ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, August 11, 2020

Mahabharata Tatparya Nirnaya Kannada 17289_17298

 

ಹರಿಸ್ತು ಹಂಸಮುಲ್ಬಣೈಃ ಶರೈಃ ಸಮರ್ದ್ದಯನ್ ಬಲಮ್ ।

ಜಘಾನ ತಸ್ಯ ಸರ್ವಶೋ ನ ಕಶ್ಚಿದತ್ರ ಶೇಷಿತಃ ॥ ೧೭.೨೮೯ ॥

 

ಹರಿಯು ಭೀಕರವಾದ ಶರಗಳಿಂದ ಹಂಸನನ್ನು ಪೀಡಿಸುತ್ತಾ, ಅವನ ಸಮಸ್ತ ಸೈನ್ಯವನ್ನು ಸಂಹಾರ ಮಾಡಿದನು. ಆ ಸೈನ್ಯದಲ್ಲಿ ಯಾರೊಬ್ಬರೂ ಉಳಿಯಲಿಲ್ಲ.

 

ಸ ಏಕ ಏವ ಕೇಶವಂ ಮಹಾಸ್ತ್ರಮುಕ್ ಸಸಾರ ಹ ।

ನಿವಾರ್ಯ್ಯ ತಾನಿ ಸರ್ವಶೋ ಹರಿರ್ನ್ನಿಜಾಸ್ತ್ರಮಾದದೇ ॥೧೭.೨೯೦॥

 

ತನ್ನ ಸಮಸ್ತ ಸೈನ್ಯವನ್ನು ಕಳೆದುಕೊಂಡ ಹಂಸನು, ತಾನೊಬ್ಬನೇ  ಮಹಾಸ್ತ್ರಗಳನ್ನು ಬಿಡುತ್ತಾ, ಕೇಶವನ ಹತ್ತಿರ ಬಂದನು. ಕೃಷ್ಣನು ಅವನ ಎಲ್ಲಾ ಅಸ್ತ್ರಗಳನ್ನು ತಡೆದು, ನಾರಾಯಣಾಸ್ತ್ರವನ್ನು ಕೈಗೆತ್ತಿಕೊಂಡನು.


[ಈ ಪ್ರಸಂಗವನ್ನು ಹರಿವಮ್ಶದ ಭವಿಷ್ಯತ್ ಪರ್ವದಲ್ಲಿ(೧೨೭.೪೮) ಹೇಳಿರುವುದನ್ನು ಕಾಣಬಹುದು:  ‘ಅಸ್ತ್ರಂ ವೈಷ್ಣವಮಾದಾಯ ಶರೇ ಸ ನಿಶಿತೇ ಹರಿಃ ಯೋಜಯಾಮಾಸ ಭೂತಾತ್ಮಾ ಭೂತಭಾವನಭಾವನಃ’ ]

 

ಸ ವೈಷ್ಣವಾಸ್ತ್ರಮುದ್ಯತಂ ನಿರೀಕ್ಷ್ಯ ಯಾನತೋ ಮಹೀಮ್ ।

ಗತಃ ಪರಾದ್ರವದ್ ಭಯಾತ್ ಪಪಾತ ಯಾಮುನೋದಕೇ ॥೧೭.೨೯೧॥

 

ನಾರಾಯಣಾಸ್ತ್ರವನ್ನು ಕೈಗೆತ್ತಿಗೊಂಡ ಶ್ರೀಕೃಷ್ಣನನ್ನು ಕಂಡ ಹಂಸನು, ರಥದಿಂದ ಕೆಳಗೆ ಹಾರಿ, ಭಯದಿಂದ ಓಡಿದ ಹಾಗೂ ಯಮುನಾನದಿ ನೀರಿನಲ್ಲಿ ಬಿದ್ದ.

