿಲ್ಲ, ಪೂಜಿಸಲ್ಪಡಲಿಲ್ಲ.

 

ನ ಪ್ರತೀಪಂ ಹರೇಃ ಕ್ವಾಪಿ ಸ ಕರೋತಿ ಕಥಞ್ಚನ ।

ಅನುಪಸ್ಕರಿಣೋ ಯುದ್ಧೇ ನಾಭಿಯಾತಿ ಹ್ಯುಪಸ್ಕರೀ ॥೧೮.೦೭॥

 

ಪರಮಾತ್ಮನಿಗೆ ವಿರೋಧವನ್ನು  ಎಲ್ಲಿಯೂ, ಯಾವಾಗಲೂ ಭೀಮಸೇನ ಮಾಡಲಿಲ್ಲ. ಯುದ್ಧದಲ್ಲಿ ಯಾರಿಗೆ ಸಲಕರಣೆ ಇಲ್ಲವೋ, ಅವರ ಮೇಲೆ ಆಯುಧಗಳನ್ನು ಹಿಡಿದು ಹೋಗಲಿಲ್ಲ.

 

ನಾಪಯಾತಿ ಯುಧಃ ಕ್ವಾಪಿ ನ ಕ್ವಚಿಚ್ಛದ್ಮಾ ಚಾsಚರೇತ್ ।

ನೈವೋರ್ಧ್ವದೈಹಿಕಾನುಜ್ಞಾಮವೈಷ್ಣವಕೃತೇsಕರೋತ್ ॥೧೮.೦೮॥

 

ಯುದ್ಧದಿಂದ ಯಾವಾಗಲೂ ಓಡಲಿಲ್ಲ. ಯಾವಾಗಲೂ ಕೂಡಾ ಮೋಸದ ಯುದ್ಧವನ್ನು ಮಾಡಲಿಲ್ಲ. ವಿಷ್ಣುದ್ವೇಷಿಗಳ ಸಂಸ್ಕಾರದ ಅನುಜ್ಞೆಯನ್ನು ಎಂದೂ  ಭೀಮಸೇನ ಮಾಡಲಿಲ್ಲ.  

 

ನ ಕರೋತಿ ಸ್ವಯಂ ನೈಷಾಂ ಪ್ರಿಯಮಪ್ಯಾಚರೇತ್ ಕ್ವಚಿತ್ ।

ಸಖ್ಯಂ ನಾವೈಷ್ಣವೈಶ್ಚಕ್ರೇ ಪ್ರತೀಪಂ ವೈಷ್ಣವೇ ನ ಚ ॥ ೧೮.೦೯॥

 

ತಾನೂ ಅಂತ್ಯಕರ್ಮವನ್ನು ಮಾಡಲಿಲ್ಲ. ವಿಷ್ಣುದ್ವೇಷಿಗಳಿಗೆ ಎಲ್ಲಿಯೂ ಕೂಡಾ ಪ್ರಿಯವನ್ನು ಮಾಡಲಿಲ್ಲ. ವಿಷ್ಣುದ್ವೇಷಿಗಳೊಂದಿಗೆ ಗೆಳೆತನವನ್ನು ಮಾಡಲಿಲ್ಲ. ವಿಷ್ಣು ಭಕ್ತರಲ್ಲಿ ಎಂದೂ ದ್ವೇಷವನ್ನು ಮಾಡಲಿಲ್ಲ.

 

ಪರೋಕ್ಷೇsಪಿ ಹರೇರ್ನ್ನಿನ್ದಾಕೃತೋ ಜಿಹ್ವಾಂ ಛಿನತ್ತಿ ಚ ।

ಪ್ರತೀಪಕಾರಿಣೋ ಹನ್ತಿ ವಿಷ್ಣೋರ್ವೈನಾನಜೀಘನತ್ ॥೧೮.೧೦॥

 

ಹಿಂದೆಯೂ ಕೂಡಾ ಪರಮಾತ್ಮನ ನಿಂದನೆ ಮಾಡಿದವರ ನಾಲಿಗೆಯನ್ನು ಭೀಮ ಕತ್ತರಿಸುತ್ತಿದ್ದ. ಪರಮಾತ್ಮನಿಗೆ ವಿರುದ್ಧವಾಗಿ ಮಾಡುವವರನ್ನು ಭೀಮ ತಾನೇ ಸಂಹಾರ ಮಾಡಿದ.

No comments:

Post a Comment