 

[ಹರಿವಮ್ಶ (ಭವಿಷ್ಯತ್ ಪರ್ವಣಿ ೧೨೮.೧-೪) ಈ ಮಾತನ್ನು ವಿವರಿಸುತ್ತದೆ:  ‘ಹಂಸೋ ರಾಜಾ ಮಹಾರಾಜ ನಿಶ್ಚೇಷ್ಟ ಇವ ಸಂಭಭೌ । ಉತ್ಪ್ಲುತ್ಯ ಸ ರಥಾತ್ ತಸ್ಮಾದ್ ಯಮುನಾಮಭ್ಯಧಾವತ । ಯತ್ರ ಕೃಷ್ಣೋ  ಹೃಷೀಕೇಶಃ  ಕಾಳಿಯಾಹಿಂ ಮಮರ್ದ ಹ । ತಸ್ಮಿನ್ ಹೃದೇ ಮಹಾಘೋರೇ ಪಪಾತಾಥ ಸ ಹಂಸಕಃ’ (ಎಲ್ಲಿ ಹಿಂದೆ ಶ್ರೀಕೃಷ್ಣ ಕಾಳಿಯನನ್ನು ತುಳಿದಿದ್ದನೋ, ಅಲ್ಲೇ ಹಂಸಕನು ನೀರಿನಲ್ಲಿ ಬಿದ್ದ.)]

 

ವರಾಸ್ತ್ರಪಾಣಿರೀಶ್ವರಃ ಪದಾsಹನಚ್ಛಿರಸ್ಯಮುಮ್ ।

ಸ ಮೂರ್ಛಿತೋ ಮುಖೇsಪತನ್ಮಹಾಭುಜಙ್ಗಮಸ್ಯ ಹ ॥೧೭.೨೯೨ ॥

 

ಅಸ್ತ್ರಪಾಣಿಯಾಗಿರುವ ಶ್ರೀಕೃಷ್ಣನು ಹಂಸಾಸುರನ ತಲೆಯನ್ನು ತನ್ನ ಕಾಲಿನಿಂದ ಒದ್ದ. ಆಗ ಹಂಸನು  ಮೂರ್ಛಿತನಾಗಿ, ಅಲ್ಲಿದ್ದ ಒಂದು ದೊಡ್ಡ ಸರ್ಪದ ಮುಖದಲ್ಲಿ ಬಿದ್ದ.

 

ಸ ಧಾರ್ತ್ತರಾಷ್ಟ್ರಕೋದರೇ ಯಥಾ ತಮೋsನ್ಧಮೇಯಿವಾನ್ ।

ತಥಾ ಸುದುಃಖಸಂಯುತೋ ವಸನ್ ಮನೋಃ ಪರಂ ಮ್ರಿಯೇತ್ ॥೧೭.೨೯೩॥

 

ಅವನು ಆ ಧಾರ್ತರಾಷ್ಟ್ರಕ[1] ಮಹಾನಾಗದ ಹೊಟ್ಟೆಯ ಒಳಗಡೆ, ಅನ್ಧಂತಮಸ್ಸಿನಲ್ಲಿ ಇದ್ದರೆ ಹೇಗೆ ಆಗಬೇಕೋ ಹಾಗೆಯೇ, ಸುದುಃಖವನ್ನು ಅನುಭವಿಸುತ್ತಾ ಇದ್ದು, ಮನ್ವಂತರ ಕಳೆದಮೇಲೆ ಸಾಯುತ್ತಾನೆ.

 

[ಹರಿವಮ್ಶದಲ್ಲಿ (ಭವಿಷ್ಯತ್ ಪರ್ವಣಿ ೧೨೮.೭-೮) ಹಂಸನ ಕುರಿತು ಈ ರೀತಿ ಹೇಳುತ್ತಾರೆ: ಪಾದಕ್ಷೇಪಂ ನೃಪಸ್ತಮಾಲ್ಲಬ್ಧ್ವಾ ಹಂಸೋ ನೃಪೋತ್ತಮ  । ಮಾಮಾರ ಚ ನೃಪಶ್ರೇಷ್ಠ  ಕೇಚಿದೇವಂ ವದಂತಿ ಹಿ ।  ಅನ್ಯೇ ಪಾತಾಳಮಾಯಾತೋ ಭಕ್ಷಿತಃ ಪನ್ನಗೈರಿತಿಅದ್ಯಾಪಿ ನೈವ ರಾಜೇಂದ್ರ ದೃಷ್ಟ ಇತ್ಯನುಶುಶ್ರುಮ’ (ಕೆಲವರು ಹಂಸ ಸತ್ತ ಎಂದು ಹೇಳುತ್ತಾರೆ. ಆದರೆ ಇನ್ನು ಕೆಲವರು ಹೇಳುತ್ತಾರೆ: ‘ಹಾವು ಅವನನ್ನು ತಿಂದಿತು’ ಎಂದು. ಈಗಲೂ ಕೂಡಾ 'ಅವನು ಕಂಡಿಲ್ಲಾ' ಎಂದು ಹೇಳುವುದನ್ನು ನಾವು ಕೇಳುತ್ತೇವೆ)].

 

ತತೋsನ್ಧಮೇವ ತತ್ ತಮೋ ಹರೇರ್ದ್ದ್ವಿಡೇತಿ ನಿಶ್ಚಯಾತ್ ।

ತದಾsಸ್ಯ ಚಾನುಜೋsಗ್ರಜಂ ವಿಮಾರ್ಗ್ಗಯನ್ ಜಲೇsಪತತ್ ॥೧೭.೨೯೪॥

 

ವಿಹಾಯ ರೋಹಿಣೀಸುತಂ ಜಲೇ ನಿಮಜ್ಜ್ಯ ಮಾರ್ಗ್ಗಯನ್ ।

ಅಪಶ್ಯಮಾನ ಆತ್ಮನೋ ವ್ಯಪಾಟಯಚ್ಚ ಕಾಕುದಮ್ ॥೧೭.೨೯೫॥

 

 ಪರಮಾತ್ಮನ ಶತ್ರುವು ಮುಂದೆ ಅನ್ಧಂತಮಸ್ಸನ್ನು ನಿಶ್ಚಯವಾಗಿ ಹೊಂದುತ್ತಾನೆ.

ಯಾವಾಗ ಹಂಸ ನೀರಿನಲ್ಲಿ ಬಿದ್ದನೋ, ಆಗ ಬಲರಾಮನ ಜೊತೆಗೆ ಯುದ್ಧಮಾಡುತ್ತಿದ್ದ ಡಿಭಕ  ಯುದ್ಧವನ್ನು  ಬಿಟ್ಟು,  ನೀರಿಗೆ ಧುಮುಕಿ, ನೀರಿನಲ್ಲಿ ಮುಳುಗಿ ತನ್ನ ಅಣ್ಣನನ್ನು ಹುಡುಕುತ್ತಾ, ಎಲ್ಲೂ ಅಣ್ಣನನ್ನು ಕಾಣದೇ, ತನ್ನ ಕಿರುನಾಲಿಗೆಯನ್ನು ಕಿತ್ತುಕೊಂಡ (ಆತ್ಮಹತ್ಯೆ ಮಾಡಿಕೊಂಡ)

 

[ಈ ಘಟನೆಯನ್ನು ಹರಿವಮ್ಶ ಈ ರೀತಿ ಹೇಳುತ್ತದೆ: ಶ್ರುತ್ವಾ ನಿಹತಮತ್ಯುಗ್ರಂ ಭ್ರಾತರಂ ವೀರ್ಯಶಾಲಿನಮ್ । ಬಲದೇವಂ ಪರಿತ್ಯಜ್ಯ ಯುಧ್ಯಮಾನಂ ಮಹಾರಣೇ । ಡಿಭಕೋ ವೀರ್ಯಸಮ್ಪನ್ನೋ  ಯಮುನಾಮನುಜಗ್ಮಿವಾನ್ । ತಮನ್ವಧಾವದ್ ವೇಗೇನ ಬಲಭದ್ರೋ ಹಲಾಯುಧಃ । ಹಂಸೋ ಹಿ ಯತ್ರ ಪತಿತಸ್ತತ್ರಾಸೌ ನಿಪಪಾತ ಹ । ಯಮುನಾಯಾಂ  ಮಹಾರಾಜ ವಿಲೋಢ್ಯ ಬಲಸಞ್ಚಯಮ್’. (ಭವಿಷ್ಯತ್ ಪರ್ವಣಿ ೧೨೯.೧-೩)  

‘ಅಥ ಕೃುದ್ಧಃ ಸ ಡಿಭಕೋ ಭ್ರಾಮಯಿತ್ವಾ  ಜಲಂ ಬಹು ।  ಉನ್ಮಜ್ಯೋನ್ಮಜ್ಯ ಸಹಸಾ ನಿಮಜ್ಯ ಚ ಪುನಃಪುನಃ  । ನ ದದರ್ಶ  ತದಾ ರಾಜನ್ ಭ್ರಾತರಂ ವೀರ್ಯಶಾಲಿನಂ    ಉನ್ಮಜ್ಯಾಥ ಮಹಾಬಾಹುರ್ವಾಸುದೇವಂ ವಿಲೋಕ್ಯ ಚ । ಉವಾಚ ವಚನಂ ರಾಜನ್ ಡಿಭಕೋ ವೀರ್ಯಸತ್ತಮಃ । ಅರೇ ಗೊಪಕದಾಯಾದ  ಕ್ವಾಸೌ ಹಂಸ ಇತಿ ಸ್ಥಿತಃವಾಸುದೇವೋsಪಿ ಧರ್ಮಾತ್ಮಾ ಯಮುನಾಂ ಪೃಚ್ಛ ರಾಜಕ । (ನೀರಿನಲ್ಲಿ ಮುಳುಗಿ ಎದ್ದು, ‘ನನ್ನ ಅಣ್ಣನೆಲ್ಲಿ’ ಎಂದು ಡಿಭಕ ಕೃಷ್ಣನನ್ನೇ ಕೇಳುತ್ತಾನೆ. ಆಗ  ‘ಯಮುನೆಯನ್ನೇ ಕೇಳು’ ಎನ್ನುತ್ತಾನೆ ಕೃಷ್ಣ)    ಇತ್ಯಬ್ರವೀತ್  ಪ್ರಸನ್ನಾತ್ಮಾ ದೇವದೇವಃ  ಪ್ರತಾಪವಾನ್ । ತಚ್ಛ್ರುತ್ವಾ ಯಮುನಾಂ ಭೂಯಃ ಪ್ರವಿಷ್ಯ ಡಿಭಕಃ ಕಿಲ । ಬಹುಪ್ರಕಾರಮುದ್ವೀಕ್ಷ್ಯ ಭ್ರಾತರಂ ಭ್ರಾತೃವತ್ಸಲಃ । ವಿಲಲಾಪ ತತೋ ರಾಜಾ ಯಮುನಾಯಾ ಮಹಾಹ್ರದೇ   । ನಿಮಜ್ಯೋನ್ಮಜ್ಯ  ಸಹಸಾ ಮರಣೇ ಕೃತನಿಶ್ಚಯಃ  । ಹಸ್ತೇನ ಜಿಹ್ವಾಮಾಕೃಷ್ಯ ಭೂಯೋಭೂಯೋ  ವಿಲಪ್ಯ ಚ । ತತಃ ಸಮೂಲಮಾಕೃಷ್ಯ ಜಿಹ್ವಾಂ ಸಾಹಸಕೃತ್ ಸ್ವಯಮ್ । ಮಮಾರಾನ್ತರ್ಜಲೇ ರಾಜನ್ ಡಿಭಕೋ ನರಕಾಯ ವೈ’ (ಭವಿಷ್ಯತ್ ಪರ್ವಣಿ ೧೨೯.೪-೧೩)   (ಅಣ್ಣನನ್ನು ಕಾಣದೇ ವಿಲಾಪಿಸಿದ ಡಿಭಕ, ತನ್ನ  ನಾಲಿಗೆಯನ್ನೇ ಕಿತ್ತು, ಆತ್ಮಹತ್ಯೆ ಮಾಡಿಕೊಂಡು ನರಕವನ್ನು ಸೇರಿದ)].

ಇದನ್ನು ಮಹಾಭಾರತದ ಸಭಾಪರ್ವದಲ್ಲಿ(೧೪.೪೩.-೪೬) ಹೀಗೆ ವಿವರಿಸಿದ್ದಾರೆ: ‘ಅಥ ಹಂಸ ಇತಿ ಖ್ಯಾತಃ ಕಶ್ಚಿದಾಸಿನ್ಮಹಾನ್ ನೃಪಃ । ರಾಮೇಣ ಸ ಹತಸ್ತತ್ರ  ಸಙ್ಗ್ರಾಮೇsಷ್ಟಾದಶಾವರೇ । ಹತೋ ಹಂಸ ಇತಿ ಪ್ರೋಕ್ತಮಥ ಕೇನಾಪಿ ಭಾರತ । ತಚ್ಛ್ರುತ್ವಾ ಡಿಭಕೋ  ರಾಜನ್ ಯಮುನಾಮ್ಭಸ್ಯಮಜ್ಜತ । ವಿನಾ ಹಂಸೇನ ಲೋಕೇsಸ್ಮಿನ್  ನಾಹಂ ಜೀವಿತುಮುತ್ಸಹೇ । ಇತ್ಯೇತಾಂ ಮತಿಮಾಸ್ಥಾಯ ಡಿಭಕೋ ನಿಧನಂ ಗತಃ । ತಥಾ ತು ಡಿಭಕಂ ಶ್ರುತ್ವಾ ಹಂಸಃ ಪರಪುರಞ್ಜಯಃ । ಪ್ರಪೇದೇ ಯಮುನಾಮೇವ ಸೋsಪಿ  ತಸ್ಯಾಂ ನ್ಯಮಜ್ಜತ

ರಾಮನಿಂದ ಹತನಾದ ಎಂದು ಮಹಾಭಾರತದಲ್ಲಿದೆ. ಕೃಷ್ಣನಿಂದ ಹತನಾದ ಎಂದು ಹರಿವಮ್ಶ ಹೇಳುತ್ತದೆ. ಏಕೆ ಈ ರೀತಿ ಎಂದರೆ: ಇದನ್ನು ಈಗಾಗಲೇ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ(೯.೧೦೩) ಆಚಾರ್ಯರು ವಿವರಿಸಿದ್ದಾರೆ: ‘ವಿಸ್ತಾರೇ ಕೃಷ್ಣನಿಹತಾ  ಬಲಭದ್ರಹತಾ ಇತಿ । ಉಚ್ಯನ್ತೇ ಚ ಕ್ವಚಿತ್ ಕಾಲವ್ಯತ್ಯಾಸೋsಪಿ ಕ್ವಚಿದ್ ಭವೇತ್ '    ( ವಿಸ್ತಾರವಾಗಿ ಹರಿವಮ್ಶದಲ್ಲಿ ಹೇಳಿದ್ದಾರೆ. ಸಂಕ್ಷಿಪ್ತವಾದ ಮಹಾಭಾರತದಲ್ಲಿ ಹೇಳಿದ್ದಾರೆ. ವಿಸ್ತಾರ ಕಥೆಯಲ್ಲಿ ಕೃಷ್ಣನೇ ಕೊಂದದ್ದು ಎಂದು ಹೇಳಿದ್ದರೆ, ಸಂಕ್ಷಿಪ್ತವಾದ ಕಥೆಯಲ್ಲಿ ಬಲರಾಮ ಕೊಂದಿದ್ದಾನೆ ಎಂದು ಹೇಳಿದ್ದಾರೆ. ಇದನ್ನು ಪುರುಷ ವ್ಯತ್ಯಾಸ ಎಂದುಕೊಳ್ಳಬೇಕು)]. 

 

ವಿಹಾಯ ದೇಹಮುಲ್ಬಣಂ ತಮೋsವತಾರ್ಯ್ಯ ಚಾಗ್ರಜಮ್ ।

ಪ್ರತೀಕ್ಷಮಾಣ ಉಲ್ಬಣಂ ಸಮತ್ತಿ ತತ್ ಸುಖೇತರಮ್ ॥೧೭.೨೯೬॥

 

ಈರೀತಿ ಡಿಭಕನು ತನ್ನ ದೇಹವನ್ನು ಬಿಟ್ಟು, ಅತ್ಯಂತ ದುಃಖಕರವಾದ ಅನ್ಧಂತಮಸ್ಸಿನಲ್ಲಿ ಸಾಗಿ, ಅಣ್ಣನನ್ನು ಕಾಯುತ್ತಾ, ಉಲ್ಬಣವಾಗಿರುವ ಸುಖದಿಂದ ಭಿನ್ನವಾದದ್ದನ್ನು (ಅಂದರೆ ದುಃಖವನ್ನು) ಭೋಗಿಸುತ್ತಾನೆ.

 

ತತೋ ಹರಿರ್ಬಲೈರ್ಯ್ಯುತೋ ಬಲಾನ್ವಿತೋ ಮುನೀಶ್ವರೈಃ ।

ಸಮಂ ಕುಶಸ್ಥಲೀಂ ಯಯೌ ಸ್ತುತಃ ಕಶಙ್ಕರಾದಿಭಿಃ ॥೧೭.೨೯೭॥

 

ತದನಂತರ ಯಾದವ ಸೈನ್ಯದಿಂದ ಕೂಡಿದ, ಬಲರಾಮ ಹಾಗೂ ಮುನಿಗಳಿಂದ ಕೂಡಿರುವ ಶ್ರೀಕೃಷ್ಣನು, ಬ್ರಹ್ಮ-ರುದ್ರಾದಿ ದೇವತೆಗಳಿಂದ ಸ್ತೋತ್ರಮಾಡಲ್ಪಟ್ಟವನಾಗಿ ದ್ವಾರಕಾಪಟ್ಟಣಕ್ಕೆ ತೆರಳಿದನು.

 

ಸ್ವಕೀಯಪಾದಪಲ್ಲವಾಶ್ರಯಂ ಜನಂ ಪ್ರಹರ್ಷಯನ್ ।

ಉವಾಸ ನಿತ್ಯಸತ್ಸುಖಾರ್ಣ್ಣವೋ ರಮಾಪತಿರ್ಗ್ಗೃಹೇ ॥೧೭.೨೯೮॥

 

ತನ್ನ ಪಾದ ಕಮಲವನ್ನು ಆಶ್ರಯಿಸಿರುವ ಭಕ್ತರನ್ನು ಆನಂದಗೊಳಿಸುತ್ತಾ, ನಿರಂತರವಾಗಿರುವ ಸುಖಕ್ಕೆ ಕಡಲಿನಂತಿರುವ ಪರಮಾತ್ಮನು ದ್ವಾರಕಾಪಟ್ಟಣದಲ್ಲಿ ವಾಸಮಾಡಿದನು.

 

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಹಂಸಡಿಭಕವಧೋ ನಾಮ ಸಪ್ತದಶೋsಧ್ಯಾಯಃ

 

*********






[1] ದೃತರಾಷ್ಟ್ರ ಎಂಬ ಒಬ್ಬ ನಾಗನಿದ್ದಾನೆ. ಅವನ ಗಣದಲ್ಲಿ ಸೇರುವವರು ಧಾರ್ತರಾಷ್ಟ್ರಕರು.

No comments:

Post a Comment